ಮಕ್ಕಳ ಶಿಕ್ಷಣ ಸಮಾಜದ ಮೇಲೆ ಪ್ರಭಾವ ಬೀರುತ್ತದೆ: ಶಾಸಕ ಕೆ. ಲಕ್ಷ್ಮೀನಾರಾಯಣ

 ಬೈಂದೂರು: ಶಿಕ್ಷಕರು ತಮ್ಮ ಪ್ರಭಾವಕ್ಕೆ ಒಳಪಡುವ ಮಕ್ಕಳಿಗೆ ತಮ್ಮ ಬೋಧನೆ ಮತ್ತು ನಡೆವಳಿಕೆಯ ಮೂಲಕ ಶಿಸ್ತು, ಸಂಯಮ, ಸದ್ಗುಣಗಳನ್ನು  ಕಲಿಸಬೇಕು. ಶಾಲೆಯ ಮೂಡುವ ಆ ಗುಣಗಳು ಸಮಾಜದ ಮೇಲೆ ಪ್ರಭಾವ ಬೀರುತ್ತದೆ. ಶಿಕ್ಷಕರನ್ನು ಸಮಾಜದ ಶಿಲ್ಪಿಗಳೆಂದು ಗೌರವಿಸುವುದು ಈ ಕಾರಣಕ್ಕಾಗಿ ಎಂದು ಶಾಸಕ ಕೆ. ಲಕ್ಷ್ಮೀನಾರಾಯಣ ಹೇಳಿದರು. 
       ಬೈಂದೂರು ಕ್ಷೇತ್ರ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ಬುಧವಾರ ನಾವುಂದ ಮಹಾಗಣಪತಿ ಮಾಂಗಲ್ಯ ಮಂಟಪದಲ್ಲಿ ನಡೆದ ಶಿಕ್ಷಕ ದಿನಾಚರಣೆ ಸಮಾರಂಭವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಕೆ. ಬಾಬು ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. 
       ಪ್ರಧಾನ ಭಾಷಣ ಮಾಡಿದ ನಿವೃತ್ತ ಶಿಕ್ಷಕ, ಹರಿದಾಸ ಬಿ. ಸಿ. ರಾವ್ ಶಿವಪುರ ಅವರು ಗುರುವಿನ ಸ್ಥಾನದಲ್ಲಿರುವ ಶಿಕ್ಷಕರು ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಲಘುವಾಗಬಾರದು. ಆತ ಶಿಕ್ಷಣ ಕ್ಷೇತ್ರದ ಅತ್ಯಂತ ಚೈತನ್ಯಶೀಲ ವ್ಯಕ್ತಿಯಾಗಿರಬೇಕು. ಅಧ್ಯಯನದ ಪ್ರೀತಿ ಹೊಂದಿರಬೇಕು. ಮಕ್ಕಳಿಗೆ ಅಂದದ ಬದುಕು ಕಟ್ಟಿಕೊಡುವ ನಿಟ್ಟಿನಲ್ಲಿ ತನ್ನಲ್ಲಿ ಇರುವ ಶ್ರೇಷ್ಠವಾದುದನ್ನು ಅವರಿಗೆ ನೀಡಬೇಕು ಎಂದರು. 
        ಜಿಲ್ಲಾ ಪಂಚಾಯತ್ ಸದಸ್ಯರಾದ ಇಂದಿರಾ ಶೆಟ್ಟಿ, ಮಮತಾ ಆರ್. ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯ ಮಹೇಂದ್ರ ಪೂಜಾರಿ, ಗ್ರಾಮ ಪಂಚಾಯತ್ ಅಧ್ಯಕ್ಷ ಜಗದೀಶ ಪೂಜಾರಿ, ಶಿಕ್ಷಕ ಸಂಘಗಳ ಅಧ್ಯಕ್ಷರಾದ ಮಹಾದೇವ ಮಂಜ, ಕೀತರ್ಿಕುಮಾರ ಶೆಟ್ಟಿ, ರಾಜು ಪೂಜಾರಿ 
ವೇದಿಕೆಯಲ್ಲಿದ್ದರು.  
       ಈ ಸಾಲಿನಲ್ಲಿ ನಿವೃತ್ತರಾದ ರಾಮ ಕೊಠಾರಿ, ಗಣಪತಿ ಭಟ್, ವಿಶ್ವನಾಥ ಭಟ್, ನಾಗರತ್ನಮ್ಮ, ಉದಯ ಹೆಗ್ಡೆ, ಜಿ. ತಿಮ್ಮಪ್ಪಯ್ಯ, ಕೆ. ಸೀತಾರಾಮ ಶೆಟ್ಟಿ, ಕೆ. ವಿಶ್ವನಾಥ ಶೆಟ್ಟಿ, ಗೋವಿಂದ ದೇವಾಡಿಗ, ನಾಗೇಶ ಜಿ. ನಾಯ್ಕ್, ಸುಬ್ರಾಯ ಆಚಾರಿ, ವಸಂತಿ ಬಾಯಿ, ಮೋಹನ ಮೇಲಾಡಿ, ಭಾಸ್ಕರ ಶೆಟ್ಟಿ, ನರಸಿಂಹ ಶೆಟ್ಟಿ, ವೆಂಕಮ್ಮ ದೇವಾಡಿಗ, ಕೊರಗಯ್ಯ ಶೆಟ್ಟಿ, ಸೋಮಶೇಖರ ಶೆಟ್ಟಿ, ಭಾಸ್ಕರ ಶೆಟ್ಟಿ, ಆನಂದರಾಮ ಶೆಟ್ಟಿ, ಕೆ. ಆನಂದ ಶೆಟ್ಟಿ, ಜಿ. ಸರೋಜಾ, ಕೆ. ಕೊಗ್ಗ ಗಾಣಿಗ, ಹರಿಶ್ಚಂದ್ರ ಹೆಬ್ಬಾರ್, ವೆಂಕಟೇಶ ನಾಯ್ಕ್, ಸಂಜೀವ ಶೆಟ್ಟಿ, ಐರಿನ್ ಒಲಿವೇರಾ, ತೆರೆಜಾ ಬೊತೆಲ್ಲೊ, ಸೂಲ್ಯಣ್ಣ ಶೆಟ್ಟಿ, ಮಂಜಯ್ಯ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಹಿಂದಿನ ಸಾಲಿನಲ್ಲಿ ಶಿಕ್ಷಕ ಪ್ರಶಸ್ತಿ ಪಡೆದಿದ್ದ ಅಣ್ಣಪ್ಪ ಶೇರುಗಾರ್, ರಾಜೀವ ಶೆಟ್ಟಿ, ಸುಪ್ರೀತಾ ಕಿಣಿ, ಚಂದ್ರ ಶೆಟ್ಟಿ ಅವರನ್ನು ಗೌರವಿಸಲಾಯಿತು. 
       ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ಚಂದ್ರಶೇಖರ ಸ್ವಾಗತಿಸಿದರು. ಗಣಪತಿ ಹೋಬಳಿದಾರ್ ವಂದಿಸಿದರು. ಸಿ. ಎನ್. ಬಿಲ್ಲವ ದಿವಾಕರ ನಿರೂಪಿಸಿದರು.