ಕೋಟ : ಉಡುಪಿ ಜಿಲ್ಲಾ ಮಟ್ಟದ ಬಾಲಕರ ಕುಸ್ತಿ ಪಂದ್ಯಾಟ ಉದ್ಘಾಟನೆ

ಕುಂದಾಪುರ : ಕ್ರೀಡೆ ಎಂದರೆ ಕೇವಲ ಕ್ರಿಕೆಟ್ ಅಲ್ಲ. ಭಾರತದಲ್ಲೇ ಹುಟ್ಟಿ ಬೆಳೆದ ಹಲವಾರು ಕ್ರೀಡೆಗಳು ಇಂದು ಭಾರತಕ್ಕೆ ವಿಶ್ವಮನ್ನಣೆ ದೊರಕಿಸಿಕೊಟ್ಟಿವೆ. ಇವುಗಳಲ್ಲಿ ಪ್ರಮುಖ ಕ್ರೀಡೆ ಕುಸ್ತಿ. ರಾಜ್ಯ ಶಿಕ್ಷಣ ಇಲಾಖೆಯೂ ಪಾಠದೊಂದಿಗೆ ಕ್ರೀಡೆಗಳಿಗೂ ಮಹತ್ವ ನೀಡಿದೆ. ಮುಂಬರುವ ದಿನಗಳಲ್ಲಿ ಎಲ್ಲ ಶಾಲೆಗಳಲ್ಲೂ ದೈಹಿಕ ಶಿಕ್ಷಣ ಅರ್ಥಪೂರ್ಣವಾಗಿ, ಪರಿಣಾಮಕಾರಿಯಾಗುವಂತೆ ಇಲಾಖೆ ಕ್ರಮ ತೆಗೆದುಕೊಂಡಿದೆ. ಉತ್ತಮ ಶೈಕ್ಷಣಿಕ ಫಲಿತಾಂಶ ಮಾತ್ರವಲ್ಲದೇ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸುವಲ್ಲೂ ಕೋಟ ವಿವೇಕ ವಿದ್ಯಾಸಂಸ್ಥೆ ಗಮನ ಸೆಳೆದಿದೆ - ಎಂದು ಉಡುಪಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖಾ ಉಪ ನಿರ್ದೇಶಕ ನಾಗೇಂದ್ರ ಮಧ್ಯಸ್ಥ ಮೆಚ್ಚುಗೆ ವ್ಯಕ್ತಪಡಿಸಿದರು.
        ಉಡುಪಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ಕೋಟ ವಿದ್ಯಾ ಸಂಘ ಮತ್ತು ವಿವೇಕ ಆಂಗ್ಲಮಾಧ್ಯಮ ಪ್ರೌಢಶಾಲೆ ಕೋಟ ಇವರ ಸಂಯುಕ್ತಾಶ್ರಯದಲ್ಲಿ ಪ್ರೌಢಶಾಲಾ ಸ್ವರ್ಣಭವನದಲ್ಲಿ ನಡೆದ ಜಿಲ್ಲಾಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕರ ಕುಸ್ತಿ ಪಂದ್ಯಾಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
        ಕೋಟ ವಿದ್ಯಾ ಸಂಘದ ಅಧ್ಯಕ್ಷ ಪಿ. ಪ್ರಭಾಕರ ಮಯ್ಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಪಿ. ಸುಬ್ರಹ್ಮಣ್ಯ ಉಪಾಧ್ಯ, ಬ್ರಹ್ಮಾವರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ಶಾನುಭಾಗ್, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ರಘು ತಿಂಗಳಾಯ, ಬ್ರಹ್ಮಾವರ ವಲಯ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಮಧುಕರ ಎಸ್. ಮುಖ್ಯ ಅತಿಥಿಗಳಾಗಿ ಆಗಮಿಸಿ ಕ್ರೀಡಾ ಮನೋಭಾವ ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
       ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷಕ ಸೀತಾನದಿ ವಿಠಲ ಶೆಟ್ಟಿ ಪ್ರಸ್ಥಾವನೆಗೈದು ಕ್ರೀಡೆಗಳಲ್ಲಿ ರಾಜಕೀಯ ಮತ್ತು ಹಣದ ಪ್ರಭಾವ ಬೆರೆಸಬಾರದು. ಮುಂದಿನ ದಿನಗಳಲ್ಲಿ ಜಿಲ್ಲೆಯ ಕ್ರೀಡಾಪಟುಗಳು ರಾಷ್ಟ್ರಮಟ್ಟ ಮತ್ತು ಒಲಿಂಪಿಕ್ ಸ್ಪರ್ಧೆಗಳಿಗೆ ಪ್ರವೇಶ ಪಡೆಯಬೇಕು ಎಂದು ಹಾರೈಸಿದರು. ಕಳೆದ ಬಾರಿ ಕುಸ್ತಿ ಸ್ಪರ್ಧೆಯಲ್ಲಿ ವಿಜೇತರಾದವರನ್ನು ಗೌರವಿಸಲಾಯಿತು.
     ಉಡುಪಿ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಕರುಣಾಕರ ಶೆಟ್ಟಿ, ಕಾರ್ಯದರ್ಶಿ ವಿಜಯ್ಕುಮಾರ್ ಶೆಟ್ಟಿ, ಗೌರವಾಧ್ಯಕ್ಷ ಸತೀಶ್ ಕುಮಾರ್ ಶೆಟ್ಟಿ, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಭುಜಂಗ ಶೆಟ್ಟಿ, ವಿವೇಕ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ನಾಗೇಶ ಶಾನುಭಾಗ್, ಉಪ ಪ್ರಾಂಶುಪಾಲೆ ಗೀತಾ ನಾಯಕ್, ಬಾಲಕಿಯರ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಶ್ರೀಪತಿ ಹೇರ್ಳೆ, ದೈಹಿಕ ಶಿಕ್ಷಣ ನಿರ್ದೇಶಕ ವಸಂತ ಶೆಟ್ಟಿ, ಕೋಟ ವಿದ್ಯಾಸಂಘದ ಸದಸ್ಯರಾದ ಶ್ರೀಧರ ಉಪಾಧ್ಯ, ಪಿ. ಗಂಗಾಧರ ಹೇರ್ಳೆ, ವೆಲೆರಿಯನ್ ಮಿನೇಜಸ್, ದೈಹಿಕ ಶಿಕ್ಷಣ ಶಿಕ್ಷಕ ನವೀನ್ ಶೆಟ್ಟಿ ಉಪಸ್ಥಿತರಿದ್ದರು.
     ವಿವೇಕ ಆಂಗ್ಲಮಾಧ್ಯಮ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಎಂ.ರಾಮದೇವ ಐತಾಳ ಸ್ವಾಗತಿಸಿ ಅತಿಥಿಗಳನ್ನು ಗೌರವಿಸಿದರು. ಅಧ್ಯಾಪಕಿ ಚಂದ್ರಕಲಾ ಕಾರ್ಯಕ್ರಮ ನಿರೂಪಿಸಿ, ಅಧ್ಯಾಪಕ ಅಚ್ಯುತ ಉಪಾಧ್ಯ ವಂದಿಸಿದರು.
ನಿಮ್ಮ ಪ್ರತಿಕ್ರಿಯೆ ಬರೆಯಿರಿ