ನುಡಿಸಿರಿಯಲ್ಲಿ ಪಾಲ್ಗೋಳ್ಳೊಣ ಬನ್ನಿ ಸಾಹಿತ್ಯ - ಕಲಾಭಿಮಾನಿಗಳೇ...

        ಳ್ವಾಸ್ ಎಜುಕೇಷನ್ ಫೌಂಡೇಷನ್ ಆಶ್ರಯದಲ್ಲಿ ನಡೆಯುತ್ತಿರುವ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ "ಆಳ್ವಾಸ್ ನುಡಿಸಿರಿ"  ನವೆಂಬರ್ 16,17 ಮತ್ತು 18 ರಂದು ಕವಿ, ಸಾಹಿತಿ ಡಾ.ಕೆ.ಎಸ್.ನಿಸಾರ್ ಅಹಮದ್ ಸರ್ವಾಧ್ಯಕ್ಷತೆಯಲ್ಲಿ ಮೂಡಬಿದಿರೆಯ ವಿದ್ಯಾಗಿರಿಯಲ್ಲಿ ನಡೆಯಲಿದೆ. ಕನ್ನಡ ಮನಸ್ಸು : ಜನಪರ ಚಳುವಳಿಗಳು ” ಎಂಬ ಪ್ರಮುಖ ಪರಿಕಲ್ಪನೆಯನ್ನು ಮುಂದಿಟ್ಟುಕೊಂಡು ಈ ಬಾರಿಯ ಆಳ್ವಾಸ್ ನುಡಿಸಿರಿ ಮೂಡಿಬರಲಿದೆ.
    ಉದ್ಘಾಟನೆಯನ್ನು ನಾಡಿನ ಹಿರಿಯ ಸಾಹಿತಿ ಡಾ.ಯು.ಆರ್.ಅನಂತ ಮೂರ್ತಿ ನಡೆಸಿಕೊಡಲಿದ್ದಾರೆ.  ಮೂರು ವಿಶೇಷ ಉಪನ್ಯಾಸಗಳು, ನಾಲ್ಕು ಕಥಾ ಸಮಯ, 9 ಕವಿಸಮಯ ಕವಿನಮನ, 3 ಸಂಸ್ಮರಣಾ ಗೋಷ್ಠಿಗಳು, ಹತ್ತು ಮಂದಿ ಸಾಧಕರಿಗೆ ಆಳ್ವಾಸ್ ನುಡಿಸಿರಿ ಪ್ರಶಸ್ತಿ ಪ್ರದಾನ, ವಿಶೇಷ ಸನ್ಮಾನ ಕಾರ್ಯಕ್ರಮ, ಸಮಾನಾಂತರ ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ನವೆಂಬರ್ 16ರಂದು ಸಮ್ಮೇಳನಾಧ್ಯಕ್ಷರ ಮೆರವಣಿಗೆಯೊಂದಿಗೆ ಉದ್ಘಾಟನೆ ನಡೆಯಲಿದೆ.

 ಸಾಂಸ್ಕೃತಿಕ ವೈಭವ
       ಪಶ್ಚಿಮ ಬಂಗಾಳದ ಪುರುಲಿಯಾ ಸಿಂಹ ನೃತ್ಯ, ದೇವ ವೃದ್ಧರು ಎಂಬ ಕಿರು ನಾಟಕ, ಭರತ ನಾಟ್ಯ – ನವಗ್ರಹ, ಮೋಹಿನಿ ಆಟ್ಟಂ, ಕಥಕ್ ನೃತ್ಯ, ಆಂಧ್ರದ ಜನಪದ ಬಂಜಾರ ನೃತ್ಯ, ಮಹಿಳಾ ಕಂಸಾಳೆ, ಮಿಮಿಕ್ರಿ, ಮಣಿಪುರಿ ಶಾಸ್ತ್ರೀಯ ನೃತ್ಯ ‘ರಾಸಲೀಲ’ ಮತ್ತು ಜನಪದ ನೃತ್ಯ, ಮಣಿಪುರಿ ಸ್ಟಿಕ್ ಡ್ಯಾನ್ಸ್, ಮಣಿಪುರಿ ಡೋಲ್ ಚಲಮ್, ಮಣಿಪುರಿ ಮಾರ್ಷಲ್ ಆರ್ಟ್ಸ್ , ಮಹಾರಾಷ್ಟ್ರದ ಲಾವಣಿ ನೃತ್ಯ, ಬಡಗುತಿಟ್ಟು ಯಕ್ಷಗಾನದ – ‘ಶೃಂಗಾರ ವೈಭವ’, ತೆಂಕುತಿಟ್ಟು ಯಕ್ಷಗಾನದ – ‘ ಹನುಮ ಒಡ್ಡೋಲಗ ‘, ಶ್ರೀಲಂಕಾದ ನವಿಲು ನೃತ್ಯ, ಜನಪದ ವಾದ್ಯ ಝೇಂಕಾರ, ಮಾತನಾಡುವ ಗೊಂಬೆ ಮತ್ತು ಶ್ಯಾಡೋ ಪ್ಲೇ ಪ್ರದರ್ಶನಗೊಳ್ಳಲಿದೆ. ಸುಮಾರು ಮೂರೂವರೆ ಗಂಟೆಗಳ ಕಾಲ ನಡೆಯಲಿರುವ ಈ ಸಾಂಸ್ಕೃತಿಕ ವೈಭವ ನೋಡುಗರನ್ನು ನಿಬ್ಬೆರಗಾಗಿಸುವುದರಲ್ಲಿ ಸಂದೇಹವಿಲ್ಲ. ಈ ಕಾರ್ಯಕ್ರಮಗಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.

ಶತಾಯುಷಿಗೆ ವಿಶೇಷ ಗೌರವ: 
      ಕನ್ನಡ ನಾಡು ನುಡಿಗೆ ವಿಶೇಷ ಸೇವೆ ಸಲ್ಲಿಸಿರುವ, ವಿದ್ವಾಂಸ ನಿಘಂಟು ಶಾಸ್ತ್ರ, ಪ್ರಾಚೀನ ಸಾಹಿತ್ಯಾಧ್ಯಯನದಲ್ಲಿ ಸಾಧನೆ ಮೆರೆದ ಶತಾಯುಷಿ ಪ್ರೊ.ಜಿ.ವೆಂಕಟ ಸುಬ್ಬಯ್ಯ ಅವರನ್ನುವಿಶೇಷ ಗೌರವ ಸನ್ಮಾನ ಕಾರ್ಯಕ್ರಮ ನವಂಬರ 16 ರಂದು ಪೂರ್ವಾಹ್ನ 12 ರಿಂದ ನಡೆಯಲಿದೆ.  ಪದ್ಮವಿಭೂಷಣ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು  ಶತಾಯುಷಿಗೆ ಗೌರವ ಸಮರ್ಪಿಸಲಿದ್ದಾರೆ. ಡಾ.ಪಿ.ವಿ. ನಾರಾಯಣ ಅವರು ಅಭಿವಂದನೆ ಭಾಷಣ ಮಾಡಲಿದ್ದಾರೆ. 2007ರಲ್ಲಿ ನಡೆದ ನಾಲ್ಕನೇ ವರುಷದ ಆಳ್ವಾಸ್ ನುಡಿಸಿರಿಯ ಸರ್ವಾಧ್ಯಕ್ಷತೆಯನ್ನು ವೆಂಕಟ ಸುಬ್ಬಯ್ಯರವರು ವಹಿಸಿದ್ದರು

ದಶಕದ ಸಂಭ್ರಮ:
        ಮುಂದಿನ ವರುಷ ಆಳ್ವಾಸ್ ನುಡಿಸಿರಿಗೆ ದಶಕದ ಸಂಭ್ರಮ. ಈ ಹಿನ್ನಲೆಯಲ್ಲಿ ಈ ಬಾರಿಯ ಆಳ್ವಾಸ್ ನುಡಿಸಿರಿ ಅತ್ಯಂತ ಮಹತ್ವಪೂರ್ಣವಾಗಿದೆ. ದಶಕದ ಸಂಭ್ರಮದ ನುಡಿಸಿರಿಯನ್ನು ವಿಶ್ವಮಟ್ಟದಲ್ಲಿ ನಡೆಸಲುದ್ದೇಶಿಸಲಾಗಿದ್ದು, ಅದರ ಪೂರ್ವಭಾವಿಯಾಗಿ ಈ ಬಾರಿಯ ನುಡಿಸಿರಿಯಿಂದಲೇ ಕೆಲಸ ಕಾರ್ಯಗಳು ಆರಂಭಗೊಳ್ಳಲಿದೆ. ಈಗಾಗಲೇ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ  ತುಮುಕೂರು, ಮೈಸೂರು, ಧಾರಾವಾಡ,ಚಿಕ್ಕಮಗಳೂರು, ಮಂಡ್ಯ,ತೀರ್ಥಹಳ್ಳಿ,ಮಂಗಳೂರು, ಕುಂದಾಪುರ, ಪುತ್ತೂರು,ಬಂಟ್ವಾಳ, ಬೆಳ್ತಂಗಡಿ, ಭಾಗಗಳಲ್ಲಿ ಆಳ್ವಾಸ್ ನುಡಿಸಿರಿ ಘಟಕಗಳನ್ನು ರಚಿಸಿ ಆ ಮೂಲಕ ಜನತೆಯಲ್ಲಿ ನುಡಿಸಿರಿಯ ಸ್ಪಷ್ಟ ಕಲ್ಪನೆ ಮೂಡುವಂತಹ ಕಾರ್ಯಕ್ರಮ ರೂಪಿಸಲಾಗಿದೆ.

 ಪ್ರತಿನಿಧಿಗಳಾಗಿ ಬನ್ನಿ
       ಯುವ ಜನತೆಯಲ್ಲಿ, ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷೆ, ಸಾಹಿತ್ಯದ ಬಗೆಗಿನ ಆಸಕ್ತಿ ಮೂಡಿಸುವಂತಹ ಕಾರ್ಯಗಳನ್ನು ಮಾಡುವ ಸದುದ್ದೇಶದಿಂದ ಈ ಬಾರಿಯೂ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಮುಕ್ತ ಅವಕಾಶ ಕಲ್ಪಿಸಲಾಗುತ್ತದೆ. ನಾಡು, ಹೊರನಾಡು, ಹೊರ ರಾಜ್ಯಗಳಿಂದ ಆಳ್ವಾಸ್ ನುಡಿಸಿರಿಗೆ ಪ್ರತಿನಿಧಿಗಳಾಗಿ ಸಾಹಿತ್ಯಾಸಕ್ತರು ಆಗಮಿಸಬೇಕು. ಪ್ರತಿನಿಧಿಗಳಾಗುವವರು ರು.100ನ್ನು ಕಾರ್ಯಾಧ್ಯಕ್ಷರು, ಆಳ್ವಾಸ್ ನುಡಿಸಿರಿ ಹೆಸರಿನಲ್ಲಿ ಎಂ.ಒ, ಡಿ.ಡಿ. ಮೂಲಕ ಸಲ್ಲಿಸಬಹುದು. ಪ್ರತಿನಿಧಿಗಳಿಗೆ ವಸತಿ, ಊಟದ ವ್ಯವಸ್ಥೆಯನ್ನು ಮಾಡಲಾಗುವುದು. ವಿದ್ಯಾರ್ಥಿಗಳು ತಮ್ಮ ಮನೆ ವಿಳಾಸ, ದೂರವಾಣಿ ಸಂಖ್ಯೆ ಸಹಿತ ಶಾಲೆಯ ಮೂಲಕ ಅರ್ಜಿ ಸಲ್ಲಿಸಬೇಕು. ತಮ್ಮ ಸಂಸ್ಥೆ ನೀಡಿದ ಗುರುತು ಚೀಟಿಯ ಜತೆಗೆ ಮೂರೂ ದಿನಗಳಲ್ಲೂ ಸಮ್ಮೇಳನದ ಕ್ಯಾಂಪಸ್‌ನಲ್ಲಿರಬೇಕು. ಉಚಿತ ವಸತಿ ಮತ್ತು ಊಟೋಪಚಾರವಿದೆ. ಅಶಿಸ್ತಿಗೆ ಅವಕಾಶವಿಲ್ಲ. ಸಮ್ಮೇಳನದ ಕುರಿತು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ; ವಿಜೇತರಿಗೆ ಬಹುಮಾನವಿದೆ. ಭಾಗವಹಿಸಿದವರಿಗೆ ಪ್ರಮಾಣ ಪತ್ರ ನೀಡಲಾಗುವುದು (ವಿವರಗಳಿಗೆ 08258-238104ರಿಂದ 238111, ಫ್ಯಾಕ್ಸ್‌: 08258-261229 )ಎಂದು ಸಂಸ್ಥೆಯ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಆಳ್ವಾಸ್ ಎಜುಕೇಷನ್ ಫೌಂಡೇಷನ್ ನ ಮಾಧ್ಯಮ ಸಂಪರ್ಕಾಧಿಕಾರಿ ಹರೀಶ್ ಕೆ.ಆದೂರು, ಉಪನ್ಯಾಸಕರುಗಳಾದ ಡಾ.ಧನಂಜಯ ಕುಂಬ್ಳೆ, ವೇಣುಗೋಪಾಲ್ ಶೆಟ್ಟಿ ಉಪಸ್ಥಿತರಿದ್ದರು.