ಅತಿ ಮಡಿವಂತಿಕೆ ಭಾಷಾ ಬೆಳವಣಿಗೆಗೆ ಮಾರಕ - ಡಾ.ಕಾರಂತ

ಕುಂದಾಪುರ: ಜಾಗತೀಕರಣದ ಪ್ರವಾಹದಲ್ಲಿ ಇಂದು ಸುಂದರ ಭಾಷೆ ಕನ್ನಡ ಕೊಚ್ಚಿ ಹೋಗುತ್ತಿದೆ. ಇದರ ಮೂಲ ಸೆಲೆಯನ್ನು ಕನ್ನಡಿಗರಾದ ನಾವು ಉಳಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮತ್ತದರ ಕಾರ್ಯಗಳನ್ನು ನಾವು ಬಲಗೊಳಿಸಬೇಕು. ಜಾಗತಿಕ ಸಂವಹನಕ್ಕೊಂದು ಭಾಷೆ ಬೇಕು. ಆದರೆ ಅತಿ ಮಡಿವಂತಿಕೆ ಸರಿಯಲ್ಲ. ಇದು ಕನ್ನಡದ ಬೆಳವಣಿಗೆಗೆ ಮಾರಕವಾಗಬಹುದು ಎಂದು ಕುಂದಾಪುರದ  ಮನೋವೈದ್ಯ ಡಾ || ಕೆ.ಎಸ್.ಕಾರಂತ ಹೇಳಿದರು.
  ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಉಪ್ಪಿನಕುದ್ರು ಶ್ರೀ ಗೋಪಾಲಕೃಷ್ಣ ದೇವಳದ ವಠಾರದಲ್ಲಿ ನಡೆದ ಹಳ್ಳಿಯತ್ತ ಸಾಹಿತ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
          ಕನ್ನಡ ಭಾಷೆಯಲ್ಲಿ ಕಲಿತರೆ ಜ್ಞಾನ - ಸ್ಥಾನ ಸಿಗದು ಎಂಬ ಅಳುಕು ಬೇಡ ಎಂದ ಅವರು ಇಂದು ಉನ್ನತ ಸ್ಥಾನದಲ್ಲಿರುವ ಗಣ್ಯರೆಲ್ಲರೂ ಅವರವರ ಮಾತೃಭಾಷೆಯಲ್ಲಿಯೇ ಕಲಿತವರು ಎಂದು ವಿವರಿಸಿದರು. 
       ಮುಖ್ಯ ಅತಿಥಿಗಳಾದ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಪತ್ರಕರ್ತ ಜಾನ್ ಡಿಸೋಜ, ಜವಳಿ ಉದ್ಯಮಿ ಯು. ಸದಾನಂದ ಸೇರುಗಾರ ಮಾತನಾಡಿ ಹಿಂದಿನ ರಾಜ ಮಹಾರಾಜರುಗಳೆಲ್ಲಾ ಕನ್ನಡವನ್ನು ತಮ್ಮ ಆಡಳಿತ ಭಾಷೆಯಾಗಿ ಅಂಗೀಕರಿಸಿದ್ದರು. ಆದರೆ ಇಂದು ಕನ್ನಡಿಗರಲ್ಲೇ ಕನ್ನಡದ ಅಭಿಮಾನ ಕಡಿಮೆಯಾಗುತ್ತಿದೆ. ಕನ್ನಡವನ್ನು ಬಳಸಿ ಬೆಳೆಸಬೇಕೇ ವಿನಹ ಇತರರಿಗೆ ನೋವಾಗುವಂತೆ ವರ್ತಿಸಿದರೆ ಪ್ರಯೋಜನವಿ¯್ಲ ಎಂದರು.
  ಉಪ್ಪಿನಕುದ್ರು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಶ್ರೀಲತಾ, ಸಂದೇಶ್ ಸ್ವರಚಿತ ಕವನಗಳನ್ನು ವಾಚಿಸಿದರು. ಸುಗಮ ಸಂಗೀತಗಾರ ಗಣೇಶ್ ಗಂಗೊಳ್ಳಿ, ಚಂದು ಮತ್ತು ಗೌರಿ ಸಹೋದರಿಯರು, ಹಿರಿಯರಾದ ಸರೋಜಿನಿ ಮತ್ತು ವೊೈದು ಜನಪದ ಹಾಡುಗಳನ್ನು ಹಾಡಿ ರಂಜಿಸಿದರು.
        ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ನ ಗೌರವ ಕಾರ್ಯದರ್ಶಿ ಕೆ.ಜಿ.ವೈದ್ಯ ಪರಿಷತ್ನ ಕಾರ್ಯಗಳನ್ನು ವಿವರಿಸಿದರು. ಅಧ್ಯಕ್ಷ ಕುಂದಾಪುರ ನಾರಾಯಣ ಖಾರ್ವಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪರಿಷತ್ ಕಾರ್ಯಕಾರಿ ಸಮಿತಿ ಸದಸ್ಯ ಯು.ವೆಂಕಟರಮಣ ಹೊಳ್ಳ ಸ್ವಾಗತಿಸಿ ನಿರೂಪಿಸಿದರು. ಶ್ರೀ ಗೋಪಾಲಕೃಷ್ಣ ದೇವಳದ ಧರ್ಮದರ್ಶಿ ಭಾಸ್ಕರ ಕಾರಂತ ಗಣ್ಯರಿಗೆ ಫಲತಾಂಬೂಲಯಿತ್ತು ಗೌರವಿಸಿದರು.
           ಉದ್ಯಮಿಗಳಾದ ಯು. ರಮೇಶ್ ಕಾರಂತ, ಯು. ಸದಾನಂದ ಸೇರುಗಾರ ಮತ್ತು ಉಪ್ಪಿನಕುದ್ರು ನೇತಾಜಿ ಕಮಿಟಿ ಫ್ರೆಂಡ್ಸ್ ಪ್ರಾಯೋಜಕತ್ವದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಂಚಾಲಕ ಯು. ವೆಂಕಟರಮಣ ಹೊಳ್ಳ ವಂದಿಸಿದರು.