ರಾಜೇಶ ಶಿಬಾಜೆ ಪ್ರಶಸ್ತಿಗೆ ಜಾನ್ ಡಿಸೋಜಾ, ಪಾಲಾಕ್ಷ ಸುವರ್ಣ ಆಯ್ಕೆ

ಮೂಡುಬಿದಿರೆ: ಪತ್ರಿಕಾ ಅಕಾಡೆಮಿ ಪ್ರಶಸ್ತಿ ವಿಜೇತ ಪತ್ರಕರ್ತ ರಾಜೇಶ ಶಿಬಾಜೆ ಅವರ ಹೆಸರಲ್ಲಿ ನೀಡಲಾಗುವ ಪ್ರಶಸ್ತಿಯನ್ನು ವಿಜಯ ಕರ್ನಾಟಕ ಪತ್ರಿಕೆಯ ಕುಂದಾಪುರ ವರದಿಗಾರ ಜಾನ್ ಡಿಸೋಜಾ ಮತ್ತು ಜೈಕನ್ನಡಮ್ಮ ಪತ್ರಿಕೆಯಲ್ಲಿ ನಿರಂತರ ಕಲಾತ್ಮಕ ಛಾಯಾಚಿತ್ರಗಳನ್ನು ಪ್ರಕಟಿಸುತ್ತಿರುವ ಬೆಳ್ತಂಗಡಿಯ ಪಾಲಾಕ್ಷ ಸುವರ್ಣ ಅವರಿಗೆ ನೀಡಲಾಗುತ್ತಿದೆ ಎಂದು ಸಂಘಟಕ ಶೇಖರ ಅಜೆಕಾರು ತಿಳಿಸಿದ್ದಾರೆ.ಬೆಂಗಳೂರಿನ ಪತ್ರಕರ್ತರ ವೇದಿಕೆ ನೀಡುತ್ತಿರುವ ಈ ಪ್ರಶಸ್ತಿ ಗ್ರಾಮೀಣ ಪತ್ರಿಕೋದ್ಯಮ ಮತ್ತು ಪತ್ರಿಕೋದ್ಯಮ ಪ್ರಯೋಗಗಳಿಗಾಗಿ ನೀಡಲಾಗುತ್ತಿದ್ದು ಕನ್ನಡಪ್ರಭದ ಕುಂಟಾಡಿ ದಯಾನಂದ ಪೈ, ಪ್ರಜಾವಾಣಿಯ ಸುಕುಮಾರ ಮುನಿಯಾಲು, ಪ್ರಕಾಶಕ ಡಾಟ್ ಕಾಮ್‌ನ ಸಂಪಾದಕ ಪ್ರಕಾಶ ಶೆಟ್ಟಿ ಉಳೆಪಾಡಿ, ವಿಜಯಕರ್ನಾಟಕದ ವಿಲಾಸ್ ಕುಮಾರ್ ನಿಟ್ಟೆ ಮತ್ತು ಕುಂದಪ್ರಭದ ಸಂಪಾದಕ ಯು ಎಸ್ ಶೆಣೈ ಸಹಿತ ಐವರಿಗೆ ನೀಡಲಾಗಿದೆ.

ಜಾನ್ ಡಿಸೋಜಾ
ಜಾನ್ ಡಿಸೋಜಾ ಕುಂದಾಪುರ
ಕರಾವಳಿಯ ಗ್ರಾಮೀಣ ವರದಿಗಾರಿಯಲ್ಲಿ ಅಗ್ರಪಂಕ್ತಿಯಲ್ಲಿರುವ ಜಾನ್ ಡಿಸೋಜಾ ಕುಂದಾಪುರ ತಾಲೂಕಿನ ಮೂಲೆ ಮೂಲೆಗಳ ಸಮಸ್ಯೆಗಳನ್ನು ವರದಿ ಮಾಡಿದ್ದಾರೆ, ಪ್ರತಿಭೆಗಳನ್ನು ಪರಿಚಯ ಮಾಡಿದ್ದಾರೆ, ಕಾಲಿಗೆ ಚಕ್ರಕಟ್ಟಿಕೊಂಡು ತಿರುಗಾಟ ನಡೆಸಿದ್ದಾರೆ.
ಬಿಎಸ್ಸಿ ಪದವಿಧರರಾದ ಅವರು ಭಂಡಾರ್‌ಕಾರ‍್ಸ್ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ನಿರ್ದೇಶಕ.ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯಉಡುಪಿ ಜಿಲ್ಲಾ ಪ್ರಗತಿಪರ ಚಿಂತಕರ ವೇದಿಕೆ ಸದಸ್ಯ
ಕೋಣಿ ಯಕ್ಷಗಾನ ಕಲಾ ಸಂಘದ ಸದಸ್ಯರಾಗಿದ್ದಾರೆ.
ಹೈಸ್ಕೂಲು ಪ್ರವೇಶಿಸುತ್ತಿರುವಾಗಲೆ ಪತ್ರಿಕೆ ಓದುವ ಛಾಳಿ ಮತ್ತು ಬರೆಯುವಿಕೆ ಚಟ ಹುಟ್ಟಿಕೊಂಡಿತು. ಕಥೆ, ಕವನ, ಜತೆಗೆ ಸಾಮಾಜಿಕ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಪುಟ್ಟ ಪುಟ್ಟ ಬರಹಗಳನ್ನು ಪತ್ರಿಕೆಗಳಿಗೆ ರವಾನಿಸುವುದು. ಹಲವಷ್ಟು ಪ್ರಕಟಗೊಂಡಿದ್ದವು.
ಪ್ರಮುಖವಾಗಿ ಕುಂದಪ್ರಭ ಪತ್ರಿಕೆಗೆ ಬರಹಗಳ ರವಾನೆ. ವಿದ್ಯಾರ್ಥಿಯಾಗಿದ್ದಾಗಲೆ ಕುಂದಪ್ರಭ ಪತ್ರಿಕೆಯ ಸಂಪರ್ಕ. ಪ್ರತಿಭೆ ಗುರುತಿಸಿದ ಕುಂದಪ್ರಭ ವಾರಪತ್ರಿಕೆ ಸಂಪಾದಕ ಯು.ಎಸ್.ಶೆಣೈಯವರು ತರಗತಿ ಬಿಟ್ಟ ಬಳಿಕ ಕಚೇರಿಗೆ ಬರುವಂತೆ ಆಹ್ವಾನಿಸಿದರು. ಪತ್ರಿಕೆ ಮನೆ ಮನೆ ಹಾಕುವುದರಿಂದ ಹಿಡಿದು ಪತ್ರಿಕೆಯ ಎಲ್ಲಾ ಮಜಲುಗಳ ಶಿಕ್ಷಣ ಕೊಟ್ಟರು. ಎಲ್ಲಿಯೂ ವಿದ್ಯೆ ಬ್ರೇಕ್ ಆಗಲಿಲ್ಲ. ಪತ್ರಕರ್ತನ ಕಸುವು ಅನುಭವ ಮತ್ತು ಉದ್ಯೋಗ ಕೂಡ ಆಗಿತ್ತು. ಪತ್ರಕರ್ತ ಪ್ಲಸ್ ವಿದ್ಯಾರ್ಥಿಯಾಗಿ ನನ್ನಷ್ಟಕ್ಕೆ ರೂಪುಗೊಳ್ಳುತ್ತಾ ಹೋದೆ. ಕುಂದಪ್ರಭ ಪತ್ರಿಕೆಯ ಸಂಪಾದಕ ಯು.ಎಸ್.ಶೆಣೈ ಅವರ ಪತ್ರಿಕೋದ್ಯಮದ ಗುರು. ಕುಂದಪ್ರಭ ಪತ್ರಿಕೆಗೋಸ್ಕರ ಗ್ರಾಮಾಂತರ ಪ್ರದೇಶಗಳ ಸುತ್ತಾಟ, ತನಿಖಾ ವರದಿಗಾಗಿ ಜಾಲಾಟ ಮುಂದುವರಿಯಿತು. ಮೈಲುಗಟ್ಟಲೆ ಕಾಲ್ನಡಿಗೆಯಲ್ಲಿಯೇ ಊರೂರು ಸುತ್ತುವ ಪ್ರಮೇಯ. ಈ ಹೊತ್ತಿನಲ್ಲಿ ಕುಂದಪ್ರಭ ಬಳಗ ಜೈಕೊಂಕಣಿ ಕೊಂಕಣಿ ಭಾಷಿಕ ಪತ್ರಿಕೆ ಆರಂಭಿಸಿತು. ಅದರ ಬರಹಗಳಿಂದ ಹಿಡಿದು ಎಲ್ಲಾ ವಿಭಾಗವನ್ನು ನಿಭಾಯಿಸುವ ಹೊಣೆಗಾರಿಕೆ ಸಿಕ್ಕಿತು. ಕಾಲೇಜು ದಿನದಲ್ಲಿ ಕೊಂಕಣಿ ಭಾಷೆಯ ಪತ್ರಿಕೆಗೆ ಶ್ರಮಿಸುವ ಸದಾವಕಾಶ. ಭಂಡಾರ್‌ಕಾರ‍್ಸ್ ಕಾಲೇಜಿನ ದರ್ಶನ ಸಂಚಿಕೆಯಲ್ಲಿ ಅವರ ಬರಹಗಳಿಗೆ ಪ್ರಾತಿನಿಧ್ಯ ಸಿಕ್ಕಿತು. ಡಾ.ಎಚ್.ವಿ.ನರಸಿಂಹಮೂರ್ತಿ ತುಂಬು ಪ್ರೋತ್ಸಾಹ ನೀಡಿದವರು. ಬಿಎಸ್ಸಿ ವಿಶೇಷ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಮುಂದಿನ ಶಿಕ್ಷಣಕ್ಕೆ ಹೋಗುವ ಮನಸ್ಸು ಇದ್ದಿರಲಿಲ್ಲ. ಪತ್ರಕರ್ತನಾಗಿ ಸಮಾಜಮುಖಿಯಾಗಿರಬೇಕು ಎಂಬ ಕನಸು ಆವಾಗಲೆ ಬಲಿತಿತ್ತು. ೧೯೯೯-೨೦೦೦ ನೇ ಇಸವಿವರೆಗೆ ಕುಂದಪ್ರಭ ಪತ್ರಿಕೆಯಲ್ಲಿ ಕೆಲಸ ಸೇರಿದರು. ಸ್ಥಳೀಯ ಪತ್ರಿಕೆಗಳಲ್ಲಿ ಸಂಬಳ ಬೇರೆ ಹೇಳಬೇಕಾಗಿಲ್ಲ. ಜೀವನದ ದಾರಿಗಿಂತ ಮುಖ್ಯವಾಗಿ ತನ್ನೊಳಗಿನ ಕನಸಿಗೆ ಇಂಬು ಸಿಗಬೇಕೆಂಬ ಅತ್ಯಾಸೆ ಒಡಲಾಳದಲ್ಲಿತ್ತು. ಮನೆಯವರು ಬೈದರು ಸಣ್ಣ ಸಂಬಳದಲ್ಲೇ ದಿನ ದೂಡಿದರು. ೨೦೦೧ರಲ್ಲಿ ವಿಜಯಕರ್ನಾಟಕ ಪತ್ರಿಕೆ ಆರಂಭಗೊಂಡಾಗ ಉಡುಪಿಯಲ್ಲಿ ನಡೆದ ಸಂದರ್ಶನದಲ್ಲಿ ಆಗಿನ ಸಂಪಾದಕ ಈಶ್ವರ ದೈತೋಟ ಸಂದರ್ಶನದ ಮೂಲಕ ಆಯ್ಕೆ ಮಾಡಿದರು.
ವಿಜಯಕರ್ನಾಟಕ ಆರಂಭಿಕ ಹಂತದಲ್ಲಿ ನನ್ನ ಗಮನ ಸಂಪೂರ್ಣ ಗ್ರಾಮೀಣ ಪ್ರದೇಶದತ್ತ ವಾಲಿಕೊಂಡಿತ್ತು. ಈಗಲೂ ಅದೇ ಮನಸ್ಥಿತಿಯನ್ನು ಕಾಯ್ದುಕೊಂಡು ಬಂದಿದ್ದೇನೆ. ಗ್ರಾಮೀಣ ತಿರುಗಾಟ ಆಯುಷ್ಯ, ಉತ್ಸಾಹ ಎರಡನ್ನು ವೃದ್ಧಿಸಿದೆ. ತಾಲೂಕಿನಲ್ಲಿ ಕನ್ನಡ ಪತ್ರಿಕೆಗಳು ಸರಬರಾಜು ಆಗದ ಸ್ಥಳಗಳಲ್ಲಿ ವಿಜಯಕರ್ನಾಟಕ ತಲುಪಿಸಿದ ಧನ್ಯತಾ ಭಾವ ನಮ್ಮಲ್ಲಿದೆ. ಬಸ್ರಿಬೇರು, ಹಯ್ಯಂಗಾರು, ಬಳ್ಮನೆ, ಮಡಾಮಕ್ಕಿ, ಹಂಜದಂತಹ ಪಶ್ಚಿಮಘಟ್ಟದ ತಪ್ಪಲು ಪ್ರದೇಶ ಅರ್ಥಾತ್ ಕುಂದಾಪುರದ ಗಡಿಭಾಗದ ಜನ ತಮ್ಮೂರಿನ ಸಂಗತಿಗಾಗಿ ವಿಜಯಕರ್ನಾಟಕ ಕೊಂಡುಕೊಳ್ಳುವಂತಾಯಿತು. ನಕ್ಸಲ್ ಚಟುವಟಿಕೆ ಆರಂಭಗೊಂಡ ಬಳಿಕ ತಾಲೂಕಿನ ಪಶ್ಚಿಮಘಟ್ಟದ ಅಷ್ಟು ಕುಗ್ರಾಮಗಳ ಬಗ್ಗೆ ಬೆಳಕು ಚೆಲ್ಲುವ ಕೆಲಸ ಮಾಡಿದ್ದೇವೆ. ಇಂದು ಒಂದಿಷ್ಟು ಅರೆಬರೆ ಅಭಿವೃದ್ಧಿ ಕೆಲಸಗಳು ಅಲ್ಲಿ ಆದ ತೃಪ್ತಿ ಇದೆ. ಸಾಮಾಜಿಕ ನ್ಯಾಯ, ನೊಂದವರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸಾಕಷ್ಟು ವಿರೋಧ ಕಟ್ಟಿಕೊಂಡರು ಅದರಲ್ಲಿ ಒಂದಿಷ್ಟು ಜಯ ಸಾಧಿಸಿದ ತೃಪ್ತಿ ಇದೆ. ಕಾನೂನು ಕಟ್ಟಳೆಗಳನ್ನು ಮುಂದಿಟ್ಟುಕೊಂಡು ಅನೇಕರು ನೀಡಿದ ಮಾನಸಿಕ ಹಿಂಸೆ ಎದುರಿಸಿಯೂ ಹಳ್ಳಿಯ ಮುಗ್ಧ ಜನರಿಗೆ ಒಂದಿಷ್ಟು ನೈತಿಕ ಸ್ಥೈರ್ಯ ತುಂಬುವ ಕೆಲಸ ಮಾಡಿದ್ದೇವೆ. ನೊಂದವರು, ಸಂಕಷ್ಟದಲ್ಲಿರುವವರ ಬಗ್ಗೆ ಪ್ರಕಟಿಸಿದ ಅನೇಕ ವರದಿಗಳಿಂದ ಸಂತ್ರಸ್ತರಿಗೆ ಸಾಕಷ್ಟು ಪ್ರಯೋಜನ ಲಭಿಸಿದ ಸಮಾಧಾನವಿದೆ. ಕೊಡಚಾದ್ರಿ ಪರ್ವತದ ತಳಭಾಗದಿಂದ ಹಿಡಿದು ಉಡುಪಿ ಜಿಲ್ಲೆಯ ಅನೇಕ ಕಡೆ ಸುತ್ತಾಟ ನಡೆಸಿದ್ದೇವೆ. ಅದಕ್ಕಾಗಿ ಕೈಯಿಂದ ಸ್ವಂತ ಹಣ ವ್ಯಯಿಸಿದ್ದೇವೆ. ಈವರೆಗೆ ಯಾವ ಪ್ರಶಸ್ತಿ, ಸನ್ಮಾನಕ್ಕೂ ಒಪ್ಪಿಕೊಂಡವನಲ್ಲ. ರಾಜೇಶ್ ಶಿಬಾಜೆ ಹೆಸರಿನಲ್ಲಿ ಪ್ರಶಸ್ತಿ ಕೊಡಬೇಕು ಎಂದು ನೀವು ಕೇಳಿದಾಕ್ಷಣ ಯಾಕೊ ಮನಸ್ಸು ಒಪ್ಪಿತು. ಒಬ್ಬ ಪತ್ರಕರ್ತನ ಹೆಸರಿನ ಪ್ರಶಸ್ತಿ ಪಡೆಯುವುದು ಭಾಗ್ಯ ಎಂದೆಣೆನಿಸಿಕೊಂಡಿದ್ದೇನೆ ಎನ್ನುತ್ತಾರೆ ಜಾನ್.ಅಲ್ಲಿಂದ ಇಲ್ಲಿ ತನಕ ವಿಜಯಕರ್ನಾಟಕದ ವರದಿಗಾರನಾಗಿ ಗಮನ ಸೆಳೆದಿದ್ದಾರೆ.ಹುಟ್ಟಿದ್ದು: ಬಸ್ರೂರು,ಬೆಳೆದಿದ್ದು: ಕೋಣಿ.ತಂದೆ: ದಿ.ಫಿಲಿಪ್ ಡಿಸೋಜ, ತಾಯಿ: ಇಸಬೆಲ್ ಡಿಸೋಜ.