ಹೊಸತನ ಮೂಡಿಸಿದ ಗಾಯನ ವಾಚನ


       ಇತ್ತೀಚೆಗೆ ಕೀರ್ತಿ ಶೇಷ ಶ್ರೀ ವಿಶ್ವೋತ್ತಮ ತೀರ್ಥರ ಸಂಸ್ಮರಣಾರ್ಥ ಪರ್ಯಾಯ ಸೊದೆ ಮಠಾದೀಶರಾದ ಶ್ರೀ ವಿಶ್ವ ವಲ್ಲಭ ತೀರ್ಥರು ರಾಜಾಂಗಣದಲ್ಲಿ ಗಾಯನ ವಾಚನ ಕಾರ್ಯಕ್ರಮವನ್ನು ಎರ್ಪಡಿಸಿದ್ದರು.
      ದ್ರೌಪದೀ ಸ್ವಯಂವರ ಎಂಬ  ಕಥಾನಕವನ್ನು ಹರಿಕಥಾಮೃತ ಸಾರ, ಮಹಾಭಾರತ, ಮಹಾಭಾರತ ತಾತ್ಪರ್ಯ ನಿರ್ಣಯ , ದಾಸ ಸಾಹಿತ್ಯ ಮೊದಲಾದ ಕೃತಿಗಳ  ಚೌಕಟ್ಟಿನಲ್ಲಿ ರೂಪಿಸಿದ ವಿದ್ವಾನ್ ಕುಂಭಾಶಿ ಶ್ರೀಪತಿ ಉಪಾಧ್ಯರು ಬಹಳ ಸೊಗಸಾಗಿ ಪ್ರವಚನವನ್ನು ಮಾಡಿದರು. ಪಂಚಾಂಗ ಕರ್ತೃವಾಗಿ, ಕೃತಿ ರಚನಾಕಾರರಾಗಿ, ಉಪನ್ಯಾಸಕರೂ ಆಗಿ ಈತರು ಪ್ರಸಿದ್ಧರು. ಅರ್ಥ ಗರ್ಭಿತವಾದ ಮಾತಿನಿಂದ ಕೂಡಿದ ವಿವರಣೆಗಳು ಮನಮುಟ್ಟುವಂತಿದ್ದುವು.

            ಈ ಕಥಾನಕದಲ್ಲಿ ತಮ್ಮ ಸುಮಧುರ ಕಂಠಸಿರಿಯಿಂದ ಬಡಗುತಿಟ್ಟಿನಲ್ಲಿ ಖ್ಯಾತನಾಮರಾದ ವಿದ್ವಾನ್ ಗಣಪತಿ ಭಟ್ ಯಲ್ಲಾಪುರ ಇವರು ಗಾಯನ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಬಾಮಿನಿ, ದಾಸರ ಪದ ಹಾಗೂ ಶ್ಲೋಕಗಳನ್ನೊಳಗೊಂಡ 20 ಕ್ಕೂ ಮಿಗಿಲಾದ, ಪದ್ಯಗಳನ್ನು ಬೇರೆ ಬೇರೆ ರಾಗಗಳಲ್ಲಿ ಯಕ್ಷಗಾನದ ಶೈಲಿಗಿಂತ ವಿಭಿನ್ನವಾದ ಶೈಲಿಯಲ್ಲಿ ಹಾಡಿದರು. ದ್ರೌಪದಿಯು ಸ್ವಯಂವರ ವೇದಿಕೆಗೆ ಪ್ರವೇಶಿಸಿದ ಸಂದರ್ಭದ ಪದ್ಯ ಹಾಗೂ ದೃಪದ ದ್ರೌಪದಿಯನ್ನು ದಾರೆಯೆರೆಯುವ ಸಂದರ್ಭದ ಪದ್ಯಗಳು ಬಹಳ ಸುಂದರವಾಗಿದ್ದವು. ತಬಲಾದಲ್ಲಿ ಭಾರವಿ ದೇರಾಜೆಯವರು ಉತ್ತಮ ಸಾಥ್ ನೀಡಿದರು.

           ಸುಮಾರು 2 ಗಂಟೆಗಳ ಕಾಲ ನಡೆದ ಇವರ  ಈ ಚೊಚ್ಚಲ ಪ್ರಯೋಗವು ಒಂದುವರೆ ಗಂಟೆಗೆ ಇಳಿದರೆ ಬಹುಶ: ಭವಿಷ್ಯದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸುವವರಿಗೆ ಹೆಚ್ಚು ಅನುಕೂಲವಾದೀತು. ಇಂತಾ ಕಾರ್ರ್ಯಕ್ರಮಗಳು ಸಾರ್ವಜನಿಕ ಸಭೆಗಳಲ್ಲಿ ಅಲ್ಲದೆ ಶಾಲಾ ಕಾಲೇಜುಗಳಲ್ಲಿ  ಹೆಚ್ಚು ಹೆಚ್ಚು ಆಯೋಜನೆಗೊಂಡರೆ, ನಮ್ಮ ವೇದ ಸಾಹಿತ್ಯ, ಪುರಾಣದ ಕತೆಗಳು,ಉಪಕತೆಗಳು ಯುವ ಜನತೆಯ ಮನದಲ್ಲಿ ಮುಂದುವರಿಯಲು ಸಹಕಾರಿಯಾದೀತು. 

           ಈ ಕಾರ್ಯಕ್ರಮದ ಅಯೋಜನೆಯ ಮೂಲಕ ವಿದ್ವಾಂಸರ ಗಾಯನ ಪ್ರವಚನ ಮಂಡನೆಯ ಜೊತೆಗೆ ನಮ್ಮ ಪುರಾಣದ ಕತೆಗಳು ಜನಮನದಲ್ಲಿ ನೂರ್ಕಾಲ ಉಳಿಯಲೆಂದು ಹಾರೈಕೆ.
ಬರಹ -ಜಿ. ಪ್ರಶಾಂತ ಉಪಾದ್ಯ, ಉಪನ್ಯಾಸಕರು