ಮಕ್ಕಳ ದಿನಾಚರಣೆಯ ವಿಶೇಷ: ಕೊಂಕಣಿ ಕಿರುಚಿತ್ರ "ಮುನ್ನಿ" ಬಿಡುಗಡೆ


ಮಕ್ಕಳ ದಿನಾಚರಣೆಯ ವಿಶೇಷ:  ಶಿಕ್ಷಣವಂಚಿತ ಬಾಲಕಾರ್ಮಿಕ ಜಾಗೃತಿಯ ಕೊಂಕಣಿ ಕಿರುಚಿತ್ರ "ಮುನ್ನಿ" ಬಿಡುಗಡೆಗೆ ಸಿದ್ಧ 

 ಕುಂದಾಪುರ:   ಶಿಕ್ಷಣವಂಚಿತ ಬಾಲಕಾರ್ಮಿಕರ ಬಗ್ಗೆ ಜಾಗೃತಿ ಮೂಡಿಸುವ ಹಾಗೂ ಸ್ತ್ರೀ ಶಿಕ್ಷಣದ ಮಹತ್ವವನ್ನು ಒತ್ತಿ ಹೇಳುವ ಸಂದೇಶವನ್ನು ಹೊಂದಿರುವ 25 ನಿಮಿಷಗಳ ಕಾಲಾವಧಿಯ ಕೊಂಕಣಿ ಕಿರುಚಿತ್ರ "ಮುನ್ನಿ" ಬಿಡುಗಡೆಗೆ ಸಿದ್ಧಗೊಂಡಿದೆ. ವಿಶಿಷ್ಟವಾದ ಸಾಮಾಜಿಕ ಸಂದೇಶವನ್ನು ಕೊಡಮಾಡುವ ಈ ಕಿರುಚಿತ್ರವನ್ನು ಅಂತರ್ಜಾಲದಲ್ಲಿ ವಿಶ್ವದಾದ್ಯಂತ ಎಲ್ಲರೂ ಮುಕ್ತವಾಗಿ ವೀಕ್ಷಿಸುವ ಅವಕಾಶವನ್ನು ಕಲ್ಪಿಸಿರುವುದು ವಿಶೇಷವಾಗಿದೆ. 

   ಮುನ್ನಿಯ ಕಥಾಹಂದರ: ಮುನ್ನಿ, ಬಡಕುಟುಂಬದಲ್ಲಿ ಜನಿಸಿದ ಪ್ರತಿಭಾವಂತ ಬಾಲಕಿ. ಕುಟುಂಬದ ಜವಾಬ್ದಾರಿ ಹೊಂದಿರದ ಕುಡುಕ ತಂದೆ, ಸಂಸಾರ ನಿರ್ವಹಣೆಗೆ ಬೀಡಿ ಕಟ್ಟುವ ತಾಯಿ, ತಂದೆಯ ಮುದ್ದಿನಿಂದ ಬೆಳೆದ ತಮ್ಮ, ಇವರ ನಡುವೆ ಭವಿಷ್ಯದ ಸುಂದರ ಕನಸುಗಳನ್ನು ಹೊತ್ತ ಜಾಣೆ ಮುನ್ನಿ. ಅದೊಂದು ಕರಾಳ ದಿನ ಆಕೆಯ ಕನಸುಗಳು ಕಮರಿ ಹೋಗುತ್ತವೆ. ಕುಡುಕ ತಂದೆ ಆಕೆಯನ್ನು ಶಾಲೆಯಿಂದ ಬಿಡಿಸಿ ಶ್ರೀಮಂತರೊಬ್ಬರ ಮನೆಯಲ್ಲಿ ಕೆಲಸಕ್ಕೆ ಕಳುಹಿಸುತ್ತಾನೆ. ಶಾಲೆಯಲ್ಲಿ ಆಡಿ, ಹಾಡಿ, ಕಲಿತು, ನಲಿದು ಅರಳಬೇಕಾದ ಆಕೆಯ ಬಾಲ್ಯ ದಾಸ್ಯದ ಸಂಕೋಲೆಯಲ್ಲಿ ಕಮರಿ ಹೋಗುತ್ತದೆ. ಪೆನ್ನು ಹಿಡಿದು ಬರೆಯಬೇಕಾದ ಕೋಮಲ ಕೈಗಳು ಕಠಿಣ ಕೆಲಸಗಳನ್ನು ಮಾಡುವಂತಾಗುತ್ತದೆ. 
      ನಲಿದು ಕುಣಿದಾಡಿ ಶಾಲೆಗೆ ಹೋಗಬೇಕಾದ ಆಕೆ ಮನೆ ಮಾಲಕರ ಮಗನನ್ನು ಶಾಲೆಗೆ ಕರೆದೊಯ್ಯುವ ಕೆಲಸವನ್ನು ಮಾಡಬೇಕಾಗುತ್ತದೆ. ಶಾಲೆಯ ವಾತಾವರಣ ಹಾಗೂ ಅಲ್ಲಿರುವ ವಿದ್ಯಾಥರ್ಿಗಳನ್ನು ಕಂಡು ಆಕೆಯ ಅಂತರಂಗ ಪಂಜರದ ಪಕ್ಷಿಯಂತೆ ವೇದನೆಯನ್ನು ಅನುಭವಿಸುತ್ತದೆ. ಆದರೆ ದಿನವೂ ಆಕೆಯನ್ನು ಗಮನಿಸುತ್ತಿರುವ ಶಿಕ್ಷಕಿಯೋರ್ವರು ಆಕೆಯ ಬಗ್ಗೆ ಆಸಕ್ತಿ ತಳೆಯುತ್ತಾರೆ. ಆ ಶಿಕ್ಷಕಿಯ ಪ್ರಯತ್ನ ಹಾಗೂ ಪ್ರೇರಣೆಯಿಂದ ಮುನ್ನಿಯ ಬಾಳಿನಲ್ಲಿ ಉಂಟಾಗುವ ತಿರುವು ಹಾಗೂ ಬದಲಾವಣೆಯೇ ಈ ಕಿರುಚಿತ್ರದ ಸರಳ ಕಥಾವಸ್ತುವಾಗಿದೆ.
    ತಾರಾಗಣದಲ್ಲಿ:  ಕೊಂಕಣಿಯಲ್ಲಿ ಈಗಾಗಲೇ ಎರಡು ಹಾಗೂ ಕನ್ನಡದಲ್ಲಿ ಒಂದು ಕಿರುಚಿತ್ರ ನಿರ್ಮಿಸಿ ಪ್ರಸಿದ್ಧರಾಗಿರುವ ಪ್ರತಿಭಾವಂತ ನಿರ್ದೇಶಕ ವಿನೋದ್ ಗಂಗೊಳ್ಳಿ ಅವರು ರಚಿಸಿ ನಿರ್ದೇಸಿರುವ ಈ ಕಿರುಚಿತ್ರದಲ್ಲಿ ಮುನ್ನಿಯಾಗಿ ಪ್ರೆನ್ಸಿನಾ ಡಾಯಸ್ ಅಭಿನಯಿಸಿದ್ದಾರೆ. ಇತರ ಕಲಾವಿದರಾಗಿ ರಾಜೇಶ್ ಕುಂದರ್, ರಾಗಿಣಿ, ಜಾನೆಟ್ ಫೆರ್ನಾಂಡಿಸ್, ರೋಜಿ ಫೆರ್ನಾಂಡಿಸ್, ಪೆಟ್ರಿಶಿಯಾ ಆಲ್ಮೇಡಾ, ಪ್ರೀತಿ ಫೆರ್ನಾಂಡಿಸ್, ಹಾಗೂ ಇತರ ಸಹಕಲಾವಿದರೊಂದಿಗೆ ಹಲವಾರು ಬಾಲಕಲಾವಿದರು ತಮ್ಮ ಮನೋಜ್ಞ ಅಭಿನಯವನ್ನು ನೀಡಿದ್ದಾರೆ. ಮುನ್ನಿ ಕಿರುಚಿತ್ರಕ್ಕೆ ಅವಿನಾಶ್ ಅವರ ಸಂಕಲನವಿದೆ. ಗಂಗೊಳ್ಳಿಯ ಮೂರು ಶಾಲೆಗಳು ಸೇರಿದಂತೆ ಸುತ್ತಮುತ್ತಲಿನ ಪರಿಸರದಲ್ಲಿ ಕಿರುಚಿತ್ರವನ್ನು ಚಿತ್ರೀಕರಿಸಲಾಗಿದೆ.
ಚಿತ್ರ ಲೇಖನ: ಚಂದ್ರ ಕೆ. ಹೆಚ್