ಕುಂದಾಪುರದಲ್ಲಿ ಭಾರತ್ ಬಂದ್‌ ಯಶಸ್ವಿ

ಕುಂದಾಪುರ:  ಡಿಸೇಲ್ ದರ ಏರಿಕೆ, ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ನೇರ ವಿದೇಶಿ ಬಂಡವಾಳ ಹೂಡಿಕೆ, ಅಡುಗೆ ಅನಿಲ ಮಿತಿಯನ್ನು ಕಡಿತಗೊಳಿಸಿರುವುದು ಮತ್ತು  ಕೇಂದ್ರ ಸರಕಾರದ ಜನವಿರೋಧಿ ನೀತಿ ಖಂಡಿಸಿ ಎನ್‌ಡಿಎ  ಸೇರಿದಂತೆ ಹಲವು ಸಂಘಟನೆಗಳು ಕರೆನೀಡಿದ್ದ ಭಾರತ್ ಬಂದ್‌ ಕುಂದಾಪುರದಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿದೆ. ನಗರದ ಬಹುತೇಕ ಅಂಗಡಿ ಮುಂಗಟ್ಟುಗಳನ್ನು ಮಾಲೀಕರು ಸ್ವಯಂಪ್ರೇರಿತವಾಗಿ ಬಂದ್ ಮಾಡಿ ಬೆಂಬಲ ಸೂಚಿಸಿದರು. ಶಾಲೆ, ಕಾಲೇಜುಗಳು ಬಂದ್ ಆಗಿದ್ದವು. ಬ್ಯಾಂಕ್, ಅಂಚೆ, ಮತ್ತಿತರ ಕಚೇರಿಗಳು ತೆರೆದಿದ್ದರೂ ಗ್ರಾಹಕರು ಇಲ್ಲದೆ ಬಿಕೋ ಎನ್ನುತ್ತಿದ್ದವು.  ಬೆಳಗ್ಗೆ ತೆರೆದುಕೊಂಡಿದ್ದ ರಾಷ್ಟ್ರೀಕತ ಬ್ಯಾಂಕ್‌ಗಳು ಪ್ರತಿಭಟನಾಕಾರರ ಸೂಚನೆಯ ಮೇರೆಗೆ ನಂತರ ಮುಚ್ಚಿದವು. ಕುಂದಾಪುರ ನಗರ, ಕೊಟೇಶ್ವರ, ಸಿದ್ಧಾಪುರ, ವಂಡ್ಸೆ,  ಕೊಲ್ಲೂರು, ಹಾಲಾಡಿ, ಗಂಗೊಳ್ಳಿ, ಹೆಮ್ಮಾಡಿ, ತ್ರಾಸಿ, ನಾವುಂದ, ನಾಗೂರು, ಅಂಬಾಗಿಲು, ಉಪ್ಪುಂದ, ಬಿಜೂರು, ಬೈಂದೂರು, ಶಿರೂರು ಸೇರಿದಂತೆ ತಾಲೂಕಿನಾದ್ಯಂತ ಬಂದ್ ಬಹುತೇಕ ಯಶಸ್ವಿಯಾಗಿತ್ತು. ಬೆಳಿಗ್ಗೆನಿಂದಲೇ ಬಸ್ ಸಂಚಾರ ಸ್ಥಗಿತಗೊಂಡಿದ್ದವು. ಸರಕಾರಿ ಬಸ್ ರಸ್ತೆಗಿಳಿಯದ ಹಿನ್ನೆಲೆಯಲ್ಲಿ ದೂರದ ಪ್ರಯಾಣಿಕರು ಬಸ್ ತಂಗುದಾಣದಲ್ಲಿಯೇ ಉಳಿಯುವಂತಾಯಿತು.  ನಗರದೆಲ್ಲೆಡೆ ಆಟೋ ಸಂಚಾರವು ಮಾಮೂಲಿಯಂತೆ ಕಾರ್ಯನಿರ್ವಹಿಸಿದ ಕಾರಣ ಪ್ರಯಾಣಿಕರು ಮತ್ತು ದೂರದೂರಿಗೆ ತೆರಳಬೆಕಾದವರಿಗೆ ಅನುಕೂಲವಾಯಿತು.  ರಸ್ತೆಗಳಲ್ಲಿ ಕಾರು, ರಿಕ್ಷಾ ಸೇರಿದಂತೆ ಲಘುವಾಹನಗಳ ಓಡಾಟ ಮಾತ್ರ ಕಂಡುಬಂತು. ಸಿಪಿಎಂ ಕುಂದಾಪುರ ತಾಲೂಕು ಸಮಿತಿ ವತಿಯಿಂದ ನಗರದಲ್ಲಿ ಪ್ರತಿಭಟನೆ ಮೆರವಣಿಗೆ ನಡೆಸಿದರೆ, ಬಿಜೆಪಿ ಕುಂದಾಪುರ, ತ್ರಾಸಿ, ಬೈಂದೂರಿನಲ್ಲಿ ಪ್ರತಿಭಟನೆ ನಡೆಸಿತು. ಕಾರ್ಯಕರ್ತರು ಪ್ರಧಾನಿ ಹಾಗೂ ಯುಪಿಎ ಅಧ್ಯಕ್ಷೆಯ ಭಾವಚಿತ್ರ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.