ಗಬ್ಬೆದ್ದುಹೋದ ಬಡಾಕೆರೆ ಕ್ರಾಸ್-ಗುಡ್ಡೆಹೋಟೆಲ್ ರಸ್ತೆ, ಸಂಚಾರಿಗಳಿಗೆ ನರಕಾವಸ್ತೆ,

 ನಾಡಾ-ಆಲೂರು ಮುಖ್ಯರಸ್ತೆ ಮಾರ್ಗದ ಬಡಾಕೆರೆ ಕ್ರಾಸ್-ಗುಡ್ಡೆಹೋಟೆಲ್, ಗೇರುಕಟ್ಟೆ, ನಾಡಾ-ರಾಮನಗರ, ರೈಲ್ವೇ ಸೇತುವೆ ಬಳಿ, ಮಹಾಗಣಪತಿ ನಿಲ್ದಾಣ ಮೊದಲಾದೆಡೆಯ ರಸ್ತೆಮಾರ್ಗವು ತೀರಾ ಹದಗೆಟ್ಟಿದ್ದು, ಭಾರೀ ಹೊಂಡಗಳಿಂದ ನಲುಗಿಹೋಗಿದೆ. ಈ ರಸ್ತೆಯಲ್ಲಿ ವಾಹನ ಸಂಚಾರ ಅತ್ಯಂತ ದುಸ್ತರವಾಗಿದೆ. ಮಳೆಗಾಲಕ್ಕೆ ಮುನ್ನ ಈ ರಸ್ತೆಯು ದುರಸ್ತಿ ಕಾಣುವುದು ಎಂಬ ನಿರೀಕ್ಷೆಯೂ ಹುಸಿಯಾಗಿದ್ದರಿಂದ ಮಳೆನೀರಿನ ಹೊಂಡಗಳಂತಾದ ಇಲ್ಲಿನ ರಸ್ತೆಯ ದುರವಸ್ಥೆಯು ಜನಸಾಮಾನ್ಯರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. 
**********************************************************************************************
ದುಃಸ್ಥಿತಿಗೆ ನಲುಗಿದ ಬಡಾಕೆರೆ ಕ್ರಾಸ್ ರಸ್ತೆ 
ವರದಿ:ಸಿ. ಕೆ. ಹೆಚ್.
ಕುಂದಾಪುರ:  ನಾಡಾ-ಆಲೂರು ಮುಖ್ಯರಸ್ತೆ ಮಾರ್ಗದ ಬಡಾಕೆರೆ ಕ್ರಾಸ್-ಗುಡ್ಡೆಹೋಟೆಲ್, ಗೇರುಕಟ್ಟೆ, ನಾಡಾ-ರಾಮನಗರ, ರೈಲ್ವೇ ಸೇತುವೆ ಬಳಿ, ಮಹಾಗಣಪತಿ ನಿಲ್ದಾಣ ಮೊದಲಾದೆಡೆಯ ರಸ್ತೆಮಾರ್ಗವು ತೀರಾ ಹದಗೆಟ್ಟಿದ್ದು, ಭಾರೀ ಹೊಂಡಗಳಿಂದ ನಲುಗಿಹೋಗಿದೆ. ಈ ರಸ್ತೆಯಲ್ಲಿ ವಾಹನ ಸಂಚಾರ ಅತ್ಯಂತ ದುಸ್ತರವಾಗಿದೆ. ಮಳೆಗಾಲಕ್ಕೆ ಮುನ್ನ ಈ ರಸ್ತೆಯು ದುರಸ್ತಿ ಕಾಣುವುದು ಎಂಬ ನಿರೀಕ್ಷೆಯೂ ಹುಸಿಯಾಗಿದ್ದರಿಂದ ಮಳೆನೀರಿನ ಹೊಂಡಗಳಂತಾದ ಇಲ್ಲಿನ ರಸ್ತೆಯ ದುರವಸ್ಥೆಯು ಜನಸಾಮಾನ್ಯರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
         ಆಲೂರು, ಹಕ್ಲಾಡಿ ಮೊದಲಾದೆಡೆಯಿಂದ ನಾಡಾ, ಪಡುಕೋಣೆ ಮೊದಲಾದೆಡೆಗೆ ಸಂಪರ್ಕವನ್ನು ಕಲ್ಪಿಸುವ ಬಹುಮುಖ್ಯ ಸಂಪರ್ಕದ ಕೊಂಡಿ ಹಾಗೂ ನಿತ್ಯ ಸಾವಿರಾರು ಜನರು ಓಡಾಡುವ ಇಲ್ಲಿನ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು ಜರ್ಝರಿತಗೊಂಡಿದ್ದರೂ ಸ್ಥಳೀಯಾಡಳಿತ ಕಿಂಚಿತ್ತೂ ತಲೆಕೆಡಿಸಿಕೊಂಡಿಲ್ಲ. ಸುಗಮ ಸಂಚಾರಕ್ಕೆ ಭಾರೀ ತೊಂದರೆಯನ್ನು ತಂದೊಡ್ಡಿದ ಈ ರಸ್ತೆಯ ಹೊಂಡಗಳನ್ನಾದರೂ ತಾತ್ಕಾಲಿಕವಾಗಿ ಮುಚ್ಚಿಸಿ ಮಳೆನೀರು ನಿಲ್ಲದಂತೆ ಮಾಡುವ ಮೂಲಕ ಸಮಸ್ಯೆಗೆ ಕೊಂಚ ಬ್ರೇಕ್ ಹಾಕುವ ಕಾರ್ಯವೂ ನಡೆಯದಿರುವುದು ಸ್ಥಳೀಯ ರಸ್ತೆ ಬಳಕೆದಾರರ ಸಮಸ್ಯೆಗೆ ಕ್ಷೇತ್ರದ ಜನಪ್ರತಿನಿಧಿಗಳು, ಅಧಿಕಾರಿಗಳು ತಳೆದಿರುವ ದಿವ್ಯನಿರ್ಲಕ್ಷ್ಯದ ಪರಮಾವಧಿಯ ಧ್ಯೊತಕವಾಗಿ ಪರಿಣಮಿಸಿದೆ. 
   ಬಡಾಕೆರೆ ಕ್ರಾಸ್, ಗುಡ್ಡೆಹೋಟೆಲ್, ಗೇರುಕಟ್ಟೆ ಮೊದಲಾದೆಡೆ ರಸ್ತೆಯು ಪ್ರತೀ ಮಳೆಗಾಲದಲ್ಲಿಯೂ ಮಳೆನೀರು ತುಂಬಿ ಕೆರೆಯಂತಾಗುವುದು ತಪ್ಪಿಲ್ಲ. ಭಾರೀ ಹೊಂಡಗಳಿಂದ ಕೂಡಿದ ಈ ರಸ್ತೆಯಲ್ಲಿ ಜನ-ವಾಹನ ಸಂಚಾರ ಅತ್ಯಂತ ತ್ರಾಸದಾಯಕವಾಗಿ ಪರಿಣಮಿಸಿದೆ. ನಿತ್ಯ ಸಂಚರಿಸುವ ಬಸ್ಸುಗಳು ಈ ಮಾರ್ಗದಲ್ಲಿ ಓಲಾಡುತ್ತಾ, ತೇಲಾಡುತ್ತಾ ಸಾಗುವುದರಿಂದ ಬಸ್ಸುಗಳಲ್ಲಿ ಪ್ರಯಾಣ ಮಾಡುವ ಮಕ್ಕಳು ಹಾಗೂ ವೃದ್ಧರು ಅನಪೇಕ್ಷಿತ ದೇಹದಂಡನೆಯನ್ನು ಅನುಭವಿಸುವಂತಾಗಿದೆ. ಮಳೆಗಾಲದಲ್ಲಿ ಇಲ್ಲಿನ ರಸ್ತೆಯಲ್ಲಿ ಅಕ್ಷರಶಃ ಕೆರೆಯೇ ನಿರ್ಮಾಣಗೊಳ್ಳುತ್ತದೆ. ಪ್ರಮುಖ ಸಂಪರ್ಕ ಮಾರ್ಗವಾಗಿದ್ದರೂ ಈ ರಸ್ತೆ ದುರಸ್ತಿ ಕಾಣದೇ ಹಲವಾರು ವರ್ಷಗಳೇ ಉರುಳಿವೆ. ನಾಡಾ-ಸೇನಾಪುರ ವ್ಯಾಪ್ತಿಯಲ್ಲಿನ ಬಹುತೇಕ ಮುಖ್ಯ ಹಾಗೂ ಗ್ರಾಮೀಣ ರಸ್ತೆಮಾರ್ಗಗಳಿಗೆ ಡಾಮರೀಕರಣ ನಡೆದಿದ್ದರೂ ನಾಡಾ-ಆಲೂರು ರಸ್ತೆಮಾರ್ಗ ಮಾತ್ರ ಆಡಳಿತಯಂತ್ರದ ಸಂಪೂರ್ಣ ಅವಗಣನೆಗೆ ಗುರಿಯಾಗಿದ್ದು, ಸಮಗ್ರವಾಗಿ ಅಭಿವೃದ್ಧಿ ಕಾಣದೇ ಶಾಪಗ್ರಸ್ತ ರಸ್ತೆ ಎಂಬ ಹಣೆಪಟ್ಟಿಯನ್ನು ಅಂಟಿಸಿಕೊಂಡಿದೆ.
         ಆಲೂರು, ಹಕರ್ೂರು, ಹೆಮ್ಮುಂಜೆ, ಬಡಾಕೆರೆ, ಗುಡ್ಡೆಹೋಟೆಲ್, ಬೆಳ್ಳಾಡಿ ಮೊದಲಾದ ಗ್ರಾಮೀಣ ಭಾಗಗಳ ಶಾಲಾ-ಕಾಲೇಜುಗಳ ನೂರಾರು ವಿದ್ಯಾಥರ್ಿಗಳು, ಕೃಷಿ-ಕೂಲಿಕಾಮರ್ಿಕರು, ಜನಸಾಮಾನ್ಯರು ಸೇರಿದಂತೆ ನಿತ್ಯವೂ ಅಸಂಖ್ಯಾತ ಜನರು ಈ ಮಾರ್ಗದಲ್ಲಿ ಸಂಚರಿಸುತ್ತಾರೆ. ನಿಯಮಿತ ಬಸ್ಸುಗಳು ಸೇರಿದಂತೆ ಇನ್ನಿತರ ಬೇರೆ ಬೇರೆ ವಾಹನಗಳು ಈ ರಸ್ತೆಮಾರ್ಗವನ್ನು ಬಳಸಿಕೊಂಡು ಓಡಾಟ ನಡೆಸುತ್ತವೆ. ವಿಶೇಷವಾಗಿ ಗ್ರಾಮೀಣ ಭಾಗದ ಜನಸಾಮಾನ್ಯರಿಗೆ ಅತ್ಯಂತ ಉಪಯುಕ್ತವಾದ ಈ ರಸ್ತೆಯ ಅಭಿವೃದ್ಧಿ ಮಾತ್ರ ಕನಸಾಗಿಯೇ ಉಳಿದಿರುವುದರ ಮರ್ಮವೇನು ಎಂಬುದು ಅರ್ಥವಾಗದ ಸಂಗತಿಯಾಗಿದೆ.
      ಬಡಾಕೆರೆ ಕ್ರಾಸ್-ಗುಡ್ಡೆಹೋಟೆಲ್ ರಸ್ತೆಮಾರ್ಗದ ದುರಸ್ತಿಗಾಗಿ ಒತ್ತಾಯಿಸಿ ಪರಿಸರದ ನಾಗರಿಕರು ಸ್ಥಳೀಯ ಗ್ರಾಮ ಪಂಚಾಯತ್, ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ಬೈಂದೂರು ಶಾಸಕರ ಮೊರೆ ಹೋಗಿದ್ದಾರೆ. ಆದರೆ ಇಲ್ಲಿನ ಸಮಸ್ಯೆಗೆ ಸ್ಥಳೀಯ ಗ್ರಾ. ಪಂ. ಕಣ್ಣಿದ್ದೂ ಕುರುಡಾಗಿದೆ. ಕಿವಿಯಿದ್ದೂ ಕಿವುಡಾಗಿದೆ. ಜಿಲ್ಲಾ ಪಂಚಾಯತ್ ಸದಸ್ಯರಂತೂ ಜನರ ಮೊಣಕೈಗೆ ತುಪ್ಪ ಸವರುವುದರಲ್ಲಿ ತೃಪ್ತಿಕಂಡಿದದ್ದರೆ, ಬೈಂದೂರು ಶಾಸಕರು ಸಮಸ್ಯೆಗೆ ಸ್ಪಂದಿಸಿದ್ದು, ಅನುದಾನವನ್ನು ನೀಡುವ ಭರವಸೆಯನ್ನು ನೀಡಿ ಸುಮ್ಮನುಳಿದಿದ್ದಾರೆ. ಒಟ್ಟಿನಲ್ಲಿ ಇಲ್ಲಿನ ರಸ್ತೆ ಮಾತ್ರ ದುರಸ್ತಿ ಆಗಿಲ್ಲ, ನಿತ್ಯಸಂಚಾರಿಗಳ ನರಕಯಾತನೆ ಹಾಗೂ ವಾಹನ ಚಾಲಕರ ಬವಣೆ ನೀಗಿಲ್ಲ.
ನಿಮ್ಮ ಪ್ರತಿಕ್ರಿಯೆ ಬರೆಯಿರಿ