ಗುರುಕುಲ ಯಕ್ಷಗಾನ ಸಂಘ ಉದ್ಘಾಟನೆ


ಕೋಟೇಶ್ವರ: ದಿನಾಂಕ 25-07-2012 ರಂದು ವಕ್ವಾಡಿಯ ಗುರುಕುಲ ಪಬ್ಲಿಕ್ ಶಾಲೆಯಲ್ಲಿ ‘ಗುರುಕುಲ ಯಕ್ಷಗಾನ ಸಂಘ’ದ ಉದ್ಘಾಟನಾ ಸಮಾರಂಭವು ನಡೆಯಿತು. ಮುಖ್ಯ ಅತಿಥಿಗಳು, ಅಧ್ಯಕ್ಷರು, ಸಂಸ್ಥೆಯ ಆಡಳಿತಾಧಿಕಾರಿಯವರು, ಮತ್ತು ಇನ್ನಿತರ ಗಣ್ಯರು ಯಕ್ಷಗಾನದ ಹಿಮ್ಮೇಳದೊಂದಿಗೆ ಗಣೇಶ ಸ್ತುತಿಗೆ ಸರಿಯಾಗಿ ದೀಪ ಬೆಳಗುವುದರ ಮೂಲಕ ಸಂಘವನ್ನು ಉದ್ಘಾಟಿಸಿದರು. ಈ ಸಮಾರಂಭಕ್ಕೆ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯ ಹಾಗೂ ಕರಾವಳಿ ಕರ್ನಾಟಕದ ಗಾನಕೋಗಿಲೆ ಖ್ಯಾತಿಯ ಪ್ರಖ್ಯಾತ ಸೃಜನಶೀಲ ಭಾಗವತರಾದ ಶ್ರೀ. ಸುಬ್ರಹ್ಮಣ್ಯ ಧಾರೇಶ್ವರರವರು ಮುಖ್ಯ ಅತಿಥಿಗಳಾಗಿ ಆಗಮಿಸಿ ದೀಪ ಬೆಳಗಿಸಿ ಮಾತನಾಡಿದರು. ಯಕ್ಷಗಾನ ಸಂಘದಿಂದ ವಿದ್ಯಾರ್ಥಿಗಳಿಗೆ ಭಾರತದ ಭವ್ಯ ಪರಂಪರೆ ಸಂಸ್ಕೃತಿಯ ಅರಿವಾಗುತ್ತದೆ. ವಿದ್ಯಾರ್ಥಿಗಳದ್ದು ಚಿನ್ನದ ಬದುಕು ಈ ಕಲೆಯನ್ನು ಅಭ್ಯಾಸ ಮಾಡುವುದರಿಂದ ಸರಿಯಾದ ಸಂಸ್ಕಾರ ದೊರೆಯುತ್ತದೆ ಎಂದು ತಿಳಿಸಿದರು. ಗುರುಕುಲ ಯಕ್ಷಗಾನ ಸಂಘದ ಪ್ರಧಾನ ಗುರುಗಳು ಹಾಗೂ ಹಂಗಾರಕಟ್ಟೆ ಯಕ್ಷಗಾನ ಕಲಾ ಕೇಂದ್ರದ ಕಾರ್ಯದರ್ಶಿಯವರಾದ ಶ್ರೀ. ರಾಜಶೇಖರ ಹೆಬ್ಬಾರರು ವಿದ್ಯಾರ್ಥಿಗಳಿಗೆ ಯಕ್ಷಗಾನ ಅಭ್ಯಾಸದತ್ತ ಒಲವು ಮೂಡುವಂತೆ ಮಾತನಾಡಿದರು. ಸಂಸ್ಥೆಯ ಆಡಳಿತಾಧಿಕಾರಿ ಸಸ್ಯಶಾಸ್ತ್ರಜ್ಞ ಡಾ. ಜಿ. ಹೆಚ್. ಪ್ರಭಾಕರ ಶೆಟ್ಟಿಯವರು ಯಕ್ಷಗಾನ ಸಂಘಕ್ಕೆ ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ಬಾಂಡ್ಯಾ ಎಜುಕೇಶನ್ ಟ್ರಸ್ಟ್ (ರಿ) ನ ಜಂಟಿ ಕಾರ್ಯನಿರ್ವಾಹಕರಾದ ಶ್ರೀಮತಿ ಅನುಪಮಾ.ಎಸ್. ಶೆಟ್ಟಿಯವರು ವಹಿಸಿಕೊಂಡಿದ್ದು ವಿದ್ಯಾರ್ಥಿಗಳಿಗೆ ಯಕ್ಷಗಾನದ ಮಹತ್ವದ ಕುರಿತು ತಿಳಿಸುತ್ತಾ ತಾನು ಕೂಡಾ ವಿದ್ಯಾರ್ಥಿದೆಸೆಯಲ್ಲಿ ಯಕ್ಷಗಾನದ ಹೆಜ್ಜೆಯನ್ನು ಹಾಕಿದ್ದೇನೆ ಎಂದು ನೆನಪಿಸಿಕೊಂಡು ತನ್ನ ಅನುಭವ ಹೇಳುವ ಮೂಲಕ ಹುರಿದುಂಬಿಸಿದರು. ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ರೂಪಾ ಶೆಣೈಯವರು ಸ್ವಾಗತಿಸಿ ಅತಿಥಿಗಳ ಪರಿಚಯವನ್ನು ಮಾಡಿದರು. ಉಪನ್ಯಾಸಕ ಶ್ರೀ ಶಶಿಕಾಂತ್ ಎಸ್. ಶೆಟ್ಟಿಯವರು ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಶ್ರೀ ವಿಶ್ವನಾಥ್ರವರು ನಿರೂಪಿಸಿ ಶಿಕ್ಷಕಿ ನಿರ್ಮಲಾರವರು ವಂದನಾರ್ಪಣೆಗೈದರು. ಕೊನೆಯಲ್ಲಿ ಎಲ್ಲರ ಅಪೇಕ್ಷೆಯಂತೆ ಶ್ರೀ ಸುಬ್ರಹ್ಮಣ್ಯ ಧಾರೇಶ್ವರರವರು ಭಾಗವತಿಕೆಯನ್ನು ಮಾಡುವ ಮೂಲಕ ಕಾರ್ಯಕ್ರಮ ಮುಕ್ತಾಯಗೊಂಡಿತು.

ನಿಮ್ಮ ಪ್ರತಿಕ್ರಿಯೆ ಬರೆಯಿರಿ
 ಕುಂದಾಪ್ರ.ಕಾಂ> editor@kundapra.com