ಅಸಮರ್ಪಕ ಕಾಮಗಾರಿ; ಕೊನೆಗಾಣದ ಸೇನಾಪುರ ಮೋರಿ ಸಮಸ್ಯೆ !

  ಕುಂದಾಪುರ: ಬೇಸಿಗೆಯಲ್ಲಿ ಧೂಳುಮಯವಾಗಿ ನಾಗರಿಕ ಸಂಚಾರಕ್ಕೆ ಕಿರಿಕಿರಿ ಹುಟ್ಟಿಸುವ, ಅತ್ಯಂತ ತಗ್ಗುಪ್ರದೇಶದಿಂದ ಕೂಡಿದ್ದು, ಮಳೆ ಬಂದಾಗಲೆಲ್ಲ ನೀರು ತುಂಬಿಕೊಂಡು ಕೆಸರಿನ ಕೊಳವಾಗಿ ಮಾರ್ಪಡುವ ಬಂಟ್ವಾಡಿ-ನಾಡಾ ಮಾರ್ಗದ ಸೇನಾಪುರ ಗ್ರಾಮಕರಣಿಕರ ಕಚೇರಿ ಬಳಿಯಲ್ಲಿನ ರಸ್ತೆಗೆ ಹೊಸದಾಗಿ ರಚಿಸಲಾದ ಮೋರಿ ಕಾಮಗಾರಿಯ ಅಸಮರ್ಪಕತೆಗೆ ಕೊನೆ ಎಂಬುದೇ ಇಲ್ಲದಂತಾಗಿದ್ದು, ಸಾರ್ವಜನಿಕರ ಅಸಮಾಧಾನ ಭುಗಿಲೆದ್ದಿದೆ.
       ಮೋರಿಯಿಲ್ಲದ್ದರಿಂದ ಬಸ್ಸು ಮುಂತಾದ ವಾಹನಗಳು ಹಾಗೂ ಜನರ ನಿತ್ಯ ಸಂಚಾರಕ್ಕೆ ತ್ರಾಸದಾಯಕವಾಗಿ ಪರಿಣಮಿಸಿದ ಇಲ್ಲಿನ ರಸ್ತೆ ಮಾರ್ಗದಲ್ಲಿ ಮೋರಿ ನಿಮರ್ಾಣದ ಅಗತ್ಯವನ್ನು ಮನಗಂಡು ಇಲ್ಲಿನ ಬಹುಕಾಲದ ಬೇಡಿಕೆಗೆ ಕುಂದಾಪುರ ತಾಲೂಕು ಪಂಚಾಯತ್ ಸ್ಪಂದಿಸಿತ್ತು. ಅಂತೆಯೇ ಕಳೆದ ಫೆಬ್ರವರಿ ತಿಂಗಳಲ್ಲಿ ಇಲ್ಲಿ ಮೋರಿ ನಿಮರ್ಾಣ ಕಾಮಗಾರಿ ಆರಂಭಗೊಂಡಿತ್ತು. ತಾಲೂಕು ಪಂಚಾಯತ್ ಅನುದಾನ ನೆರವಿನ 1 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಆದರೆ ಮೋರಿಯ ಆಸುಪಾಸಿನಲ್ಲಿ ಸೂಕ್ತ ಬದಿ ಕಟ್ಟುವಿಕೆ ಕಾಮಗಾರಿಯನ್ನು ನಡೆಸದೇ ಕೆರೆಯ ಮಣ್ಣನ್ನು ತಂದು ಸುರಿದಿದ್ದರಿಂದ ಈ  ಮೋರಿಯ ಮೇಲೆ ಸಂಚರಿಸುವ ವಾಹನಗಳ ಸವಾರರು ಹಾಗೂ ಪ್ರಯಾಣಿಕರು ತೀವ್ರ ತೊಂದರೆಯನ್ನು ಅನುಭವಿಸುವಂತಾಗಿದೆ. 
      ಸೇನಾಪುರ ಮೋರಿ ಕಾಮಗಾರಿ ಆರಂಭಗೊಂಡು ತಿಂಗಳಾಗುತ್ತಾ ಬಂದರೂ ತೀರಾ ಆಮೆಗತಿಯಲ್ಲಿ ಸಾಗಿದ್ದರಿಂದ ಜನರು ಸಾಕಷ್ಟು ಸಮಸ್ಯೆಯನ್ನು ಎದುರಿಸುವಂತಾಗಿದೆ. ಮೋರಿ ನಿರ್ಮಾಣ ಕಾರ್ಯ ಆರಂಭಗೊಂಡಾಗ ಕೆಲಕಾಲ ಇಲ್ಲಿನ ರಸ್ತೆಮಾರ್ಗದಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದ್ದು, ಪಕ್ಕದ ಮಣ್ಣುರಸ್ತೆಯಲ್ಲಿ ಸಂಚಾರಕ್ಕಾಗಿ ಪಯರ್ಾಯ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಆದರೆ ಈ ರಸ್ತೆಯಲ್ಲಿ ವಾಹನಗಳ ಎಡೆಬಿಡದ ಸಂಚಾರದಿಂದಾಗಿ ಧೂಳಿನ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಸ್ಥಳೀಯ ನಿವಾಸಿಗಳ ಆರೋಗ್ಯಕ್ಕೆ ಸವಾಲನ್ನು ಒಡ್ಡಿತ್ತು. ಬಳಿಕ ಇಲ್ಲಿನ ಮೋರಿ ಕಾಮಗಾರಿ ಪೂರ್ಣಗೊಂಡು ಮೂರು ತಿಂಗಳುಗಳೇ ಕಳೆದರೂ ಮೋರಿಯ ಬದಿಕಟ್ಟುವಿಕೆ ಕಾರ್ಯ ನಡೆಯಲಿಲ್ಲ. ಮೋರಿಯ ಆಚೆ ಈಚೆ ರಸ್ತೆಗೆ ಜಲ್ಲಿ-ಡಾಮರು ಹಾಕುವ ಬದಲು ಕೆರೆಯ ಮಣ್ಣನ್ನು ತಂದು ಸುರಿದಿದ್ದರು. ಇದರಿಂದಾಗಿ ಮಳೆಗಾಲದಲ್ಲಿ ಈ ಮಾರ್ಗ ಕೆಸರುಗದ್ದೆಯಂತಾಗಿದ್ದು ಸಂಚಾರವನ್ನು ಮತ್ತಷ್ಟು ದುಸ್ತರಗೊಳಿಸಿದೆ. 
    ಮಳೆಗಾಲದ ಬಳಿಕ ಇಲ್ಲಿನ ಮೋರಿಯ ಆಸುಪಾಸಿನಲ್ಲಿ ಡಾಮರು ಹಾಕಲಾಗುವುದು ಎಂದು ಪಂಚಾಯತ್ರಾಜ್ ಇಂಜಿನಿಯರ್ ಶ್ರೀಧರ ಪಾಲೇಕರ್ ಅವರು ಭರವಸೆ ನೀಡಿದ್ದರು. ಆದರೆ ಇದೀಗ ಮಳೆಗಾಲ ಮುಗಿದು ತಿಂಗಳಾದರೂ ಸೇನಾಪುರ ಮೋರಿಯ ಸಮಸ್ಯೆ ಬಗೆಹರಿಯುವ ಲಕ್ಷಣಗಳೇ ಗೋಚರಿಸುತ್ತಿಲ್ಲ. ಜಲ್ಲಿ ಬಂದು ಬಿದ್ದಿದ್ದರೂ ಇಲ್ಲಿನ ಮೋರಿ ಆಸುಪಾಸಿನ ರಸ್ತೆಮಾರ್ಗಕ್ಕೆ ಡಾಮರು ಹಾಕುವ ಕಾರ್ಯ ನಡೆಯುವುದು ಇನ್ನೂ ಅನುಮಾನವೇ ಆಗಿದೆ. 
   
   ಗೋಳು ಕೇಳುವರಾರು ?
   ಸೇನಾಪುರ ರಸ್ತೆಮಾರ್ಗದಲ್ಲಿ ಮೋರಿ ನಿರ್ಮಾಣ  ರೂವಾರಿಯಾದ ಕುಂದಾಪುರ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಬೆಳ್ಳಾಡಿ ಶಂಕರ ಶೆಟ್ಟಿ ಅವರು ಮೋರಿ ಕಾಮಗಾರಿಯ ನಿಮರ್ಾಣದಲ್ಲಿನ ವಿಳಂಬ, ಕಾಮಗಾರಿಯ ಅಸಮರ್ಪಕತೆ ಮೊದಲಾದುವುಗಳ ಬಗ್ಗೆ ಸಾರ್ವಜನಿಕರ ದೂರುಗಳು ಕೇಳಿಬಂದಿದ್ದರೂ ಕ್ಯಾರೇ ಅನ್ನುತ್ತಿಲ್ಲ. ತಾಲೂಕು ಪಂಚಾಯತ್ ಅಧ್ಯಕ್ಷರಾದ ಬಳಿಕ ತಮ್ಮ ಸ್ವಕ್ಷೇತ್ರದಲ್ಲಿನ ರಸ್ತೆಮಾರ್ಗದಲ್ಲಿ ಈ ಮೋರಿ ನಿರ್ಮಾಣಕ್ಕೆ ಮುಂದಾಗುವ ಮೂಲಕ ಸ್ಥಳೀಯರ ಪ್ರಶಂಸೆಗೆ ಪಾತ್ರರಾಗಿದ್ದ ಅವರು, ಇಲ್ಲಿನ ಮೋರಿ ಸಮಸ್ಯೆಯನ್ನು ಬಗೆಹರಿಸುವಲ್ಲಿ ತೀರಾ ನಿಷ್ಕಾಳಜಿಯನ್ನು ತೋರಿದ್ದರ ಫಲವಾಗಿ ನಿತ್ಯಸಂಚಾರಿಗಳು ಸಂಚಾರದ ಅನಾನುಕೂಲತೆಗೆ ತುತ್ತಾಗುವಂತಾಗಿದೆ. ಏತನ್ಮಧ್ಯೆ ಇಂಜಿನಿಯರ್ ಸಾಹೇಬರು ನೀಡಿದ್ದ ಭರವಸೆಯ ಮಾತು ಕೇವಲ ಭರವಸೆಯಾಗಿಯೇ ಉಳಿದಿದ್ದು, ರಾಜಕಾರಣಿಗಳ ವಾಗ್ದಾನದಂತಾಗಿದೆ. ಒಟ್ಟಿನಲ್ಲಿ ಸೇನಾಪುರ ಜನಸಾಮಾನ್ಯರು ಮಾತ್ರ ಇಲ್ಲಿನ ಮಾರ್ಗದಲ್ಲಿ ಏದುಸಿರು ಬಿಡುತ್ತಾ ನಿತ್ಯ ಸಂಚರಿಸುವಾಗ ಇಲ್ಲಿ ಮೋರಿಯಿಲ್ಲದಿದ್ದರೇನೇ ಚೆನ್ನಾಗಿತ್ತಪ್ಪಾ ಎಂದುಕೊಳ್ಳುವಂತಾಗಿದೆ. ಜನೋಪಯೋಗಿ ಕಾಮಗಾರಿಯೊಂದು ಅನುಷ್ಠಾನಗೊಂಡರೂ ಇಲ್ಲಿನ ರಸ್ತೆಮಾರ್ಗದಲ್ಲಿ ನಿತ್ಯವೂ ಸಂಚರಿಸುವ ಸಾರ್ವಜನಿಕರಿಗೆ ಮಾತ್ರ ಪ್ರಯೋಜನಕ್ಕಿಂತ ತೊಂದರೆಯೇ ಹೆಚ್ಚಾಗಿರುವುದು ದುರದೃಷ್ಟಕರವೇ ಸರಿ. 
ಚಿತ್ರ ವರದಿ:-ಚಂದ್ರ ಕೆ. ಹೆಚ್