ಮನಸ್ಸೇ ಓ ಮನಸೇ ಎಂಥಾ ಮನಸೇ ?


            ಜಗತ್ತಿನ ಅದ್ಬುತಗಳಲ್ಲಿ ಒಂದಾದ ಮನಸ್ಸು ಕಣ್ಣಿಗೆ ಕಾಣದ, ಕೈಗೆ ಸಿಗದ ಅದು ಅನುಭವಕ್ಕೆ ಮಾತ್ರ ಸಿಗುವಂತಹದು. ಅದರ ಆಳ ವಿಸ್ತಾರವನ್ನು ಅರಿತವರಿಲ್ಲ. ಮನಸ್ಸಿನ ಕಾರ್ಯವೈಖರಿಯ ಬಗ್ಗೆ ತಿಳಿಯಲು ಎಷ್ಟೇ ಪ್ರಯತ್ನಪಟ್ಟರು ಅದರ ಬಗ್ಗೆ ಪೂರ್ಣ ಮಾಹಿತಿಇದುವರೆಗೂ ದೊರೆತಿಲ್ಲ.
         ಹರೆಯ ನಮ್ಮ ಜೀವನದಲ್ಲಿ ಒಂದು ಅತ್ಯಂತ ಮಹತ್ವದ ಘಟ್ಟ. ಈ ಅವಧಿಯಲ್ಲಿ ನಮ್ಮ ಮನಸ್ಸು ನಿಂತ ಕಡೆ ನಿಲ್ಲುವಂತಹುದಲ್ಲ ಅಂದರೆ ನಮ್ಮ ನಿಯಂತ್ರಣಕ್ಕೆ ಸಿಗುವುದಿಲ್ಲ. ಅದುವರೆಗೆ ಮುಗ್ಧತೆಯೇ ಮೈವೆತ್ತಂತೆ, ಕಲ್ಪನಾ ಲೋಕದಲ್ಲೇ ವಿಹರಿಸ ಬಯಸುವ ಮಗುವಿನ ಮನಸ್ಸು ವೇಗವಾಗಿ ಬೆಳೆದು ಪ್ರೌಡವಾಗುವ ಗಮನಾರ್ಹ ಅವಧಿ. ಪ್ರತಿಯೊಂದಕ್ಕೂ ತಂದೆ ತಾಯಿ, ಹಿರಿಯರನ್ನು ಅವಲಂಬಿಸುವ ಮಗು ಸ್ವತಂತ್ರವಾಗಿ ತನ್ನ ಸಮಸ್ಯೆಯನ್ನು ತಾನೇ ಬಗೆಹರಿಸಿಕೊಳ್ಳಲು ಇನ್ನೊಬ್ಬರಿಗೆ ಸಮಾಧಾನ ನೀಡಲು, ಮುಂದೆ ನಾನೇನಾಗಬೇಕೆಂದು ಚಿಂತಿಸಲು ಆರಂಭಿಸುತ್ತದೆ. ಸಾಮಾನ್ಯವಾಗಿ 12 ವಯಸ್ಸಿನಿಂದ 20 ಅಥವಾ 21 ವರ್ಷ ವಯುಸ್ಸಿನವರೆಗೆ ಈ ಅವಧಿ ವಿಸ್ತರಿಸುತ್ತದೆ. ತಾವಿನ್ನು ಅಸಹಾಯಕಲ್ಲ, ಎಳೇ ನಿಂಬೆ ಕಾಯಿಗಳಲ್ಲ, ಹಿರಿಯರನ್ನು ಎಲ್ಲದಕ್ಕೂ ಆಶ್ರಯಿಸಬೇಕಿಲ್ಲ. ತಮ್ಮ ಹೊರ ರೂಪ ಅಲಂಕಾರಗಳಿಗೆ ಪ್ರಾಮುಖ್ಯತೆ , ಸಮಾಜ ನನ್ನನ್ನು ಗುರುತಿಸಬೇಕೆಂಬ ಹಂಬಲ ಇದೆಲ್ಲವು ಈ ಅವಧಿಯಲ್ಲಿ ಸಹಜ. ಮನಸ್ಸು ಸೂಕ್ಷ್ಮ. ಇತರಿಂದ ಯಾವುದೇ ರೀತಿಯ ನೋವಾಗುವಂತಹ ಘಟನೆ ನಡೆದರೆ ಅದನ್ನು ಸಹಿಸುವ ಶಕ್ತಿಯಾಗಲಿ, ತಾಳ್ಮೆಯಾಗಲಿ ನಮ್ಮ ಈ ಮೃದು ಮನಸ್ಸಿಗಿಲ್ಲ.
       ಮನಸ್ಸೇ ಹಾಗೆ ಕೆಲವೊಮ್ಮೆ ನೂರಾರು ಯೋಚನೆಗಳು, ಕೆಲವೊಮ್ಮೆ ಶಾಂತ ಸಾಗರದಂತಿರುತ್ತದೆ. ಇನ್ನೂ ಕೆಲವೊಮ್ಮೆ ತಟಸ್ಥವಾಗಿರುತ್ತೆ. ಜೀವನದಲ್ಲಿ ನಮ್ಮನ್ನು ಎಂತಹ ಅದ್ಭುತ ಲೋಕಕ್ಕೂ ಕರೆದುಕೊಂಡು ಹೋಗುವ ಸಾಮರ್ಥ ಮನಸ್ಸಿಗಿದೆ. ಆದ್ದರಿಂದ ಮನಸ್ಸಿಗಿಂತ ಮಿಗಿಲಾದದ್ದು ಯಾವುದು ಇಲ್ಲ ಈ ಜಗತ್ತಿನಲ್ಲಿ.
                                                                  -ಚೈತ್ರಾ ಚಂದನ್ ಪಡುಕೋಣೆ





ಕುಂದಾಪ್ರ ಡಾಟ್ ಕಾಂ- editor@kundapra.com