ಅಂತಾರಾಷ್ಟ್ರೀಯ ಗುಣಮಟ್ಟದ ಯುವ ಮೆರಿಡಿಯನ್ ಕನ್‌ವೆನ್‌ಷನ್ ಸೆಂಟರ್ ಲೋಕಾರ್ಪಣೆ
ಕುಂದಾಪುರ: ತಾಲೂಕಿನ ಕೋಟೇಶ್ವರದ ಹಾಲಾಡಿ ರಸ್ತೆಯ ಪ್ರಪುಲ್ಲಾ ಎನ್‌ಕ್ಲೇವ್ ವಠಾರದಲ್ಲಿ ನಿರ್ಮಾಣಗೊಂಡಿರುವ ಅಂತರಾಪ್ಟ್ರೀಯ ಗುಣಮಟ್ಟದ ಬೃಹತ್ ಸಭಾಂಗಣ ಯುವ ಮೆರಿಡಿಯನ್ ಕನ್‌ವೆನ್‌ಷನ್ ಸೆಂಟರ್ ಲೋಕಾರ್ಪಣೆಗೋಂಡಿತು. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಕನ್‌ವೆನ್‌ಷನ್ ಸೆಂಟರ್‌ನ್ನು ಉದ್ಘಾಟಿಸಿದರು.
ಮಿನಿ ಸಭಾಂಗಣ ಉದ್ಘಾಟಿಸಿದ ಉಪಮುಖ್ಯಮಂತ್ರಿ ಆರ್. ಅಶೋಕ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಇಂದಿನ ಜನರಿಗೆ ಬದಲಾವಣೆ ಬೇಕಾಗಿದೆ. ಅವರು ಗುಣಮಟ್ಟ ಹಾಗೂ ಆರಾಮದಾಯಕಕ್ಕೆ ಹೆಚ್ಚಿನ ಪ್ರಾಶಸ್ತ ನೀಡುತ್ತಾರೆ. ಈ ನಿಟ್ಟಿನಲ್ಲಿ ಬದಲಾವಣೆ ತರುವಲ್ಲಿ ಯುವ ಮೆರಿಡಿಯನ್ ಸಭಾಂಗಣ ಯಶಸ್ವಿ ದಾಪುಗಾಲು ಹಾಕಿದೆ. ಇಂತಹ ಸಭಾಂಗಣ ಕರ್ನಾಟಕದಲ್ಲಿ ಎಲ್ಲಿಯೂ ಇಲ್ಲ. ಇದು ಈ ನಾಡಿಗೆ ಶೆಟ್ಟಿ ಸಹೋದರರು ನೀಡಿದ ಅಮೂಲ್ಯ ಕೊಡುಗೆ ಎಂದರು.

ಪುಟಾಣಿಗಳು ಯಕ್ಷಗಾನ ವೇಷ ಧರಿಸಿ ಸಾಂಪ್ರದಾಯಿಕವಾಗಿ ಯಕ್ಷಗಾನ ಶೈಲಿಯಲ್ಲಿ ಅತಿಥಿಗಳನ್ನು ಸ್ವಾಗತಿಸಿದರು. ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಸಹಕರಿಸಿದವರನ್ನು ಸಮ್ಮಾನಿಸಲಾಯಿತು. ಕಾರ್ಪೋರೇಶನ್ ಬ್ಯಾಂಕಿನ ನಿವೃತ್ತ ಜಿ.ಎಂ.ಎಸ್. ಜಯಕರ ಶೆಟ್ಟಿ ಸ್ವಾಗತಿಸಿದರು. ಬೆಳ್ಳಿಪಾಡಿ ಹರಿಪ್ರಸಾದ್ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತ ಮನೋಹರ್ ಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು. ನೀತಾ ಶೆಟ್ಟಿ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಅನುಪಮ ನಿರಂಜನ್ ನೃತ್ಯಾಲಯದವರಿಂದ ನೃತ್ಯ ಪ್ರದರ್ಶನ ಜರಗಿತು.
ಬೈಲೂರು ಉದಯಕುಮಾರ್ ಶೆಟ್ಟಿ ಹಾಗೂ ವಿನಯಕುಮಾರ್ ಶೆಟ್ಟಿ ಸಹೋದರರ ಪಾಲುದಾರಿಕೆಯಲ್ಲಿ ಮೂಡಿ ಬಂದಿರುವ ಈ ಸೆಂಟರ್ ವಿಶ್ವ ಮಟ್ಟದ ಸವಲತ್ತುಗಳ ಜೊತೆಗೆ ಅತ್ಯಾಧುನಿಕ ಹಾಗೂ ಕಲಾತ್ಮಕ ಶೈಲಿಯನ್ನೊಳಗೊಂಡು ಎಲ್ಲರ ಮನಸೂರೆಗೊಳಿಸಿದೆ.
ಸ್ವ ಉದ್ಯೋಗದಿಂದ ದೇಶ ನಿರ್ಮಾಣ ಸಾಧ್ಯ: ಡಾ| ವೀರೇಂದ್ರ ಹೆಗ್ಗಡೆ
ಯುವ ಮೆರಿಡಿಯನ್ ಕನ್‌ವೆನ್ಶನ್ ಸೆಂಟರ್‌ನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ, ನಮ್ಮ ಸುತ್ತಮುತ್ತಲಿನಲ್ಲಿರುವ ವಿಫುಲ ಅವಕಾಶಗಳನ್ನು ಬಳಸಿಕೊಂಡು ಯುವಕರು ಸ್ವ ಉದ್ಯೋಗದತ್ತ ಮುಂದಡಿ ಇಟ್ಟು ದೇಶ ಕಟ್ಟುವ ಕಾರ್ಯದಲ್ಲಿ ಪಾಲುದಾರರಾಗಬೇಕಾಗಿದೆ. ಹೀಗೆ ಅದ್ಭುತ ಕಲ್ಪನೆಯ, ಅತ್ಯಂತ ಸುಂದರ ಹಾಗೂ ಹೃದಯಕ್ಕೆ ಹತ್ತಿರವಾಗಬಲ್ಲ ಸುಂದರ ಕನ್‌ವೆನ್ಶನ್ ಸೆಂಟರ್‌ನ್ನು ನಿರ್ಮಿಸಿದ ಈ ಯುವಕರ ಸಾಹಸ ನಮ್ಮ ಊರಿನ ಹಾಗೂ ನಾಡಿನ ಘನತೆ ಹೆಚ್ಚಿಸಿದೆ. ಈ ಅದ್ಭುತ ಕಾರ್ಯದಿಂದ ಯುವಕರು ಇತರರಿಗೆ ಮಾದರಿಯಾಗಿದ್ದಾರೆ. ಉದಯ ಕುಮಾರ್ ಶೆಟ್ಟಿ ಹಾಗೂ ವಿನಯ ಕುಮಾರ್ ಶೆಟ್ಟಿ ಅವr ಈ ಸುಂದರ ಕಲ್ಪನೆ ಇತರ ಉದ್ಯಮಿಗಳಿಗೆ ಮಾದರಿಯಾಗಿದ್ದು, ಇಂತಹ ಪ್ರಜ್ಞೆ ದೇಶದ ಇತರ ಉದ್ಯಮಿಗಳಲ್ಲಿ ಬಂದಲ್ಲಿ ಸರಕಾರದ ಅಭಿವೃದ್ಧಿ ಕಾರ್ಯದಲ್ಲಿ ಪಾಲುದಾರಾಗಲು ಸಾಧ್ಯ. ವಿಶ್ವ ಮಟ್ಟದ ಸವಲತ್ತುಗಳನ್ನು ಹೊಂದಿರುವ ಸಭಾಂಗಣ ಎಲ್ಲ ರೀತಿಯ ಕಾರ್ಯಕ್ರಮಗಳಿಗೆ ಯೋಗ್ಯವಾಗಲಿ. ಕರಾವಳಿ ಜಿಲ್ಲೆಗಳಲ್ಲಿ ಮೊದಲ ಬಾರಿಗೆ ಇಷ್ಟೊಂದು ಬೃಹತ್ತಾದ, ಆತ್ಯಾಧುನಿಕ ಮತ್ತು ಕಲಾತ್ಮಕ ಶೈಲಿಯ ಸಭಾಭವನ ನಿರ್ಮಿಸಿರುವುದು ಉಡುಪಿ ಜಿಲ್ಲೆಗೆ ಹೊಸ ಮೆರಗು ನೀಡಲಿದೆ ಎಂದರು.
ಕುಂದಾಪ್ರ ಡಾಟ್ ಕಾಂ - editor@kundapra.com