ಕುಂದಾಪುರ: ಬೈಂದೂರು ವ್ಯಾಪ್ತಿಯಲ್ಲಿ ಈ ವರ್ಷ ನೆಲಗಡಲೆ ಬೀಜದ ಕೊರತೆ ಇದ್ದು, ಸರ್ಕಾರದಿಂದ ರೈತರಿಗೆ ಸಬ್ಸಿಡಿಯಲ್ಲಿ ದೊರೆಯುವ ನೆಲಗಡಲೆ ಬೀಜವೂ ಕಳಪೆ ಗುಣಮಟ್ಟದದ್ದಾಗಿದ್ದರಿಂದ ಆಕ್ರೋಶಗೊಂಡ ರೈತರು ಸ್ಥಳಕ್ಕಾಗಮಿಸಿ 450 ಬೀಜ ತುಂಬಿದ ಚೀಲ ಸಹಿತ ಲಾರಿಯಲ್ಲಿದ್ದ ಬೀಜವನ್ನು ಇಳಿಸಲು ಬಿಡದೆ ಕೃಷಿ ಇಲಾಖೆಯ ವಿರುದ್ಧ ಧಿಕ್ಕಾರ ಕೂಗಿ ಅಧಿಕಾರಿಗಳಿಗೆ ಘೇರಾವ್ ಹಾಕಿದರು.

ಭತ್ತದ ಬೆಳೆಯ ಬಳಿಕ ನೆಲಗಡಲೆ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಕಳಪೆ ಬೀಜದಿಂದ ಇಳುವರಿ ಪಡೆಯಲು ಸಾಧ್ಯವಿಲ್ಲ. ಈಗಾಗಲೇ ಬಿತ್ತನೆ ಸಮಯ ಮುಗಿಯುತ್ತಿದ್ದರೂ ಇಲಾಖೆ ಸೂಕ್ತ ಸಮಯದಲ್ಲಿ ನೆಲಗಡಲೆ ಬೀಜ ಸರಬರಾಜು ಮಾಡುತ್ತಿಲ್ಲ. ಇಂತಹ ಬೀಜ ನೀಡಿಕೆಯಲ್ಲಿ ಕೃಷಿ ಅಧಿಕಾರಿಗಳು ಶಾಮೀಲಾಗಿದ್ದು ನೆಲಗಡಲೆ ಬೆಳೆಗಾರರಲ್ಲದವರಿಗೂ ಸಬ್ಸಿಡಿ ದರದಲ್ಲಿ ಬೀಜ ದೊರೆಯತ್ತಿದೆ. ಸೂಕ್ತ ದಾಖಲೆ ನೀಡಿ ಸಬ್ಸಿಡಿ ಬೀಜ ಪಡೆಯಲು ಕಾದರೂ ಸರಕಾರ ಕಳಪೆ ಬೀಜಗಳನ್ನು ಕಳುಹಿಸಿ ರೈತರ ಬದುಕಿನೊಂದಿಗಿನ ಚೆಲ್ಲಾಟವಾಡುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.