ನಾಡು ಕಂಡ ಮಹಾನ್ ಸಂತ ಕನಕದಾಸರು

         ವ್ಯಾಸರಾಯರ ಶಿಷ್ಯರಾಗಿ, ಪುರಂದರದಾಸರ ಸಮಕಾಲೀನರಾಗಿದ್ದವರು ಶ್ರೀ ಕನಕದಾಸರು. ಆಧ್ಯಾತ್ಮಿಕ ತತ್ವಗಳನ್ನು, ಆಡುಭಾಷೆಯಲ್ಲಿ, ಒಗಟುಗಳ ರೂಪದಲ್ಲಿ, ಸಾಮಾನ್ಯ ಜನರಿಗೆ ನಿಡಿದರು. ಭಗವಂತನ ಧ್ಯಾನವನ್ನು ಎಲ್ಲರೂ ಮಾಡಿ, ದೈವವನ್ನು ಒಲಿಕೊಳ್ಳಬಹುದೆಂಬ ವಿಷಯವನ್ನು ಮಾಡಿ ತೋರಿಸಿ, ಹಾಡಿ ಕೇಳಿಸಿದರು. ಹೀಗೆ ಸಮಾಜ ಸುಧಾರಕರಾಗಿ, ಮೇಲು ಕೀಳೆಂಬ ಭಾವವನ್ನು ಮೆಟ್ಟಿ, ಭಾವಕ್ಯತೆಯನ್ನು ಐನೂರು ವರುಷಗಳ ಹಿಂದೆಯೇ ಸಾಧಿಸಿದವರು ಕನಕದಾಸರು.
          ಕನಕದಾಸರು ಬೀರೇಗೌಡ ಮತ್ತು ಬಚ್ಚಮ್ಮ ದಂಪತಿಗಳಿಗೆ ಜನಿಸಿದರು. ಇವರ ಸ್ಥಳ ಧಾರವಾಡ ಜಿಲ್ಲೆಯ 'ಬಾಡ' ಎಂಬ ಗ್ರಾಮ. ಇವರು ತಿರುಪತಿಯ ತಿಮ್ಮಪ್ಪನ ಒಕ್ಕಲಿನವರಾದ್ದರಿಂದ ತಿಮ್ಮಪ್ಪನೆಂದೇ ಇವರಿಗೆ ನಾಮಕರಣವಾಯಿತು. ತಂದೆಯಂತೆಯೇ ಆ ಗ್ರಾಮದ ನಾಯಕರಾದರು. ಒಮ್ಮೆ ಕಾಗಿನೆಲೆಯಲ್ಲಿದ್ದಾಗ ಇವರಿಗೆ ಅಪಾರವಾದ ಚಿನ್ನದ ನಾಣ್ಯಗಳು ದೊರಕಿದವು. ಆ ಹಣವನ್ನು ಆ ಗ್ರಾಮದ ಕೇಶವನ ದೇವಾಲಯದ ಜೀರ್ಣೋದ್ಧಾರಕ್ಕೆ ವಿನಿಯೋಗಿಸಿದರು. ಹೀಗೆ ದ್ರವ್ಯವು ದೊರಕಿದ್ದರಿಂದ ತಿಮ್ಮಪ್ಪನನ್ನು ಕನಕನೆಂದು ಕರೆದರು. ಈತನೇ ಕನಕನಾಯಕನಾಗಿ ಮುಂದೆ ಕನಕದಾಸರಾದರು. ವ್ಯಾಸರಾಯ ಸ್ವಾಮಿಗಳಿಂದ ದೀಕ್ಷೆಯನ್ನು ಪಡೆದರು.
         ವಾಗ್ಗೇಯಕಾರರಾಗಿ ಆದಿಕೇಶವ, ಬಾಡವಾದಿ ಕೇಶವ, ಕಾಗಿನೆಲೆಯಾದಿ ಕೇಶವನೆಂಬ ಅಂಕಿತದೊಡನೆ ಅನೇಕ ಕೀರ್ತನೆಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ. ಮುಂಡಿಗೆಗಳನ್ನು ರಚಿಸಿದ್ದಾರೆ. ಮುಂಡಿಗೆಗಳು ದ್ವಂದ್ವಾರ್ಥವನ್ನುಳ್ಳ ಕನ್ನಡ ಕೀರ್ತನೆಗಳು. ಉತ್ತಮ ಕಾವ್ಯಗಳನ್ನು ರಚಿಸಿದ್ದಾರೆ. ಹರಿಭಕ್ತಿಸಾರ, ಮೋಹನ ತರಂಗಿಣಿ, ರಾಮಧ್ಯಾನಚರಿತೆ, ನಳ ಚರಿತ್ರೆ ಮುಂತಾದ ಕಾವ್ಯಗಳನ್ನು ಷಟ್ಪದಿಯಲ್ಲಿ ರಚಿಸಿದ್ದಾರೆ.
      ಸಮಾಜೋದ್ಧಾರಕರಾಗಿ ಜನ ಸಾಮಾನ್ಯರಲ್ಲಿ ಸೌಹಾರ್ದವನ್ನು ಬೆಳೆಸಿ, ಸಮಾನತೆಯನ್ನು ಹೊಂದಲು ಶ್ರಮಿಸಿದ್ದಾರೆ. ತಮ್ಮ ಕೀರ್ತನೆಗಳ ಮೂಲಕ ತತ್ವ ಪ್ರಚಾರ ಮಾಡಿ, ಎಲ್ಲರನ್ನೂ ಭಗವದ್ಭಕ್ತರಾಗುವಂತೆ ಮಾಡಿ, ಲೋಕಕಲ್ಯಾಣವೆಸಗಿದ್ದಾರೆ. ಇವರ ಕೀರ್ತನೆಗಳು ಇಂದಿಗೂ ಜನಮನದಲ್ಲಿ ಮೊಳಗುತ್ತಿವೆ.
ಕನಕ ಜಯಂತಿಯ ಶುಭಾಶಯಗಳು.