ಅಮ್ಮ ಐ ಲವ್ ಯು.....!

ಮೇ ಎರಡನೇ ಭಾನುವಾರದಂದು ವಿಶ್ವ ತಾಯಂದಿರ ದಿನವನ್ನು ಆಚರಿಸಲಾಗುತ್ತದೆ. ಕರುಣಾಮುಯಿ ತಾಯಿಯ ಕುರಿತಾಗಿ ಯುವ ಬರಹಗಾರ್ತಿ ಚೈತ್ರ ಚಂದನ್ ಬರೆದ ಲೇಖನ ಮತ್ತೆ ಓದುಗರಿಗಾಗಿ...




"ಅಮ್ಮ"  ಎಂದಾಕ್ಷಣ ಅದೇನೋ ರೋಮಾಂಚನ, ಆಕೆಯ ತ್ಯಾಗವನ್ನು ಅಕ್ಷರಗಳಲ್ಲಿ ವರ್ಣಿಸುವುದು ಕಷ್ಟಸಾಧ್ಯ. ಒಂದು ಮಗು ಅಪರಿಚಿತರೊಡನೆ ಆಟವಾಡುವುದಕ್ಕಿಂತ ಹೆಚ್ಚು ಖುಷಿಯಾಗಿ, ಸಲೀಸಾಗಿ, ತನ್ನ ತಾಯಿಯ ಜೊತೆಗೆ ಆಟವಾಡುತ್ತದೆ. ಮಗು ಗರ್ಭದಲ್ಲಿರುವಾಗಲೇ ತಾಯಿಯ ಭಾಷೆಯನ್ನು ಗ್ರಹಿಸಿಕೊಳ್ಳುತ್ತದೆ. ಮುಂದೆ ತಾಯಿಯಿಂದಲೇ ಭಾಷೆಯನ್ನು ಕಲಿಯುತ್ತದೆ. ತಾಯಿಯ ಕೊಡುಗೆ ಅಪಾರ. ಮಗಿವಿನ ಸರ್ವಾಂಗೀಣ ಅಭಿವೃದ್ಧಿ ಆಗುವಂತಹುದು ತಾಯಿಯ ಪ್ರಯತ್ನದಿಂದ ಮಾತ್ರ. "ಅಮ್ಮಾ" ಎಂದರೆ ಹಾಗೆ ಆಕೆ ಕ್ಷಮಯಾಧರಿತ್ರಿ, ಮಗು ಮಾಡಿದ ಯಾವುದೇ ತಪ್ಪು ಆಕೆಗೆ ನೋವುಂಟುಮಾಡುವುದಿಲ್ಲ. ಹೆತ್ತವಳೀಗೆ ಹೆಗ್ಗಣವೇ ಮುದ್ದು ಎಂಬಂತೆ ತನ್ನ ಮಗು ಕಪ್ಪಾಗಿರಲಿ, ಅಸಮಾನಯವಾಗಿರಲಿ, ವಿಕಲಚೇತನ ಮಗುವಾಗಿರಲಿ ಆಕೆ ಬೇಸರಪಡುವವಳಲ್ಲ. ಆಕೆಯ ಋಣವನ್ನು ಎಷ್ಟು ಜನ್ಮ ಹುಟ್ಟಿ ಬಂದರೂ ತೀರಿಸಲು ಅಸಾಧ್ಯವಾದಂತಹುದು.ತಾಯಿಯ ಅಗತ್ಯತೆಯನ್ನು ಬಿಡಿಸಿ ಬಣ್ಣಿಸಬೇಕಾಗಿಲ್ಲ.ಏಕೆಂದರೆ ಹುಟ್ಟಿದ ಎಲ್ಲಾ ವ್ಯಕ್ತಿಗೂ ಅದು ತಿಳಿದರುವಂತದ್ದು.
    ನಮಗೆ ಯಾವುದೇ ವಸ್ತು ಅಥವಾ ವ್ಯಕ್ತಿಯ ಬೆಲೆ ತಿಳಿಯುವುದು ಅದರಿಂದ ಸ್ವಲ್ಪ ಸಮಯ ದೂರ ಉಳಿದಾಗ ಅಥವಾ ಅದುನ್ನು ಶಾಶ್ವತವಾ ಕಳೆದುಕೊಂಡಾಗ ಮಾತ್ರ. ಈ ಸಮಾಜದಲ್ಲಿ ದಿನ ಕಳೆದಂತೆ ಅನೇಕ ಜನರು ನಮ್ಮ ಸಂಪರ್ಕಕ್ಕೆ ಬರುತ್ತಾರೆ. ಅದರಲ್ಲಿ ಎಷ್ಟು ಜನ ನಮ್ಮೊಂದಿಗೆ ಕೊನೆಯವರೆಗೆ ಉಳಿಯುತ್ತಾರೋ ಅದು ಗೊತ್ತಿರದ ವಿಷಯ ಆದರೆ ಎಲ್ಲರಿಂದಲೂ ಒಂದೊಂದು ರೀತಿಯ ಅನುಭವ ಸಿಗುವಂತಹುದು ನಿಜ. ಆಕಸ್ಮಿಕವೆಂಬಂತೆ ಬಂದ ಸ್ನೇಹಿತರಲ್ಲಿ ಕೆಲವರು ಉಳಿದರೆ, ಇನ್ನೂ ಕೆಲವರು ನೆನಪಿನಂಗಳದಲ್ಲಿ ಮಾಸಿ ಹೋಗುತ್ತಾರೆ. ಯಾವುದೋ ಸಂದರ್ಭ,ಮತ್ಯಾವುದೋ ಹೆಸರು ಮಾಸಿ ಹೋದವರನ್ನು ಕೂಡ ಮತ್ತೆ ಕಣ್ಣೆದುರಿಗೆ ತರುತ್ತದೆ.

  ಈ ಭಾವನಾ ರಹಿತ ಸಮಾಜದಲ್ಲಿ ಇಂದು ತಾಯಿಗೆ ಬೆಲೆಕೊಡುವವರು ಎಷ್ಟು ಮಂದಿ? ಒಂಭತ್ತು ತಿಂಗಳು ಮಗುವಿನ ಭಾರವನ್ನು ಹೊಟ್ಟೆಯಲ್ಲಿ ಹೊತ್ತು- ಹೆತ್ತು ಸಾಕಿ ಸಲಹಿದ ಆಕೆಯನ್ನು ಕಡೆಗಣಿಸುವವರಿಲ್ಲವೇ?ಹೆಂಡತಿ ಬಂದಾಗ ತುತ್ತುಣಿಸಿದ ತಾಯಿಯನ್ನು ಮರೆಯುವವರು ಇಲ್ಲವೇ? ಇದೇಗ ಇಂತಹ ಸಂಗತಿಗಳು ಹೆಚ್ಚುತ್ತಿದ್ದು ಪೂಜಿಸಿ ಗೌರವಿಸಬೇಕಾದ ತಾಯಿಯನ್ನು ಅನಾಥಾಶ್ರಮ ಅಥವಾ ವ್ರದ್ಧಾಶ್ರಮದಲ್ಲಿ ಕಾಣುವುದೇ ಹೆಚ್ಚು.
ಈ ಕಲಾತ್ಮಕ ಜಗತ್ತಿನಲ್ಲಿ ಬದಲಾವಣೆ ಬೇಕು ನಿಜ. ಅತ್ಯಂತ ವೇಗವಾಗಿ ಬದಲಾಗುತ್ತಿರುವ ಈ ವಿಶ್ವದಲ್ಲಿ ನಾವು ಬದಲಾಗದಿದ್ದರೆ, ನಮ್ಮನ್ನು ಹಿಂದೆ ಬಿಟ್ಟು ಜಗತ್ತು ಭರ್ರನೆ ಮುಂದೆ ಸಾಗಿ ಬಿಡುತ್ತದೆ. ಬದಲಾವಣೆ ಎಂದರೆ ನಮ್ಮ ಸಂಸ್ಕೃತಿಯ, ಚಿಂತನೆಯ ಆಳದಲ್ಲಿ ಗಟ್ಟಿಯಾಗಿ ನಿಂತು ಕಾಲಕಾಲಕ್ಕೆ ಬರುವ ಹೊಸ ತಿಳಿವುಗಳಿಗೆ ತೆರೆದ ಮನ ನೀಡುವುದು. ಆದರೆ ಇಂದಿನ ಜನರಿಗೆ ಐಶಾರಾಮಿ ಜೀವನ ನಡೆಸುವ ಚಿಂತೆ. ಹೆತ್ತವರಿಗೆ ಗೌರವ ನೀಡುವ ಪರಿಜ್ಯಾನವಂತೂ ಅವರಲ್ಲಿ ಇಲ್ಲವೇ ಇಲ್ಲ. ಗೆಳೆಯರ ಮುಂದೆ ಅಥವಾ ಸಹೋದ್ಯೋಗಿಗಳೊಡನೆ ವಯಸ್ಸಾದ ತಾಯಿಯೊಂದಿಗೆ ಮಾತನಾಡಲು ಮುಜುಗರ ಪಡುವವರೇ ಹೆಚ್ಚು. ಮಕ್ಕಳು ಸ್ವಂತ ತಾಯಿಗೆ ಮನೆಕೆಲಸದವಳೆಂದು ಪರಿಚಯಿಸಿದ ಅನೇಕ ಘಟನೆಗಳನ್ನು ನಾವು ಈಗಾಗಲೇ ಕೇಳಿದ್ದೇವೆ.
         ತಾಯಂದಿರ ದಿನ ಎಂದು ಆಚರಿಸುವ ನಾವೆಲ್ಲ ಆಕೆಗೆ ಎಷ್ಟು ಪ್ರಾಮುಖ್ಯತೆ ನೀಡುತ್ತಿದ್ದೇವೆ, ಆಕೆಯ ಕಷ್ಟ ಸುಖಗಳಿಗೆ ನಾವೆಷ್ಟು ಸ್ಪಂದಿಸುತ್ತಿದ್ದೇವೆ ಎಂಬುದನ್ನು ಯೋಚಿಸಬೇಕು. ಆಕೆಯ ನಿಜವಾದ ಬೆಲೆ ಅರ್ಥವಾಗಿರಿವುದು ಆಕೆಯನನು ಕಳೆದುಕೊಂಡ ನತದೃಷ್ಟರಿಗೆ ಮಾತ್ರ. ಒಂದು ಸಲ ನಾವು ತಾಯಿಯನ್ನು ಕಳೆದುಕೊಂಡರೆ ಮತ್ತೆ ಎಷ್ಟೇ ಪ್ರಯತ್ನ ಪಟ್ಟರೂ ಆಕೆಯನ್ನು ಪುನ: ಪಡೆಯಲು ಸಾಧ್ಯವಿಲ್ಲ.

ತಾಯಿಯ ಪ್ರೀತಿಗೆ ಅಂತ್ಯವಿಲ್ಲ, ಆದಿ ಮಾತ್ರ. ಕೊನೆಗಳಿಗೆಯಲ್ಲೂ ಕೂಡ ಮಗುವಿನ ಒಳಿತಿಗಾಗಿ ಬಯಸುವ ಒಂದೇ ಒಂದು ಜೀವ ಅದು ತಾಯಿ. "ಪ್ರಜಾವಾಣಿ" ದಿನಪತ್ರಿಕೆಯಲ್ಲಿ ಕೆಲವು ದಿನಗಳ ಹಿಂದೆ ಒಂದು ಅಂಕಣ ಓದಿದ್ದೆ,ಅದರಲ್ಲಿ ತಂದೆ ತಾಯಿ ಇಬ್ಬರೂ ಕಷ್ಟಪಟ್ಟು ಮಗನನ್ನು ಬೆಳೆಸಿ, ವಿದ್ಯಾವಂತನನಾಗಿ ಮಾಡಿ ಮದುವೆಯೂ ಮಾಡಿಸಿದರು.ಹೊಸತರಲ್ಲಿ ಎಲ್ಲವೂ ಸರಿಯಾಗಿತ್ತು. ಕೆಲವೇ ಸಮಯಗಳಲ್ಲಿ ಮಗ ಹೆಂಡತಿಯ ಮಾತಿಗೆ ಮರುಳಾಗಿ ತಂದೆ ತಾಯಿಯನ್ನು ಮನೆಯಿಂದ ಹೊರನೂಕಿದ. ಮುದಿ ಜೀವಗಳು ಎಷ್ಟು ದಿನ ತಾನೆ ಮಗನ ಚಿಂತೆಯಲ್ಲಿ ದಿನಕಳೆಯಬಹುದು? ಆಧಾರವಾಗಿದ್ದ ಮಗ ಬೀದಿಪಾಲುಮಾಡಿದ. ಅದಕ್ಕಾಗಿ ಅಂತ್ಯಕ್ರೀಯೆಗೆ ಬೇಕಾದ ಎಲ್ಲಾ ಪರಿಕರಗಳನ್ನೂ ತಂದು ಆತ್ಮಹತ್ಯೆಗೆ ಶರಣಾದರು. ಸಾವಲ್ಲೂ ಕೂಡ ಮಗನಿಗೆ ತಮ್ಮಿಂದ ತೊಂದರೆ ಆಗಬಾರದೆಂಬುದು ಅವರ ಬಯಕೆಯಾಗಿತ್ತು. ಕೆಟ್ಟ ಮಕ್ಕಳು ಬೇಕಾದರೂ ಹುಟ್ಟಬಹುದಂತೆ ಕೆಟ್ಟ ತಾಯಿ ಹುಟ್ಟಲು ಸಾಧ್ಯವಿಲ್ಲ ಎಂಬುದಕ್ಕೆ ಮೇಲಿನ ಘಟನೆಯೇ ಸಾಕ್ಷಿ.


          ಅದೇನೆ ಇರಲಿ ಅಮ್ಮನ ಪ್ರೀತಿಗೆ ಕೊನೆಯಿಲ್ಲ.ಹುಟ್ಟಿದ ಎಲ್ಲಾ ವ್ಯಕ್ತಿಯೂ ತಾಯಿಯ ಕಷ್ಟ ಸುಖದಲ್ಲಿ ಸ್ಪಂದಿಸಬೇಕು.ಆಗ ಮಾತ್ರ ನಾವು ಆಕೆಗೆ ನಿಜವಾದ ಗೌರವ ನೀಡಲು ಸಾಧ್ಯ.ಆಕೆಯ ಬಣ್ಣ ಮಾಸಿದೆ,ವಯಸ್ಸಾಗಿದೆ ಎಂಬ ಕಾರಣಕ್ಕೆ ಆಕೆಯನ್ನು ಕಡೆಗಣಿಸಬೇಡಿ.ದೇವರು ಇದ್ದಾನೋ ಇಲ್ಲವೋ ನಾ ತಿಳಿಯೆ, ನನಗಂತೂ ನನ್ನ ತಾಯಿಯೇ ದೇವರು, ಆಕೆಯ ಆದರ್ಶಗಳೇ ನನ್ನ ಜೀವನಕ್ಕೆ ಮಾರ್ಗದರ್ಶನ. ಅಮ್ಮಾ ಐ ಲವ್ ಯು......


ನಿಮ್ಮ ಪ್ರತಿಕ್ರಿಯೆ ಬರೆಯಿರಿ
 
ಕುಂದಾಪ್ರ ಡಾಟ್ ಕಾಂ - editor@kundapra.com