ಸ್ವಸ್ಥ ಸಮಾಜಕ್ಕಾಗಿ ಬದಲಾವಣೆ ನಮ್ಮಿಂದಲೇ ಆರಂಭವಾಗಲಿ.

ಕುಂದಗನ್ನಡದ ತವರು ಕುಂದಾಪುರ ಉಡುಪಿ ಜಿಲ್ಲೆಯ ಇತರೆಲ್ಲಾ ಭಾಗಗಳಿಗಿಂತ ವಿಭಿನ್ನವಾದ ಸಂಸ್ಕೃತಿಯನ್ನು ಹೊಂದಿರುವ ಪ್ರದೇಶ. ಅಚ್ಚಗನ್ನಡದ ಕುಂದಾಪುರ ಭಾಷೆ ನಾಡಿನಲ್ಲಿಯೇ ವಿಶಿಷ್ಟವಾದದ್ದು. ಶಿಕ್ಷಣ, ಕಲೆ, ಸಾಹಿತ್ಯ, ಕ್ರೀಡೆ, ಸಾಂಸ್ಕೃತಿಕ ಹಾಗೂ ರಾಜಕೀಯ ರಂಗಕ್ಕೆ ಹಲವಾರು ಧೀಮಂತರನ್ನು ಪರಿಚಯಿಸಿದ ಕೀತರ್ಿ ಇಲ್ಲಿನದು. ಪಂಚಗಂಗಾವಳಿ, ಮರವಂತೆ, ಒತ್ತಿನಣೆ, ಕೊಡಚಾದ್ರಿ ಮುಂತಾದ ಸ್ಥಳಗಳು ಇಲ್ಲಿನ ನಿಸರ್ಗ ಸೌಂದರ್ಯವನ್ನು ಇಮ್ಮಡಿಗೊಳಿಸಿದ್ದರೆ, ಧಾಮರ್ಿಕ ಕ್ಷೇತ್ರಗಳು ಅನನ್ಯತೆಯ ದ್ಯೋತಕಗಳಾಗಿ ಉಳಿದಿವೆ.
ಕುಂದಾಪ್ರ ಭಾಷಾ ಸೊಗಡು, ವಿಭಿನ್ನ ಸಂಸ್ಕೃತಿ, ವರ್ತಮಾನದ ಸುದ್ದಿ ಮುಂತಾದವುಗಳ ಮೂಲಕ ಕುಂದಾಪುರದ ಸಮಗ್ರ ಚಿತ್ರಣವನ್ನು ಕಟ್ಟಿಕೊಡುವ ಜೊತೆಗೆ ಯುವ ಬರಹಗಾರರನ್ನು ಪ್ರೋತ್ಸಾಹಿಸುವ ಪ್ರಯತ್ನದ ಮೊದಲ ಹೆಜ್ಜೆ-ಕುಂದಾಪು.ಕಾಮ್

ವ್ಯಾಪಾರಿಕರಣಗೊಳ್ಳುತ್ತಿರುವ ಶಿಕ್ಷಣ ವ್ಯವಸ್ಥೆಯೊಳಗೆ ಸ್ಪರ್ಧೆಯೊಂದಿಗ ಓಡುತ್ತಿರುವ ನಾವುಗಳು ಮಾಹಿತಿ ಸಂಗ್ರಹ, ಲೋಕಜ್ಞಾನಗಳತ್ತ ಮಾತ್ರವೇ ಕೇಂದ್ರೀಕೃತಗೊಂಡು ನೈತಿಕತೆ ಮಾನವೀಯ ಮೌಲ್ಯಗಳು, ಸಾಮಾಜಿಕ ಸಂಬಂಧ, ಮುಂತಾದವುಗಳನ್ನು ತೀರ ಖಾಸಗಿ ಇಲ್ಲವೇ ಅಪರಿಚಿತವೊ ಎಂಬಂತೆ ಭಾವಿಸಿ ಬದುಕುತ್ತಿದ್ದೇವೆ. ಇಲ್ಲಿ ಸ್ಪರ್ಧೆಸದಿದ್ದರೆ ಅಸ್ತಿತ್ವವೇ ಇಲ್ಲವೆಂಬಂತಾಗಿದೆ.
ಇಂದು ಸಂಬಂಧಗಳ ಅಳಿವು ಉಳಿವುಗಳು ಬ್ರೇಕಿಂಗ್ ನ್ಯೂಸ್ಗಳಿಗಿಂತ ವೇಗವಾಗಿ ನಿರ್ಧರಿತಗೊಂಡು ಜನರನ್ನು ತಲುಪಿ ಹರಟೆಯ ವಸ್ತುಗಳಾಗುತ್ತಿವೆ. ಅಪ್ಪ-ಅಮ್ಮ ದಿನವಿಡಿ ಉಪವಾಸವಿದ್ದರೂ ಕೇಳದ ಹುಡುಗನೊಬ್ಬ ಪ್ರೇಯಸಿ ಒಪ್ಪತ್ತು ಉಪವಾಸವಿದ್ದರೂ ಬೇಸರಗೊಳ್ಳುತ್ತಾನೆ. ಕೈಯಲೊಂದು ಹೊಸ ತಂತ್ರಜ್ಞಾನದ ಮೊಬೈಲ್ ಇದ್ದರೆ ಸಾಕು ಯುವಕರುಗಳಿಗೆ ಈ ಜಮಾನವೇ ಥ್ರಿಲ್ ಆಗಿರುತ್ತದೆ. ಸಮಾಜದೊಂದಿಗೆ ಬೇರೆಯದವನು ಸಾಮಾಜಿಕ ತಾಣಗಳಲ್ಲಿ ಬೆರೆಯುವ, ವಿಚ್ಛೇದನದ ವಿಚಾರಗಳು ಮರುದಿನವೇ ಕಾನೂನಿನ ಕಟ್ಟಳೆಯಲ್ಲಿ ನಿಲುವಂತಹ ಮನೊಸ್ಥಿತಿ ಹಾಗೂ ವೇಗ ನಮ್ಮನ್ನಾವರಿಸಿಕೊಂಡಿದೆ.

ಭೃಷ್ಟತೆಯ ಪರಮಾವಧಿಯನ್ನು ನಾವಿಂದು ಕಾಣುತ್ತಿದ್ದೇವೆ. ನಮ್ಮಿಂದ ಏನೂ ಸಾಧ್ಯವಿಲ್ಲ ಎಂದು ಬೇಸತ್ತಿದ್ದ ಮನಕ್ಕೆ ಅಣ್ಣಾ ಹಜಾರೆಯವರ ಹೋರಾಟ ಹೊಸ ಚೈತನ್ಯ ತುಂಬಿತು. ಆದರಿಲ್ಲಿ ವಾಸ್ತವವಾಗಿ ಬೆಕ್ಕಿಗೆ ಗಂಟೆ ಕಟ್ಟುವವರ್ಯಾರು? ಅಂತಹ ನೈತಿಕತೆ ಎಷ್ಟು ಮಂದಿಗಿದೆ? ದಶಕಗಳಿಂದ ಹೆಮ್ಮರವಾಗಿ ಬೆಳೆದು ನಿಂತ ಮರವನ್ನು ಬುಡಸಮೇತ ಕಿತ್ತೋಗೆಯುವುದೆಂದರೆ ಸುಲಭದ ಮಾತೆ? ಜನಸಾಮಾನ್ಯರ ಅನಿವಾರ್ಯತೆ, ಅಸಹಜ ಒತ್ತಡಗಳೊಂದಿಗೆ ವ್ಯವಹರಿಸುತ್ತಿರುವ ಈ ಭೃಷ್ಟ ಮುಖಗಳೊಂದಿಗೆ ಕಾನೂನು ಸಮರ ಸಾಧ್ಯವೆ ಎಂಬುದು ನಮ್ಮ ಮುಂದಿರುವ ಪ್ರಶ್ನೆ. ಉತ್ತರ ಕಂಡುಕೊಳ್ಳಬೇಕಾದ ಗಳಿಗೆಯಲ್ಲಿಯೇ ನ್ಯಾಯದ ನೆಲಗಟ್ಟಿನಲ್ಲಿ ನಿಲ್ಲಬೇಕಾದ ವಕೀಲರು, ಸತ್ಯದ ನೆಲಗಟ್ಟಿನಲ್ಲಿ ನಿಲ್ಲಬೇಕಾದ ಪತ್ರಕರ್ತರ ನಡುವಿನ ಸಾಮಾಜಿಕ ಸ್ವಾಸ್ಥ ಕೆಡಿಸುವಂತಹ ಸಂಘರ್ಷಗಳು ಈ ಪ್ರಶ್ನೆಯನ್ನು ಮತ್ತಷ್ಟು ಜಟಿಲಗೊಳಿಸುತ್ತಿದೆ ಎಂದೆನ್ನಿಸುತ್ತಿದೆ. ಜನಸಾಮಾನ್ಯರಗೆ ಇವುಗಳ ಅರಿವು ಮೂಡಿಸುವ ಕಾರ್ಯ ನಡೆಯಬೇಕಿದೆ.

ಶಾಲಾ-ಕಾಲೇಜು ಶಿಕ್ಷಣವೆಂಬುದು ಪೂರ್ವ ನಿರ್ಧರಿತ ವಿಷಯವನ್ನು ತರಗತಿಯೊಳಗೆ ಕಲಿಸುವ-ಕಲಿಯುವ ಪ್ರಕ್ರಿಯೆ ಮಾತ್ರವಾಗಿರದೇ ವಿದ್ಯಾರ್ಥಿಯೊಬ್ಬನಲ್ಲಿ ಬಂಧಿಯಾಗಿರುವ ಪ್ರತಿಭೆ ಹೊರ ಹೊಮ್ಮಲು ತಕ್ಕುದಾದ ಅವಕಾಶ, ಸೂಕ್ತ ಪ್ರೋತ್ಸಾಹ ಕಲ್ಪಿಸಿಕೊಡುವ ವೇದಿಕೆಯಾಗಬೇಕು. ಇದಕ್ಕೆ ಪೂರಕವಾದ ಚಟುವಟಿಕೆಯಲ್ಲಿ ತೊಡಗಿಕೊಂಡಿರುವುದು ಕೆಲವೇ ಕೆಲವು ಶಿಕ್ಷಣ ಸಂಸ್ಥೆಗಳು ಮಾತ್ರ. ಪ್ರತಿಭೆಗೆ ತಕ್ಕುದಾದ ಪ್ರೋತ್ಸಾಹ, ಭಾಷೆ, ಕಲೆ-ಸಂಸ್ಕೃತಿ, ಐತಿಹಾಸಿಕ ವಸ್ತುಗಳು ಮುಂತಾದ ಅಳಿವಿನಂಚಿನಲ್ಲಿರುವುವುಗಳ ಉಳಿವಿನ ಪ್ರಯತ್ನ ಭಂಡಾರಕಾರ್ಸ್ ಕಾಲೇಜಿನ ವಾಷರ್ಿಕಾಂಕ 'ದರ್ಶನ' ದೊಂದಿಗೆ ಸದ್ದಿಲ್ಲದೆ ಸಾಗಿದೆ. ಅದು ಸೃಜನಶೀಲ ಬರವಣಿಗೆಯನ್ನು ಪೋಷಿಸುತ್ತಾ ಬಂದಿದೆ.

ಪ್ರಪಂಚ ಆಧುನಿಕತೆಯನ್ನು ತುಂಬಿಕೊಂಡು ಬೀಗಿದಂತೆ ಮರೆಯಾಗಬೇಕಿದ್ದ ಸಮಾಜದ ಅನಿಷ್ಟಗಳು ಹೊಸ ಹೊಸ ರೂಪದಲ್ಲಿ ಮತ್ತೆ ನಮ್ಮನ್ನು ತಳುಕು ಹಾಕಿಕೊಳ್ಳುತ್ತಿವೆ. ನಾಗರೀಕ ಸಮಾಜದಲ್ಲಿ ಬದುಕುತ್ತಿದ್ದೇವೆ ಎಂದು ಹೇಳುವ ನಮ್ಮ ಇನ್ನೊಂದು ಮಗ್ಗುಲಲ್ಲೇ ಅನಾಗರೀಕತೆ ತಾಂಡವಾಡುತ್ತಿದೆ. ಜೀವನ ಮೌಲ್ಯಗಳೆನ್ನುವುದು ಉಪನ್ಯಾಸದ ವಿಷಯಗಳಾಗಿವೆಯೇ ಹೊರತೂ ಬದುಕಿನ ಭಾಗವಾಗಿಲ್ಲ. ಆದರ್ಶ ಪ್ರಾಯರನ್ನು ಹುಡುಕಿ ಹೊರಡುವ ಮೊದಲು ನಮ್ಮಲ್ಲೊಂದು ಆದರ್ಶವನ್ನು ಗಟ್ಟಿಗೊಳಿಸಿಕೊಳ್ಳಬೇಕಾಗಿದೆ.
ಬದಲಾವಣೆಯ ಅವಶ್ಯಕತೆ ಇದೆಯಲ್ಲವೇ?

ಸ್ವಸ್ಥ ಸಮಾಜಕ್ಕಾಗಿ ಬದಲಾವಣೆ ನಮ್ಮಿಂದಲೇ ಆರಂಭವಾಗಲಿ....