ಕುಂದಾಪುರ: ಕನ್ನಡ ಭಾಷೆ ಅತಂತ್ರ ಸ್ಥಿತಿಯಲ್ಲಿದೆ ಎಂಬ ಆತಂಕ ನಗರ ಕೇಂದ್ರಿತ ವ್ಯವಸ್ಥೆಯಲ್ಲಷ್ಟೇ ಇದೆ. ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಪರಿಸ್ಥಿತಿ ಇಲ್ಲ. ಇಲ್ಲಿನ ಜನಜೀವನದೊಂದಿಗೆ ಕನ್ನಡ ಭಾಷೆಯು ಸದೃಢವಾಗಿ ಉಳಿದಿದೆ ಎಂದು ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ಹೆಚ್.ಜಯಪ್ರಕಾಶ್ ಶೆಟ್ಟಿ ಹೇಳಿದರು.
ಅವರು ಸುವರ್ಣ ಮಹೋತ್ಸವದ ಅಂಗವಾಗಿ ಭಂಡಾರ್ಕಾರ್ಸ್ ಕಾಲೇಜಿನ ಕನ್ನಡ ವಿಭಾಗ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇವುಗಳ ಸಂಯುಕ್ರಾಶ್ರಯದಲ್ಲಿ ಆಯೋಜಿಸಿದ್ದ ಕನ್ನಡ ಜಾಗೃತಿ ಸಮಾವೇಶದಲ್ಲಿ "ಕನ್ನಡ ಭಾಷೆಯ ಅನುಷ್ಠಾನ ಮತ್ತು ಅಭಿವೃದ್ಧಿಯ ಸಾಧ್ಯತೆಗಳು" ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ಕನ್ನಡ ಭಾಷೆಯು ಉಳಿವಿನ ಕುರಿತು ಯೋಚಿಸುವುದರೊಂದಿಗೆ ಕನ್ನಡದ ಜನ ಹೇಗೆ ಬದುಕುತ್ತಿದ್ದಾರೆ ಎಂಬ ಕಡೆಗೆ ಗಮನಹರಿಸಬೇಕು. ಭಾಷಿಕರ ನೈಜ ಸಮಸ್ಯೆಗೆ ಪರಿಹಾರ ಕಂಡುಕೋಳ್ಳಬೇಕಾಗಿದೆ. ನಮ್ಮ ಭಾಷೆ ಮತ್ತು ಧರ್ಮಗಳನ್ನು ಆತಂಕವಾದಿಗಳಿಂದ ರಕ್ಷಸಬೇಕಾದ ತುರ್ತು ಅಗತ್ಯ ನಮ್ಮ ಮುಂದಿದೆ ಎಂದರು.
ಸಾಹಿತಿ ಕೋ.ಶಿವಾನಂದ ಕಾರಂತ ಮಾತನಾಡಿ ಮನೆಯೊಳಗೆ ತಾಯಂದಿರು ಭಾಷೆಯ ಉಳಿವಿನ ಬಗ್ಗೆ ಕಾಳಜಿ ತೋರಿಸಿದಾಗ ಮಾತ್ರ ಕನ್ನಡ ಜನರ ಭಾಷೆಯಾಗಿ ಉಳಿಯಲು ಸಾಧ್ಯವಾಗವುದು. ಅನ್ಯ ಭಾಷೆಯ ಕಲಿಕೆಯು ಜ್ಞಾನಾರ್ಜನೆಗಾಗಿ ಮಾತ್ರ ಸಿಮಿತವಾಗಿರಿಸಿ ಮಕ್ಕಳಿಗೆ ಎಳವೆಯಿಂದಲೂ ಭಾಷೆಯ ಚೌಕ್ಕಟ್ಟೋಳಗೆ ಬೆಳೆಸುವ ಬದ್ಧತೆಯನ್ನು ಹೆತ್ತವರು ಹೊಂದಬೇಕು ಎಂದರು.
ಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ತಾಳ್ತಜೆ ವಸಂತಕುಮಾರ ಅವರು ವಹಿಸಿದ್ದರು.
ವಿದ್ಯಾರ್ಥಿನಿ ಸೃಜನಾ ಕಾರ್ಯಕ್ರಮ ನಿರ್ವಹಿಸಿದರು.
ಕವಿಗೋಷ್ಠಿ
ಬಳಿಕ ನಡೆದ ಕವಿಗೋಷ್ಠಿಯಲ್ಲಿ ಪೂಣರ್ಿಮಾ ಸುರೇಶ್, ಸಂದೀಪ ಹೆಗ್ಗದ್ದೆ, ಕೋನಳ್ಳಿ ರಾಜೀವ ನಾಯ್ಕ, ಸುಮತಿ ಶೆಣೈ ಮತ್ತು ಸುಕನ್ಯಾ ಕಳಸ ಅವರು ಭಾಗವಹಿಸಿ ಕವನಗಳನ್ನು ವಾಚಿಸಿದರು.
ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ಕನ್ನಡ ಕವಯತ್ರಿ ಡಾ.ಮಾಧವಿ ಭಂಡಾರಿ ವಹಿಸಿದ್ದರು.
ವಿದ್ಯಾರ್ಥಿನಿಯರಾದ ಶ್ವೇತಾ ಮತ್ತು ಅಶ್ವಿನಿ ಕಾರ್ಯಕ್ರಮ ನಿರ್ವಹಿಸಿದರು
ಸಮಾರೋಪ ಸಮಾರಂಭ
ಸಮಾರೋಪ ಸಮಾರಂಭದಲ್ಲಿ ಹಿರಿಯ ಲೇಖಕ ಎ.ಎಸ್.ಎನ್.ಹೆಬ್ಬಾರ್ ಮಾತನಾಡಿ ನಮ್ಮ ನಡೆನುಡಿಯ ಮೂಲಕ ಭಾಷೆ ನಮ್ಮದಾಗಬೇಕು. ಕಲಿಕೆಗಾಗಿಯೋ ಅಥವಾ ಜ್ಞಾನಾರ್ಜನೆಗಾಗಿ ಬೇರೆ ಯಾವುದೇ ಭಾಷೆಯನ್ನು ಬಳಸಿಕೊಂಡರೂ ಮಾತೃ ಭಾಷೆಯನ್ನು ನಮ್ಮೊಳಗಿನ ಭಾಷೆಯನ್ನಾಗಿಸಿಕೊಳ್ಳಬೇಕು. ಸಂಸ್ಕೃತಿ ಉಳಿವಿಗೆಗಾಗಿ ಭಾಷೆಯನ್ನು ಉಳಿಸಿಕೊಳ್ಳುವುದು ನಮ್ಮೆಲ್ಲೆರ ಜವಾಬ್ದಾರಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಚಂದ್ರಶೇಖರ ದೋಮ ವಹಿಸಿದ್ದರು.
ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ.ರೇಖಾ ಬನ್ನಾಡಿ ಸ್ವಾಗತಿಸಿದರು. ಪದವಿಪೂರ್ವ ಕಾಲೇಜಿನನ ಪ್ರಾಂಶುಪಾಲರಾದ ಜಿ.ಎಂ.ಗೊಂಡ ವಂದಿಸಿದರು.
ವಿದ್ಯಾರ್ಥಿ ನವೀನ್ ನಿರ್ವಹಿಸಿದರು.
ಕುಂದಾಪ್ರ.ಕಾಂ> editor@kundapra.com