ಲೇಖಕಿ ವೈದೇಹಿಗೆ ನಿರಂಜನ ಪ್ರಶಸ್ತಿ

ಕುಂದಾಪುರ: ಪುತ್ತೂರು ವಿವೇಕಾನಂದ ಕಾಲೇಜಿನ ಶಿವರಾಮ ಕಾರಂತ ಅಧ್ಯಯನ ಕೇಂದ್ರವು ನೀಡುವ 2012ರ ನಿರಂಜನ ಪ್ರಶಸ್ತಿಗೆ ಪ್ರಸಿದ್ಧ ಲೇಖಕಿ ವೈದೇಹಿಯವರನ್ನು ಆಯ್ಕೆ ಮಾಡಲಾಗಿದೆ ಎಂದು ಅಧ್ಯಯನ ಕೇಂದ್ರದ ಕಾರ್ಯಾಧ್ಯಕ್ಷ ಡಾ. ತಾಳ್ತಜೆ ವಸಂತಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
         ಪ್ರಶಸ್ತಿ ಪ್ರದಾನ ಸಮಾರಂಭವು ಡಿಸೆಂಬರ್ 15ರಂದು ಕಾಲೇಜಿ ನಲ್ಲಿ ನಡೆಯಲಿದೆ. ಕನ್ನಡದ ಹೆಸರಾಂತ ಸಾಹಿತಿ, ಕೇಂದ್ರ ಸಾಹಿತ್ಯ ಅಕಾಡಮಿಯ ಪುರಸ್ಕಾರವನ್ನು ತನ್ನ ‘ಕ್ರೌಂಚ ಪಕ್ಷಿಗಳು’ ಸಂಕಲನಕ್ಕೆ ಪಡೆದಿರುವ ವೈದೇಹಿ 13ನೆಯ ವರ್ಷದ ನಿರಂಜನ ಪ್ರಶಸ್ತಿಯನ್ನು ಪಡೆದುಕೊಳ್ಳಲಿದ್ದಾರೆ. ‘ವೈದೇಹಿ’ ಎಂಬ ಕಾವ್ಯನಾಮ ದಲ್ಲಿ ಬರೆಯುತ್ತಿರುವ ಜಾನಕಿ ಮೂಲತಃ ಕುಂದಾಪುರದವರು.
        ಕವಿತೆ, ಕಥೆ, ನಾಟಕ, ಅಂಕಣ ಬರಹ, ಅನುವಾದಗಳ ಮೂಲಕ ಕನ್ನಡ ಸಾರಸ್ವತ ಲೋಕದಲ್ಲಿ ಹೆಸರಾದವರು. ಮರಗಿಡ ಬಳ್ಳಿ, ಅಂತರಂಗದ ಪುಟಗಳು, ಗೋಲ, ಸಮಾಜ ಶಾಸ್ತ್ರಜ್ಞೆಯ ಟಿಪ್ಪಣಿಗಳು, ಅಮ್ಮಚ್ಚಿ ಎಂಬ ನೆನಪು, ಕ್ರೌಂಚ ಪಕ್ಷಿಗಳು ಇವರ ಕಥಾ ಸಂಕಲನಗಳು. ಬಿಂದು ಬಿಂದಿಗೆ, ಪಾರಿಜಾತ ಎಂಬ ಕವನ ಸಂಕಲನಗಳು ಹಾಗೂ ಅಸ್ಪಶ್ಯರು ಇವರ ಕಾದಂಬರಿ. ಪ್ರಸ್ತುತ ಮಣಿಪಾಲದ ಇರುವಂತಿಗೆಯಲ್ಲಿ ತಮ್ಮ ಸಾಹಿತ್ಯ ಕೃಷಿಯನ್ನು ಮುಂದುವರಿಸುತ್ತಿದ್ದಾರೆ.