ಏಕರೂಪ ಸಮಾನ ಶಿಕ್ಷಣ ನೀತಿಗಾಗಿ ಕುಂದಾಪುರ ಕ.ಸಾ.ಪ. ಮನವಿ

 ಕುಂದಾಪುರ: ಕರ್ನಾಟಕದಲ್ಲಿ ಸರ್ಕಾರವು ಮಾತೃಭಾಷಾ ಮಾಧ್ಯಮದ ಏಕರೂಪ  ಹಾಗೂ ಸಮಾನ ಶಿಕ್ಷಣ ನೀತಿಯನ್ನು  ಜಾರಿಗೊಳಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿ ಕುಂದಾಪುರ  ತಾಲೂಕು  ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶನಿವಾರ  ಮೆರವಣಿಗೆಯಲ್ಲಿ  ತೆರಳಿ  ತಾಲೂಕು  ತಹಶೀಲ್ದಾರರ  ಮೂಲಕ  ಮನವಿ  ಸಲ್ಲಿಸಲಾಯಿತು. 
        ಕುಂದಾಪುರ ತಹಶೀಲ್ದಾರ್ ಲಾಲಂಕಿ ರವಿ ಮನವಿ ಸ್ವೀಕರಿಸಿ  ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ತಲುಪಿಸುವುದಾಗಿ ಭರವಸೆ  ನೀಡಿದರು.  ನಂತರ  ಸುದ್ದಿಗಾರರೊಂದಿಗೆ  ಮಾತನಾಡಿದ  ಸಾಹಿತ್ಯ  ಪರಿಷತ್  ಅಧ್ಯಕ್ಷ  ಕುಂದಾಪುರ  ನಾರಾಯಣ  ಖಾರ್ವಿ ರಾಜ್ಯ ಸರ್ಕಾರ  ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಿಗೆ ತಕ್ಷಣ ಮೂಲಭೂತ  ಸೌಕರ್ಯಗಳನ್ನು  ಒದಗಿಸಿ  ಮಕ್ಕಳನ್ನು  ಆಕರ್ಷಿಸಲು ಸೂಕ್ತ ಕ್ರಮಗಳನ್ನು  ಕೈಗೊಳ್ಳಬೇಕು. ಕನ್ನಡ ಮಾಧ್ಯಮದಲ್ಲಿ  ವ್ಯಾಸಂಗ  ಮಾಡಿದವರಿಗೆ ಸರ್ಕಾರಿ ಹಾಗೂ  ಖಾಸಗಿ ಕ್ಷೇತ್ರಗಳ  ಹುದ್ದೆಗಳಲ್ಲಿ  ಶೇ. 80ರಷ್ಟು  ಮೀಸಲಾತಿ  ಜಾರಿಗೊಳಿಸಬೇಕು.  ಕನ್ನಡ  ವಿರೋಧಿ  ಧೋರಣೆಯನ್ನು  ಪ್ರದರ್ಶಿಸುವ ಎಲ್ಲಾ ಖಾಸಗಿ  ಶಾಲೆಗಳನ್ನು  ರಾಷ್ಟ್ರೀಕರಣ ಮಾಡಬೇಕು, ಎಂಬಿತ್ಯಾದಿ  ವಿವಿಧ ವಿಷಯಗಳನ್ನೊಳಗೊಂಡ ಮನವಿಯನ್ನು  ಸರ್ಕಾರಕ್ಕೆ  ಸಲ್ಲಿಸಿರುವುದಾಗಿ  ತಿಳಿಸಿದರು. 

        ಉಡುಪಿ  ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್  ಪೂರ್ವಾಧ್ಯಕ್ಷ  ಎ.ಎಸ್.ಎನ್. ಹೆಬ್ಬಾರ್  ಮಾತನಾಡಿ ರಾಜ್ಯದ ಎಲ್ಲಾ ಶಾಲೆಗಳಲ್ಲಿ  ಕನ್ನಡವನ್ನು  ಒಂದು  ಭಾಷೆಯನ್ನಾಗಿ ಬೋಧಿಸುವ ಪದ್ಧತಿ ಜಾರಿಗೊಳಿಸಿ  ಕನ್ನಡಕ್ಕೆ  ಆದ್ಯತೆ  ನೀಡಬೇಕು.  ಮುಂದಿನ ದಿನಗಳಲ್ಲಿ  ಈ  ಬಗ್ಗೆ  ಪರಿಷತ್ನೊಂದಿಗೆ  ಕನ್ನಡಾಭಿಮಾನಿಗಳೆಲ್ಲ  ಸೇರಿ  ಕಾರ್ಯ ಚಟುವಟಿಕೆಗಳನ್ನು  ಮಾಡಲಾಗುವುದು ಎಂದು  ತಿಳಿಸಿದರು.

       ಪರಿಷತ್ ಗೌರವ ಕಾರ್ಯದರ್ಶಿ ಕೆ.ಜಿ.ವೈದ್ಯ,  ಯು.  ಸಂದೇಶ್ ಭಟ್, ಕಾರ್ಯಕಾರಿ  ಸಮಿತಿ ಸದಸ್ಯರಾದ  ರಾಘವೇಂದ್ರ ಪೈ  ಗಂಗೊಳ್ಳಿ,  ಯು.  ವೆಂಕಟರಮಣ ಹೊಳ್ಳ , ಬಿ.  ಎಸ್  ರಾಮಚಂದ್ರ, ನಾರಾಯಣ,  ರಾಘವೇಂದ್ರ ಚರಣ  ನಾವಡ ,  ಸದಾನಂದ ಖಾರ್ವಿ, ಬರ್ನಾರ್ಡ್  ಡಿ’ಕೋಸ್ತಾ  ವೊದಲಾದವರು  ಹಾಜರಿದ್ದರು. 

ನಿಮ್ಮ ಪ್ರತಿಕ್ರಿಯೆ ಬರೆಯಿರಿ