ವಿದೇಶಿ ನೇರ ಬಂಡವಾಳ ಹೂಡಿಕೆ; ರೈತರು ಕಂಗಾಲು: ಕೆ.ಕೆ.ದಿವಾಕರನ್

ಕುಂದಾಪುರ: ವಿದೇಶಿ ನೇರ ಬಂಡವಾಳ ಹೂಡಿಕೆ ದೇಶದ ರೈತರ ಮೇಲೆ ನೇರ ಪರಿಣಾಮ ಬೀರಿದ್ದು ರೈತರು ಮತ್ತಷ್ಡು ಕಂಗಾಲಾಗಿದ್ದಾರೆ  ಎಂದು ಅಖಿಲ ಭಾರತ ಸಿ‌ಐಟಿಯು ಕಾರ್ಯದರ್ಶಿ ಅಖಿಲ ಭಾರತ ರಸ್ತೆ ಮತ್ತು ಸಾರಿಗೆ ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೇರಳ ಶಾಸಕ ಕೆ.ಕೆ.ದಿವಾಕರನ್ ಹೇಳಿದರು.
       ಅವರು ಭಾನುವಾರದಿಂದ ಎರಡು ದಿನಗಳ ಕಾಲ ನಡೆದ ಉಡುಪಿ ಜಿಲ್ಲಾ ಸಿ‌ಐಟಿಯುನ ೪ನೇ ಸಮ್ಮೇಳನದ ಸಮಾರೋಪದ
ಪ್ರಯುಕ್ತ ಸೋಮವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ಬಹಿರಂಗ ಸಭೆಯಲ್ಲಿ ಮಾತನಾಡುತ್ತಿದ್ದರು.
       ಎರಡು ದಿನಗಳ ಕಾಲ ನಡೆದ ಸಮ್ಮೇಳನದಲ್ಲಿ ಮುಂಬರುವ ಪುರಸಭೆ ಹಾಗೂ ವಿಧಾನ ಸಭಾ ಚುನಾವಣೆಗಳು ಸೇರಿದಂತೆ ಯಾವುದೇ ಚುನಾವಣೆಗಳಿಗೆ ಎಡಪಕ್ಷಗಳನ್ನು ಬೆಂಬಲಿಸುವುದು, ಬೆಲೆ ಏರಿಕೆ ವಿರುದ್ಧ ಸಂಘಟಿತ ಹೋರಾಟ, ಕನಿಷ್ಟ ವೇತನ ೧೦ಸಾವಿರಕ್ಕೆ ನಿಗಧೀಕರಿಸುವಂತೆ ಒತ್ತಾಯ, ಕೆ.ಜಿ.ಗೆ ೨ ರೂಗಳಂತೆ ಪಡಿತರ ವಿತರಣೆಗೆ ಆಗ್ರಹ, ದೇವಸ್ಥಾನಗಳಲ್ಲಿ ಪಂಕ್ತಿ ಬೇಧ ನಡೆಸುತ್ತಿರುವುದರ ವಿರುದ್ಧ ಹೋರಾಟ, ಕಾರ್ಮಿಕರಿಗೆ ವಾರ ಪೂರ್ತಿ ನೌಕರಿಗೆ ಆಗ್ರಹ, ವಿದೇಶೀ ಬಂಡವಾಳ ಹೂಡಿಕೆಯನ್ನು ಬಹಿಷ್ಕರಿಸುವುದು, ಕಾರ್ಮಿಕರ ವಿರುದ್ಧದ ದೌರ್ಜನ್ಯವನ್ನು ಸಂಘಟಿತವಾಗಿ ಎದುರಿಸುವುದು ಸೇರಿದಂತೆ ೧೦ ನಿರ್ಣಗಳನ್ನು ಕೈಗೊಳ್ಳಲಾಯಿತು.
      ಸಭೆಯ ಅಧ್ಯಕ್ಷತೆಯನ್ನು ಸಿ‌ಐಟಿಯು ಜಿಲ್ಲಾಧ್ಯಕ್ಷ ಕೆ. ಶಂಕರ್ ವಹಿಸಿದ್ದರು. ಸಿ‌ಐಟಿಯು ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಎಸ್. ಪ್ರಸನ್ನಕುಮಾರ್, ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಪಿ. ವಿಶ್ವನಾಥ ರೈ, ಜಿಲ್ಲಾ ಸಮಿತಿಯ ಉಪಾಧ್ಯಕ್ಷರಾದ ದೋಗು ಸುವರ್ಣ, ಕಾರ್ಯದರ್ಶಿಗಳಾದ ಕೆ. ಲಕ್ಷ್ಮಣ, ಬಲ್ಕೀಸ್ ಭಾನು. ಸುರೇಶ್ ಕಲ್ಲಾಗರ, ಹೆಚ್.ನರಸಿಂಹ, ಕೋಶಾಧಿಕಾರಿ ಶಶಿಧರ ಗೋಲ ಮೊದಲಾದವರು ಉಪಸ್ಥಿತರಿದ್ದರು.
ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು, ಮಹಾಬಲ ವಡೇರ ಹೋಬಳಿ ಕಾರ್ಯಕ್ರಮ ನಿರ್ವಹಿಸಿದರು.