ಕೊಲ್ಲೂರು ನವರಾತ್ರಿ ಉತ್ಸವ :ಪೂರ್ವಭಾವಿ ಸಭೆ

ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಅ. 16ರಿಂದ ಅ. 24ರ ತನಕ ಜರಗಲಿರುವ ಮಹಾನವರಾತ್ರಿ ಉತ್ಸವದ ಪೂರ್ವಭಾವಿ ಸಭೆ ಸಹಾಯಕ ಕಮಿಷನರ್‌ ಹಾಗೂ ದೇವಳದ ಆಡಳಿತಾಧಿಕಾರಿ ಬಿ. ಸದಾಶಿವ ಪ್ರಭು ಅಧ್ಯಕ್ಷತೆಯಲ್ಲಿ ದೇವಳದ ಸಭಾಭವನದಲ್ಲಿ ನಡೆಯಿತು.
          ಭಕ್ತರಿಗೆ ಸಕಲ ಸೌಕರ್ಯ ಒದಗಿಸುವುದು, ದೇವಳದ ವಸತಿಗೃಹ ಹಾಗೂ ಖಾಸಗಿ ವಸತಿಗೃಹಗಳಲ್ಲಿ ತಂಗುವ ಭಕ್ತರ ಸುರಕ್ಷತೆ ಬಗ್ಗೆ ಪೋಲೀಸ್‌ ಅಧಿಕಾರಿಗಳೊಡನೆ ಚರ್ಚೆ ನಡೆಸಲಾಯಿತು. ವಾಹನ ಸಂಚಾರ ಹಾಗೂ ನಿಲುಗಡೆಗಾಗಿ ವಿಶೇಷ ನಿಗಾ ವಹಿಸುವಂತೆ ಸಭೆಯಲ್ಲಿ ಅನೇಕರು ಅಭಿಪ್ರಾಯಪಟ್ಟರು. ದೇವಳದ ಪರಿಸರದಲ್ಲಿ ಸ್ವತ್ಛತೆ ಕಾಪಾಡುವಂತೆ ಸೂಚಿಸಲಾಗಿದ್ದು ಪರಿಸರ ಮಾಲಿನ್ಯ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು. ದೇವಳದ ಒಳಗಡೆ ಭದ್ರತೆ ಹಾಗೂ ಭಕ್ತರ ಸೌಕರ್ಯಕ್ಕಾಗಿ ಹೆಚ್ಚಿನ ನಿಗಾ ವಹಿಸಲಾಗುವುದು ಎಂದು ಸದಾಶಿವ ಪ್ರಭು ತಿಳಿಸಿದ್ದಾರೆ.
         ದೇವಳದ ಕಾರ್ಯನಿರ್ವಹಣಾಧಿಕಾರಿ ಎಲ್‌.ಎಸ್‌. ಮಾರುತಿ, ಅಧೀಕ್ಷಕ ರಾಮಕೃಷ್ಣ ಅಡಿಗ, ಗ್ರಾ.ಪಂ. ಅಧ್ಯಕ್ಷ ಉದಯ ಸೇರುಗಾರ್‌, ಪೊಲೀಸ್‌ ವರಿಷ್ಠರು ಹಾಗೂ ದೇವಳದ ಸಿಬಂದಿ ಉಪಸ್ಥಿತರಿದ್ದರು.
       ಅ.23ರಂದು ಬೆಳಗ್ಗೆ ಚಂಡಿಕಾಯಾಗ ನಡೆಯಲಿದ್ದು ರಾತ್ರಿ 10 ಗಂಟೆಗೆ ರಥೋತ್ಸವದ ಜರಗಲಿದೆ. ಅ. 24ರ ವಿಜಯದಶಮಿಯಂದು ಬೆಳಗ್ಗೆ ವಿದ್ಯಾರಂಭ ನಡೆಯುವುದು.
ಕುಂದಾಪ್ರ.ಕಾಂ- editor@kundapra.com