ಲೇಖಕ ಎಚ್.ಜಯಪ್ರಕಾಶ್ ಶೆಟ್ಟಿಯವರ ಕೃತಿಗಳ ಬಿಡುಗಡೆ

ಕುಂದಾಪುರ: ಅಧ್ಯಯಶೀಲ ಹಾಗೂ ಬದುಕಿನ ಕುರಿತಾದ ಅನುಭವ ನೀಡಬಲ್ಲ ಕೃತಿಗಳು ಇಂದಿನ ಕಾಲಘಟ್ಟದಲ್ಲಿ ಅವಶ್ಯಕವೆನಿಸಿದೆ. ನಮ್ಮ ಕೃತಿಗಳು ಅರ್ಥಕ್ಕೆ ತಲುಪುವ ಬದಲಾಗಿ ಅನುಭವಗಳಿಗೆ ವೇದ್ಯವಾಗುವಂತಿರಬೇಕು ಎಂದು ಕನ್ನಡದ ಚಿಂತಕ, ವಿಮರ್ಶಕ ಎಸ್.ಜಿ.ಸಿದ್ಧರಾಮಯ್ಯ ಹೇಳಿದರು.
         ಅವರು ಶನಿವಾರ ಕುಂದಾಪುರದ ಆರ್.ಎನ್.ಶೆಟ್ಟಿ ಕಲ್ಯಾಣಭವನದಲ್ಲಿ ಸಹಮತ ಕುಂದಾಪುರ ಪ್ರಸ್ತುತಪಡಿಸಿದ, ತೆಂಕನಿಡಿಯೂರು ಸ. ಪ್ರ. ಕಾಲೇಜು ಕನ್ನಡ ವಿಭಾಗ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಎಚ್.ಜಯಪ್ರಕಾಶ್ ಶೆಟ್ಟಿಯವರ "ಹೊಳೆಯೆಂಬ ಹೊನ್ನ ಹರಿವು" ಮತ್ತು "ಶಬ್ದದ ಲಜ್ಜೆಯ ನೋಡಾ" ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.
         ಬರಹದಲ್ಲಿ ನಿಖರತೆ ಬಹುಮುಖ್ಯ ಪಾತ್ರ ವಹಿಸುತ್ತದೆ. ಇಂದು ಹೊಸ ಓದನ್ನು ನೀಡುವುದು ಕಷ್ಟದ ಕೆಲಸವಾಗಿದ್ದರೂ, ಹೊಸ ಬರಹಗಾರರು ಹೊಸ ಚಲನೆಯ ಬರವಣಿಗೆಯನ್ನು ನೀಡುತ್ತಿರುವುದು ಹೊಸ ಶಕ್ತಿಯ ಉಗಮಕ್ಕೆ ಕಾರಣವಾಗಿದೆ. ಸಮಾನ ಚಿಂತನಶೀಲ ನೆಲೆಯೊಳಗೆ ಅಕ್ಷರ ಲೋಕದೊಂದಿಗೆ ಒಂದಾಗಿ ಸಹಮತದೊಂದಿಗೆ ಚಿಂತಿಸಬಲ್ಲ ಸಮಾನ ಮನಸ್ಕರು ಒಂದಾಗಬೇಕಿದೆ ಎಂದರು.
          ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಮಹೇಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿವಿಯ ಕನಕ ಅಧ್ಯಯನ ಪೀಠದ ನಿರ್ದೇಶಕ ಶಿವರಾಮ ಶೆಟ್ಟಿ ಕೃತಿಯ ಕುರಿತು ಮಾತನಾಡಿದರು. ಲೇಖಕ ಎಚ್.ಜಯಪ್ರಕಾಶ್ ಶೆಟ್ಟಿ, ಸಹಮತ ಸಂಚಾಲಕ ವಲೇರಿಯನ್ ಮಿನೇಜಸ್, ಮಾಜಿ ತಾ.ಪಂ. ಸದಸ್ಯ ಸಂಪಿಗೇಡಿ ಸಂಜೀವ ಶೆಟ್ಟಿ, ಉಪಸ್ಥಿತರಿದ್ದರು. ಗಣೇಶ ಚಿಕ್ಕಮಗಳೂರು ಸ್ವಾಗತಿಸಿ, ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಗಣನಾಥ ಎಕ್ಕಾರು ವಂದಿಸಿದರು. ಸಹಮತ ಸಂಚಾಲಕ ಶಶಿಧರ ಹೆಮ್ಮಾಡಿ ಕಾರ್ಯಕ್ರಮ ನಿರ್ವಹಿಸಿದರು.