ಕಲಾಮಾಧ್ಯಮಗಳಲ್ಲಿ ಭ್ರಷ್ಟಾಚಾರ

~ಮೇಘ ಸಮೀರ~

        ಭ್ರಷ್ಟಾಚಾರ ಇಂದು ನಿನ್ನೆಯ ಮಾತಲ್ಲ. ತಲತಲಾಂತರದಿಂದ, ಶತಮಾನಗಳ ಹಿಂದೆಯೆ ಈ ಭ್ರಷ್ಟಾಚಾರ ಸಮಾಜದಲ್ಲಿ ತನ್ನ ಉಪಸ್ಥಿತಿ ತೋರ್ಪಡಿಸಿತ್ತು ಎನ್ನುವುದಕ್ಕೆ ಹಲವಾರು ಉದಾಹರಣೆಗಳಿವೆ. ಇದಕ್ಕೆ ಉತ್ತಮ ನಿದರ್ಶನಗಳು ರಾಮಾಯಣ ಮಹಾಭಾರತ ಮುಂತಾದ ಕಾವ್ಯಗಳು ಹಾಗೂ ಪುರಾಣಗಳು. ರಾಮಾಯಣ ಹಾಗೂ ಮಹಾಭಾರತ, ಅತ್ಯಂತ ಪ್ರಾಚೀನ ಗ್ರಂಥಗಳೆಂದೇ ಗುರುತಿಸಲ್ಪಡುತ್ತದೆ. ಇದರಲ್ಲಿ ಬರುವ ರಾಕ್ಷಸರು, ದುಷ್ಟ ಆಡಳಿತವರ್ಗ, ಕುತಂತ್ರಿಗಳು ಹಾಗೂ ಹಲವಾರು ಸನ್ನಿವೇಶಗಳು ಭ್ರಷ್ಟಾಚಾರದ ಪ್ರತಿರೂಪದಂತೆ ತೋರುತ್ತವೆ. ಆದರೆ ಈ ಕಾವ್ಯಗಳಲ್ಲಿ ಈ ಭ್ರಷ್ಟಾಚಾರವನ್ನು ಹತ್ತಿಕ್ಕುವಂತಹ ಒಂದು ಪಾತ್ರ ಅಥವಾ ಶಕ್ತಿ ಇತ್ತು. ಆದರೆ ಇಂದಿನ ಪರಿಸ್ಥಿತಿಯಲ್ಲಿ ಅಂತಹ ವ್ಯಕ್ತಿ-ಶಕ್ತಿಗಳೆರಡೂ ಇಲ್ಲದಿರುವುದು ನಮ್ಮ ದುರಾದೃಷ್ಟ. ಈ ಕಾವ್ಯ-ಪುರಾಣಗಳು ಕಾಲ್ಪನಿಕವೆಂದಾದರೆ, ಅದರ ರಚನಕಾರರು ಭ್ರಷ್ಟಾಚಾರದ ಉಲ್ಲೇಖ ಮಾಡಿರುದರಿಂದ ಅವರ ಕಾಲದಲ್ಲಿ ಭ್ರಷ್ಟಾಚಾರ ಇತ್ತು ಎನ್ನುವುದು ಸ್ಪಷ್ಟ. ಮತ್ತು ನಮ್ಮ ಇತಿಹಾಸದಲ್ಲೂ ಭ್ರಷ್ಟ ರಾಜರೂಗಳನ್ನ,ಅಧಿಕಾರಿಗಳನ್ನ ಕಾಣಬಹುದು.
     ಆದರೆ ಇಂದಿನ ಸಮಾಜದಲ್ಲಿ ಕಾಣುತ್ತಿರುವ ಭ್ರಷ್ಟಾಚಾರ ಇದೆಲ್ಲಕ್ಕಿಂತ ಹೆಚ್ಚು ಅಪಾಯಕಾರಿಯಾದಂತಹದು. ಪ್ರಸ್ತುತ ಸಮಾಜದಲ್ಲಿ ಕೇವಲ ರಾಜಕೀಯ ಮಾತ್ರವಲ್ಲದೆ, ಆರೋಗ್ಯ, ಶಿಕ್ಷಣ, ಕೃಷಿ, ಕೈಗಾರಿಕೆ, ವ್ಯಾಪಾರ, ಉದ್ಯಮ, ಸಹಕಾರಿ, ಬ್ಯಾಂಕಿಂಗ್, ಕಲೆ ಹೀಗೆ ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿಯೂ ಭ್ರಷ್ಟಚಾರ ವ್ಯಾಪಿಸಿದೆ. ಇಡೀ ಸಮಾಜದ ನಡಿಗೆಯ ದಿಕ್ಕು ಭ್ರಷ್ಟಾಚಾರದಿಂದ ನಿಯಂತ್ರಿಸಲ್ಪಡುತ್ತಿದೆ. ಪ್ರತಿಯೊಬ್ಬನು ಈ ಭ್ರಷ್ಟ ವ್ಯವಸ್ಥೆಯ ಹಿಡಿತಕ್ಕೆ ಸಿಕ್ಕು ತನಗರಿವಿಲ್ಲದಂತೆ ಭ್ರಷ್ಟನಾಗುತ್ತಿದ್ದಾನೆ ಹಾಗೂ ಈ ವ್ಯವಸ್ಥೆಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಕಾರಣೀಭೂತನಾಗುತ್ತಿದ್ದಾನೆ.
  
         
                 ರಾಜಕೀಯ ಅಥವಾ ಇತರೆ ಕ್ಷೇತ್ರಗಳಿಗೆ ಹೋಲಿಸಿದರೆ ಕಲೆ, ಸಂಸ್ಕೃತಿ, ರಂಗಭೂಮಿ ಇತ್ಯಾದಿ ಕ್ಷೇತ್ರದಲ್ಲಿನ ಭ್ರಷ್ಟಾಚಾರ ಹೆಚ್ಚು ಬೆಳಕಿಗೆ ಬಂದಿಲ್ಲ. ಸಮಾಜದ ಕೆಲ ವರ್ಗದ ಜನ ಮಾತ್ರ ಇವುಗಳಲ್ಲಿ ಪ್ರತ್ಯಕ್ಷವಾಗಿ ತೊಡಗಿಸಿಕೊಂಡಿರುವುದೇ ಇದಕ್ಕೆ ಕಾರಣವಾಗಿರಬಹುದು. ಆರಂಭದಲ್ಲಿ ಕಲೆ, ಮನೊರಂಜನೆಗಾಗಿ ಹುಟ್ಟಿಕೊಂಡಿದ್ದರೂ, ಬೆಳೆಯುತ್ತಾ ಬೆಳೆಯುತ್ತಾ ಇದು ತನ್ನ ಆಶಯ, ವ್ಯಾಪ್ತಿ ಹಾಗೂ ಸಾಧ್ಯತೆಗಳನ್ನು ವಿಸ್ತರಿಸುತ್ತಾ ಹೋಯಿತು. ಅಂದರೆ, ಕಲೆ ಕೇವಲ ಮನೊರಂಜನೆಗಾಗಿ ಮಾತ್ರ ಸೀಮಿತವಾಗಿರದೆ ಒಬ್ಬ ವ್ಯಕ್ತಿ ಅಥವಾ ಸಮಾಜದ ಪ್ರತಿಧ್ವನಿಯಾಗಿ, ಸಮಾಜಕ್ಕೆ ಹಿಡಿದ ಕೈಗನ್ನಡಿಯಾಗಿ ಪರಿವರ್ತಿತವಾಯಿತು. ಕಲಾ ಮಾಧ್ಯಮ, ಮನೊರಂಜನೆಯನ್ನು ಇಟ್ಟುಕೊಂಡೆ ಹೊಸ ವಿಚಾರಗಳನ್ನ, ಹೊಸ ಪ್ರಯೋಗಗಳನ್ನ, ಹೊಸ ಅಭಿರುಚಿಯನ್ನ ಜನರಲ್ಲಿ ಹುಟ್ಟುಹಾಕಿತು. ಮೊದಲಿನಿಂದ ಚಾಲ್ತಿಯಲ್ಲಿದ್ದ ಪರದೆಗಳನ್ನು ಬಿಟ್ಟು ಕೇವಲ ಕಪ್ಪು ಅಥವಾ ಬಿಳಿ ಪರದೆಗಳನ್ನು, ಸರಳವಾದ ವೇಷಭೂಷಣಗಳನ್ನು ಬಳಸಿ ಹೊಸ ಅಲೆ ಸೃಷ್ಟಿಸಿದ ‘ಹೊಸಾಲೆ’ ನಾಟಕಗಳು ಅಥವಾ ಇದನ್ನೂ ಮೀರಿ, ಯಾವುದೆ ರಂಗಸ್ಥಳ, ಪರದೆ, ರಂಗ ಸಜ್ಜಿಕೆ- ಪರಿಕರಗಳಿಲ್ಲದೆ ಕೇವಲ ಅಭಿನಯ ಹಾಗೂ ಧ್ವನಿಯ ಮೂಲಕ ಪ್ರೇಕ್ಷಕರಿಗೆ ಬಹಳ ಹತ್ತಿರವಾಗಿ ಮಾಡಿದಂತಹ ಬೀದಿ ನಾಟಕಗಳೆ ಇದಕ್ಕೆ ಉತ್ತಮ ಉದಾಹರಣೆ.  


     ಇಂತಹ ಬದಲಾವಣೆಗಳೊಂದಿಗೆ, ಕಲೆಗೆ ಹೆಚ್ಚಿನ ಪ್ರೋತ್ಸಾಹನಿಡುವ ಹಾಗೂ ಸಾಂಪ್ರದಾಯಿಕ,  ಜನಪದ ಕಲೆ ಮತ್ತು ಕಲಾಪ್ರಕಾರಗಳನ್ನು ಉಳಿಸಿ ಬೆಳೆಸುವ ದೃಷ್ಟಿಯಲ್ಲಿ ಸರಕಾರಿ ಮತ್ತು ಸರಕಾರೇತರ ಸಂಘಸಂಸ್ಥೆಗಳು ಹುಟ್ಟಿಕೊಂಡವು. ಕಲಾ ಪ್ರದರ್ಶನಗಳನ್ನು ಏರ್ಪಡಿಸುವುದು, ಕಲೆ ಹಾಗೂ ಕಲಾವಿದರಿಗೆ ಪ್ರೋತ್ಸಾಹ ನೀಡುವಂತಹದ್ದು ಹಾಗೂ ಕಲೆಯ ಕುರಿತು ಅಧ್ಯಯನ ಮಾಡುವುದು ಮಾತ್ರವಲ್ಲದೆ ಈ ಎಲ್ಲಾ ಕಾರ್ಯಮಾಡಲು ಆರ್ಥಿಕ ಸಹಾಯ ನಿಡುವುದು ಈ ಸಂಸ್ಥೆಗಳ ಉದ್ದೇಶ.  ಆದರೆ ಇದನ್ನು ದುರುಪಯೋಗ ಪಡಿಸಿಕೊಳ್ಳುವ ಅದೆಷ್ಟೋ ‘ಕಲಾವಿದರು’ ಇಂದು ನಮ್ಮಲ್ಲಿದ್ದಾರೆ. ಸುಳ್ಳು ದಾಖಲೆಗಳನ್ನೋ, ಛಾಯಾಚಿತ್ರಗಳನ್ನೊ ಸೃಷ್ಟಿಸಿ, ಯಾವುದೆ ಚಟುವಟಿಕೆಗಳನ್ನು ನಡೆಸದೆ ಅದಕ್ಕೆಂದೆ ಕೊಡುವ ಹಣವನ್ನು ನುಂಗುವ ಭಕಾಸುರರಾಗುತ್ತಿದ್ದಾರೆ. ಯಾವುದೋ ಸಂಘಸಂಸ್ಥೆಗಳ ಹೆಸರಿನಲ್ಲಿ ಹಣವನ್ನ ಕೊಳ್ಳೆಹೊಡೆಯುತ್ತಿದ್ದಾರೆ ಮತ್ತು ಕಲೆಯನ್ನೂ ಸಹ ವ್ಯಾಪಾರಿ ಮನೋಭಾವದಿಂದ ನೊಡುತ್ತಿದ್ದಾರೆ. ಕಲೆ ಕಲೆಯಾಗಿ ಉಳಿಯದೆ ಮಾರಾಟದ ಸರಕಾಗುತ್ತಿದೆ, ಜಾಗತೀಕರಣದ ಪ್ರಭಾವಕ್ಕೊಳಗಾಗಿ ಉದ್ಯಮವಾಗಲು ಹೊರಟಿದೆ. ಆಯಾ ಸಂಸ್ಥೆಯ ಅಧಿಕಾರಿಗಳಿಗೆ ಅಷ್ಟೊ ಇಷ್ಟೊ ಕೊಟ್ಟರೆ ಮಾತ್ರ ಅನುದಾನ ಸಿಗುತ್ತದೆ ಎನ್ನುವಂತಾಗಿದೆ. ಇದರಿಂದಾಗಿ ನಿಜವಾಗಲೂ ಕಲೆಯ ಬಗ್ಗೆ, ಜನಸಾಮಾನ್ಯರ ಬಗ್ಗೆ ಕಾಳಜಿ ಇಟ್ಟುಕೊಂಡು ಕೆಲಸ ಮಾಡುತ್ತಿರುವ ಕಲಾವಿದರಿಗಾಗಲೀ ಅಥವಾ ಸಂಸ್ಥೆಗಾಗಲೀ ಯಾವುದೆ ಆರ್ಥಿಕ ಸಹಾಯ ಸಿಗಿತ್ತಿಲ್ಲ. ಇದರ ಪರಿಣಾಮವಾಗಿ ಅಂಥಹಾ ಕಲಾವಿದರು ಅಥವಾ ಸಂಸ್ಥೆಗಳು ತಮ್ಮ ಕಾರ್ಯಗಳಿಂದ ಹಿಂದೆ ಸರಿಯುತ್ತಿದ್ದಾರೆ. ಇದು ಕೇವಲ ಕಲೆಗೆ ಆಗುತ್ತಿರುವ ನಷ್ಡವಲ್ಲ. ಇದು ನಮ್ಮ ಸಮಾಜಕ್ಕೆ ಆಗುತ್ತಿರುವ ನಷ್ಟ.

    ಬರುವ ಅನುದಾನವನ್ನು ನುಂಗುವ ಭ್ರಷ್ಟಾಚಾರ ಒಂದೆಡೆಯಾದರೆ ಕಲೆಯ ಆಶೋತ್ತರಗಳಿಗೆ ವಿರುದ್ಧವಾಗಿ ನಡೆಯುತ್ತಿರುವ ಭ್ರಷ್ಟಾಚಾರ ಇನ್ನೊಂದೆಡೆ. ಅಂದರೆ ಕಲೆಯ ಮೂಲಕ ಜನರ ಸುಖದುಖಗಳಿಗೆ ಸ್ಪಂದಿಸದೆ, ಜನರಲ್ಲಿ ಹೊಸ ಚಿಂತನೆಗಳನ್ನ, ವಿಚಾರಗಳನ್ನ ಹುಟ್ಟುಹಾಕದೆ, ಕೇವಲ ಮನೊರಂಜನೆಯೊಂದೆ ತಮ್ಮ ಗುರಿ ಎನ್ನುವಂತವರು ಹೆಚ್ಚುತ್ತಿದ್ದಾರೆ.  ಈ ಬದಲಾವಣೆಯಿಂದಾಗಿ ಕಲಾವಿದರ ನಡುವೆ ಪೈಪೊಟಿ, ಒಳಜಗಳ, ಮಾತ್ಸರ್ಯಗಳು ಹುಟ್ಟಿಕೊಳ್ಳುತ್ತವೆ. ಕಲಾವಿದ ತನ್ನ ಜನಪ್ರೀಯತೆಯ ಕುರಿತು ಯೋಚಿಸುತ್ತಾನೆಯೇ ಹೊರತು ಒಂದು ಸಮಾಜದ ಬಗ್ಗೆ, ಅದರ ಸ್ಥಿತಿಗತಿ ಬಗ್ಗೆ ಯೋಚಿಸಲಾರ. ಇನ್ನೊಬ್ಬ ಕಲಾವಿದನ್ನು ತನ್ನ ಪ್ರತಿಸ್ಪರ್ಧಿಯಾಗಿ ನೊಡುತ್ತಾನೆ ಹೊರತು ಸಹಕಲಾವಿದನಾಗಿ ಅಲ್ಲ. ಇಂತಹ ಸಂದರ್ಭದಲ್ಲಿ ಕಲೆ, ಸಂಸ್ಕೃತಿ, ಸಮಾಜ ಬೆಳವಣಿಗೆ ಕಾಣಲು ಸಾಧ್ಯವಿಲ್ಲ. ಇದು ಕಲಾಮಾಧ್ಯಮದ ಬಹು ದೊಡ್ಡ ಭ್ರಷ್ಟತೆ.

  ಪ್ರತಿಯೊಬ್ಬ ಕಲಾವಿದನೂ ಇದನ್ನರಿತು ಸಮಾಜಮುಖಿಯಾಗಿ ಚಿಂತನೆಯೊಂದಿಗೆ, ಜನಸಾಮಾನ್ಯರ ಆಶೂತ್ತರಗಳಿಗೆ ಸ್ಪಂದಿಸುತ್ತಾ, ಕಲೆಯನ್ನು ತನ್ನ ಸ್ವಂತಕ್ಕಾಗಿ ಸಿಮಿತವಾಗಿರಿಸದೆ ಇಡೀ ಸಮಾಜಕ್ಕಾಗಿ, ಸಮಾಜದ ಒಳಿತಿಗಾಗಿ ಬಳಸಿದಾಗ ಮಾತ್ರ ಕಲೆ, ಕಲಾವಿದ ಮತ್ತು ಸಮಾಜ ಉಳಿಯುತ್ತದೆ-ಬೆಳೆಯುತ್ತದೆ.