ತಾಲೂಕು ಸಮ್ಮೇಳನಾಧ್ಯಕ್ಷರಾಗಿ ಯು. ಚಂದಶೇಖರ ಹೊಳ್ಳ ಆಯ್ಕೆ

ಕುಂದಾಪುರ: ಡಿಸೆಂಬರ್ 15 ಮತ್ತು 16 ರಂದು ಬೈಂದೂರಿನಲ್ಲಿ ನಡೆಯುವ ಕುಂದಾಪುರ ತಾಲೂಕು 12ನೇಯ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಮಾಜಿ ಜಿಲ್ಲಾ ಕ. ಸಾ.ಪ. ಅಧ್ಯಕ್ಷರೂ 74ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಧಾನಕಾರ್ಯದರ್ಶಿಯಾಗಿ ಶ್ರಮಿಸಿದ ಸಾಹಿತಿ, ಸಂಘಟಕ ಉಪ್ಪುಂದ ಚಂದ್ರಶೇಖರ ಹೊಳ್ಳರನ್ನು ಕುಂದಾಪುರ ತಾಲೂಕು ಕ. ಸಾ.ಪ ಕಾರ್ಯಕಾರಿ ಸಮಿತಿಯು ಸ್ವಾಗತ ಸಮಿತಿಯ ಶಿಫಾರಸ್ಸಿನಂತೆ ಸರ್ವಾನು ಮತದಿಂದ ಆಯ್ಕೆ ಮಾಡಿದೆ.
   ಇವರು 4 ಕವನ ಸಂಕಲನಗಳನ್ನು, 4 ಪ್ರವಾಸ ಕಥನಗಳನ್ನು, 4 ಸಂಶೋಧನಾ ಅಧ್ಯಯನ ಗ್ರಂಥಗಳಲ್ಲದೆ, ಒಟ್ಟು 16 ಸಾಹಿತ್ಯ ಕೃತಿ ರಚಿಸಿರುತ್ತಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನೆಯ ಮುಂಚೂಣಿ ನಾಯಕನಾಗಿ 1997 ರಿಂದ ಸತತ 7 ವರ್ಷ ತಾಲೂಕು ಅಧ್ಯಕ್ಷರಾಗಿ ನಂತರದ 3 ವರೆ ವರ್ಷ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
           ತಾಲೂಕಿನಾದ್ಯಂತ ವಿವಿಧ ಸಂಘ ಸಂಸ್ಥೆಗಳ ಸ್ಥಾಪಕರಾಗಿ, ಮಾರ್ಗದರ್ಶಕರಾಗಿ, ಪೋಷಕರಾಗಿ, ಶಂಕರ ಕಲಾ ಮಂದಿರ, ಶಂಕರ ಆರ್ಟ್ ಗ್ಯಾಲರಿ, ಕುಂದ ಅಧ್ಯಯನ ಕೇಂದ್ರ, ಸುರಭಿ ಕಲಾ ಶಾಲೆ ಬೈಂದೂರು, ಮಹಾದೇವ ಅಕಾಡೆಮಿ ಬಿಜೂರು, ಮಧ್ಯಮಾವತಿ ಶಿರೂರು ಇದರ ಬೆನ್ನೆಲುಬಾಗಿದ್ದಾರೆ. ಮರವಂತೆಯ ದಾಸ ಗೃಹ ನಿರ್ಮಾಣ, ಹಂಗಾರಕಟ್ಟೆ ಯಕ್ಷಗಾನ ಕೇಂದ್ರದ ಕಲಾಮಂದಿರ ನಿರ್ಮಾಣ ಕಾರ್ಯಗಳ ಕಾರ್ಯಾಧ್ಯಕ್ಷರಾಗಿದ್ದಾರೆ
           ಇವರ ಹುಟ್ಟೂರು ಉಪ್ಪುಂದವನ್ನು ರಾಜ್ಯದ ಸಾಂಸ್ಕೃತಿಕ ಕೇಂದ್ರಗಳಲ್ಲಿ ಒಂದನ್ನಾಗಿಸಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕುಂದಾಪುರ ನಾರಾಯಣ ಖಾರ್ವಿಯವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.