ನಾಳಿನಿಂದ ವಿದ್ಯಾಕಾಶಿಯಲ್ಲಿ ನುಡಿಸಿರಿ ಸಂಭ್ರಮ

ಮೂಡುಬಿದಿರೆ: ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನ. 16ರಿಂದ 18ವರೆಗೆ ಮೂಡುಬಿದಿರೆಯಲ್ಲಿ 9ನೇ ಆಳ್ವಾಸ್‌ ನುಡಿಸಿರಿ ರಾಷ್ಟ್ರೀಯ ಸಮ್ಮೇಳನ ನಡೆಯಲಿದ್ದು, ಶುಕ್ರವಾರ ಸಮ್ಮೇಳನವನ್ನು ಸಾಹಿತಿ ಡಾ| ಯು.ಆರ್‌ ಅನಂತಮೂರ್ತಿ ಉದ್ಘಾಟಿಸುವರು.
      ಈ ವರ್ಷದ ನುಡಿಸಿರಿ 'ಕನ್ನಡ ಮನಸ್ಸು: ಜನಪರ ಚಳವಳಿಗಳು' ಎಂಬ ಪರಿಕಲ್ಪನೆಯಲ್ಲಿ ನಡೆಯಲಿದ್ದು, ಪದ್ಮಶ್ರೀ ನಾಡೋಜ ಪ್ರೊ| ಕೆ.ಎಸ್‌. ನಿಸಾರ್‌ ಅಹಮದ್‌ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿದೆ. ಡಾ|ಡಿ.ವೀರೇಂದ್ರ ಹೆಗ್ಗಡೆ ಶುಭಾಶೀರ್ವಾದದೊಂದಿಗೆ ನಡೆಯಲಿರುವ ಈ ಸಮ್ಮೇಳನವು ಶುಕ್ರವಾರ ಮುಂಜಾನೆ 9ಕ್ಕೆ ಸಾಂಸ್ಕೃತಿಕ ಮೆರವಣಿಗೆಯೊಂದಿಗೆ ಆರಂಭವಾಗಲಿದ್ದು, 9.30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಇದೇ ಸಂದರ್ಭದಲ್ಲಿ ಶತಾಯುಷಿ ವಿದ್ವಾಂಸ ಪ್ರೊ| ಜಿ. ವೆಂಕಟಸುಬ್ಬಯ್ಯ ಅವರನ್ನು ವೀರೇಂದ್ರ ಹೆಗ್ಗಡೆ ಗೌರವಿಸುವರು. ಕಸಾಪ ರಾಜ್ಯಾಧ್ಯಕ್ಷ ಪುಂಡಲೀಕ ಹಾಲಂಬಿ, ಸಂಸದ ನಳಿನ್‌ ಕುಮಾರ್‌ ಕಟೀಲು ಮತ್ತಿತರು ಉಪಸ್ಥಿತರಿರುವರು. ಸಮ್ಮೇಳನದಲ್ಲಿ ವಿವಿಧ ವಿಷಯಗಳ ಕುರಿತು ಗೋಷ್ಠಿಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿದೆ.

ಸಮಾರೋಪ: 
ಭಾನುವಾರ ನಡೆಯುವ ಸಮಾರೋಪ ಸಮಾರಂಭದಲ್ಲಿ ರೈ|ರೆ| ಡಾ|ಅಲೋಶಿಯಸ್‌ ಪಾವ್‌É ಡಿ'ಸೋಜಾ, ಸಾಣೆಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಡಾ|ಸಿ.ಪಿ.ಕೃಷ್ಣ ಕುಮಾರ್‌, ಗಿರೀಶ್‌ ಕಾಸರವಳ್ಳಿ, ಡಾ|ಸಿದ್ಧಲಿಂಗಯ್ಯ, ವೈಜಯಂತಿ ಕಾಶಿ, ಪದ್ಮಶ್ರೀ ರಾಮಚಂದ್ರ ಹೆಗಡೆ ಚಿಟ್ಟಾಣಿ, ಡಾ|ವಿಷ್ಣು ನಾಯ್ಕ ಅಂಕೋಲಾ, ಸುಭದ್ರಮ್ಮ ಮನ್ಸೂರು ಅವರಿಗೆ ಹಾಗೂ 'ಲೋಕ ಶಿಕ್ಷಣ ಟ್ರಸ್ಟ್‌ ಬೆಂಗಳೂರು - ಹುಬ್ಬಳ್ಳಿ' ಸಂಸ್ಥೆಗೆ ಆಳ್ವಾಸ್‌ ನುಡಿಸಿರಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಡಾ|ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಸಮಾರೋಪ ಭಾಷಣ ಮಾಡುವರು. 

ಸಭಾಂಗಣ ಸಿದ್ಧ
160ಫೀಟ್ ಉದ್ದ, 40 ಫೀಟ್ ಅಗಲದ ವಿಶಿಷ್ಠ ಸಭಾಂಗಣ ನುಡಿಸಿರಿಗಾಗಿ ಸಿದ್ಧವಾಗುತ್ತಿದೆ. 130ಫೀಟ್ ಉದ್ದ 160ಫೀಟ್ ಅಗಲದ ಬೃಹತ್ ಚಪ್ಪರ ಈಗಾಗಲೇ ನಿರ್ಮಾಣಗೊಂಡಿದ್ದು ಸುಮಾರು 12ಸಾವಿರದಷ್ಟು ಆಸನ ವ್ಯವಸ್ಥೆಯನ್ನು ಈ ಸಭಾಂಗಣದಲ್ಲಿ ಜೋಡಿಸಲಾಗುತ್ತಿದೆ. ಇಡೀ ಸಭಾಂಗಣವನ್ನು ಬಟ್ಟೆಯ ಗೂಡುದೀಪಗಳಿಂದ ಶೃಂಗರಿಸಲಾಗಿದ್ದು, ಈ ಬಾರಿಯ ನುಡಿಸಿರಿಗೆ ಹೊಸ ಕಳೆ ಮೂಡುವಂತೆ ಮಾಡಿದೆ.