ಬೋಳಂಬಳ್ಳಿ: ಕಾಲುಸಂಕ ದಾಟುತ್ತಿದ್ದ ಬಾಲಕಿ ಆಯತಪ್ಪಿ ಬಿದ್ದು ನೀರುಪಾಲು, ತೀವ್ರ ಶೋಧಕುಂದಾಪ್ರ ಡಾಟ್ ಕಾಂ ಸುದ್ದಿ.

ಬೈಂದೂರು,ಆ.8: ಶಾಲೆಯಿಂದ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿನಿಯೋರ್ವಳು ಕಾಲುಸಂಕ ದಾಟುವ ವೇಳೆ ಆಯಾತಪ್ಪಿ ಹಳ್ಳಕ್ಕೆ ಬಿದ್ದ ಘಟನೆ ಸೋಮವಾರ ಸಂಜೆ ಕಾಲ್ತೋಡು ಗ್ರಾಮದ ಬಿಜಮಕ್ಕಿ ಸಮೀಪ ನಡೆದಿದೆ. ನಾಪತ್ತೆಯಾದ ಬಾಲಕಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ.

ಚಪ್ಪರಿಕೆ ಶಾಲೆಯ 2ನೇ ತರಗತಿ ವಿದ್ಯಾರ್ಥಿನಿ, ಬೊಳಂಬಳ್ಳಿಯ ಮಕ್ಕಿಮನೆ ಪ್ರದೀಪ ಪೂಜಾರಿ ಹಾಗೂ ಸುಮಿತ್ರಾ ಅವರ ಪುತ್ರಿ ಸನ್ನಿಧಿ (7 ) ನೀರುಪಾಲಾದ ಬಾಲಕಿ.

ಮನೆಗೆ ತೆರಳುತ್ತಿದ್ದಾಗ ಬಿಜಮಕ್ಕಿ ಎಂಬಲ್ಲಿ ಕಾಲು ಸಂಕ ದಾಟುವಾಗ ಬಾಲಕಿ ಆಯಾತಪ್ಪಿ ಹಳ್ಳಕ್ಕೆ ಬಿದ್ದಿದ್ದಾಳೆ. ಕೂಡಲೇ ವಿಷಯ ತಿಳಿದು ಸಾರ್ವಜನಿಕರು ಹುಡುಕಾಟ ಆರಂಭಿಸಿದ್ದಾರೆ. ಈ ಹಳ್ಳ ಬೋಳಂಬಳ್ಳಿ ನದಿಗೆ ಸೇರುತ್ತಿದ್ದು, ನೀರಿನ ಸೆಳೆತಕ್ಕೆ ಮಗು ಕೊಚ್ಚಿಕೊಂಡು ಹೋಗಿರುವ ಸಾಧ್ಯತೆ ಇದೆ. ಶೋಧ ಕಾರ್ಯ ನಡೆಯುತ್ತಿದೆ.

ಸ್ಥಳಕ್ಕೆ ಜಿ.ಪಂ.ಮಾಜಿ ಅಧ್ಯಕ್ಷ ರಾಜು ಪೂಜಾರಿ, ತಹಶೀಲ್ದಾರ್ ಕಿರಣ್ ಗೋರಯ್ಯ, ಎಸ್.ಐ ಪವನ್ ನಾಯ್, ಗ್ರಾ.ಪಂ.ಮಾಜಿ ಅಧ್ಯಕ್ಷ ಅಣ್ಣಪ್ಪ ಶೆಟ್ಟಿ ಮೊದಲಾದವರು ಭೇಟಿ ನೀಡಿದ್ದಾರೆ.