ಕೋಟ ಸುವೃತಾ ಅಡಿಗಾಗೆ ಜಿ.ಪಿ.ರಾಜರತ್ನಂ ದತ್ತಿ ಪ್ರಶಸ್ತಿ

ಕುಂದಾಪುರ: ಕೋಟದ ವಿವೇಕ ಬಾಲಕಿಯರ ಪ್ರೌಢ ಶಾಲೆಯ 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕುಮಾರಿ ಸುವೃತಾ ಅಡಿಗರ ‘ಪಾತಾಳದ ಸಿಹಿಗೆಣಸು’ ಪುಸ್ತಕಕ್ಕೆ 2011 ರ ಸಾಲಿನ ಕನ್ನಡ ಸಾಹಿತ್ಯ ಪರಿಷತ್ನ ಜಿ.ಪಿ.ರಾಜರತ್ನಂ ದತ್ತಿ ಪ್ರಶಸ್ತಿ ದೊರೆತಿದೆ.
         ಈಗಾಗಲೇ ಈ ಕೃತಿಗೆ ಷಹಪುರ ತಾಲೂಕಿನ ಸಂಧ್ಯಾ ವೇದಿಕೆಯಿಂದ ಅತ್ಯುತ್ತಮ ಮಕ್ಕಳ ಪುಸ್ತಕವೆಂದು ವಿದ್ಯಾಸಾಗರ ಬಾಲ ಪುರಸ್ಕಾರ ಲಭ್ಯವಾಗಿದೆ. ಸ್ಪೂರ್ತಿ (ಕಥೆ, ಕವನಗಳು) ಪುಸ್ತಕದಲ್ಲಿ ಈಕೆಯ ಕವನಗಳು ಪ್ರಕಟವಾಗಿವೆ. ಡಾ || ಶಿವರಾಮ ಕಾರಂತ ಮಕ್ಕಳ ಸಾಹಿತ್ಯ ವೇದಿಕೆಯು ಆಯೋಜಿಸಿದ್ದ ವರ್ಷ ಸಂಭ್ರಮದ ಅಧ್ಯಕ್ಷತೆ, ಉಸಿರು ಸಂಸ್ಥೆ ಆಯೋಜಿಸಿದ್ದ ಪ್ರಥಮ ‘ಕಾಂಬ’ ಸಮ್ಮೇಳನದ ಕಥೆ, ಕವನಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ಈ ಬಾಲೆ ಮಕ್ಕಳ ಸಾಹಿತ್ಯ ಸಂಗಮದ ಧ್ವನಿ ಸಮ್ಮೇಳನದಲ್ಲಿ  ಕವನ ವಾಚನ ಮಾಡಿದ್ದಾಳೆ. ಅರಳುವೊಗ್ಗು ಪತ್ರಿಕೆಯಲ್ಲಿ ಈಕೆಯ ಕಥೆ, ಕವನಗಳು ಪ್ರಕಟವಾಗುತ್ತಿವೆ. ಸಾಹಿತ್ಯದಲ್ಲಿ ವಿಶೇಷ ಆಸಕ್ತಿ ವಹಿಸಿರುವ ಈಕೆ ಕಳೆದ ಮೂರು ವರ್ಷಗಳಿಂದ ‘ಪ್ರಣತಿ’ ಎಂಬ ಹಸ್ತ ಪತ್ರಿಕೆ ಹೊರತರುತ್ತಿದ್ದಾಳೆ.
      ಇತ್ತೀಚೆಗೆ ಬೆಂಗಳೂರು ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿಯವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಹಿರಿಯ ಸಾಹಿತಿ ಜಿ.ಎಸ್.ಸಿದ್ಧಲಿಂಗಯ್ಯ ಪ್ರಶಸ್ತಿ ಪ್ರದಾನ ಮಾಡಿದರು. ಡಾ|| ನಲ್ಲೂರು ಪ್ರಸಾದ್, ಡಾ || ವಸುಂಧರ ಭೂಪತಿ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮುಂತಾದವರು ಉಪಸ್ಥಿತರಿದ್ದರು.
ನಿಮ್ಮ ಪ್ರತಿಕ್ರಿಯೆ ಬರೆಯಿರಿ
 ಕುಂದಾಪ್ರ.ಕಾಂ> editor@kundapra.com