ಭಂಡಾರ್‌ಕಾರ್ಸ್‌ ಕಾಲೇಜು: ವಿದ್ಯಾರ್ಥಿ ವಿಜ್ಞಾನಿ ನೇರ ಸಂಪರ್ಕ ಕಾರ್ಯಕ್ರಮ

ಕುಂದಾಪುರ: ಸಾಕ್ಷರರ ಜಿಲ್ಲೆ ಎನಿಸಿಕೊಂಡಿರುವ ಕರಾವಳಿಯಲ್ಲಿ ವೈಜ್ಞಾನಿಕ ಮನೋಭೂಮಿಕೆ ಕೊರತೆ ಎದ್ದು ಕಾಣುತ್ತಿದೆ. ವೈಜ್ಞಾನಿಕ ತಳಹದಿಯಿಂದ ಕೂಡಿದ ಶಿಕ್ಷಣದಿಂದ ಮಾತ್ರ ಸಮಸ್ಯೆ ಪರಿಹಾರ ಸಾಧ್ಯವಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ಎಂ.ಟಿ.ರೇಜು ಹೇಳೀದರು.
     ಅವರು ಭಂಡಾರ್‌ಕಾರ್ಸ್‌ ಕಾಲೇಜಿನ ಆರ್.ಎನ್.ಶೆಟ್ಟಿ ಸಭಾಂಗಣದಲ್ಲಿ ಕರ್ನಾಟಕ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ದಾರ್ಶನಿಕ ಸಮೂಹ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ, ತಂತ್ರಜ್ಞಾನ ಇಲಾಖೆ, ಕರ್ನಾಟಕ ವಿಜ್ಞಾನ ವಿದ್ಯಾ ಜಾಗತಿ ಉಡುಪಿ ಹಾಗೂ ಭಂಡಾರ್‌ಕಾರ್ಸ್‌ ಕಾಲೇಜು ಆಶ್ರಯದಲ್ಲಿ ಹಮ್ಮಿಕೊಂಡ ವಿದ್ಯಾರ್ಥಿ ವಿಜ್ಞಾನಿ ನೇರ ಸಂಪರ್ಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
          ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುವ ಅಗತ್ಯತೆ ಇದೆ. ಇದರಿಂದ ಉತ್ತಮ ಸಾಮಾಜಿಕ ದೃಷ್ಟಿಕೋನ ಕಂಡುಕೊಳ್ಳಬಹುದು. ನಮ್ಮಲ್ಲಿ ಮೀನುಗಾರಿಗೆ, ವ್ಯಾಪಾರಿಕರಣ, ಕಷಿ ಚಟುವಟಿಕೆ ಸೇರಿದಂತೆ ದಿನ ನಿತ್ಯದ ಕಾರ್ಯಗಳಲ್ಲೂ ನಮ್ಮಲ್ಲಿ ಅಡಕವಾಗಿರುವ ವಿಜ್ಞಾನದ ತತ್ವಗಳನ್ನು ನಾವೇ ಅನುಸರಿಸಿಕೊಂಡು ಬೆಳೆಯಬೇಕಾಗಿದೆ ಎಂದು ಅವರು ಹೇಳಿದರು.
          ಮಣಿಪಾಲ ಅಕಾಡೆಮಿ ಆಡಳಿತಾಧಿಕಾರಿ ಡಾ.ಎಚ್.ಶಾಂತಾರಾಮ್ ಅಧ್ಯಕ್ಷತೆ ವಹಿಸಿದ್ದರು. ಪ್ರಿನ್ಸಿಪಾಲ್‌ ಪ್ರೊ.ದೋಮ ಚಂದ್ರಶೇಖರ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ನ ಕಾರ್ಯಕಾರಿ ಸಮಿತಿ ಸದಸ್ಯರಾದ ಟಿ.ಜಿ.ಪ್ರೇಮ್‌ಕುಮಾರ್, ನಾಗೇಶ್ ಅರಳುಕಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ನಾಗೇಂದ್ರ ಮಧ್ಯಸ್ಥ, ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕಕುಮಾರ್, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಜಿ.ಎಂ.ಗೊಂಡ, ನಿವೃತ್ತ ಪ್ರಿನ್ಸಿಪಾಲ್ ಎನ್.ಎ.ಮಧ್ಯಸ್ಥ ಉಪಸ್ಥಿತರಿದ್ದರು. ಉಜಿರೆ ಎಸ್‌ಡಿ‌ಎಂ ಕಾಲೇಜಿನ ಔಷಧೀಯ ರಸಾಯನಶಾಸ್ತ್ರ ಮುಖ್ಯಸ್ಥ ಡಾ.ಬಿ.ಶಿವರಾಮ ಹೊಳ್ಳ ವಿಶೇಷ ಉಪನ್ಯಾಸ ನೀಡಿದರು. 
            ಕೋಲಾರದ ವಿಜ್ಞಾನಿ ಪ್ರೊ.ವಿ.ಎಸ್.ಎಸ್.ಶಾಸ್ತ್ರಿ ನೀವೂ ವಿಮಾನ ಹಾರಿಸಿ, ಬೆಂಗಳೂರು ವಿಜ್ಞಾನಿ ಕೆ.ಎಸ್.ಪಿ.ಸಿ.ಟಿಯ ಡಾ.ಲಕ್ಷ್ಮೀಕಾಂತ್ ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ, ದಾವಣಗೆರೆಯ ವಿಜ್ಞಾನಿ ಮಹಿಧರ ಗಣಿತವಿಲ್ಲದ ಪ್ರಪಂಚ ಎಂಬ ವಿಷಯಗಳ ಬಗ್ಗೆ ವಿಷಯ ಮಂಡಿಸಿದರು. ವಿಜ್ಞಾನಿ ಪ್ರಜ್ವಲ್ ಶಾಸ್ತ್ರೀ ಮಾಹಿತಿ ಮಾರ್ಗದರ್ಶನ ನೀಡಿದರು. ನೇರ ಸಂವಾದ ಕಾರ್ಯಕ್ರಮದ ಜಿಲ್ಲಾ ಕಾರ್ಯಾಧ್ಯಕ್ಷ ಯು.ಆರ್.ಮಧ್ಯಸ್ಥ ಸ್ವಾಗತಿಸಿದರು. ಕರಾವಿಪ ಜಿಲ್ಲಾ ಸಂಚಾಲಕ ದಿನೇಶ್ ಶೆಟ್ಟಿಗಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪನ್ಯಾಸಕ ಸತ್ಯನಾರಾಯಣ ಕಾರ್ಯಕ್ರಮ ನಿರ್ವಹಿಸಿದರು. ಅಶೋಕ ಕಾಮತ್ ವಂದಿಸಿದರು.
ಕುಂದಾಪ್ರ.ಕಾಂ- editor@kundapra.com