ಹೃದಯದ ಭಾಷೆಯೇ ಸೌಹಾರ್ದತೆಯ ಮೂಲ- ಓಂಗಣೇಶ್


ಕುಂದಾಪುರ: ಭಾರತದ ಅತಿ ದೊಡ್ಡ ಶ್ರೀಮಂತಿಕೆ ಭಾಷಾ ಸಾಮರಸ್ಯದಲ್ಲಿ ಅಡಕವಾಗಿದ್ದು ಅದನ್ನು ಉಳಿಸಿ ಇನ್ನಷ್ಟು ಬೆಳೆಸಬೇಕಿದೆ. ಭಿನ್ನ ಭಿನ್ನ ಸಮೂಹದ ಸಾಂಸ್ಕೃತಿಕ ವೈವಿದ್ಯತೆಯನ್ನು ಬಿಂಬಿಸುವ ಭಾಷೆ ಶತಶತಮಾನಗಳ ಪ್ರಯತ್ನದ ಫಲವಾಗಿದ್ದು ಅದನ್ನು ಪರಸ್ಪರ ಅರ್ಥೈಸುವಿಕೆಯಿಂದ ಭಾವೈಕ್ಯ ಕಂಡ ಹೆಮ್ಮೆಯ ದೇಶ ನಮ್ಮದು ಎಂದು ಅಂತರ್ರಾಷ್ಟ್ರೀಯ ಜಾದೂಗಾರ, ನಟ ಓಂಗಣೇಶ್ ಹೇಳಿದರು.
     ಮಂಗಳೂರು ವಿಶ್ವ ವಿದ್ಯಾ ನಿಲಯದ ರಾಷ್ಟ್ರೀಯ ಭಾವೈಕ್ಯತಾ ಸಪ್ತಾಹದ ಆಚರಣೆಯ ಅಂಗವಾಗಿ ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎಂಬ ಭಾಷಾ ಸೌಹಾರ್ದತೆ ಎಂಬ ವಿಷಯದ ಕುರಿತು ಮಾತನಾಡುತ್ತಿದ್ದರು.
       ಹೃದಯ ಭಾಷೆಯೇ ಸೌಹಾರ್ದತೆಯ ಮೂಲವಾಗಿದ್ದು ಆ ಮೂಲಕ ಅನೇಕತೆಯಲ್ಲೂ ಏಕತೆಯನ್ನು ಸಾಧಿಸಿ ಜಗತ್ತಿಗೇ ಮಾದರಿಯಾದವರು ನಾವು. ಒಂದೇ ನೋಟಿನಲ್ಲಿ 16 ಭಾಷೆಯನ್ನು ಮುದ್ರಿಸಿ ಗೌರವಿಸಿದ ಜಗತ್ತಿನ ಏಕೈಕ ದೇಶದವರಾದ ನಾವು ಹೆಮ್ಮೆ ಪಡೋಣಾ ಎಂದರು. 
      ಅಧ್ಯಕ್ಷತೆಯನ್ನು  ಕಾಲೇಜಿನ ಪ್ರಾಂಶುಪಾಲೆ ಪ್ರೋ. ಸಾಯಿದಾ ಬಾನು ಎಚ್. ವಹಿಸಿದ್ದರು. ಮುಖ್ಯ ಅತಿಥಿಯಾಗಿ ಬೈಂದೂರು ಸುರಭಿ ಕಲಾ ಸಂಸ್ಥೆಯ ಅಧ್ಯಕ್ಷ ಪಿ.ಸುಧಾಕರ ಉಪಸ್ಥಿತರಿದ್ದರು.
ಕಾಲೇಜಿನ ಕನ್ನಡ ಉಪನ್ಯಾಸಕ ಪ್ರೋ. ಅನಿಲ್ ಕುಮಾರ್ ಸ್ವಾಗತಿಸಿ ಪ್ರಸ್ತಾವನೆಗೈದರು,  ಉಪನ್ಯಾಸಕಿ ಕು. ಕಲಾವತಿ ವಂದಿಸಿದರು ಅರ್ಥಶಾಸ್ತ್ರ ಉಪನ್ಯಾಸಕ ಗುರುರಾಜ್ ಕಾರ್ಯಕ್ರಮ ನಿರೂಪಿಸಿದರು.