ಬೈಂದೂರಿನಲ್ಲಿ ಸಾಹಿತ್ಯದ ಹಬ್ಬಕ್ಕೆ ಚಾಲನೆ.

ಬೈಂದೂರು: ಅಚ್ಚ ಗ್ರಾಮೀಣ ಸೊಗಡನ್ನು ಉಳಿಸಿಕೊಂಡು ಅಭಿವೃದ್ಧಿಯತ್ತ ದಾಪುಗಾಲಿಡುತ್ತಿರುವ ಬೈಂದೂರಿನಲ್ಲಿ ಇಂದು ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ದೊರೆಯಿತು. ಬೈಂದೂರಿನ ರಾಜ ರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ಕುಂದಾಪುರ  ಕನ್ನಡ ಸಾಹಿತ್ಯ ಪರಿಷತ್ತು ಇದರ 12ನೇ ತಾಲೂಕು ಸಾಹಿತ್ಯ ಸಮ್ಮೇಳನವನ್ನು ಸಂಸದ ಬಿ. ವೈ. ರಾಘವೇಂದ್ರ ಉದ್ಘಾಟಿಸಿದರು.

12ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಶನಿವಾರ ಬೆಳಗ್ಗೆ ಬೈಂದೂರು ಸೀತಾರಾಮಚಂದ್ರ ದೇವಸ್ಥಾನದ ವಠಾರದಿಂದ ಸಮ್ಮೇಳನ ವೇದಿಕೆ ತನಕ ಸಂಭ್ರಮದ ಮೆರವಣಿಗೆ ನಡೆಯಿತು. ಜಿ.ಪಂ.ಸದಸ್ಯ ಬಾಬು ಶೆಟ್ಟಿ ಮೆರವಣಿಗೆ ಉದ್ಘಾಟಿಸಿದರು. ಸಮ್ಮೇಳನಾಧ್ಯಕ್ಷ ಉಪ್ಪುಂದ ಚಂದ್ರಶೇಖರ ಹೊಳ್ಳ ಅವರನ್ನು ಹೊತ್ತ ಸಾಲಂಕೃತ ವಾಹನದೊಂದಿಗೆ ಅರ್ಧತಾಸಿಗೂ ಮಿಕ್ಕಿ ಮೆರವಣಿಗೆ ನಡೆಯಿತು. ಬೈಂದೂರು ನಾಗರಿಕರು ಸಮ್ಮೇಳನಾಧ್ಯಕ್ಷರನ್ನು ಆದರದಿಂದ ಬರಮಾಡಿಕೊಂಡರು. 
    ಕುಂದಾಪುರ ಸಹಾಯಕ ಕಮಿಷನರ್ ಬಿ.ಸದಾಶಿವ ಪ್ರಭು ರಾಷ್ಟ್ರಧ್ವಜಾರೋಹಣ ಹಾಗೂ ಕಸಾಪ ತಾಲೂಕು ಅಧ್ಯಕ್ಷ ನಾರಾಯಣ ಖಾರ್ವಿ ಪರಿಷತ್ ಧ್ವಜಾರೋಹಣ ನೆರವೇರಿಸಿದರು.  ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎ.ಎಸ್.ಎನ್.ಹೆಬ್ಬಾರ್ ಚಿತ್ರಕಲೆ ಮತ್ತು ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿದರು. ಶಾಸಕ ಕೆ.ಲಕ್ಷ್ಮೀನಾರಾಯಣ ಪುಸ್ತಕ ಮಳಿಗೆ ಹಾಗೂ ಜಾನಪದ ವಸ್ತು ಪ್ರದರ್ಶನ ಮಳಿಗೆ ಉದ್ಘಾಟಿಸಿದರು.

          ದೀಪ ಬೆಳಗಿಸಿ ಸಮ್ಮೇಳನಕ್ಕೆ ಚಾಲನೆ ನಿಡಿದ ಸಂಸದ ರಾಘವೇಂದ್ರ ಮಾತನಾಡಿ  ಕಲೆ-ಸಾಹಿತ್ಯ-ಸಾಸ್ಕ್ರತಿಕ ಕ್ಷೇತ್ರಕ್ಕೆ ಕುಂದಾಪುರದ ಕೊಡುಗೆ ಅಪಾರ. ಸಾಹಿತ್ಯ ಸಿನೇಮಾ, ಶೈಕ್ಷಣಿಕ ರಂಗದ ಹಲವಾರು ಖ್ಯಾತನಾಮರನ್ನು ಪರಿಚಯಿಸಿದ ಕೀರ್ತಿ ಕುಂದಾಪುರದ್ದು ಎಂದರು.
      ಇಂದು ಜೀವನ ಮೌಲ್ಯಗಳು ಬದಲಾಗುತ್ತಿದ್ದು ನೀತಿಪಾಠಗಳು ಕಣ್ಮರೆಯಾಗುತ್ತಿವೆ. ವೇಗದ ಬದುಕಿಗೆ ಅಂಟಿಕೊಂಡಿರುವ ಯುವಜನರು ಶೀಘ್ರ ಫಲಾಪೇಕ್ಷಿಗಳಾಗುತ್ತಿದ್ದಾರೆ. ಈ ಕಾರಣದಿಂದಲೇ ಯುವಕರುಗಳು ಸಾಹಿತ್ಯದಿಂದ ವಿಮುಖರಾಗುತ್ತಿದ್ದಾರೆ. ಸಹಿ ಎನ್ನುವುದು ಹಸ್ತಾಕ್ಷರವಾಗುವರೆಗೂ ತಮ್ಮ ಕರ್ತವ್ಯದ ಕಡೆಗೆ ಕಾರ್ಯಪ್ರವೃತ್ತರಾಗುವ, ಕಾಯುವ  ಮನೋಭಾವವನ್ನು ಯುವಕರು ಬೆಳೆಸಿಕೊಳ್ಳಬೇಕಾಗಿದೆ ಎಂದರು.
        ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಅಧ್ಯಕ್ಷ ಯು. ಚಂದ್ರಶೇಖರ್ ಹೊಳ್ಳ  ಸಮ್ಮೇಳನಾಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ 3ನೇ ಹಣಕಾಸು ಸುಧಾರಣಾ ಆಯೋಗದ ಅಧ್ಯಕ್ಷ ಎ. ಜಿ. ಕೊಡ್ಗಿ, ಕುಂದಾಪುರ ಸಹಾಯಕ ಕಮೀಷನರ್ ಸದಾಶಿವ ಪ್ರಭು, ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಪುಂಡಲೀಕ ಹಾಲಂಬಿ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಬೈಂದೂರು ಶಾಸಕ ಕೆ. ಲಕ್ಷ್ಮೀನಾರಾಯಣ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾಧ್ಯಕ್ಷ ಎ.ಎಸ್.ಎನ್. ಹೆಬ್ಬಾರ್ , ಉಡುಪಿ ಜಿಲ್ಲಾ ಸ್ಥಾಯಿ ಸಮಿತಿ ಅಧ್ಯಕ್ಷ ಭಾಬು ಶೆಟ್ಟಿ, ತಾಲೂಕಿನ ವಿಶೇಷ ತಾಹಶೀಲ್ದಾರ ರಾಜು ಮೊಗವೀರ, ರೋಟರಿಯ ಮಾಜಿ ಗವರ್ನರ್ ಜಗನ್ನಾಥ ಶೆಟ್ಟಿ, ಉದ್ಯಮಿ ಗೋಪಾಲಕೃಷ್ಣ ಕಲ್ಮಕ್ಕಿ ಉಪಸ್ಥಿತರಿದ್ದರು.
        ಒಳ್ಳೆಯ ಊಟೋಪಚಾರ, ಬೆಂಗಳೂರು ಸೇರಿದಂತೆ ನಾನಾ ಕಡೆಯ ಪುಸ್ತಕ ಮಳಿಗೆ, ಜಾನಪದ ವಸ್ತುಪ್ರದರ್ಶನ, ಚಿತ್ರಕಲೆ, ಛಾಯಾಚಿತ್ರ ಪ್ರದರ್ಶನ, ಬೈಂದೂರು ವಲಯದ ಅಸಂಖ್ಯ ವಿದ್ಯಾರ್ಥಿಗಳ ಭಾಗವಹಿಸುವಿಕೆ ಮುಂತಾದವುಗಳಿಂದ ಅಕ್ಷರಜಾತ್ರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.


     12ನೇ ತಾಲೂಕು ಸಾಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾದ ಜಯಾನಂದ ಹೋಬಳಿದಾರ್ ಸ್ವಾಗತಿಸಿ, ಗಣಪತಿ ಹೋಬಳಿದಾರ್ ನಿರೂಪಿಸದರು.