"ಓಂಗಣೇಶ್ ಅವರ ಈ ಪುಸ್ತಕ ಓದಿದಾಗ ನಾನೂ ವಿದೇಶ ತಿರುಗಿದಾಗ ಆದ ಹಲವು ಅನುಭವಗಳ
ಚಿತ್ರಗಳು ಕಣ್ಣ ಮುಂದೆ ಬಂದವು. ಈ ಕೃತಿಯಲ್ಲಿ ಜಗತ್ತು ಸುತ್ತಿದಾಗ ಎಂತೆಂತಹ ಮಾನವೀಯ
ಮುಖಗಳು ಎದುರಾಗತ್ತವೆ,ಮನುಷ್ಯ ಯಾವ ದೇಶದಲ್ಲಿದ್ದರೂ ಅವರ ಜೀವನ ಕ್ರಮ ದೇಶದ ಕಾನೂನು
ನಿಯಮಗಳು ಬೇರೆ ಬೇರೆಯಾಗಿದ್ದರೂ ಹೇಗೆ ಮಾನವೀಯತೆಯೇ ಎಲ್ಲವನ್ನೂ ಮೀರಿ ನಿಲ್ಲುತ್ತವೆ
ಎನ್ನುವುದನ್ನು ಅದ್ಭುತವಾಗಿ ಚಿತ್ರಿಸಲಾಗಿದೆ." ಎಂದು ಖ್ಯಾತ ಚಲನಚಿತ್ರ ನಟಿ, ಕರ್ನಾಟಕ
ಚಲನಚಿತ್ರ ವಾಣಿಜ್ಯಮಂಡಳಿಯ ಮಾಜಿ ಅಧ್ಯಕ್ಷೆ ಡಾ. ಜಯಮಾಲಾ ಹೇಳಿದರು.
ಖ್ಯಾತ ಜಾದೂಗಾರ ಚಿತ್ರನಟ ಓಂಗಣೇಶ್ ಅವರ 'ಜಾದೂಗಾರನ ಜರ್ನಿ' ಪುಸ್ತಕ ಬಿಡುಗಡೆ
ಮಾಡುತ್ತಾ ಮಾತನಾಡಿದ ಅವರು, ಇಂದು ಮನಷ್ಯ ಸಂಬಂಧವೆಲ್ಲವೂ ಹಾಳಾಗುತ್ತಿರುವ ಸಾಮಾಜಿಕ
ಸಂದರ್ಭ ಇದು. ಮನುಷ್ಯತ್ವದ ಸಾಕ್ಷಾತ್ಕಾರ ನೀಡುವ ಗಳಿಗೆಯನ್ನು ಪುಸ್ತಕ
ಮರುಸೃಷ್ಠಿಸುವುದು ಬಹಳ ಖುಷಿ ಕೊಡುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ ಕೊಂಕಣಿ ಅಕಾಡೆಮಿ ಅಧ್ಯಕ್ಷ ಕಾಸರಗೋಡು ಚಿನ್ನಾ ಮಾತನಾಡುತ್ತಾ
ಓಂಗಣೇಶ್ ಜಾದೂಗಾರನಾಗಿ 36 ರಾಷ್ಟ್ರ ಸುತ್ತಿದ ಏಕೈಕ ಕಲಾವಿದ, ಬೆಳ್ಳಿ ತೆರೆಯ
ಅನುಭವವನ್ನೂ ಪಡೆದ ಇವರು ಸಾಹಿತ್ಯದಲ್ಲೂ ಕೃಷಿ ಮಾಡುತ್ತಿರುವುದು ಸರಸ್ವತಿ ಅವರಿಗೋಲಿದ
ಪ್ರತೀಕ.ಇಂತಹ ಪ್ರತಿಬಾನ್ವಿತರನ್ನು ಪ್ರಶಸ್ತಿ ಅರಸಿಕೊಂಡು ಬರುತ್ತದೆ ಇವರಿಗೆ
ಇನ್ನಷ್ಟು ಶ್ರೇಯಸ್ಸು ಲಭಿಸಲಿ ಎಂದರು.
ಕೃತಿಕಾರ ಓಂಗಣೇಶ್ ಮಾತನಾಡುತ್ತಾ ಕುಂದಪ್ರಭ ಪತ್ರಿಕೆಯಲ್ಲಿ ಪ್ರಕಟಗೊಂಡ ಅಂಕಣಗಳ
ಸಂಗ್ರಹವೇ 'ಜಾದೂಗಾರನ ಜರ್ನಿ'ಯಾಗಿ ಬೆಳಕು ಕಾಣುತ್ತಿದೆ.ಹಿಂದೆ ಇಂತಾದ್ದೇ ಇನ್ನೊಂದು
ಕೃತಿ 'ಜಗದೊಳಗಿನ ಜಾದೂ' ಬಿಡುಗಡೆ ಮಾಡಿದಾಗ ಭಾರತವಲ್ಲದೆ ದುಬೈ ಬಹರೈನ್ ರಾಷ್ಟ್ರದ
ಕನ್ನಡಿಗರಿಂದ ದೊರೆತ ಸಹಕಾರ ಪ್ರೋತ್ಸಾಹವೇ ಈಗ ಈ ಕೃತಿ ಹೊರಬರಲು ಕಾರಣ. ಎಲ್ಲರನ್ನೂ
ಸದಾ ಸ್ಮರಿಸಿಕೊಳ್ಳುವೆ ಎಂದರು.
ಪ್ರಶಸ್ತಿ ವಿಜೇತ ಚಿತ್ರನಟ ದತ್ತಾತ್ರೇಯ ಪ್ರಥಮ ಕೃತಿ ಸ್ವೀಕಾರ ಮಾಡಿದರು.ಕೃತಿಪರಿಚಯವನ್ನು ಖ್ಯಾತ ಅಂಕಣಕಾರ ಸಾಹಿತಿ ಎಚ್ ಗಿರೀಶ್ ರಾವ್(ಜೋಗಿ) ಮಾಡಿದರು.
ಹಿರಿಯ ಚಿತ್ರನಟ ನಿರ್ಧೇಶಕ ಕೆ ಎಸ್ ಎಲ್ ಸ್ವಾಮಿ. ನಟ ಶ್ರೀನಿವಾಸ ಮೂರ್ತಿ
ಉಪಸ್ಥಿತರಿದ್ದರಲ್ಲದೆ ಸಭಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದು ಬೆಂಗಳೂರಿನ ನೂರಾರು
ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕುಮಾರಿ ಶ್ರದ್ಧಾಕಾಮತ್ ಪ್ರಾರ್ಥನೆ
ಸಲ್ಲಿಸಿದರು, ಪಿ ಸುಧಾಕರ ವಂದಿಸಿದರು ಗಣಪತಿ ಹೊಬಳಿದಾರ್ ಸನ್ಮಾನಿತರನ್ನು
ಪರಿಚಯಿಸಿದರು ಶ್ರೀಮತಿ ವಿಜಯಾಓಂಗಣೇಶ್ ಸ್ವಾಗತಿಸಿದರು.