ಯಶವಂತಪುರ – ಕಾರವಾರ ರಾತ್ರಿ ರೈಲು ಸಂಚಾರಕ್ಕೆ ರೈಲ್ವೇ ಇಲಾಖೆ ಹಸಿರು ನಿಶಾನೆ

           ಕುಂದಾಪುರ:  ಯಶವಂತಪುರ – ಕಾರವಾರ ರಾತ್ರಿ ರೈಲು ಸಂಚಾರಕ್ಕೆ ರೈಲ್ವೇ ಇಲಾಖೆ ಹಸಿರು ನಿಶಾನೆ ತೋರಿಸಿರುವುದಕ್ಕೆ ಉಡುಪಿ ಚಿಕ್ಕಮಗಳೂರು ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಹರ್ಷ ವ್ಯಕ್ತಪಡಿಸಿದ್ದಾರೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಣ್ಣೂರಿಗೆ 12 ಬೋಗಿ ವಿಸ್ತರಿಸಲಾಗಿದೆ ಎಂಬ ಮಾಹಿತಿ ತಪ್ಪಾಗಿದ್ದು, ರೈಲ್ವೆ ನಿಗಮದ ಅಧಿಕೃತ ಆದೇಶ ನನ್ನ ಕೈಯಲ್ಲಿದೆ. ರೈಲು ವಿಸ್ತರಣೆಯಲ್ಲಿ ತನ್ನದು ಸೇರಿದಂತೆ ಕರ್ನಾಟಕ ಹೈಕೋರ್ಟ್, ವೀರಪ್ಪ ಮೊಯ್ಲಿ, ಆಸ್ಕರ್ ಫರ್ನಾಂಡಿಸ್, ಕುಂದಾಪುರ, ಉಡುಪಿ, ಬಾರಕೂರು ರೆಲ್ವೆ ಹೋರಾಟ ಸಮಿತಿ ಪಾತ್ರವಿದೆ. ಮುಂದಿನ ಒಂದು ತಿಂಗಳೊಳಗೆ ಬೆಂಗಳೂರು-ಕಾರವಾರ ಮಾರ್ಗವಾಗಿ ರೈಲು ಓಡಿಸುವ ಭರವಸೆಯನ್ನು ಕೂಡ ನಿಗಮ ನೀಡಿದೆ ಎಂದು ಅವರು ತಿಳಿಸಿದರು.
            ಸುಬ್ರಹ್ಮಣ್ಯ-ಗೋವಾ ಹೊಸ ರೈಲು ಮಾರ್ಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಿಂದ ಉತ್ತರ ಕರ್ನಾಟಕ ಮತ್ತು ಕರಾವಳಿಯ ಸಂಪರ್ಕ ಕೊಂಡಿ ಬೆಸೆಯುತ್ತದೆ. ಸುಬ್ರಹ್ಮಣ್ಯ ರೈಲ್ವೆ ನಿಲ್ದಾಣವನ್ನು ಟರ್ಮಿನಲ್ ಜಂಕ್ಷನ್ ಆಗಿ ಘೋಷಣೆ ಮಾಡಿ ಹೊಸ ರೈಲುಗಳನ್ನು ಸುಬ್ರಹ್ಮಣ್ಯದಿಂದಲೇ ಆರಂಭಿಸುವ ಬಗ್ಗೆಯೂ ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ. ಸೂಕ್ತ ಟೈಮ್ ಟೇಬಲ್ ಕೂಡ ನೀಡಲಾಗಿದೆ. ಇದಕ್ಕೆ ಸೌತ್ ವೆಸ್ಟರ್ನ್ ರೈಲ್ವೆ ಒಪ್ಪಿಗೆ ನೀಡಿದೆ ಎಂದು ಅವರು ಹೇಳಿದರು. ಕುಂದಾಪುರ ರೈಲ್ವೆ ನಿಲ್ದಾಣದಲ್ಲಿ ಗಣಕೀಕೃತ ವ್ಯವಸ್ಥೆ ಸೇರಿದಂತೆ ಹೆಚ್ಚಿನ ಅಭಿವೃದ್ಧಿಗೆ ರೈಲ್ವೆ ನಿಗಮದ ಸಹಕಾರ ಬಯಸಲಾಗುತ್ತಿದೆ. ನಿಲ್ದಾಣವನ್ನು ಮಾದರಿ ನಿಲ್ದಾಣವನ್ನಾಗಿ ರೂಪಿಸಲು ಪ್ರಯತ್ನ ನಡೆಸಲಾಗುವುದು. ಪೂನಾ-ಎರ್ನಾಕುಲಂ ರೈಲು ಉಡುಪಿಯಲ್ಲಿ ಮಾತ್ರ ನಿಲುಗಡೆ ನೀಡುತ್ತಿದೆ. ಕರ್ನಾಟಕದಲ್ಲಿ 1 ಕಡೆ ಮಾತ್ರ ನಿಲುಗಡೆ ಇದೆ. ಕೇರಳದ 8 ಕಡೆ ನಿಲುಗಡೆ ಕಾಣುತ್ತಿದೆ. ಈ ತಾರತಮ್ಯದ ಬಗ್ಗೆ ರೈಲ್ವೆ ನಿಗಮದ ಗಮನಸೆಳೆಯಲಾಗಿದೆ ಎಂದರು. ಕುಂದಾಪುರ ರೈಲ್ವೆ ನಿಲ್ದಾಣದಲ್ಲಿ ಸಂಸದರ ಕೋಟಾದಡಿಯಲ್ಲಿ ಗಣಕೀಕೃತ ಕಂಪ್ಯೂಟರ್ ವ್ಯವಸ್ಥೆ ಅಳವಡಿಕೆ, ಮತ್ಸ್ಯಗಂಧ ರೈಲಿಗೆ ತಾಲೂಕು ಕೇಂದ್ರಗಳಲ್ಲಿ ನಿಲುಗಡೆ, ಯಶವಂತಪುರ – ಕಾರವಾರ ಹಗಲು ರೈಲಿಗೆ ಬಾರ್ಕೂರಿನಲ್ಲಿ ನಿಲುಗಡೆ, ಅಹ್ಮದಾಬಾದ್ – ಮಂಗಲೂರು ರೈಲಿನ ಪುನರ್ ಪ್ರಾರಂಭ, ಕುಂದಾಪುರದಲ್ಲಿ ಮಾದರಿ ರೈಲು ನಿಲ್ದಾಣ, ಪೂನಾ ಎರ್ನಾಕುಲಂ ರೈಲಿಗೆ ಉಡುಪಿ ಅಥವಾ ಕುಮದಾಪುರದಲ್ಲಿ ನಿಲುಗಡೆಗೆ ಆಗ್ರಹಿಸಿದರು. ಅಲ್ಲದೇ ಸುಬ್ರಹ್ಮಣ್ಯ-ಮಂಗಳೂರು-ಕುಂದಾಪುರ-ಕಾರವಾರ-ಗೋವಾ-ಹುಬ್ಬಳ್ಳಿಗೆ ಹೊಸ ರೈಲು, ವಾಸ್ಕೋ- ಮಂಗಳೂರು ಹೊಸ ಪ್ಯಾಸೆಂಜರ್ ರೈಲು, ಮಡ್ ಗಾಂವ್ – ನ್ಯೂ ಡೆಲ್ಲಿ ರೈಲನ್ನು ಮಂಗಳೂರಿಗೆ ವಿಸ್ತರಣೆ ಮಾಡುವುದು, ಸುಬ್ರಹ್ಮಣ್ಯ ನಿಲ್ದಾಣವನ್ನು ಟರ್ಮಿನಲ್ ಜಂಕ್ಷನ್ ಆಗಿ ಘೋಷಣೆ ಮಾಡುವುದು ಸೇರಿದಂತೆ ರೈಲ್ವೇ ಮುಂಗಡ ಪತ್ರದಲ್ಲಿ ಅವಕಾಶ ನೀಡುವಂತೆ ಸಂಸದರನ್ನು ಒತ್ತಾಯಿಸಲಾಯಿತು. ಈ ಬಗ್ಗೆ ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಕುಂದಾಪುರ ರೈಲ್ವೆ ಹಿತರಕ್ಷಣಾ ಸಮಿತಿಯ ಕೆಂಚನೂರು ಸೋಮಶೇಖರ ಶೆಟ್ಟಿ, ಸಚ್ಚಿದಾನಂದ ಶೆಟ್ಟಿ, ವಿವೇಕ್ ನಾಯಕ್, ಕೆ.ಕೆ.ನಾಯಕ್ ಉಪಸ್ಥಿತರಿದ್ದರು.