ವಾಲ್ಮೀಕಿ ಜಯಂತಿ: ತನ್ನಿಮಿತ್ತ ಲೇಖನ

       ವಾಲ್ಮೀಕಿ ಎಂಬ ಋಷಿಯು ರಾಮಾಯಣ ಮಹಾಕಾವ್ಯದ ಕರ್ತೃ. ವಾಲ್ಮೀಕಿಯನ್ನು ಆದಿಕವಿ ಎಂದು ಕರೆಯಲಾಗಿದೆ.
ವಾಲ್ಮೀಕಿಯ ಜೀವನದ ಕುರಿತಾಗಿ ಅನೇಕ ದಂತಕಥೆಗಳಿವೆ. ಅದರಲ್ಲಿ ಒಂದು ಕಥೆಯ ಪ್ರಕಾರ, ವಾಲ್ಮೀಕಿ ಋಷಿಯಾಗುವ ಮೊದ
ಲು ರತ್ನ ಎಂಬ ಹೆಸರಿನ ಒಬ್ಬ ಡಕಾಯಿತನಾಗಿದ್ದನು. ಕಾಡಿನ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರನ್ನು ದೋಚಿ ಜೀವನ ನಡೆಸುತ್ತಿದ್ದನು. ಒಮ್ಮೆ ನಾರದ ಋಷಿಯು ರತ್ನನಿಗೆ ಎದುರಾದಾಗ, ಅವನು ನಾರದನನ್ನು ದರೋಡೆ ಮಾಡಲು ಯತ್ನಿಸಿದನು. ಆಗ ನಾರದನ ಉಪದೇಶದಿಂದ ರತ್ನನಿಗೆ ಜ್ಞಾನೋದಯವಾಯಿತೆಂದು ಹೇಳಲಾಗುತ್ತದೆ. ವಾಲ್ಮೀಕಿ ಮಹರ್ಷಿಗಳು ಪ್ರಚೇತಸಮುನಿಯ ಮಗ.ಹೀಗಾಗಿ ಅವರಿಗೆ 'ಪ್ರಾಚೇತಸ' ಎಂಬ ಹೆಸರಿದೆ.ಪರಮಾತ್ಮನನ್ನು ಕುರಿತು ಬಹಳ ವರ್ಷಗಳ ಕಾಲ ತಪಸ್ಸು ಮಾಡುತ್ತಿದ್ದಾಗ ಅವರ ಸುತ್ತ ಹುತ್ತ ಬೆಳೆದಿತ್ತು.ಹುತ್ತ(ಸಂಸ್ಕೃತದಲ್ಲಿ-ವಲ್ಮೀಕ)ವನ್ನು ಭೇದಿಸಿಕೊಂಡು ಹೊರಗೆ ಬಂದಿದ್ದರಿಂದ 'ವಾಲ್ಮೀಕಿ' ಎಂಬ ಹೆಸರು ಬಂತು.

ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ | ಯತ್ಕ್ಕ್ರೌಂಚಮಿಥುನಾದೇಕಮವಧೀಃ ಕಾಮಮೋಹಿತಮ್ ||
   
    ಇದು ರಾಮಾಯಣ ರಚನೆಗೆ ಪ್ರೇರಣೆಯಾದ ಘಟನೆ ಹಾಗೂ ಆ ಸಂದರ್ಭಕ್ಕೆ ಪ್ರತಿಕ್ರಿಯೆಯಾಗಿ ಶ್ಲೋಕ ರೂಪದಲ್ಲಿ ವಾಲ್ಮೀಕಿಯವರ ಮುಖದಿಂದ ಹೊರಹೊಮ್ಮಿದ ಮಾತುಗಳು.
ಅಕಾರಣವಾಗಿ ಹಕ್ಕಿಯನ್ನು ಕೊಂದ ಹೇ ಅನ್ಯಾಯಿ | ನಿನ್ನ ಪಾಪದ ಫಲವಾಗಿ ನೀ ಈ ಕೂಡಲೇ ಸಾಯಿ ||
ವಾಲ್ಮೀಕಿ ಮಹರ್ಷಿಗಳು ತಮಸಾ ನದೀತೀರದಲ್ಲಿ ಸಂತೋಷವಾಗಿ ಹಾರಾಡುತ್ತಿದ್ದ ಕ್ರೌಂಚ ಪಕ್ಷಿಜೋಡಿಯನ್ನು ನೋಡುತ್ತಿದ್ದಾಗ,ಬೇಡನೊಬ್ಬನು ಬಂದು ಬಾಣ ಹೂಡಿ ಗಂಡುಹಕ್ಕಿಯನ್ನು ಕೊಂದುಬಿಡುತ್ತಾನೆ.ಅದರ ಸಂಗಾತಿ ಹೆಣ್ಣುಹಕ್ಕಿಯು ಸಂಕಟದಿಂದ ಕೂಗಲಾರಂಭಿಸುತ್ತದೆ.ಈ ಹೃದಯವಿದ್ರಾವಕ ಸನ್ನಿವೇಶವನ್ನು ನೋಡಿ,ಕರುಣೆ,ದುಃಖ,ಕೋಪದಿಂದ ಮಹರ್ಷಿಗಳು ಬೇಡನನ್ನು ಶಪಿಸುವಾಗ,ಮೇಲ್ಕಂಡ ವಾಕ್ಯವನ್ನು ಶ್ಲೋಕ ರೂಪದಲ್ಲಿ ಉದ್ಗರಿಸುತ್ತಾರೆ.ಈ ಶ್ಲೋಕವು ಗದ್ಯರೂಪದಲ್ಲಿರದೆ,ಪ್ರಾಸಬದ್ಧವಾಗಿ,ಲಯ-ಛಂದಸ್ಸುಗಳಿಂದ ಕೂಡಿತ್ತು.
ಆ ವೇಳೆಗೆ ಬ್ರಹ್ಮದೇವ ಮಹರ್ಷಿಗಳ ಆಶ್ರಮಕ್ಕೆ ಬಂದು ಇದೇ ಶ್ಲೋಕರೂಪದಲ್ಲಿ ರಾಮಾಯಣ ಕಾವ್ಯ ರಚಿಸಲು ಹೇಳುತ್ತಾರೆ.ನಾರದರು ತಮಗೆ ಸಂಗ್ರಹವಾಗಿ ಹೇಳಿದ್ದ ರಾಮನ ಕಥೆಯನ್ನು ವಾಲ್ಮೀಕಿ ಮಹರ್ಷಿಗಳು ೨೪,೦೦೦ ಶ್ಲೋಕಗಳನ್ನೊಳಗೊಂಡ ಮಹಾಗ್ರಂಥವಾಗಿ ಬರೆದರು.
      ರಾಮನು ಅಗಸನ ಆರೋಪಣೆಗೆ ನೊಂದು ತುಂಬುಗರ್ಭಿಣಿ ಸೀತೆಯನ್ನು ಪರಿತ್ಯಾಗ ಮಾಡುತ್ತಾನೆ.ಲಕ್ಷಣ ಸೀತೆಯನ್ನು ಕಾಡಿನಲ್ಲಿ ಬಿಟ್ಟು ಹೋಗುತ್ತಾನೆ.ಅರಣ್ಯದಲ್ಲಿದ್ದ ಸೀತೆಯನ್ನು ವಾಲ್ಮೀಕಿ ಮಹರ್ಷಿಗಳು ತಮ್ಮ ಆಶ್ರಮಕ್ಕೆ ಕರೆತಂದು,ಋಷಿಪತ್ನಿಯರ ಮೂಲಕ ಆಕೆಯನ್ನು ಆದರಿಸುತ್ತಾರೆ.ಅಲ್ಲೇ ಲವ-ಕುಶರ ಜನನವಾಗುತ್ತದೆ.ಆ ಅವಳಿ ಮಕ್ಕಳಿಗೆ ವಾಲ್ಮೀಕಿ ಮಹರ್ಷಿಗಳೇ ಗುರುಗಳು.ರಾಮಾಯಣ ಮಹಾಕಾವ್ಯದ ಗಾಯನವನ್ನು ಲವ-ಕುಶರಿಗೆ ಕಲಿಸಿಕೊಡುತ್ತಾರೆ.ವಾಲ್ಮೀಕಿ ಮಹರ್ಷಿಗಳು ಲವ-ಕುಶರ ಸಂಗಡ ರಾಮನಲ್ಲಿಗೆ ಬಂದು ರಾಮಾಯಣವನ್ನು ಗಾನ ಮಾಡುತ್ತಾರೆ. ರಾಮನಲ್ಲಿಗೆ ಸೀತೆಯನ್ನೂ ವಾಲ್ಮೀಕಿ ಮಹರ್ಷಿಗಳೇ ಕರೆತರುತ್ತಾರೆ 
     ಸಾವಿರಾರು ವರ್ಷಗಳ ಹಿಂದೆ ಜನಿಸಿದ ಮಹರ್ಷಿ ವಾಲ್ಮೀಕಿ ಜಗತ್ತಿನ ಮೊಟ್ಟ ಮೊದಲ ಕವಿ. ಅದಕ್ಕಾಗಿಯೇ ವಾಲ್ಮೀಕಿಯನ್ನು ಆದಿ ಕವಿ ಎಂದು ಬಣ್ಣಿಸುತ್ತಾರೆ. ಭಾರತದಂತಹ ಪವಿತ್ರ ದೇಶದ ಘನತೆಯನ್ನು ರಾಮಾಯಣದಂತಹ ಮಹಾಕಾವ್ಯವನ್ನು ಬರೆದು ಹೆಚ್ಚಿಸಿದ ಕೀರ್ತಿ ವಾಲ್ಮೀಕಿಗೆ ಸಲ್ಲುತ್ತದೆ.
ಬೇಡ ಎನ್ನುವ ಪದದಲ್ಲಿ ಅದ್ಭುತವಾದ ಅರ್ಥವಿದೆ. ಬೇಡನೆಂದರೆ ಎಲ್ಲ ಕೆಟ್ಟ ಗುಣಗಳನ್ನು ನಿರಾಕರಿಸಿದವನು, ತಿರಸ್ಕರಿಸಿದವನು ಎಂಬ ಅರ್ಥವಿದೆ.
ಮದ ಬೇಡ, ಮತ್ಸರ ಬೇಡ, ಮೋಹ ಬೇಡ, ಕಾಮ ಬೇಡ ಎಂದು ಹೇರುವದೇ ಬೇಡ ಎಂಬ ನಿಜವಾದ ಅರ್ಥವೆಂಬುದನ್ನು ನಾವು ಅರಿಯಬೇಕು.
ತನ್ನ ಶಿಷ್ಯ ಭಾರದ್ವಾಜನೊಂದಿಗೆ ಗಂಗಾ ನದಿಗೆ ಸ್ನಾನಕ್ಕೆ ಹೊರಟಿದ್ದಾಗ ಅಲ್ಲಿದ್ದ ತಾಮಸ ಕೊಳದಲ್ಲಿ ಸ್ನಾನ ಮಾಡಲು ವಾಲ್ಮೀಕಿ ಬಯಸುತ್ತಾನೆ.
        ತಾಮಸ ಸರೋವರದ ಮೇಲಿನ ಮರದಲ್ಲಿ ಜೋಡಿ ಪಕ್ಷಿಗಳು ಸುಂದರವಾಗಿ ಹಾಡುತ್ತಾ ಕುಳಿತಿದ್ದನ್ನು ಕಂಡು ವಾಲ್ಮೀಕಿಗೆ ಸಂತೋಷವಾಗುತ್ತದೆ. ಆದರೆ ಆ ಸಂತೋಷ ಕೆಲವೇ ಕ್ಷಣಗಳಲ್ಲಿ ಮಾಯವಾಗಿಬಿಡುತ್ತದೆ.
ಒಬ್ಬ ಬೇಡಗಾರನ ಬಾಣ ಗಂಡು ಪಕ್ಷಿಗೆ ತಾಗಿ ಅದು ದುಃಖಿಸುತ್ತಾ ನೆಲಕ್ಕೆ ಬೀಳುತ್ತದೆ. ಅದನ್ನು ಕಂಡು ಹೆಣ್ಣು ಪಕ್ಷಿ ದುಃಖಿಸುತ್ತದೆ.
ಕೆಲವೇ ಕ್ಷಣಗಳಲ್ಲಿ ಮಾಯವಾದ ಸಂತೋಷಕ್ಕೆ ಬೇಟೆಗಾರನ ಹಿಂಸೆ ಎಂಬುದನ್ನು ವಾಲ್ಮೀಕಿ ಅರಿಯುತ್ತಾನೆ.
ಬಿಲ್ಲು ಬಾಣಗಳ ಸಮೇತ ಬಂದ ಬೇಟೆಗಾರನಿಗೆ ಹೇಳುತ್ತಾನೆ. ನೋಡು ಯಾವುದೇ ತಪ್ಪು ಮಾಡದೇ ಸಂತೋಷವಾಗಿ ಕಾಲ ಕಳೆಯುತ್ತಿದ್ದ ಪಕ್ಷಿಯನ್ನು ನೀನು ಕೊಂದಿದ್ದಕ್ಕೆ ಅದಕ್ಕಾಗಿ ನೀನು ಜೀವನ ಪರ್ಯಂತ ಶಾಂತಿ ನೆಮ್ಮದಿಯನ್ನು ಕಳೆದುಕೊಳ್ಳುತ್ತಿ ಎಂದು ಹೇಳುವುದರ ಮೂಲಕ ಮೊದಲ ಶ್ಲೋಕವನ್ನು ರಚಿಸುತ್ತಾನೆ.
ಮಾನಿಯಾದ ಎಂಬ ಶ್ಲೋಕವೇ ಮೊಟ್ಟ ಮೊದಲ ಸಂಸ್ಕೃತ ಕಾವ್ಯವಾಗಿದೆ ಎಂಬುದನ್ನು ಇತಿಹಾಸ ಹೇಳುತ್ತದೆ.
ಹಿಂಸೆ ಒಳ್ಳೆಯದಲ್ಲ ಎಂಬ ಅಹಿಂಸಾ ತತ್ವವನ್ನು ವಾಲ್ಮೀಕಿ ಸಾವಿರಾರು ವರ್ಷಗಳ ಹಿಂದೆಯೇ ತಿಳಿಸಿದ್ದಾನೆ. ಅದೇ ತತ್ವವನ್ನು ಹಿಡಿದ ಬುದ್ದ-ಬಸವ-ಗಾಂಧೀಜಿ ಈ ಜಗತ್ತನ್ನು ಗೆದ್ದಿದ್ದಾರೆ.
ಅದನ್ನೇ ಬಸವಣ್ಣ ಕಳಬೇಡ, ಕೊಲಬೇಡ ಎಂದು ಹೇಳಿದ್ದಾನೆ. ಗಾಂಧೀಜಿ ಅಹಿಂಸೆಯೇ ಧರ್ಮ ಎಂದು ಹೇಳಿದ್ದಾರೆ.
ರಾಮಾಯಣದ ಇಪ್ಪತ್ತಾಲ್ಕು ಸಾವಿರ ಶ್ಲೋಕಗಳು ಏಳು ಕಾಂಡಗಳು ಸಾವಿರಾರು ಪಾತ್ರಗಳನ್ನು ಸೃಷ್ಟಿ ಮಾಡಿವೆ.
ಅಲ್ಲಿ ಬರುವ ರಾಮ-ರಾವಣ, ಸೀತೇ, ಲಕ್ಷ್ಮಣ, ಶೂರ್ಪನಕಿ, ಹನುಮಂತ ಕೇವಲ ಸಂಕೇತಗಳು.
ಆ ಎಲ್ಲ ಪಾತ್ರಗಳು ನಮ್ಮಲ್ಲಿಯೇ ಅಡಗಿವೆ ಎಂಬುದನ್ನು ವಾಲ್ಮೀಕಿ ಹೇಳುತ್ತಾನೆ. ರಾಮನ ಪಾತ್ರ ತ್ಯಾಗ ಮತ್ತು ಒಳ್ಳೆಯತನವನ್ನು ಸೂಚಿಸುತ್ತದೆ.
ರಾಮನು ತಮ್ಮನ ಸಲುವಾಗಿ ಸಿಂಹಾಸನವನ್ನೇ ತ್ಯಾಗ ಮಾಡಿ ಕಾಡಿಗೆ ತೇರಳುತ್ತಾನೆ. ರಾಮನ ತ್ಯಾಗ, ತಾಯ ಮೇಲಿನ ಪ್ರೀತಿ ಅವನ ಶ್ರೇಷ್ಠತೆಯನ್ನು ಸಾರುತ್ತವೆ.
ಬಾಲ ಕಾಂಡ, ಅಯೋಧ್ಯ ಕಾಂಡ, ಅರಣ್ಯ ಕಾಂಡ, ಕ್ಟಿಂದ ಕಾಂಡ ಹಾಗೂ ಸುಂದರ ಕಾಂಡ, ಯುದ್ದ ಕಾಂಡ ಹಾಗೂ ಉತ್ತರ ಕಾಂಡಗಳ ಮೂಲಕ ಇಡೀ ರಾಮಾಯಣವನ್ನು ವಿವರಿಸಲಾಗಿದೆ.
ಇದು ಜಗತ್ತಿನ ಮೊಟ್ಟ ಮೊದಲ ದೊಡ್ಡ ಮಹಾಕಾವ್ಯ ಎಂಬ ಕೀರ್ತಿಯನ್ನು ಗಳಿಸಿಕೊಂಡಿದೆ.
ಇಲ್ಲಿ ಬರುವ ಪ್ರತಿಯೊಂದು ಪಾತ್ರಗಳು ಮನುಷ್ಯನಲ್ಲಿ ಅಡಗಿರುವ ಗುಣಗಳನ್ನು ಹೇಳುತ್ತವೆ. ಇಲ್ಲಿ ಬರುವ ಎಲ್ಲ ಪಾತ್ರಗಳಿಗೆ ಅವುಗಳದೇ ಆದ ಒಳ್ಳೆಯ ಕೆಟ್ಟ ಗುಣಗಳಿರುತ್ತವೆ.
ಆದರೆ ಅವುಗಳನ್ನು ನಾಶ ಮಾಡಿ ಹೇಗೆ ಒಳ್ಳೆಯರಾಗಬೇಕು ಎಂಬುದೇ ಈ ಮಹಾಕಾವ್ಯದ ಉದ್ದೇಶ.
ಅನೇಕ ಕಾರಣಗಳಿಂದಾಗಿ ಶ್ರೀರಾಮನನ್ನು ಮರ್ಯಾದಾ ಪುರುಷನೆಂದು ಕರೆಯುತ್ತೇವೆ. ಆತನಲ್ಲಿ ಅಡಗಿದ್ದ ಪ್ರೀತಿ-ವಿಶ್ವಾಸ ತ್ಯಾಗ ಒಬ್ಬ ವ್ಯಕ್ತಿಯಲ್ಲಿ ಹೇಗೆ ಶಾಶ್ವತವಾಗಿ ಶ್ರೇಷ್ಠ ವ್ಯಕ್ತಿಯನ್ನಾಗಿ ರೂಪಿಸುತ್ತವೆ ಎಂಬುದಕ್ಕೆ ಸಾಕ್ಷಿ.
ಇಂದು ಜಗತ್ತು ಶ್ರೀರಾಮನ ಶ್ರೇಷ್ಠ ಮೌಲ್ಯಗಳಿಗಾಗಿಯೇ ಗಾಂಧೀಜಿ ಪ್ರಾಣ ಬಿಡುವಾಗ ಹೇರಾಮ್ ಎಂದರು. ಶ್ರೀರಾಮನ ಪಾತ್ರ ಅವನಲ್ಲಿನ ಶ್ರೇಷ್ಠ ಗುಣ ಗಾಂಧೀಜಿಯವರ ಮನಸ್ಸಿನ ಮೇಲೆ ತೀವ್ರ ಪರಿಣಾಮ ಬೀರಿತ್ತು ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.
ಒಬ್ಬ ರಾಜಕುಮಾರನಾಗಿ ರಾಮ ಕಾಡಿನಲ್ಲಿ ಹದಿನಾಲ್ಕು ವರ್ಷ ವನವಾಸವನ್ನು ಅನುಭವಿಸುತ್ತಾನೆ. ಆಗ ಜೀವನದ ಕಷ್ಟಗಳೇನು ಎಂಬುದನ್ನು ಅರಿತುಕೊಂಡು ಪರಿಪೂರ್ಣ ಮನುಷ್ಯನಾಗುತ್ತಾನೆ.
ನಮ್ಮ ಬದುಕಿನಲ್ಲಿಯೂ ಕಷ್ಟ, ನೋವುಗಳು ಬಂದಾಗ ನಾವು ಶ್ರೀರಾಮನ ವನವಾಸದ ಅರಣ್ಯ ಕಾಂಡವನ್ನು ಓದಿದರೆ ಸಾಕು ನಮ್ಮ ಕಷ್ಟಗಳೆಲ್ಲ ಮಾಯವಾಗುತ್ತವೆ.
ಶ್ರೀರಾಮನಂತಹ ರಾಜಕುಮಾರನಿಗೆ ಅಷ್ಟೊಂದು ರೀತಿಯ ಕಷ್ಟಗಳಿದ್ದ ಮೇಲೆ ನಮ್ಮದು ಯಾವ ಲೆಕ್ಕ ಅನಿಸಿ ಸಮಾಧಾನ ಸಿಗುತ್ತದೆ.
        ವಾಲ್ಮೀಕಿಯ ಉದ್ದೇಶ ಕೂಡಾ ಅದೇ ಆಗಿತ್ತು. ಜೀವನವೆಂದ ಮೇಲೆ ಕಷ್ಟಗಳು ಬಂದೇ ಬರುತ್ತವೆ. ನಾವು ಅವುಗಳನ್ನು ಧೈರ್ಯದಿಂದ ಎದುರಿಸಬೇಕು ಎಂಬುದೇ ಆಗಿದೆ.
ರಾವಣನು ಸೀತೆಯನ್ನು ಅಪಹರಿಸದೇ ಹೋಗಿದ್ದರೆ ರಾವಣನ ಕೆಟ್ಟ ಗುಣಗಳು ಹಾಗೆಯೇ ಉಳಿದು ಬಿಡುತ್ತಿದ್ದವು. ರಾವಣನಲ್ಲಿ ಅಹಂಕಾರ, ಪೂಜಾಫಲ ಎರಡನ್ನೂ ಕವಿ ಸುಂದರವಾಗಿ ವರ್ಣಿಸುತ್ತಾನೆ. ಆದರೆ ಅವನ ಅಹಂಕಾರ ಅವನ ಪೂಜಾಫಲವನ್ನು ಹಾಳುಮಾಡುತ್ತದೆ.
ಪರರ ಧನ, ಪರರ ಸ್ತ್ರೀಯನ್ನು ಅಪಹರಿಸುವುದು ಒಳ್ಳೆಯದಲ್ಲ ಎಂಬುದನ್ನೇ ವಾಲ್ಮೀಕಿ ಇಲ್ಲಿ ನೀರೂಪಿಸುತ್ತಾನೆ.
ರಾವಣನ ಅಂತ್ಯ ವ್ಯಕ್ತಿಯಲ್ಲಿ ಅಡಗಿರುವ ಅಹಂಕಾರದ ಅಂತ್ಯವಾಗಿದೆ. ಶಿವಭಕ್ತನಾದ ರಾವಣ ದೇವರನ್ನು ಒಲಿಸಿಕೊಂಡರೂ ಪರಸ್ತ್ರೀ ಮೇಲಿನ ವ್ಯಾಮೋಹದಿಂದಾಗಿ ತನ್ನ ಅಂತ್ಯ ಕಾಣುತ್ತಾನೆ.
ಅದನ್ನು ಬಸವಣ್ಣನವರು ಛಲಬೇಕು ಶರಣಂಗೆ ಪರಸತಿಯನು ಒಲ್ಲೆನೆಂಬ, ಛಲಬೇಕು ಶರಣಂಗೆ ಪರಧನವ ಒಲ್ಲೆನೆಂಬ ಎಂದು ಸಾರಿದ್ದಾರೆ.
           ಮರ್ಹ ವಾಲ್ಮೀಕಿಯ ಸಂದೇಶಗಳನ್ನು ಎಲ್ಲ ಮಹಿಮಾ ಪುರುಷರು ಮತ್ತೆ ಮತ್ತೆ ಬೇರೆ ರೀತಿಯಲ್ಲಿ ಸಾರಿ ಹೇಳಿದ್ದಾರೆ.
ಇಂದು ನಾವು ಅನೇಕ ಕಷ್ಟಗಳನ್ನು ಎದುರಿಸುತ್ತೇವೆ. ಆಗ ನೋವನ್ನು ಅನುಭವಿಸುತ್ತೇವೆ. ಅಂತಹ ಸಂದರ್ಭದಲ್ಲಿ ರಾಮಾಯಣದ ಅರಣ್ಯ ಕಾಂಡವನ್ನು ಓದಿದರೆ ನಮಗೆ ಬಂದಿರುವ ಕಷ್ಟಗಳು ಏನೂ ಅಲ್ಲ ಅನಿಸುತ್ತವೆ.
ಕಷ್ಟಗಳು ಯಾರನ್ನೂ ಬಿಟ್ಟಿಲ್ಲ, ಬಿಡುವುದೂ ಇಲ್ಲ. ಅವುಗಳನ್ನು ಎದುರಿಸಿದರೆ ಜೀವನದಲ್ಲಿ ಸುಖ ಸಿಗುತ್ತದೆ ಎಂಬುದನ್ನು ಮುಂದೆ ವಾಲ್ಮೀಕಿ ತಮ್ಮ ರಾಮಾಯಣದ ಸುಂದರ ಕಾಂಡದಲ್ಲಿ ವಿವರಿಸುತ್ತಾರೆ.
ಈ ಎಲ್ಲ ಕಾರಣಗಳಿಂದ ರಾಮಾಯಣದಲ್ಲಿ ಎಲ್ಲವೂ ಇದೆ. ಇಡೀ ನಮ್ಮ ಜೀವನವೇ ಇದೆ. ಜೀವನದ ಎಲ್ಲ ಸಮಸ್ಯೆಗಳಿಗೆ ಪರಿಹಾರವೂ ಇದೆ.
ಲಕ್ಷ್ಮಣನ ಸೋದರ ಪ್ರೇಮ, ಹನುಮಂತನ ಸ್ವಾಮಿನಿಷ್ಟೆ, ಸೀತೆಯ ಪಾವಿತ್ರತೆ ಮನುಷ್ಯನಲ್ಲಿ ಇರಬೇಕದ ಗುಣಗಳನ್ನು ಸಾರಿ ಹೇಳುತ್ತವೆ.
     ನಮ್ಮ ಮನಸ್ಸಿನಲ್ಲಿ ರಾಮ-ರಾವಣ-ಹನುಮಂತ ಎಲ್ಲರೂ ಅಡಗಿ ಕುಳಿತಿರುತ್ತಾರೆ. ನಾವೇ ಅವರನ್ನು ಹುಡುಕಿ ತೆಗೆದು ಒಳ್ಳೆಯ ಗುಣಗಳನ್ನು ಅಳವಡಿಸಿಕೊಂಡಾಗ ಶ್ರೀರಾಮರಾಗುತ್ತೇವೆ. ಇಲ್ಲದಿದ್ದರೆ ರಾವಣರಾಗುತ್ತೇವೆ ಎಂಬ ಸಂದೇಶವನ್ನು ಜಗತ್ತಿಗೆ ಮರ್ಹ ವಾಲ್ಮೀಕಿ ನೀಡಿದ್ದಾನೆ.
ಜಗತ್ಪ್ರಸಿದ್ದ ಕವಿಯ ರಾಮಾಯಣ ಇಂದು ಎಲ್ಲರಿಗೆ ಬೇಕಾಗಿದೆ. ಶ್ರೀರಾಮ ನಮ್ಮ ಪಾಲಿನ ದೇವರಾಗಿದ್ದಾನೆ. ಆದರೆ ಅವನ ಆದರ್ಶ ಗುಣಗಳನ್ನು ನಾವು ಪಾಲಿಸಿಕೊಂಡಾಗ ಶ್ರೀರಾಮನಿಗೆ ಹಾಗೂ ಮರ್ಹ ವಾಲ್ಮೀಕಿಗೆ ಗೌರವ ಕೊಟ್ಟಂತಾಗುತ್ತದೆ.
ನಮ್ಮಲ್ಲಿರುವ ರಾವಣವನ್ನು ಕಿತ್ತಿ ಒಗೆದು ಬದುಕಿನಲ್ಲಿ ಬರುವ ಎಲ್ಲ ಕಷ್ಟಗಳನ್ನು ಎದುರಿಸಿದಾಗ ಬದುಕು ಸುಂದರವಾಗುತ್ತದೆ.
ಮರ್ಹ ವಾಲ್ಮೀಕಿ ಯಾವುದೇ ಒಂದು ಜಾತಿಗೆ ಸೀಮಿತವಾಗಿಲ್ಲ. ಹುಟ್ಟಿನಿಂದ ಬೇಡನಾದರೂ, ಅವನ ಕಾವ್ಯದ ಮೂಲಕ, ಅವನ ದೈವ ಗುಣಗಳ ಮೂಲಕ ದೇವರಾಗಿದ್ದಾನೆ. ವಿಭೂತಿ ಪುರುಷನಾಗಿದ್ದಾನೆ. ಬುದ್ದ-ಬಸವ-ಗಾಂಧಿ-ಅಂಬೇಡ್ಕರ್ ಯಾವುದೇ ಜಾತಿ ಜನಾಂಗಕ್ಕೆ ಸೇರಿದವರಲ್ಲ. ಅವರ ಆದರ್ಶ ಹಾಗೂ ಸಾಧನೆಗಳ ಮೂಲಕ ಅವರು ಎಲ್ಲ ಜನಾಂಗಕ್ಕೂ ಸೇರಿರುತ್ತಾರೆ.
     ನಮ್ಮೆಲ್ಲರಿಗೆ ಕೇವಲ ಹುಟ್ಟಿನಿಂದ ಜಾತಿರುತ್ತದೆ. ನಾವು ಏನನ್ನಾದರೂ ಶ್ರೇಷ್ಠವಾದದ್ದನ್ನು ಸಾಧಿಸಿದರೆ ನಾವು ಜಾತಿಯನ್ನು ಮೀರಿ ಬೆಳೆಯುತ್ತೇವೆ. ಅಂತಹ ಶ್ರೇಷ್ಟ ಗುಣಗಳನ್ನು ನಮ್ಮ ಸಾಹಿತ್ಯ ನಮಗೆ ನೀಡುತ್ತದೆ.
ರಾಮಾಯಣ, ಮಹಾಭಾರತ, ಬಸವಾದಿ ಶರಣರ ವಚನಗಳು, ಗಾಂಧಿ-ಅಂಬೇಡ್ಕರ್ ಅವರ ವಿಚಾರ ಧಾರೆಗಳು ನಮ್ಮನ್ನು ಪರಿಪೂರ್ಣ ಮನುಷ್ಯರನ್ನಾಗಿ ಮಾಡುತ್ತವೆ.
ಈ ಎಲ್ಲ ಪುಣ್ಯ ಪುರುಷರ ಜಯಂತಿಗಳನ್ನು ಆಚರಿಸುವುದರ ಮೂಲಕ ನಮ್ಮನ್ನು ನಾವು ಪರಿಶುದ್ಧ ಗೊಳಿಸಬೇಕಾಗಿದೆ
-ಸಿದ್ದು ಯಪಾಲಪಾರವಿ
ಕುಂದಾಪ್ರ.ಕಾಂ- editor@kundapra.com