ಆಕೆಗೂ ಇದೆ ಮನಸ್ಸು, ಅರಿಯಲು ಪ್ರಯತ್ನಿಸಿ ಸುಂದರ ಕನಸು....

ಈ ಪುರುಷಪ್ರಧಾನ ಸಮಾಜದಲ್ಲಿ ಹೆಣ್ಣಿನ ಪ್ರೀತಿ, ವಾತ್ಸಲ್ಯ, ಮಮತೆ, ಶ್ರಮ, ಸಹನ ಇವುಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಹೆಣ್ಣು ಹುಟ್ಟಿನಿಂದ ಸಾಯುವ ತನಕವು ಬೇರೊಬ್ಬರ ಆಶ್ರಯದಲ್ಲೆ ಇರುತ್ತಾಳೆ ಮತ್ತು ಈ ಸಮಾಜಕ್ಕೆ ಹೆದರಿ ತನ್ನ ಎಲ್ಲಾ ಆಸೆ ಆಕಾಂಕ್ಷೆಗಳನ್ನು ಮನದಲ್ಲೆ ಹುತು ಹಾಕುತ್ತಾಳೆ. ಈ ಸಮಾಜದಲ್ಲಿ ಗಂಡೆಂದರೆ ಶ್ರೇಷ್ಠ. ಹೆಣ್ಣೆಂದರೆ ತುಚ್ಚ ಎಂಬ ಭಾವನೆಗಳು ಸರಾಗವಾಗಿ ಬೆಳೆದುಬಂದಿವೆ. ಗಂಡು ಏನು ಬೇಕಾದರೂ ಮಾಡಬಹುದು, ಆತ ಏನೇ ಮಾಡಿದರೂ ಸರಿ ಮತ್ತು ಗಂಡಿನಿಂದ ಎಲ್ಲವೂ ಸಾಧ್ಯ. ಹೆಣ್ಣೆಂದರೇ ಆಕೆ ಅಬಲೆ, ಅಸಹಾಯಕಿ ಆಕೆ ಸಮಾಜ ಅಥವಾ ಗಂಡಸರು ಹಾಕಿದ ಗೆರೆಯನ್ನು ದಾಟಬಾರದು, ಆಕೆಯಿಂದ ಏನೂ ಅಸಾಧ್ಯ. ಎಂದು ತಿಳಿದಿದ್ದಾರೆ. ಆದರೆ ಪ್ರಸ್ತುತ ಸಮಾಜದಲ್ಲಿ ಮಹಿಳೆ ಇಲ್ಲದ ಕ್ಷೇತ್ರವೇ ಇಲ್ಲ. ಆಕೆ ಎಲ್ಲಾ ಕ್ಷೇತ್ರದಲ್ಲಿಯೂ ಮುನ್ನಡೆ ಸಾದಿಸಿದ್ದಾಳೆಂಬುದು ಸಮಾಜ ಮರೆತಿದೆ. ಈ ಶೋಷಣೆಗೆ ಮನೆಯಲ್ಲಿರುವ ಹಿರಿಯರೂ ಪೊಷಕರು ಕಾರಣವಾಗುತ್ತಾರೆ. ಹಿಂದಿನ ಕಾಲದ ಮನೆಯಲ್ಲಿ ಗಂಡು ಹೆಣ್ಣು ಎರಡು ಮಕ್ಕಳಿದ್ದಲ್ಲಿ ಆ ಚಿಕ್ಕ ಮಕ್ಕಳಲ್ಲೂ ಭೇದ ಭಾವ ಗಂಡು ಮುಕ್ತಿಗೆ ದಾರಿ, ಗಂಡು ಮಗು ಹುಟ್ಟಿದರೆ ಮಾತ್ರ ಮೋಕ್ಷವಿಲ್ಲಾ ಎಂಬ ಕಲ್ಪನೆಗಳಿತ್ತು. ಹೆಣ್ಣು ಮಕ್ಕಳು ಹೋದಲ್ಲಿ ಬಂದಲ್ಲಿ ಎಲ್ಲಾ ಕಡೆ ತಗ್ಗಿ-ಬಗ್ಗಿ ಇರಬೇಕು.
ಗಂಡಸರ ತಪ್ಪನ್ನು ಶೋಧಿಸಬಾರದು, ಗಂಡು ಏನೇ ಮಾಡಿದರೂ ಸರಿ ಅದನ್ನು ದೂಶಿಸಬಾರದು ಎಂದು ಚಿಕ್ಕಂದಿನಿಂದ ಮನೆಯಲ್ಲಿ ಕೇಳಿದ ಮಾತುಗಳು ಹೆಣ್ಣಿನ ಮನಸಲ್ಲಿ ಹಾಗೆಯೇ ಉಳಿದು, ತಾನೆನೇ ಮಾಡಿದರೂ ತಪ್ಪು. ಎಲ್ಲಿ ಏನೇ ಆದರೂ ಅದಕ್ಕೆ ನಾನೇ ಕಾರಣ ನನ್ನಿಂದ ಏನೂ ಮಾಡಲಾಗದು ಎಂದು ಆವರಣವನ್ನು ಹಾಕಿಕೊಂಡು ಅದರೊಳಗೆ ಇಷ್ಟವಿಲ್ಲದಿದ್ದರೂ ಎಲ್ಲರಿಗೋಸ್ಕರ ನಗು ನಗುತ್ತಾ ಎಲ್ಲವನ್ನು ಸಹಿಸಿಕೊಂಡು ಬದುಕುತ್ತಾಳೆ.
ಮದುವೆಯಾದ ಮಹಿಳೆ ಎಂದರೆ ಆಕೆ ಮನೆಗೆಲಸದವಳು, ಅಡಿಯಾಳು, ಗುಲಾಮಿ, ಗಂಡ ಹೊಡೆದರೂ, ಬೈದರೂ ಎಲ್ಲವನ್ನೂ ಸಹಿಸಿಕೊಂಡು ಮರು ಮಾತನಾಡದ ಮೂಖ ಪ್ರಾಣಿಯೆಂದು ಹೆಚ್ಚಿನ ಗಂಡಸರ ಭಾವನೆಯಾಗಿದೆ.
ಆಕೆಯಲ್ಲೂ ಒಂದು ಮನಸ್ಸಿದೆ ಸುಂದರ ಕನಸುಗಳಿವೆ, ಕಾಣದ ಅದ್ಭುತ ಪ್ರಪಂಚವೇ ಇದೆ. ಅದನ್ನು ಅರಿತವರು ಮಾತ್ರ ಯಾರು ಇಲ್ಲಾ. ತವರಿನಲ್ಲಿರುವಾಗ ಹೆತ್ತು ಹೊತ್ತು ಬೆಳೆಸಿದ ತಂದೆ ತಾಯಿ ಮತ್ತು ಮನೆಯವರಿಗೆ ಬೇಸರವಾಗಬಾರದು ಇಷ್ಟು ವರ್ಷಗಳಿಂದ ತನ್ನನ್ನು ಬೆಳೆಸಿದ್ದಾರೆ, ಮತ್ತೇ ನಾವು ನಮ್ಮ ಬಯಕೆಗಳನ್ನು ಮುಂದಿಡುವುದರಿಂದ ಎಲ್ಲಿ ನೊಂದಾರೂ ಎಂಬ ಚಿಂತೆ, ಮದುವೆಚಿಾದ ನಂತರ ತಂದೆ-ತಾಯಿಯಲ್ಲೇ ಹೇಳಲಾಗದ್ದು ಪತಿಯಮನೆಯಲ್ಲಿ ಹೇಳಲು ಹೇಗೆ ತಾನೇ ಸಾಧ್ಯ.? ಇನ್ನೂ ವೃದ್ಧಾಪ್ಯದಲ್ಲಂತೂ ಮಾತನಾಡುವುದೇ ಕಷ್ಟ...
ಒಮ್ಮೆ ಆಕೆಯ ಕನಸುಗಳತ್ತಾ ಕಣ್ಣುಹಾಯಿಸಿ ನೋಡಿ, ಆಕೆಯ ನೊಂದ ಮನಸ್ಸನ್ನು ಆಲಂಗಿಸಿ, ಆಕೆಯ ಹಲವಲ್ಲದಿದ್ದರೂ ಕೆಲವು ಚಿಕ್ಕ ಪುಟ್ಟ ಕನಸನ್ನಾದರೂ ನನಸುಮಾಡಲು ಪ್ರಯತ್ನಿಸಿ ಆಕೆ ನಿಮ್ಮ ಅತಿ ಪ್ರೀತಿಯ ಮಗಳಾಗುತ್ತಾಳೆ, ಪತಿಗೆ ನೆಚ್ಚಿನ ಮಡದಿಯಾಗುತ್ತಾಳೆ, ಇನ್ಯಾರೂ ಕೊಡದಂತಹ ಹಿಮಾಲಯ ಪರ್ವತಕ್ಕಿಂತ ಎತ್ತರವಾದ ಮಮತೆ ಎಂಬ ಪ್ರೀತಿಯನ್ನು ಎದೆತುಂಬಿ ನಿಡುವ ತಾಯಿಯಾಗುತ್ತಾಳೆ.
ಮಗಳೊಬ್ಬಳು ಜನಿಸಿದರೇ ತುಚ್ಚವಾಗಿ ನೋಡದೆ, ಮನೆಗೊಂದು ಭಾಗ್ಯಲಕ್ಷ್ಮೀ ಬಂದಳು ಎಂದು ಭಾವಿಸಿ, ಕೈಲಾಗುವಷ್ಟು ವಿದ್ಯಾಭ್ಯಾಸ ನೀಡಿ, ಆಕೆಗೂ ಕೆಲವು ವಿಷಯಗಳಲ್ಲಾದರೂ ಮಿತವಾದ ಹಿಡಿತದಲ್ಲಿ ಸ್ವಲ್ಪ ಸ್ವತಂತ್ರ್ಯ ನೀಡಿ, ಪತ್ನಿಗೆ ಆಕೆಯ ಇಷ್ಟ ಪಟ್ಟ ಎಲ್ಲಾ ವಸ್ತುಗಳಿಲ್ಲಾದಿದ್ದರೂ ಪ್ರೀತಿ ಬರಿತ ಮಾತುಗಳನ್ನಾಡಿ, ಆಕೆಯ ಕೆಲಸಗಳಲ್ಲಿ ಕಿಂಚಿತ್ತು ಕೆಲಸಮಾಡಲು, ಸಹಾಯ ಮಾಡಲೇ ಎಂದು ಕೇಳಿ ನೋಡಿ, ತಾಯಿಚಿು ವೃದ್ದಾಪ್ಯದಲ್ಲಿ ಅಮ್ಮ ನಿನಗೆ ನಾನೂ ಉರುಗೋಲಾಗಿರುವೇ ಎಂದು, ಸದಾಕಾಲ ಅಲ್ಲಾದಿದ್ದರೂ ದಿನದಲ್ಲಿ ಎಷ್ಟೇ ಕೆಲಸವಿದ್ದರೂ ಕೆಲವು ಸಮಯ ಅವಳೊಂದಿಗೆ ಮಾತನಾಡಲು, ಅವಳಿಗಾಗಿ ಮುಡಿಪಿಡಿ. ಆಕೆ ನಗು ನಗುತ್ತಾ ಯಾವ ಕೊರಗೂ ಇಲ್ಲದೆ ತೃಪ್ತಿಯಿಂದ ಕೊನೆಯ ದಿನಗಳನ್ನು ಕಳೆಯುತ್ತಾಳೆ.
ಹೆಣ್ಣಿನಲ್ಲಿ ಕ್ರೌರ್ಯ, ದ್ವೇಷ, ಕಿಚ್ಚು, ಕೋಪ ಎಲ್ಲವೂ ಇವೆ. ಮತ್ತು ಪ್ರೀತಿ, ಮಮತೆ, ಎಲ್ಲರನ್ನು ಕಾಳಜಿ ಮಾಡುವ, ಹೊಂದಿಕೊಂಡುಹೋಗುವ ಗುಣಗಳು ಇವೆ. ಆಕೆಯನ್ನು ನಿಂದಿಸಿ ಹಠಕ್ಕೆ ತಿರುಗಿಸಿ ಜಿದ್ಡಿಗೆಳುವಂತೆ ಪ್ರಚೋದಿಸುವಬದಲು, ಆಕೆಗೆ ಕಿಂಚಿತ್ತು ಪ್ರೀತಿ, ಗೌರವ, ಸ್ವಾತಂತ್ರ್ಯ ನೀಡಿದರೇ ಆಕೆ ಎಲ್ಲರಿಗೂ ಪ್ರೀತಿ ಪಾತ್ರಳಾಗುತ್ತಾಳೆ. ಮುಂದಿನ ಪ್ರತಿಯೊಂದು ಹೆಣ್ಣಿಗೂ ಮಾದರಿಯಾಗುತ್ತಾಳೆ.
ಅಶ್ವಿನಿ ಭಟ್ ಕಂಬದಕೋಣಿ.
ದ್ವಿತೀಯ ಬಿ., ಇಜೆಪಿ