ಸ್ವಾರ್ಥಪರ ಚಿಂತನೆಯಿಂದ ಎಲ್ಲವೂ ವ್ಯರ್ಥ: ಡಾ.ಎಚ್. ಶಾಂತಾರಾಮ್

ಕುಂದಾಪುರ: ರಾಜಕೀಯ ಪಕ್ಷಗಳು ಸ್ವಾರ್ಥರಹಿತ ಚಿಂತನೆಯನ್ನಿಡ್ಡುಕೊಂಡಾಗ ಮಾತ್ರ ದೇಶದ ಅಭಿವದ್ಧಿಗೆ ರೂಪಿಸುವ ಯೋಜನೆಗಳು ಸಫಲವಾಗಲು ಸಾಧ್ಯ. ವ್ಯವಹಾರಿಕ ದೃಷ್ಟಿಕೋನದಿಂದ ಆರಂಭಗೊಂಡ ಯೋಜನೆಗಳು ನಿರ್ದಿಷ್ಟ ಗುರಿ ತಲುಪಿಲ್ಲ ಎಂದು ಮಣಿಪಾಲ ಅಕಾಡೆಮಿ ಆಡಳಿತಾಧಿಕಾರಿ ಡಾ.ಎಚ್. ಶಾಂತಾರಾಮ್ ಹೇಳಿದರು. 
     ಅವರು ಭಂಡಾರ್‌ಕಾರ್ಸ್‌ ಕಾಲೇಜಿನ ಆರ್.ಎನ್.ಶೆಟ್ಟಿ ಸಭಾಂಗಣದಲ್ಲಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ಅರ್ಥಶಾಸ್ತ್ರ ಅಸೋಸಿಯೇಶನ್‌ನ ವತಿಯಿಂದ ಯುಜಿಸಿ ಸಹಯೋಗದೊಂದಿಗೆ ಹಮ್ಮಿಕೊಂಡ ದೇಶದ 11ನೇ ಹಣಕಾಸು ಯೋಜನೆಯ ಅನುಭವ ಮತ್ತು 12ನೇ ಹಣಕಾಸು ಯೋಜನೆಯ ನಿರೀಕ್ಷೆ ಕುರಿತ ಎರಡು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು 
       ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳನೆನ್ನದೇ  ಜವಾಬ್ದಾರಿಯುತವಾಗಿ ವರ್ತಿಸಿ, ಯಾವುದೇ ಯೋಜನೆಯ ಅನುಷ್ಠಾನಕ್ಕೂ ಮೊದಲು ಪರಾಮರ್ಶೆ ನಡೆಯಬೇಕು. ಅದರ ಪ್ರಗತಿಯ ಕುರಿತಾಗಿ ಸಮಗ್ರ ಚಿಂತನೆ ನಡೆಸಬೇಕು ಎಂದರು. 
     ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ.ಟಿ.ಸಿ.ಶಿವಶಂಕರಮೂರ್ತಿ ಮಾತನಾಡಿ 1970ರ ದಶಕದ ಬಳಿಕ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಸಮಾನತೆ ಕಂಡುಕೊಳ್ಳುವಲ್ಲಿ ದೇಶ ಸಫಲತೆ ಕಂಡುಕೊಂಡಿದೆ. ಆದರೆ ನಿರೀಕ್ಷಿತ ಮಟ್ಟ ತಲುಪಿಲ್ಲ. ಶೇ.12-13ರಷ್ಟು ಮಂದಿ ಪದವೀಧರರ ಮಾತ್ರ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ಶೇ.25ರಷ್ಟು ಮಂದಿ ತಾಂತ್ರಿಕ ಕ್ಷೇತ್ರದಲ್ಲಿದ್ದಾರೆ. ಶೇ.23ರಷ್ಟು ಎಂಬಿಎ ಪದವೀಧರರು ಮಾತ್ರ ಉದ್ಯೋಗ ಗಿಟ್ಟಿಸಿದ್ದಾರೆ. ಗ್ರಾಮಾಂತರ ಪ್ರದೇಶದಲ್ಲಿ ಶೇ.86ರಷ್ಟು ಪ್ರಮಾಣದ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಬಡತನ, ಅಪೌಷ್ಟಿಕತೆ, ಶೌಚಾಲಯ, ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ. ದೇಶದಲ್ಲಿ ಉನ್ನತ ಶಿಕ್ಷಣ ಪಡೆಯುವವರು ಶೇ.14 ಮಾತ್ರ. ಈ ನೆಲೆಯಲ್ಲಿ 12ನೇ ಹಣಕಾಸು ಯೋಜನೆಯಡಿ ಶಿಕ್ಷಣದ ಪ್ರಗತಿ ಒತ್ತು ನೀಡಲಾಗಿದೆ. 2020ರ ವೇಳೆ 1000 ವಿಶ್ವವಿದ್ಯಾನಿಲಯ ಸ್ಥಾಪನೆ ಗುರಿ ಇರಿಸಿಕೊಳ್ಳಲಾಗಿದೆ ಎಂದರು 
     ಸಿಂಡಿಕೇಟ್ ಬ್ಯಾಂಕಿನ ಉಡುಪಿ ಪ್ರಾದೇಶಿಕ ವಲಯದ ಡೆಪ್ಯುಟಿ ಮೆನೇಜರ್ ಡಾ.ಸುಬ್ರಹ್ಮಣಿ, ಕಾಲೇಜಿನ ವಿಶ್ವಸ್ಥ ಮಂಡಳಿ ಸದಸ್ಯ ಶಾಂತಾರಾಮ ಪ್ರಭು, ಮಂಗಳೂರು ವಿಶ್ವವಿದ್ಯಾನಿಲಯ ಅರ್ಥಶಾಸ್ತ್ರ ಅಸೋಸಿಯೇಶನ್ ಕಾರ್ಯದರ್ಶಿ ಡಾ.ಪ್ರಕಾಶ ರಾವ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಡಾ.ಪ್ರಭಾಕರ ಶಿಶಿಲ ಅವರು ಬರೆದಿರುವ ಮೆನೇಜಿರಿಯಲ್ ಇಕೊನಾಮಿಕ್ಸ್ ಸೆಕೆಂಡ್ ಬಿಬಿಎಂ, ಮಾರ್ಕೆಟ್ ಸ್ಟ್ರಚ್ಚರ್ ಎಂಡ್ ಅನಾಲಿಸಸ್ ಫಸ್ಟ್ ಬಿಕಾಂ ಮತ್ತು ಪರಿಸರ ಅರ್ಥಶಾಸ್ತ್ರ ಪುಸ್ತಕ ಬಿಡುಗಡೆಗೊಳಿಸಲಾಯಿತು. 
    ಪ್ರಾಂಶುಪಾಲ ಪ್ರೊ. ದೋಮ ಚಂದ್ರಶೇಖರ ಸ್ವಾಗತಿಸಿದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ನಾರಾಯಣ ರಾವ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪನ್ಯಾಸಕಿ ಪ್ರಿಯಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಜಯವಂತ ನಾಯಕ್ ಅತಿಥಿಗಳನ್ನು ಪರಿಚಯಿಸಿದರು. ಪ್ರೊ.ಕೆ.ಎಸ್.ಶಾಂತಾರಾಮ್ ವಂದಿಸಿದರು.
-ಅಶ್ವಿನಿ, ಭಂಡಾರ್‌ಕಾರ್ಸ್‌ ಕಾಲೇಜು