ಪತ್ರಿಕೋದ್ಯಮ ಪ್ರವೇಶ: ವಾಸ್ತವ ಮತ್ತು ಸವಾಲುಗಳು

         ಮಾಧ್ಯಮ ಕ್ಷೇತ್ರದಲ್ಲಿ ಬದಲಾವಣೆ ಆಗುತ್ತಿದೆ. ಜೊತೆಗೆ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಗಳಿಸೋದು ಕೂಡಾ ಸವಾಲಾಗಿ ಬಿಟ್ಟಿದೆ. ಪತ್ರಿಕೆಗಳು, ಟಿವಿ ಚಾನೆಲ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಮಾರುಕಟ್ಟೆ ವ್ಯಾಪ್ತಿ ಕಿರಿದಾಗುತ್ತಿದೆ. ಹೀಗಾಗಿ ಈ ಕ್ಷೇತ್ರದಲ್ಲಿ ಸ್ಪರ್ಧಾತ್ಮಕ ಪೈಪೋಟಿ ಕೂಡಾ ಹೆಚ್ಚಾಗುತ್ತಿದೆ. ಜೊತೆಗೆ ಮಾಧ್ಯಮ ಕ್ಷೇತ್ರದಲ್ಲಿ ಶಿಕ್ಷಣ ನೀಡುವ ಸಂಸ್ಥೆಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಆದರೆ ಶಿಕ್ಷಣದ ಗುಣಮಟ್ಟ, ಮಾಧ್ಯಮ ಕ್ಷೇತ್ರದಲ್ಲಿನ ಕಾರ್ಯನಿರ್ವಹಣೆಯ ಕುರಿತಾದ ಪರಿಚಯ ಸಂಪೂರ್ಣ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಆಗುತ್ತಿದೆಯಾ?
    ಇಲ್ಲ. ಮೊದಲೆಲ್ಲಾ ಒಂದು ಪತ್ರಿಕೆಯಲ್ಲಿ, ಟಿವಿ ವಾಹಿನಿಯಲ್ಲಿ ಕೆಲಸ ಮಾಡಬೇಕೆಂದರೆ ಯಾವುದೇ ಪದವಿ, ಸ್ನಾತಕೋತ್ತರ ಪದವಿ ಪಡೆದರೇ ಸಾಕಾಗಿತ್ತು..ಆದರೆ ಇಂದು ಕಾಲ ಬದಲಾಗಿದೆ..ರಾಜ್ಯದ ಎಲ್ಲೆಡೆ ಪತ್ರಿಕೋದ್ಯಮ, ಮಾಧ್ಯಮ ವಿಷಯದಲ್ಲಿ ಶಿಕ್ಷಣ ನೀಡುವ ಸಂಖ್ಯೆ ಹೆಚ್ಚಾಗುತ್ತಿದೆ..ಹೀಗಾಗಿ ಸಹಜವೆಂಬಂತೆ ಈ ರಂಗಕ್ಕೆ ಬರಬೇಕೆಂದರೆ ಕನಿಷ್ಠ ಪಕ್ಷ ಪದವಿ ಅದು ಬಿಟ್ಟರೆ ಸ್ನಾತಕೋತ್ತರ ಪದವಿ ಪಡೆಯಬೇಕೆಂಬ ನಿಯಮ ತನ್ನಿಂತಾನೇ ಜಾರಿಯಾಗಿಬಿಟ್ಟಿದೆ. ಆದರೆ ಮಾಧ್ಯಮ ಕ್ಷೇತ್ರದಲ್ಲಿ ಉದ್ಯೋಗ ಗಿಟ್ಟಿಸಬೇಕೆಂದರೆ ಕೇವಲ ಪದವಿ, ಸ್ನಾತಕೋತ್ತರ ಪದವಿ ಪ್ರಮಾಣಪತ್ರ ಪಡೆದರಷ್ಟೇ ಸಾಕಾ..? ನಿಜಕ್ಕೂ ಈ ಪ್ರಶ್ನೆಯನ್ನು ನಾವಿಂದು ಕೇಳಬೇಕಾದ ಪರಿಸ್ಥಿತಿ ಬಂದಿದೆ. ಕೆಲವರು ಇಷ್ಟಪಟ್ಟು ಈ ಕ್ಷೇತ್ರಕ್ಕೆ ಬಂದರೆ ಓಕೆ ಅನ್ನಬಹುದು. ಆದರೆ ಇನ್ನೂ ಕೆಲವರು ಈ ವಿಷಯದಲ್ಲಿ ಶಿಕ್ಷಣ ಪಡೆದಿದ್ದೇವೆ ಅಥವಾ ಪೋಷಕರ, ಇನ್ನಾರೋ ಒತ್ತಾಯದಿಂದಲೋ ಅದರ ಜೊತೆಗೆ ಗ್ಲಾಮರಸ್ ಕ್ಷೇತ್ರ ಅಂತಾ ಹೇಳಿ ಈ ಕ್ಷೇತ್ರಕ್ಕೆ ಬರುವವರ ಸಂಖ್ಯೆಯಿಂದ ಇವತ್ತು ಪತ್ರಿಕೋದ್ಯಮ ರಂಗದಲ್ಲಿ ಏನೇನೋ ಆಗುತ್ತಿದೆ. ಅದಕ್ಕಿಂತಲೂ ಆತಂಕಕಾರಿಯಾದ ವಿಷಯವೊಂದಿದೆ.



         ಪತ್ರಿಕೋದ್ಯಮ ರಂಗದಲ್ಲಿ ಉದ್ಯೋಗ ಗಿಟ್ಟಿಸಿಕೊಂಡ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದ ಫ್ರೆಷರ್ ಒಬ್ಬಾತನಿಗೆ ಆರಂಭ ಕಾಲದಲ್ಲಿ ಒಂದೇ ರೀತಿಯ ವೇತನ ನಿಗದಿಪಡಿಸುವುದು ಎಷ್ಟು ಸರಿ..? ಹಾಗಾದರೆ ಪದವಿ, ಸ್ನಾತಕೋತ್ತರ ಪದವಿ ಪಡೆದವನಿಗೆ ಇರುವ ವ್ಯತ್ಯಾಸವೇನು..? ಹಾಗಾದರೆ ಮಾಧ್ಯಮ ರಂಗಕ್ಕೆ ಬರಬೇಕೆಂದರೆ ಕೇವಲ ಪದವಿ ಪಡೆದರಷ್ಟೇ ಸಾಕಾಲ್ಲವೇ..? ಈ ರೀತಿಯ ನಿಯಮಗಳನ್ನ ಹೆಚ್ಚಿನ ಕಂಪನಿಗಳು ಅನುಸರಿಸುತ್ತಿರುವುದರಿಂದ ಸ್ನಾತಕೋತ್ತರ ಪದವಿ ಪಡೆದವರು ಕಂಗಾಲಾಗಿದ್ದಾರೆ. ಈ ನಿಯಮ ಹಲವಾರು ವರ್ಷಗಳಿಂದ ಇದ್ದರೂ ಇದರಲ್ಲಿ ತಿದ್ದುಪಡಿ ಮಾಡುವ ಕನಿಷ್ಠ ಪ್ರಯತ್ನವನ್ನು ಯಾವ ಮಾಧ್ಯಮ ಕಂಪನಿಗಳು ಕೂಡಾ ಮಾಡುತ್ತಿಲ್ಲ. ಹೀಗಾಗಿ ಸ್ನಾತಕೋತ್ತರ ಪದವಿ ಪಡೆದರೇ ಏನೂ ಲಾಭ ಎನ್ನುವ ಮನೋಭಾವ ಕೂಡಾ ಬೆಳೆಯುತ್ತಿದೆ. ಹೀಗಾಗಿ ಇಂದು ಮಾಧ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದು ಇಂಗ್ಲೀಷ್ ಮಾಧ್ಯಮದಲ್ಲಿ ಕೆಲಸ ಮಾಡಲು ಹೆಚ್ಚಿನ ವಿದ್ಯಾರ್ಥಿಗಳು ಇಷ್ಟಪಡುತ್ತಿದ್ದಾರೆ. ಉನ್ನತ ಮಟ್ಟದ ಶಿಕ್ಷಣ ಪಡೆದರೂ ಯಾತಕ್ಕಾಗಿ ಕೆಲ ವಿದ್ಯಾರ್ಥಿಗಳು ಕೆಲಸದ ಕಾರ್ಯನಿರ್ವಹಣೆಯಲ್ಲಿ ವಿಫಲರಾಗುತ್ತಿದ್ದಾರೆನ್ನುವುದು ಹಲವಾರು ಚಿಂತಕರನ್ನ ಕಾಡಿದೆ. ಸರ್ಕಾರಿ ಕಾಲೇಜುಗಳಿಗಿಂತ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ತರಗತಿ ಪಾಠದ ಜೊತೆಗೆ ಪ್ರಾಯೋಗಿಕವಾಗಿ ಮಾಧ್ಯಮದ ಕಾರ್ಯನಿರ್ವಹಣೆಯನ್ನು ಕಲಿಯುವಂತಹ ಸೌಲಭ್ಯ ಹೆಚ್ಚಾಗುತ್ತಿದೆ. ಹೀಗಾಗಿ ಸರ್ಕಾರಿ ಕಾಲೇಜುಗಳಲ್ಲಿ ಈಗಲೂ ಪತ್ರಿಕೋದ್ಯಮ ಶಿಕ್ಷಣ ಹಿಂದುಳಿದಿದೆ.


         ಇನ್ನೂ ರಾಜ್ಯದ ಕೆಲ ವಿವಿಗಳಲ್ಲಿ ಪತ್ರಿಕೋದ್ಯಮ ಶಿಕ್ಷಣದ ಗುಣಮಟ್ಟ ತೀರಾ ಹಿಂದುಳಿದಿದೆ ಎನ್ನುವುದು ಹಲವರ ವಾದ. ಯಾವ ರೀತಿ ಪದವಿ ಮಟ್ಟದಲ್ಲಿ ಪತ್ರಿಕೋದ್ಯಮ ಶಿಕ್ಷಣದಲ್ಲಿ ಪ್ರಾಯೋಗಿಕ ತರಬೇತಿಗೆ ಹೆಚ್ಚಿನ ಒತ್ತು ನೀಡಬೇಕೋ ಅದೇ ರೀತಿ ಸ್ನಾತಕೋತ್ತರ ಮಟ್ಟದಲ್ಲೂ ಕೂಡಾ ಇದಕ್ಕಿಂತ ಹೆಚ್ಚಿನ ಒತ್ತನ್ನು ನೀಡಬೇಕು..ಆದರೆ ಕೆಲ ವಿವಿಗಳಲ್ಲಿ ಇನ್ನೂ ಇವುಗಳಿಗೆ ಒತ್ತು ನೀಡುವಂತಹ ಪ್ರಯತ್ನ ಕೂಡಾ ಆಗುತ್ತಿಲ್ಲ. ಹೀಗಾಗಿ ಸ್ನಾತಕೋತ್ತರ ಪದವಿ ಪಡೆದು ಕೇವಲ ಸರ್ಟಿಫಿಕೇಟ್‌ಗಳನ್ನ ಹಾಗೂ ಅರೆ-ಬರೆ ಅನುಭವಗಳನ್ನ ಹೊತ್ತುಕೊಂಡು ಬರುವ ಪರಿಸ್ಥಿತಿ ವಿದ್ಯಾರ್ಥಿಗಳದ್ದು. ಇಷ್ಟು ಆದರೆ ಪರವಾಗಿರಲಿಲ್ಲ. ಇವತ್ತು ಪತ್ರಿಕೆಗಳು, ಟಿವಿ, ರೇಡಿಯೋ ವಾಹಿನಿಗಳು ಸಾಕಾಷ್ಟಿದ್ದರೂ ಕೆಲಸ ಗಿಟ್ಟಿಸಿಕೊಳ್ಳಲು ಓರ್ವ ಸ್ನಾತಕೋತ್ತರ ಪದವೀಧರ ಕಷ್ಟಪಡಬೇಕಾದ ಪರಿಸ್ಥಿತಿ ಬಂದಿದೆ ಅಂದರೆ ಯಾರನ್ನು ದೂರಬೇಕೋ..? ನಮ್ಮ ಶಿಕ್ಷಣ ವ್ಯವಸ್ಥೆಯನ್ನ ಅಥವಾ ವಿದ್ಯಾರ್ಥಿಯನ್ನ..? ಈ ಬಗ್ಗೆ ಗಂಭೀರ ರೀತಿಯಲ್ಲಿ ಚರ್ಚೆ ನಡೆಸಿ ಸೂಕ್ತ ಪರಿಹಾರ ನಡೆಸಬೇಕಾದ ಅನಿವಾರ್ಯತೆ ನಮ್ಮ ಮುಂದೆ ಇದೆ.

         ಇನ್ನು ಪದವಿ ಅಥವಾ ಸ್ನಾತಕೋತ್ತರ ಪದವಿ ನಂತರ ಸೂಕ್ತ ಕೆಲಸ ಸಿಗದೇ ಕೆಲವರು ಪ್ರಾದೇಶಿಕ ಪತ್ರಿಕೆ, ಟಿವಿ ವಾಹಿನಿಗಳಲ್ಲಿ ಕೆಲಸ ಮಾಡಲು ಹೋಗುತ್ತಾರೆ. ಅಥವಾ ಬೇರೆ ಕ್ಷೇತ್ರದಲ್ಲಿ ಉದ್ಯೋಗ ಅರಸಿ ಹೋಗುತ್ತಾರೆ. ಇವತ್ತು ದುಡಿಮೆಗಿಂತ ಹಣ ಗಳಿಕೆಗೆ ಹೆಚ್ಚಿನ ಒತ್ತು ನೀಡುತ್ತಿರುವುದರಿಂದ ಒಮ್ಮೆಲೆ ಹಣ ಹಾಗೂ ಹೆಸರು ಗಳಿಸಬೇಕೆಂಬ ಹುಚ್ಚಾಟದಲ್ಲಿ ಕೆಲ ಮಂದಿ ತಮ್ಮ ಭವಿಷ್ಯದಲ್ಲಿ ಎಡವುತ್ತಿದ್ದಾರೆ. ಹೀಗಾಗಿ ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆ ಬರುತ್ತಿದೆ. ಹೀಗಾಗಿ ಪ್ರಾದೇಶಿಕ ಮಟ್ಟದ ಪತ್ರಿಕೆ, ಟಿವಿ ವಾಹಿನಿಗಳಲ್ಲಿ ಹೆಚ್ಚಾಗಿ ಪತ್ರಿಕೋದ್ಯಮ ಶಿಕ್ಷಣ ಪಡೆದ ವಿದ್ಯಾರ್ಥಿಗಳನ್ನೆ ಬಳಸಿಕೊಳ್ಳವಂತಹ ಒಂದು ಕಟಿಬದ್ಧ ನಿಯಮ ಜಾರಿಯಾಗಬೇಕಾದ ಅವಶ್ಯಕತೆ ಇದೆ. ಪತ್ರಿಕೋದ್ಯಮದ ಶೈಕ್ಷಣಿಕ ಅರ್ಹತೆ ಇಲ್ಲದವರು ಈ ಕ್ಷೇತ್ರದಲ್ಲಿ ಬರುವುದರಿಂದ ಇವತ್ತು ಮಾಧ್ಯಮದಲ್ಲಿ ಶಿಕ್ಷಣ ಪಡೆದವರಿಗೆ ಮತ್ತಷ್ಟು ಸ್ಪರ್ಧೆಯನ್ನ ಎದುರಿಸಬೇಕಾಗಿ ಬಂದಿದೆ. ಮಂಗಳೂರಲ್ಲೊಂದು ದೈನಿಕ ಇದೆ.
ಈ ಪತ್ರಿಕೆಯ ವಿಶೇಷವೆಂದರೆ ಇಲ್ಲಿ ಪತ್ರಿಕೋದ್ಯಮದಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆದವರು ಯಾರಾದರೂ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದರೆ ಅವರನ್ನ ಸಂಶಯ ದೃಷ್ಟಿಯಿಂದ ನೋಡಲಾಗುತ್ತದೆ. ಅವರನ್ನ ನೇಮಕ ಮಾಡುವ ಮುಂಚೆ ಹಿಂದೆಮುಂದೆ ನೋಡಲಾಗುತ್ತದೆ. ಯಾಕೆಂದರೆ ಅವರ ಪ್ರಕಾರ ಇವರು ಕೆಲ ತಿಂಗಳು ಇಲ್ಲಿ ಕೆಲಸ ಮಾಡಿ ಬೇರೆ ಕಂಪನಿಗೆ ಜಂಪ್ ಮಾಡುತ್ತಾರೆಂಬ ಭಯ ಇವರಿಗೆ ಇರುವುದರಿಂದ ಈ ಪತ್ರಿಕೆಯ ಆಡಳಿತ ಮಂಡಳಿ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಅವಕಾಶನೇ ಕೊಡದೇ ಪಿಯುಸಿ, ಡಿಪ್ಲೋಮಾ ಆದವರಿಗೆ ಉಪಸಂಪಾದಕ, ವರದಿಗಾರ ಹುದ್ದೆಯನ್ನ ನೀಡಿ ಕಡಿಮೆ ಸಂಬಳದಲ್ಲಿ ದುಡಿಸಿಕೊಳ್ಳಲಾಗುತ್ತಿದೆ. ಈ ಮೂಲಕ ಉಪಸಂಪಾದಕ, ವರದಿಗಾರ ಹುದ್ದೆಯ ಮೌಲ್ಯವನ್ನ ಹಾಗೂ ಪತ್ರಿಕೋದ್ಯಮದ ನೀತಿ ಸಿದ್ಧಾಂತಗಳನ್ನ ಗಾಳಿಗೆ ತೂರಲಾಗುತ್ತಿದೆ. ಹಾಗಾದರೆ ಉಪಸಂಪಾದಕ , ವರದಿಗಾರ ಹುದ್ದೆಗೆ ಆದರದ್ದೇ ಆದ ಸ್ಥಾನಮಾನ ಇಲ್ಲವೇ? ಅರ್ಹತೆ ಇಲ್ಲದವರಿಗೆ ತರಬೇತಿ ನೀಡಿ ಅವರನ್ನ ಕಡಿಮೆ ಸಂಬಳದಲ್ಲಿ ದುಡಿಸುವುದನ್ನ ಏನೆನ್ನಬೇಕು? ಈ ರೀತಿಯ ಬೆಳವಣಿಗೆಗಳಿಗೆ ಕಡಿವಾಣ ಹಾಕಬೇಕಾಗಿದೆ. ಜೊತೆಗೆ ಇಂತಹ ದ್ವಂದ್ವ ಬೆಳವಣಿಗೆಗಳು ಇನ್ನೂ ಬೆಳೆಯುತ್ತಿರುವುದರಿಂದ ಇವತ್ತು ಪತ್ರಿಕೋದ್ಯಮ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ಚಿಂತಿಸಬೇಕಾದ ಸಂಕಷ್ಟ ಕಾಲಕ್ಕೆ ಬಂದಿದ್ದಾರೆ. ಇನ್ನೊಂದು ವಿಷಯ. ಯಾವುದೇ ಒಬ್ಬ ಪತ್ರಕರ್ತ/ಪತ್ರಕರ್ತೆಗೆ ಒಂದೇ ಕಂಪನಿ ಶಾಶ್ವತವಲ್ಲ. ಹೀಗಾಗಿ ಒಂದು ಕಂಪನಿಯಿಂದ ಇನ್ನೊಂದು ಕಂಪನಿಗೆ ಜಂಪ್ ಮಾಡೋದು ತಪ್ಪಾ..? ಈ ಎಲ್ಲಾ ವಿದ್ಯಮಾನಗಳು ಎಲ್ಲಾ ಮಾಧ್ಯಮ ಸಂಸ್ಥೆಗಳಲ್ಲಿ ನಡೆಯಲ್ಲ..ಪ್ರಾದೇಶಿಕ ಹಾಗೂ ಕೆಲ ಜಿಲ್ಲಾವಾರು, ರಾಜ್ಯವಾರು ಪತ್ರಿಕೆಗಳಲ್ಲಿ ನಡೆಯುತ್ತಿದೆ.. ಕರ್ನಾಟಕದಲ್ಲಿ ದೈನಿಕ ಪತ್ರಿಕೆಗಳ ಸಂಖ್ಯೆ ಕಡಿಮೆಯಿರುವುದರಿಂದ ಕನ್ನಡ ಪತ್ರಿಕೆಗಳಲ್ಲಿ ಉದ್ಯೋಗ ಗಿಟ್ಟಿಸಬೇಕೆಂದರೆ ಸದ್ಯ ಸ್ಪರ್ಧಾತ್ಮಕ ಪೈಪೋಟಿ ಏರ್ಪಟ್ಟಿದೆ.. ಇನ್ನೂ ಈಗಾಷ್ಟೇ ಶಿಕ್ಷಣ ಮುಗಿಸಿಕೊಂಡು ಬಂದ ವಿದ್ಯಾರ್ಥಿಯಲ್ಲಿ ಅನುಭವವನ್ನೇ ಕೇಳಿದರೆ ಆತ ಏನು ಮಾಡಬೇಕು, ಹೇಳಿ? ಅರ್ಹತೆ ಇದ್ದರೂ ಕೆಲಸನೇ ಕೊಡದಿದ್ದರೆ ಆತ ಅನುಭವವನ್ನ ಗಳಿಸುವುದಾದರೂ ಹೇಗೆ? ಬೇರೆ ಪದವಿ, ಅರ್ಹತೆ ಇದೆಯೆಂದಾದರೆ ಪ್ರವೇಶ ಕೊಡಲಿ. ಆದರೆ ಇದೇ ಒಂದು ಕಾರಣವನ್ನು ಮುಂದಿಟ್ಟುಕೊಂಡು ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ನೀಡುವ ಪ್ರವೇಶದ ಸಂಖ್ಯೆಯಲ್ಲಿ ಇಳಿಮುಖವಾಗಬಾರದೆಂಬುದು ಪತ್ರಿಕೋದ್ಯಮ ವಿದ್ಯಾರ್ಥಿಗಳ ಮನವಿ.

             ಇದಕ್ಕಿಂತ ಮತ್ತೊಂದು ವಿಷಯವಿದೆ. ಇವತ್ತು ಫ್ರೆಷರ್ ಒಬ್ಬ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವ ಸಮಯದಲ್ಲಿ ಅನೇಕ ಸವಾಲುಗಳನ್ನ ಎದುರಿಸುತ್ತಿದ್ದಾನೆ. ಸಂಪೂರ್ಣ ಮಟ್ಟದಲ್ಲಿ ಮಾಧ್ಯಮಗಳಿಗೆ ಪ್ರವೇಶ ಪಡೆಯಬೇಕೆಂದರೆ ಪದವಿ, ಸ್ನಾತಕೋತ್ತರ, ಪಿಜಿಡಿಪ್ಲೋಮಾ ಪದವಿ ಅಗತ್ಯ ಎಂಬ ನಿಯಮವನ್ನ ಜಾರಿ ಮಾಡಬೇಕಾಗಿದೆ. ವರ್ಷಗಳು ಉರುಳಿದಂತೆ ಮಾಧ್ಯಮ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆಗಳಾಗುತ್ತಿದ್ದು ಪತ್ರಿಕೋದ್ಯಮ ವಿದ್ಯಾರ್ಥಿಗಳು ಗ್ರಾಮಾಂತರ ಪತ್ರಿಕೋದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕಾಗಿದೆ. ಇದು ಸವಾಲಿನ ಕೆಲಸವೂ ಹೌದು.ಅಷ್ಟೇ ಜವಾಬ್ದಾರಿಯುತ ಕೆಲಸವೂ ಕೂಡಾ ಹೌದು. ರಾಜ್ಯದ ಕೆಲ ವಿವಿಗಳಲ್ಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ನಿರ್ಮಾಣ ಮಾಡಿರುವ ಸ್ಟುಡಿಯೋಗಳು ನೆನೆಗುದಿಗೆ ಬಿದ್ದಿವೆ. ವಿಭಾಗದ ನಿರ್ಲಕ್ಷ್ಯ, ಸಿಬ್ಬಂದಿ, ಹಣಕಾಸಿನ ಸಮಸ್ಯೆ ಹೀಗೆ ಮುಂತಾದ ಸಮಸ್ಯೆಯಿಂದ ಸರ್ಕಾರಿ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳು ಕೇವಲ ತರಗತಿಗಷ್ಟೇ ಸೀಮಿತ ಆಗುತ್ತಿದ್ದಾರೆ. ಇದು ದೊಡ್ಡ ದುರಂತನೇ ಸರಿ.ಕೂಡಲೇ ಸರ್ಕಾರ ಈ ಬಗ್ಗೆ ಚಿಂತನೆ ನಡೆಸಬೇಕಾಗಿದೆ. ಮಾತ್ರವಲ್ಲ ಪತ್ರಿಕೋದ್ಯಮ ವಿದ್ಯಾರ್ಥಿಗಳು ಇದರ ಬಗ್ಗೆ ಹೋರಾಟ ನಡೆಸಬೇಕಾದ ಅನಿವಾರ್ಯತೆ ಕೂಡಾ ಬಂದಿದೆ. ಹಣ ಬಿಡುಗಡೆಗೊಂಡರೂ ಸೌಲಭ್ಯ ಕಲ್ಪಿಸದ ಕಾಲೇಜುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ. ಜೊತೆಗೆ ನಿರ್ಲಕ್ಷ್ಯ ತೋರಿರೋ ವಿವಿಗಳ ಪತ್ರಿಕೋದ್ಯಮ ವಿಭಾಗಗಳಿಗೆ ಮರುಚಿಕಿತ್ಸೆ ಕೊಡಿಸಬೇಕಾದ ಅನಿವಾರ್ಯತೆ ಕೂಡಾ ಬಂದಿದೆ. ಸರ್ಕಾರಿ ಕಾಲೇಜುಗಳಿಗಿಂತ ಕೆಲ ಖಾಸಗಿ ಕಾಲೇಜುಗಳಲ್ಲಿ ಮಾತ್ರ ಪತ್ರಿಕೋದ್ಯಮ ಶಿಕ್ಷಣದಲ್ಲಿ ಕಲಿಕೆ, ಪ್ರಾಯೋಗಿಕ ತರಬೇತಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಇಂತಹ ಸಂಸ್ಥೆಗಳಲ್ಲಿ ಕಲಿತ ವಿದ್ಯಾರ್ಥಿಗಳು ಎಲ್ಲಿ ಹೋದರೂ ಸೈ ಅನಿಸಿಕೊಳ್ಳುತ್ತಾರೆ. ಇಂತಹ ಪತ್ರಿಕೋದ್ಯಮ ತರಬೇತಿ ನೀಡುವ ಕೆಲಸ ಎಲ್ಲಾ ಪತ್ರಿಕೋದ್ಯಮ ಶಿಕ್ಷಣ ಸಂಸ್ಥೆಗಳಲ್ಲಿ ಆಗಬೇಕಾಗಿದೆ. ಮಾರುಕಟ್ಟೆ ವ್ಯಾಪ್ತಿ ಕಡಿಮೆಯಿರುವುದರಿಂದ ಸ್ಪರ್ಧೆ ಜಾಸ್ತಿಯಿರುವುದರಿಂದ ಪತ್ರಿಕೋದ್ಯಮ ವಿದ್ಯಾರ್ಥಿಗಳು ಸವಾಲನ್ನು ಎದುರಿಸುತ್ತಿದ್ದಾರೆ. ಇದನ್ನ ಸಮರ್ಥವಾಗಿ ಎದುರಿಸಬೇಕೆಂದರೆ ಕಲಿಕೆ ಮಟ್ಟದಲ್ಲೆೀ ಇದಕ್ಕೆ ಸಿದ್ಧತೆ ಮಾಡಬೇಕು. ಹೀಗಾದಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಸೈ ಅನಿಸಿಕೊಳ್ಳಬಹುದು. ಗ್ಲಾಮರಸ್ ಕ್ಷೇತ್ರ ಅಂತಾ ಹೇಳಿ ಟಿವಿ ಚಾನೆಲ್‌ಗಳಿಗೆ ಬರುವವರಿಗೆ ಕಡಿವಾಣ ಹಾಕಬೇಕಾಗಿದೆ. ಪತ್ರಿಕೆ, ಟಿವಿ, ರೇಡಿಯೋಗಳಲ್ಲಿ ಕೆಲಸ ಮಾಡುವವರಿಗೆ ಆವರದ್ದೇ ಆದ ಪಾವಿತ್ರ್ಯತೆ ಇದೆ. ಮಾತ್ರವಲ್ಲ ಇದೊಂದು ಸಂವಿಧಾನದ ನಾಲ್ಕನೇ ಅಂಗವೂ ಹೌದು. ಹೀಗಾಗಿ ಇದಕ್ಕೆ ತನ್ನದೇ ಆದಂತಹ ಬದ್ಧತೆ, ಮೌಲ್ಯ ಇದೆ. ಇದನ್ನೆಲ್ಲಾ ಕಾಪಾಡುವ ಹೊಣೆಗಾರಿಕೆ ಹಿರಿಯ ಪತ್ರಕರ್ತರ, ಶಿಕ್ಷಣ ತಜ್ಞರ, ಶೈಕ್ಷಣಿಕ ಸಂಸ್ಥೆಗಳ ಮೇಲಿದೆ. ಇದನ್ನೆಲ್ಲಾ ಗಮನಿಸಿಕೊಂಡು ಶಿಕ್ಷಣ ತಜ್ಞರು ಪತ್ರಿಕೋದ್ಯಮ ಶಿಕ್ಷಣದ ಗುಣಮಟ್ಟದ ಹೆಚ್ಚಳದ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಾಗಿದೆ.
ಸಾಂದರ್ಭಿಕ ಚಿತ್ರಗಳು: ಗಣೇಶ ಬಿಜಾಡಿ, ಸುನಿಲ್ ಬೈಂದೂರು