ಹಿಂದೂ ನಾಯಕರೇ, ಸಂಬಂಧಗಳನ್ನೇ ಸಂಶಯಿಸುವುದು ಹಿಂದೂ ಸಂಸ್ಕ್ರತಿಯೇ?

 ಕುಂದಾಪುರ: ಇಲ್ಲಿನ ತಾಲೂಕು ಕಚೇರಿ ಸಮೀಪದ ಕ್ಯಾಂಟೀನ್‌ಗೆ ಚಹಾ ಕುಡಿಯಲೆಂದು ಆಗಮಿಸಿದ್ದ ಯುವಕ ಮತ್ತು ಆತನ ತಂಗಿಯ ಮೇಲೆ ಸಂಶಯಗೊಂಡ ಯುವಕರ ಗುಂಪೊಂದು ಅವರ ಮೇಲೆ ಮುಗಿಬಿದ್ದು, ಪೊಲೀಸ ಠಾಣೆಗೆ ಎಳೆದೊಯ್ದು ಸತ್ಯ ವಿಚಾರ ತಿಳಿದ ಮೇಲೆ ಅಲ್ಲಿಂದ ಕಾಲ್ಕಿತ್ತ ಘಟನೆ ಇತ್ತಿಚಿಗೆ ನಡೆದಿದೆ.

ಘಟನೆಯ ವಿವರ:
         ಅಂದು ತಮ್ಮ ಜಾಗಕ್ಕೆ ಸಂಬಂಧಪಟ್ಟ ಕೆಲಸಕ್ಕೆಂದು ತಂಗಿಯೊಂದಿಗೆ ಕೆರಾಡಿಯಿಂದ ಕುಂದಾಪುರ ತಾಲೂಕು ಕಚೇರಿಗೆ ಬಂದಿದ್ದ  ಮಂಜುನಾಥ್ ನಾಯ್ಕ್, ಸಮೀಪದ ಕ್ಯಾಂಟೀನ್‌ಗೆ ಚಹಾ ಕುಡಿಯಲೆಂದು ಹೋಗಿದ್ದರು. ಅಷ್ಟರಲ್ಲೇ ಮಂಜುನಾಥ್ ನಾಯ್ಕ್ ಮತ್ತು ಆತನ ತಂಗಿಯ ಮೇಲೆ ಸಂಶಯಗೊಂಡು, ಹಿಂದೂ ಸಂಘಟನೆಯವರೆಂದು ಹೇಳಿಕೊಂಡ ಯುವಕರ ಗುಂಪೊಂದು ಅವರ ಮೇಲೆ ಮುಗಿಬಿದ್ದು ಜಾತಿ ಯಾವುದು? ದೈವ ಯಾವುದು? ಅಂತೆಲ್ಲಾ ಗದರಿಸಲು ಆರಂಭಿಸಿದರು. ''ನಾವು ಅಣ್ಣ -ತಂಗಿ,'' ಎಂದು ಹೇಳಿದರೂ ಕೇಳಿಸಿಕೊಳ್ಳದ ಗುಂಪು ಅವರನ್ನು ಠಾಣೆಗೆ ಎಳೆದೊಯ್ಯಿತು. ಆದರೆ ಪೊಲೀಸರ ವಿಚಾರಣೆ ವೇಳೆ ಅವರಿಬ್ಬರು ಅಣ್ಣ ತಂಗಿ ಎಂದು ದೃಢಪಟ್ಟಿತು. ಸತ್ಯ ವಿಚಾರ ತಿಳಿದ ಗುಂಪು ತಕ್ಷಣ ಠಾಣೆಯಿಂದ ಕಾಲ್ಕಿತ್ತಿದೆ. ಅರೆಕ್ಷಣದಲ್ಲಿ ನಡೆದುಹೋದ ಈ ವಿದ್ಯಮಾನದಿಂದ ಅಣ್ಣ ತಂಗಿ ದಿಗ್ಭ್ರಾಂತರಾದರು. 
      ಹಿಂದೂ ಸಂಘಟನೆಯವರೇ ಇಂದೆಂತಹ ಅನಿಷ್ಠ ಸಂಸ್ಕ್ರತಿ ಸ್ವಾಮಿ? ಹಾಗಾದರೆ ಹುಡುಗ- ಹುಡುಗಿ ಸಾರ್ವಜನಿಕವಾಗಿ ಒಟ್ಟಿಗೆ ತಿರುಗುವಂತಿಲ್ಲವೇ? ಅದು ಅವರವರ ವ್ಯಯಕ್ತಿಕ ವಿಚಾರ.  ಅಷ್ಟಕ್ಕೂ ಅವರನ್ನು ವಿಚಾರಿಸುವ ನೈತಿಕ ಪೋಲಿಸಗಿರಿ ನಿಮಗೇಕೆ? ಕಾಮಾಲೆ ಕಣ್ಣನ್ನು ಕಳಚಿಟ್ಟು ನಿರ್ಮಲ ಮನಸ್ಸಿನಿಂದ ಸಮಾಜವನ್ನು ನೋಡಿ. ಆಗ ತಾನಾಗಿಯೇ ಸಂಬಂಧಗಳ ಬೆಲೆ ತಿಳಿಯುವುದು. ನೈತೀಕ ಪೋಲಿಸಗಿರಿ ಹೆಸರಿನಲ್ಲಿ ಧರ್ಮಕ್ಕೆ ಮಸಿ ಬಳಿಯುವ ಕೆಲಸವನ್ನು ಇನ್ನಾದರೂ ಕೈಬಿಡಿ.  ಕುಂದಾಪುರದ ಪೋಲಿಸರೇ ಈ ಗೂಂಡಾಗಳ ವಿರುದ್ಧ  ಏಕೆ ಕೇಸು ದಾಖಲಿಸಿಕೊಂಡಿಲ್ಲ ಎಂಬುದಕ್ಕೆ ಉತ್ತರ ಕೊಡಿ.