4ನೇ ಅ. ಕ. ಬೆಳದಿಂಗಳ ಸಾಹಿತ್ಯ ಸಮ್ಮೇಳನ: ಅಧ್ಯಕ್ಷರಾಗಿ ಡಾ.ದೊಡ್ಡರಂಗೇ ಗೌಡ ಆಯ್ಕೆ

ಕುಂದಾಪ್ರ ಡಾಟ್ ಕಾಂ: 4ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಹೆಬ್ರಿಯ ನವೋದಯ ವಿದ್ಯಾಲಯದಲ್ಲಿ ಡಿಸೆಂಬರ್ 28 ರಂದು ಸಂಜೆ ನಡೆಯಲಿದೆ. 

       ಸಾಹಿತಿ, ವಿಧಾನ ಪರಿಷತ್ ಸದಸ್ಯ ಡಾ.ದೊಡ್ಡರಂಗೇಗೌಡ ಸಮ್ಮೇಳನಾಧ್ಯಕ್ಷತೆ ವಹಿಸುವರು.ವಿವಿಧ ಗೋಷ್ಥಿಗಳು ಸೇರಿದಂತೆ ಮಕ್ಕಳ ಪ್ರತಿಭೋತ್ಸವ ಮತ್ತು ಗೌರವ, ಬೆಳದಿಂಗಳ ಸಾಹಿತ್ಯ ಸಮ್ಮೇಳನ ಗೌರವ, ಸಾಂಘಿಕ ಸಾಧನಾ ಗೌರವ ಸಮಾರಂಭ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮಗಳು ಡಿ. 28 ರ ಸಂಜೆಯಿಂದ ಡಿ.29 ರ ಬೆಳಗಿನ ತನಕ ನಡೆಯಲಿದೆ.

ಮಕ್ಕಳ ಪ್ರತಿಭೋತ್ಸವ ಮತ್ತು ಗೌರವ : ಸಂಜೆ 6ರಿಂದ ಆರಂಭವಾಗುವ ನವ ಪ್ರತಿಭೋತ್ಸವ ಮತ್ತು ಗೌರವ ಕಾರ್ಯಕ್ರಮವನ್ನು ನಾಡಿನ ಗಮನ ಸೆಳೆದಿರುವ ಬಾಲಪ್ರತಿಭೆ ಅಯನಾ ವಿ. ರಮಣ್, ಮೂಡುಬಿದಿರೆ ಉದ್ಘಾಟಿಸುವರು. ಪ್ರಥ್ವಿ ಓಕುಡ, ಬೆಂಗಳೂರು, ವೈಷ್ಣವಿ. ಆರ್, ಮಣಿಪಾಲ, ಆರಾಧನಾ ಎನ್.ಕೆ, ಮಂಗಳೂರು, ಸುಮಿತ್.ಎಸ್.ಶೆಟ್ಟಿ, ಶಿವಮೊಗ್ಗ, ಲಾರೆನ್ ಪಿಂಟೋ, ಪಲಿಮಾರ್, ಅಶ್ವಿನಿ ಕೊಂಡದ ಕುಳಿ, ಮೂಡುಬಿದಿರೆ, ಪವನ್ ಕುಮಾರ್, ಕೆವರ್ಾಶೆ, ಅದಿತಿ.ಕೆ.ಟಿ, ಪುತ್ತೂರು ಅವರು ಆಯ್ಕೆಯಾಗಿದ್ದು ತಮ್ಮ ಪ್ರತಿಭೆಯನ್ನು ವೇದಿಕೆಯಲ್ಲಿ ಪ್ರದರ್ಶಿಸಿ ಗೌರವ ಸ್ವೀಕರಿಸುವರು.

ಬೆಳದಿಂಗಳ ಸಾಹಿತ್ಯ ಸಮ್ಮೇಳನ ಗೌರವ : ವಿವಿಧ ಕ್ಷೇತ್ರದ 12 ಮಂದಿ ಸಾಧಕರನ್ನು ಓರ್ವ ಸಾಹಿತ್ಯ ಸೇವಾ ದಂಪತಿ, 5 ಸಾಧಕ ಸಂಘಗಳನ್ನು ಗುರುತಿಸಿ ಗೌರವಿಸಲಾಗುತ್ತಿದೆ. ಬೆಳದಿಂಗಳ ಸಾಹಿತ್ಯ ಸಮ್ಮೇಳನ ಗೌರವಕ್ಕೆ ಸಾಹಿತಿ ಡಾ. ಸಂಜೀವ ಶೆಟ್ಟಿ ಮುಂಬಯಿ, ವಕೀಲ - ಸಮಾಜ ಸೇವಕ ಎ.ಎಸ್.ಎನ್. ಹೆಬ್ಬಾರ್ ಕುಂದಾಪುರ, ಗಿಲಿಗಿಲಿ ಮ್ಯಾಜಿಕ್ನ ಪ್ರೊ. ಶಂಕರ್ ಉಡುಪಿ, ರಾಜಕಾರಣಿ ಸುರೇಶ್ ಕುಮಾರ್ ಬೆಂಗಳೂರು, ಪ್ರಕಾಶಕಿ - ಲೇಖಕಿ ಇಂದಿರಾ ಹಾಲಂಬಿ ಆತ್ರಾಡಿ, ಸಮಾಜ ಸೇವಕ ಶಿತರ್ಲಾಡಿ ವಿಲಿಯಂ ಪಿಂಟೋ ಉಡುಪಿ, ಪತ್ರಕರ್ತ ಸದಾಶಿವ ಶೆಣೈ ಬೆಂಗಳೂರು, ಕಲಾವಿದ ಪಿ.ಎನ್. ಆಚಾರ್ಯ ಮಣಿಪಾಲ, ಅಣಬೆ ಕೃಷಿಕ ರಾಜಾ ಎಲ್ ದಗರ್್ ಧಾರವಾಡ, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಡಾ. ಹರೀಶ್ ಕುಮಾರ್ ಕೆ, ಕಂಬಳ ಸಮಿತಿಯ ಅಧ್ಯಕ್ಷ ಬೆಳುವಾಯಿ ಸದಾನಂದ ಶೆಟ್ಟಿ, ಬೈಕ್-ಕಾರ್ ರೇಸ್ ಖ್ಯಾತಿಯ ಈರಣ್ಣ ಕುಂದರಗಿ ಮಠ್ ಇವರು ಪಾತ್ರರಾಗಲಿದ್ದಾರೆ.

ಸಾಂಘಿಕ ಸಾಧನಾ ಗೌರವ : ಕಾಂತಾವರ ಕನ್ನಡ ಸಂಘ ಕಾರ್ಕಳ, ಕನ್ನಡ ಸೇವಾ ಸಂಘ ಪೊವಾಯಿ ಮುಂಬಯಿ, ವಿಶ್ವ ಕೊಂಕಣಿ ಕಲಾ ಕೇಂದ್ರ ಮಂಗಳೂರು, ಕರ್ನಾಟಕ ಕಲಾ ದರ್ಶಿನಿ, ಬೆಂಗಳೂರು, ಸಿಮೋನ್ಸ್ ಆಶ್ರಮ ಬೆಳ್ತಂಗಡಿ ಈ ಐದು ಸಂಸ್ಥೆಗಳಿಗೆ ಈ ವರ್ಷದ ಸಾಂಸ್ಥಿಕ ಸಾಧನಾ ಗೌರವ ನೀಡಲಾಗುತ್ತಿದೆ.

ಸಮ್ಮೇಳನಾಧ್ಯಕ್ಷರ ಪರಿಚಯ


ಉಡುಪಿ: ಹಿರಿಯ ಸಾಹಿತಿ, ಹೃದಯಸ್ಪರ್ಶಿ ಚಲನಚಿತ್ರ ಗೀತೆಗಳ ಮೂಲಕ ಜನಮಾನಸದಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ, ವಿಧಾನ ಪರಿಷತ್ ಸದಸ್ಯ ಡಾ.ದೊಡ್ಡರಂಗೇಗೌಡ ಅವರು ಹೆಬ್ರಿಯ ನವೋದಯ ವಿದ್ಯಾಲಯದಲ್ಲಿ ನಡೆಯುವ 4ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಡಿಸೆಂಬರ್ 28 ರಂದು ಸಂಜೆ 6.00 ರಿಂದ ಬೆಳದಿಂಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
          ನಿರಂತರ ಮೌಲಿಕ ಕೃತಿಗಳನ್ನು ಪ್ರಕಟಿಸುತ್ತಾ ನಾಡು ನುಡಿಯ ಹಿರಿಮೆಯ ಬಗ್ಗೆ ಪ್ರಬುದ್ಧ ಉಪನ್ಯಾಸ ನೀಡುತ್ತಾ, ಸಾಹಿತ್ಯಕ- ಸಾಂಸ್ಕೃತಿಕ ಪರಿಚಾರಿಕೆ ಮಾಡುತ್ತಾ, ಕವಿಗೋಷ್ಠಿಗಳಲ್ಲಿ ಭಾಗವಹಿಸುತ್ತಾ, ಸಮಾಜ ಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುತ್ತಾ, ಧ್ವನಿಮದ್ರಿಕೆಗಳಲ್ಲಿ ಹಾಡುತ್ತಾ, ಚಲನಚಿತ್ರಗಳಲ್ಲಿ ಅಭಿನಯಿಸುತ್ತಾ ಬಂದಿರುವ ಡಾ. ದೊಡ್ಡರಂಗೇಗೌಡ ಅವರು ಕನ್ನಡಿಗರ ಪ್ರೀತಿಗೆ ಪಾತ್ರರಾದ ಹಿರಿಯರು.
          ಶಿಕ್ಷಣ, ಸಾಹಿತ್ಯ, ಚಲನಚಿತ್ರ, ಸುಗಮ ಸಂಗೀತ, ರಂಗಭೂಮಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ತೊಡಗಿಸಿಕೊಂಡವರು ಸೃಜನಶೀಲ ಕವಿ- ಸಾಹಿತಿ ಡಾ.ದೊಡ್ಡರಂಗೇಗೌಡ.
         29 ಭಾವಗೀತಾ ಸಂಕಲನಗಳು, 20 ನವ್ಯ ಕಾವ್ಯ ಕೃತಿಗಳು, 4 ಭಕ್ತಿಗೀತೆಗಳ ಸಂಕಲನಗಳು, 4 ಪ್ರಗಾಥಗಳು, 2 ಮುಕ್ತಕಗಳು, 6 ಗದ್ಯಕೃತಿಗಳು, 26 ವಿಮರ್ಶಾ ಕೃತಿಗಳು, 4 ರೂಪಕಗಳು, 3 ಜೀವನ ಚರಿತ್ರೆಗಳು, 2 ಚಲನಚಿತ್ರ ಗೀತಾ ಸಂಗ್ರಹಗಳು ಪ್ರಕಟವಾಗಿವೆ.
           ಹತ್ತು ಅಭಿನಂದನಾ ಮತ್ತು ವೈಚಾರಿಕಾ ಸಂಭಾವನಾಗ್ರಂಥಗಳು ಅವರಿಗೆ ಸಮಪರ್ಿಸಲ್ಪಟ್ಟಿವೆ. ದೊಡ್ಡರಂಗೇ ಗೌಡರ ಕೃತಿಗಳು ಇಂಗ್ಲಿಷ್, ತಮಿಳು, ತೆಲುಗು, ಮಳಯಾಳಂ, ಉರ್ದು, ಹಿಂದಿ ಭಾಷೆಗಳಿಗೆ ಅನುವಾದಿತವಾಗಿವೆ.
           ತುಮಕೂರು ಜಿಲ್ಲೆಯ ಗ್ರಾಮೀಣ ಕುರುಬರಹಳ್ಳಿಯಲ್ಲಿ ಶಾಲಾ ಮುಖ್ಯೋಪಾಧ್ಯಾಯ ದಿ.ಕೆ.ರಂಗೇಗೌಡ ಮತ್ತು ಅಕ್ಕಮ್ಮ ದಂಪತಿಗಳ ಮಗನಾಗಿ ಹುಟ್ಟಿದ ಅವರು 1972 ರಲ್ಲಿ ಬೆಂಗಳೂರಿನ ಎಸ್.ಎಲ್.ಎನ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿ ಅದೇ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿ 1990 ರಲ್ಲಿ ನಿವೃತ್ತರಾದರು. ಶೇಷಾದ್ರಿಪುರಂ ಕಾಲೇಜಿನ ಕನ್ನಡ ಸ್ನಾತಕೋತ್ತರ ವಿಭಾಗದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು.
        ಕನ್ನಡ ನವೋದಯ ಕಾವ್ಯ: ಒಂದು ಪುನರ್ ಮೌಲ್ಯಮಾಪನ' ವಿಷಯದ ಮಹಾ ಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ.
        ವಿದ್ಯಾರ್ಥಿ ದೆಸೆಯಿಂದಲೇ ಕಥೆ, ಕವಿತೆ, ವಿಮರ್ಶೆಗಳನ್ನು ಬರೆಯುತ್ತಾ ಬಂದಿರುವ ಅವರು 80 ಕ್ಕೂ ಮಿಕ್ಕ ಕೃತಿಗಳನ್ನು ಪ್ರಕಟಿಸಿದ್ದಾರೆ. ಇದುವರೆಗೆ 500 ನಕ್ಕೂ ಕನ್ನಡ ಚಲನಚಿತ್ರಗೀತೆಗಳನ್ನು ಬರೆದಿದ್ದಾರೆ.
         ಅತ್ಯುತ್ತಮ ಗೀತೆಗಳಿಗಾಗಿ ರಾಜ್ಯ ಸರ್ಕಾರದ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ ಸೇರಿದಂತೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ನೂರಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

       ಪತ್ರಿಕಾಗೋಷ್ಠಿಯಲ್ಲಿ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯ ಅಧ್ಯಕ್ಷ ಶೇಖರ ಅಜೆಕಾರು, ಹೆಬ್ರಿ ಜವಾಹರ್ ನವೋದಯ ವಿದ್ಯಾಲಯದ ಪ್ರಾಂಶುಪಾಲ ಸುರೇಶ.ಕೆ.ವಿ, ಸಮಿತಿಯ ಪ್ರಧಾನ ಕಾರ್ಯದರ್ಶಿ ಬೊರ್ಗಲ್ ಗುಡ್ಡೆ ಮಂಜುನಾಥ, ಜೊತೆ ಕಾರ್ಯದರ್ಶಿ ಉದಯ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.


ಕುಂದಾಪ್ರ.ಕಾಂ- editor@kundapra.com