ಕುಂದಾಪುರ – ಬೈಂದೂರು ರಾ.ಹೆ. ತುರ್ತು ದುರಸ್ತಿಗೆ ಹಣ ಬಿಡುಗಡೆ

ಕುಂದಾಪುರ: ಬೈಂದೂರು-ಕುಂದಾಪುರ ನಡುವಿನ ರಾಷ್ಟ್ರೀಯ ಹೆದ್ದಾರಿ ತೀವ್ರ ರೀತಿಯಲ್ಲಿ ಹದಗೆಟ್ಟಿದ್ದು ತುರ್ತು ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲು ಮುಖ್ಯಮಂತ್ರಿ ಜಗದೀಶ ಶೆಟ್ಟರ್ 75ಲಕ್ಷ ರೂಪಾಯಿ ಬಿಡುಗಡೆಗೊಳಿಸಿದ್ದಾರೆ. ಮುಂದಿನ ದಿನದೊಳಗೆ ದುರಸ್ತಿ ಕಾರ್ಯ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
         ಅವರು ಕುಂದಾಪುರ ತಾಲೂಕು ಪಂಚಾಯತ್‌ನಲ್ಲಿ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಮಾತನಾಡಿದರು.

          ಸಣ್ಣ ಪುಟ್ಟ ಮನೆ ನಿರ್ಮಾಣಕ್ಕಾಗಿನ ಭೂಪರಿವರ್ತನೆ ಪ್ರಕ್ರಿಯೆ ಸರಳೀಕರಣಗೊಳಿಸಲಾಗಿದೆ. ಒಂದು ಎಕರೆಗಿಂತ ಮೇಲ್ಪಟ್ಟ ಜಾಗದ ಭೂಪರಿವರ್ತನೆಗೆ ಕೆಲವೊಂದು ನಿಬಂಧನೆ ಜಾರಿಗೊಳಿಸಲಾಗುವುದು. ಕನಿಷ್ಠ 18 ಸೆಂಟ್ಸು ಜಾಗದ ಭೂಪರಿವರ್ತನೆ ಸಲೀಸಾಗಿ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗಿದ್ದು ಜಿಲ್ಲಾಧಿಕಾರಿಯವರ ನಿರ್ದೇಶನದಡಿ ಈ ಕಾರ್ಯ ನಡೆಯಲಿದೆ ಎಂದು ಅವರು ತಿಳಿಸಿದರು.
          ತಾಲೂಕಿನಲ್ಲಿ 32 ಡೆಂಗ್ಯು ಪ್ರಕರಣ: ಆರೋಗ್ಯ ಇಲಾಖೆ ವರದಿಯಂತೆ ತಾಲೂಕಿನಲ್ಲಿ 32 ಡೆಂಗ್ಯು ಪ್ರಕರಣಗಳು ಕಂಡು ಬಂದಿದ್ದು, ಎಲ್ಲ ರೋಗಿಗಳು ಗೂಣಮುಖರಾಗಿದ್ದಾರೆ. ಒಟ್ಟು 8 ಇಲಿ ಜ್ವರದ ಪ್ರಕರಣ ಕಂಡು ಬಂದಿದ್ದು, ಅವುಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ. 127 ಮಲೇರಿಯಾ ಪ್ರಕರಣ ಕಾಣಿಸಿಕೊಂಡಿದೆ. ಆರೋಗ್ಯ ಇಲಾಖೆಯ ಎಲ್ಲ ಅಧಿಕಾರಿಗಳು, ವೈದ್ಯಾಧಿಕಾರಿಗಳು, ಸಿಬ್ಬಂದಿಗಳು ರೋಗಗಳ ನಿಯಂತ್ರಣಕ್ಕೆ ಸೂಕ್ತ ಜಾಗೃತಾ ಕ್ರಮ ತೆಗೆದುಕೊಂಡಿದ್ದಾರೆ ಮತ್ತು ಸೂಕ್ತ ಮಾಹಿತಿ ನೀಡಲು ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೂಚಿಸಲಾಗಿದೆ ಎಂದರು.
          ತಾಲೂಕಿನಲ್ಲಿ 3728 ಹೊಸ ಪಡಿತರ ಚೀಟಿ ವಿತರಣೆಗೆ ಕ್ರಮ ತೆಗೆದುಕೊಳ್ಳಲಾಗಿದೆ. 2197 ಪಡಿತರ ಚೀಟಿ ಈಗಾಗಲೆ ಮುದ್ರಿತವಾಗಿದೆ. ಪಡಿತರ ಚೀಟಿಯಲ್ಲಿ ಗೊಂದಲ ಎದುರಾದಲ್ಲಿ ಗ್ರಾ.ಪಂ.ಪಿಡಿಓ ಅಥವಾ ತಹಸೀಲ್ದಾರರಿಗೆ ಮೇಲ್ಮನವಿ ಸಲ್ಲಿಸಬಹುದು. ಮೀನುಗಾರಿಕೆ ಇಲಾಖೆಯಡಿ ತಾಲೂಕಿಗೆ 160 ಮನೆ ಮಂಜೂರುಗೊಂಡಿದ್ದು ಒಂದು ಮನೆಗೆ 60 ಸಾವಿರ ಅನುದಾನ ನೀಡಲಾಗುತ್ತದೆ. ಬಸವ ಇಂದಿರಾ ಅವಾಜ್ ಮನೆ ನಿರ್ಮಾಣಕ್ಕೆ 75 ಸಾವಿರ ಸಬ್ಸಿಡಿ ನೀಡಲಾಗುತ್ತದೆ ಎಂದು ಅವರು ವಿವರಿಸಿದರು.
         ಬಸವ ಕಲ್ಯಾಣ ಯೋಜನೆ ಹಾಗೂ ಶೌಚಾಲಯದ ಬಗ್ಗೆ ಗ್ರಾ.ಪಂ.ಗಳಲ್ಲಿ ಸಮಸ್ಯೆ ಇರುವುದರಿಂದ ಈ ಸಮಸ್ಯೆ ಬಗ್ಗೆ ಚರ್ಚಿಸಲು ಮತ್ತು ಈ ಯೋಜನೆ ಹಣವನ್ನು ಪೂರ್ಣ ವಿನಿಯೋಗಿಸಿಕೊಳ್ಳುವ ಬಗ್ಗೆ ಎಲ್ಲ ಗ್ರಾ.ಪಂ.ಅಧ್ಯಕ್ಷರು, ಗ್ರಾಪಂ. ಅಭಿವೃದ್ಧಿ ಅಧಿಕಾರಿಗಳನ್ನು ಸೇರಿಸಿ ಇನ್ನು ಹತ್ತು ದಿನದ ಒಳಗೆ ತಾ.ಪಂ.ನಲ್ಲಿ ವಿಶೇಷ ಸಭೆ ಕರೆಯಲಾಗುವುದು ಎಂದು ಸಚಿವರು ಹೇಳಿದರು.
          ಸೇತುವೆಗೆ ಹಣ ಮಂಜೂರು: ಬಹುದಿನಗಳ ಬೇಡಿಕೆಯಾಗಿರುವ ಕೋಡಿ-ಕುಂದಾಪುರ ಸಂಪರ್ಕ ಸೇತುವೆ ನಿರ್ಮಾಣಕ್ಕೆ 4ಕೋಟಿ ಮಂಜೂರಾಗಿದ್ದು ಅದರಲ್ಲಿ ಮೂರನೇ ಒಂದಂಶ ಹಣ ಈಗಾಗಲೆ ಬಿಡುಗಡೆಯಾಗಿದೆ. ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು. ಈ ಸಭೆಯಲ್ಲಿ ಮೂರನೇ ಹಣಕಾಸು ಆಯೋಗದ ವರದಿ ಅನುಷ್ಠಾನ ಕಾರ್ಯಪಡೆ ಅಧ್ಯಕ್ಷ ಎ.ಜಿ. ಕೊಡ್ಗಿ, ಜಿಲ್ಲಾ ಪಂಚಾಯತ್‌ ಪ್ರಭಾರ ಅಧ್ಯಕ್ಷ ಉಪೇಂದ್ರ ನಾಯಕ್‌, ತಾ.ಪಂ. ಅಧ್ಯಕ್ಷೆ ದೀಪಿಕಾ ಶೆಟ್ಟಿ, ಪುರಸಭಾ ಅಧ್ಯಕ್ಷ ಮೋಹನದಾಸ ಶೆಣೈ, ತಾ.ಪಂ. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಮಂಜು ಬಿಲ್ಲವ, ಜಿಲ್ಲಾಧಿಕಾರಿ ಡಾ| ಎಂ.ಟಿ. ರೇಜು, ಉಪವಿಭಾಗಾಧಿಕಾರಿ ಸದಾಶಿವ ಪ್ರಭು, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಗೋಪಾಲ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.
          ತಾಲೂಕಿನಲ್ಲಿ ಅಕ್ರಮ-ಸಕ್ರಮ ಸಮಿತಿ ಸಭೆ ಕುಂಠಿತವಾಗಿದೆ ಎಂಬ ಅಂಶ ತಿಳಿದುಬಂದಿದೆ. ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷರಾಗಿ ಕ್ಷೇತ್ರದ ಶಾಸಕರು ಕೆಲಸ ನಿರ್ವಹಿಸಬೇಕಾಗಿದ್ದು ಬದಲಾದ ರಾಜಕೀಯ ವಿದ್ಯಮಾನದಲ್ಲಿ ಕುಂದಾಪುರ ಶಾಸಕರು ರಾಜೀನಾಮೆ ನೀಡಿದ್ದರಿಂದ ಸಮಿತಿ ಸಭೆಗೆ ಅಡೆತಡೆಯಾಗಿದೆ. ಅಧ್ಯಕ್ಷತೆಯ ಜವಾಬ್ದಾರಿಯನ್ನು ಬೈಂದೂರು ಶಾಸಕರು ವಹಿಸಿಕೊಂಡಿದ್ದು ಮುಂದೆ ಸಭೆ ಸಲೀಸಾಗಿ ನಡೆಸುವಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು. ಸುವರ್ಣ ಭೂಮಿ ಯೋಜನೆಯಡಿ 447 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ತೋಟಗಾರಿಕೆ ಇಲಾಖೆಯಡಿ 1353 ಅರ್ಜಿ ಸ್ವೀಕರಿಸಲಾಗಿದೆ. 1213 ಅರ್ಜಿಗಳಿಗೆ ಮಂಜೂರಾತಿ ನೀಡಲಾಗಿದೆ. ಅಲ್ಲದೆ 100 ಹೆಕ್ಟೇರ್ ಭೂಮಿಯಲ್ಲಿ ತಾಳೆಗಿಡ ಕಷಿಗೆ ಅನುಮತಿ ದೊರೆತಿದ್ದು ಪ್ರಸ್ತುತ 15 ಎಕರೆ ಜಾಗ ಮಾತ್ರ ಲಭ್ಯವಿದೆ. ಒಟ್ಟಾರೆ ಸಭೆಯಲ್ಲಿ 33 ಇಲಾಖೆಗಳ ಪ್ರಗತಿಯ ಅವಲೋಕನ ನಡೆಸಲಾಗಿದ್ದು ಜಿಲ್ಲಾಧಿಕಾರಿ ಮತ್ತು ಅಧಿಕಾರಿಗಳ ತಂಡ ವೇಗವಾಗಿ ಕೆಲಸ ಮಾಡುವುದನ್ನು ಕಂಡುಕೊಂಡಿದ್ದೇನೆ ಎಂದು ಅವರು ತಿಳಿಸಿದರು.