ಪ್ರಳಯ ಭೀತಿ ನಿವಾರಣೆಗೆ ಸಹಸ್ರಮಾನ ನವಕುಂಡ ಪೂರ್ಣಗ್ರಹ ಯಾಗ


ಕುಂದಾಪುರ:  ಜಗತ್ತಿನಾದ್ಯಂತ ಹಬ್ಪ್ಬಿರುವ ಪ್ರಳಯ ಭೀತಿ ನಿವಾರಣೆಗೆ, ಲೋಕಕಲ್ಯಾಣಾರ್ಥವಾಗಿ ಕುಂದಾಪುರದ ಕಟ್ಕೇರೆ ಹರಕೆ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ  ಸಹಸ್ರಮಾನ ನವಕುಂಡ ಪೂರ್ಣಗ್ರಹ ಯಾಗವನ್ನು ಹಮ್ಮಿಕೊಳ್ಳಲಾಗಿತ್ತು. ಉಡುಪಿ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ
ಸಹಸ್ರಮಾನ ನವಕುಂಡ ಪೂರ್ಣಗ್ರಹ ಯಾಗಕ್ಕೆ ಭಾನುವಾರ ಪೂರ್ಣಾಹುತಿ ಸಲ್ಲಿಸಿ ಆಶೀರ್ವಚನ ನೀಡಿದರು.

     ಎಲ್ಲೂರು ಆಗಮ ವಿದ್ವಾಂಸ ವೇದಮೂರ್ತಿ ಕುತ್ಯಾರು ಕೇಂಜ ಶ್ರೀಧರ ತಂತ್ರಿಗಳ ಮಾರ್ಗದರ್ಶನದಲ್ಲಿ ವೇದಮೂರ್ತಿ ಲಕ್ಷ್ಮೀನಾರಾಯಣ ತಂತ್ರಿ, ವೇದಮೂರ್ತಿ ಪ್ರಾಣೇಶ ತಂತ್ರಿ ಯಾಗದ ಧಾರ್ಮಿಕ ವಿಧಿ ನೆರವೇರಿಸಿದರು. ಯಾಗದ ಅಧ್ವರ್ಯ ರಾಮಚಂದ್ರ ಭಟ್, ಯಾಗ ಸಂಘಟನಾ ಸಮಿತಿ ಪ್ರಧಾನ ಕಾರ್ಯದರ್ಶಿ ಕಟ್ಕೇರೆ ಪ್ರೇಮಾನಂದ ಶೆಟ್ಟಿ, ಗೌರವಾಧ್ಯಕ್ಷ ಡಾ.ನಿಡಂಬೂರು ವಿಜಯ ಬಲ್ಲಾಳ್, ಕಾರ್ಯಾಧ್ಯಕ್ಷ ಸೂರ್ಯನಾರಾಯಣ ಉಪಾಧ್ಯಾಯ, ಉಪಾಧ್ಯಕ್ಷರಾದ ಬಿ.ಅಪ್ಪಣ್ಣ ಹೆಗ್ಡೆ, ಎನ್.ಕೃಷ್ಣಮೂರ್ತಿ ಭಟ್, ಕೋಶಾಧಿಕಾರಿ ಎ.ಪಿ.ಕೊಡಂಚ, ಅರ್ಚಕ ಲಕ್ಷ್ಮೀನಾರಾಯಣ ಹೊಳ್ಳ, ವೈ.ಎನ್.ವೆಂಕಟೇಶಮೂರ್ತಿ ಭಟ್ ಮತ್ತಿತರರು ಉಪಸ್ಥಿತರಿದ್ದರು. 
      ಪ್ರಾತಃ ಕಾಲದಿಂದ ೯ ಯಾಗ ಕುಂಡಗಳಲ್ಲಿ ೧೩೮ ಬ್ರಾಹ್ಮಣರು ಮಂತ್ರಪಠಣೆಗೈದು ಪೂಜೆ ನಡೆಸಿದರು.  ವಾಸ್ತುವಿಧಿ, ದಿಕ್ಪಾಲ ಬಲಿ, ಸುದರ್ಶನ ಯಾಗ, ಅಲ್ಲದೆ ಶ್ರೀಶಿಂಶುಮಾರ ಮೃಣ್ಮಯ ಮೂರ್ತಿಯ ಬಿಂಬ ಪ್ರತಿಷ್ಠಾಪನೆ ನಡೆಯಿತು. ಸಹಸ್ರಾರು ಭಕ್ತಾದಿಗಳು ಪಾಲ್ಗೊಂಡು ಪ್ರಾರ್ಥಿಸಿದರು.