ಉಡುಪಿ ಜಿಲ್ಲೆಯ ಪ್ರಥಮ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ

ಕುಂದಾಪುರ: ಕೋಟ ಪಡುಕರೆ ಲಕ್ಷ್ಮೀ ಸೋಮ ಬಂಗೇರ ಪ್ರಥಮ ದರ್ಜೆ ಕಾಲೇಜಿನ ಆವರಣದ ಗೀತಾನಂದ ಬಯಲು ರಂಗ ಮಂಟಪದಲ್ಲಿ ಶನಿವಾರ ಜಿಲ್ಲೆಯ ಪ್ರಥಮ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು. ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ವಹಿಸಿದ್ದ ಖ್ಯಾತ ಶಿಕ್ಷಣ ತಜ್ಞ, ಸಾಹಿತಿ ಪ್ರೊ. ಕೆ.ಆರ್. ಹಂದೆ ಮಾತನಾಡಿ ಇಂದಿನ ವಿದ್ಯಾವಂತರೂ ಕೂಡಾ ಆಂಗ್ಲ ಭಾಷಾ ವ್ಯಾಮೋಹಿಗಳಾಗಿದ್ದು, ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತರೆ ಮಾತ್ರ ಮಕ್ಕಳು ಬುದ್ಧಿವಂತರಾಗುತ್ತಾರೆ ಎಂಬ ಭ್ರಮೆಯಲ್ಲಿದ್ದಾರೆ. ಇದರಿಂದಾಗಿ ಕನ್ನಡ ಶಾಲೆಗಳನ್ನು ಮುಚ್ಚುವ ಪರಿಸ್ಥಿತಿ ಬಂದಿದೆ. ಮಕ್ಕಳು ಏನನ್ನು, ಯಾರಿಂದ, ಹೇಗೆ ಕಲಿಯುತ್ತಾರೆ ಎಂಬುದು ಮುಖ್ಯವೇ ಹೊರತು ಮಾಧ್ಯಮ ಮುಖ್ಯವಲ್ಲ ಎಂಬುದು ವಿದ್ಯಾ ತಜ್ಞರ ಅಭಿಮತ. ಕನ್ನಡದ ಜತೆಗೆ ಇಂಗ್ಲಿಷನ್ನೂ ಚೆನ್ನಾಗಿ ಕಲಿಯಿರಿ ಎಂಬುದು ನಮ್ಮ ಹೊಸ ಭಾಷಾ ನೀತಿಯಾಗಬೇಕು. ಅಚ್ಚ ಕನ್ನಡದ ನೆಲವಾದ ಕೋಟದಲ್ಲಿ ಡಾ. ಶಿವರಾಮ ಕಾರಂತರು, ಸ್ವಚ್ಛ ರಾಜಕಾರಣಿ ಕೋಟ ರಾಮಕೃಷ್ಣ ಕಾರಂತರು, ಕೋ.ಲ. ಕಾರಂತರು ಮೊದಲಾದ ಸರ್ವ ಕ್ಷೇತ್ರದ ದಿಗ್ಗಜರು ಹುಟ್ಟಿ ಮಹಾನ್ ಸಾಧನೆ ಮಾಡಿದರು. ಯಕ್ಷಗಾನ, ವಾಣಿಜ್ಯ, ವಿದ್ಯಾ ರಂಗಗಳಲ್ಲಿ ಕೋಟದ ಹಿರಿಮೆ ಅನನ್ಯ. ಇವರೆಲ್ಲರಿಗೂ ಸ್ಫೂರ್ತಿಯಾದದ್ದು ಮಾತೃಭಾಷೆ ಕನ್ನಡ ಎಂದರು
      ಕೋಟದಲ್ಲಿನ ಡಾ. ಕಾರಂತರ ಭವನದಲ್ಲಿ ನಿರಂತರವಾಗಿ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ನಡೆಯಬೇಕು, ಹೋಬಳಿ ಮಟ್ಟದ ಎಲ್ಲ ಶಾಲೆಗಳಲ್ಲಿ ಗ್ರಂಥಾಲಯವನ್ನು ಬಲಪಡಿಸಬೇಕು. ಜನಸಾಮಾನ್ಯರಲ್ಲಿಯೂ ಓದುವ ಹವ್ಯಾಸ ಹಾಗೂ ಪುಸ್ತಕ ಪ್ರೀತಿ ಹುಟ್ಟಿಸಲು, ದೇಗುಲಗಳ ಬೀಡಾದ ಜಿಲ್ಲೆಯಲ್ಲಿನ ಎಲ್ಲ ದೇವಾಲಯಗಳಲ್ಲಿ ಮುಜರಾಯಿ ಇಲಾಖೆ ಮತ್ತು ಸೇವಾ ಸಂಸ್ಥೆಗಳಿಂದ ಸುಸಜ್ಜಿತ ಗ್ರಂಥಾಲಯ ಸ್ಥಾಪನೆಯಾಗಬೇಕು. ಕನ್ನಡ ಶಾಲೆಗಳು ಮುಚ್ಚದಂತೆ ಸಾಮುದಾಯಿಕ ಯತ್ನ ಆಗಬೇಕು. ಪ್ಲಾಸ್ಟಿಕ್ ಮುಕ್ತ, ಅಮಲು ಮುಕ್ತ ಪ್ರದೇಶವಾಗಿ ಕೋಟ ಅಭಿವೃದ್ಧಿ ಹೊಂದಬೇಕು ಎಂದು ನುಡಿದರು. 
        ಕೋಟ ಗ್ರಾ.ಪಂ. ಅಧ್ಯಕ್ಷೆ ಪಾರ್ವತಿ ಹಂದೆ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಕೋಟ ಹೋಬಳಿ ಕಸಾಪ ಗೌರವಾಧ್ಯಕ್ಷ ಆನಂದ ಸಿ. ಕುಂದರ್ ಪರಿಷತ್ ಧ್ವಜಾರೋಹಣಗೈದರು. ಉದ್ಘಾಟನೆಗೆ ಮುನ್ನ ಭವ್ಯ ಮೆರವಣಿಗೆಯ ಮೂಕಲ ಸಮ್ಮೇಳನಾಧ್ಯಕ್ಷರನ್ನ ವೇದಿಕೆಗೆ ಕರೆ ತರಲಾಯಿತು. ಸಾಹಿತ್ಯ ಸಮ್ಮೇಳನವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ದ.ಕ. ಜಿಲ್ಲಾ ಪರಿಷತ್ ಪೂರ್ವಾಧ್ಯಕ್ಷ ಕೆ.ಸಿ. ಕುಂದರ್ ಮಾತನಾಡಿ, ಸಾಹಿತ್ಯ ಬರೇ ಭಾಷೆಯಲ್ಲ. ಅದೊಂದು ಜೀವ ವಿಕಾಸ ಹಂತದ ಪ್ರಮುಖ ಮಜಲು ಎಂದ ಅವರು, ಚಕ್ರವರ್ತಿ ಅಶೋಕನ ಕಾಲದಿಂದಲೂ ರಾಜಾಶ್ರಯದಲ್ಲಿ ಸಾಹಿತ್ಯ ಕ್ಷೇತ್ರ ಬೆಳೆದು ಬಂದ ಬಗೆಯನ್ನು ವಿವರಿಸಿದರು. 
     ಲಕ್ಷ್ಮೀ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಿನ್ಸಿಪಾಲ್ ವಸಂತರಾಜ ಶೆಟ್ಟಿ, ಪ್ರೌಢಶಾಲೆ ಮುಖ್ಯೋಪಾಧ್ಯಾಯ ಪ್ರಕಾಶ ಹೆಬ್ಬಾರ್, ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ವಿಷ್ಣುಮೂರ್ತಿ ಭಟ್, ಉಡುಪಿ ತಾಲೂಕು ಕಸಾಪ ಅಧ್ಯಕ್ಷ ಪ್ರೊ. ಸಿ. ಉಪೇಂದ್ರ ಸೋಮಯಾಜಿ ಉಪಸ್ಥಿತರಿದ್ದರು. ಕೋಟ ಹೋಬಳಿ ಅಧ್ಯಕ್ಷ ಎಚ್. ಸುದರ್ಶನ ಶೆಟ್ಟಿ ಸ್ವಾಗತಿಸಿದರು. ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಪ್ರಸ್ತಾವನೆಗೈದರು. ಕೌಸಲ್ಯಾ, ಉದಯ ಕುಮಾರ್ ಶೆಟ್ಟಿ, ಸಾಹಿತಿ ನರೇಂದ್ರ ಕುಮಾರ್ ಕೋಟ ಕಾರ್ಯಕ್ರಮ ಕಾರ್ಯಕ್ರಮ ನಿರೂಪಿಸಿದರು. ಉದ್ಘಾಟನೆಗೆ ಮೊದಲು ಭವ್ಯ ಮೆರವಣಿಗೆ ಮೂಲಕ ಸಮ್ಮೇಳನಾಧ್ಯಕ್ಷರನ್ನು ವೇದಿಕೆಗೆ ಕರೆತರಲಾಯಿತು.