ಬೈಂದೂರಿನಲ್ಲಿ ನಾಳೆ ಕುಂದಾಪುರ ತಾಲೂಕು 12ನೇ ಸಾಹಿತ್ಯ ಸಮ್ಮೇಳನ.

 ಕನ್ನಡ ಸಾಹಿತ್ಯ ಪರಿಷತ್ತು ಕುಂದಾಪುರ ಇದರ 12ನೇ ತಾಲೂಕು ಸಾಹಿತ್ಯ ಸಮ್ಮೇಳನ ಬೈಂದೂರಿನ ರಾಜ ರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಡಿ. 15 ಹಾಗೂ 16 ರಂದು ಸಾಹಿತಿ ಯು. ಚಂದ್ರಶೇಖರ್ ಹೊಳ್ಳರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಬೈಂದೂರು: ತಾಲೂಕು ಕೇಂದ್ರವಾಗಿ ಬೆಳೆಯುತ್ತಿರುವ, ಕಲೆ-ಸಾಹಿತ್ಯ-ಸಂಸ್ಕ್ರತಿಯ ಮೂಲಕವೇ ನಾಡಿನಾದ್ಯಂತ ಗುರುತಿಸಿಕೊಂಡಿರುವ ಬಿಂದುಪುರದಲ್ಲಿ (ಬೈಂದೂರು) ಪ್ರಪ್ರಥಮ ಬಾರಿಗೆ ನಡೆಯಲಿರುವ ತಾಲೂಕು ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ,
         ಕನ್ನಡ ಸಾಹಿತ್ಯ ಪರಿಷತ್ತು ಕುಂದಾಪುರ ಇದರ 12ನೇ ತಾಲೂಕು ಸಾಹಿತ್ಯ ಸಮ್ಮೇಳನ ಬೈಂದೂರಿನ ರಾಜ ರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಡಿ. 15 ಹಾಗೂ 16 ರಂದು ನಡೆಯಲಿದೆ. 
        ಸುಮಾರು 9 ಲಕ್ಷ ರೂ. ವೆಚ್ಚದಲ್ಲಿ ಅದ್ದೂರಿಯಾಗಿ ನಡೆಯಲಿರುವ ಸಮ್ಮೇಳನಕ್ಕೆ ವಿವಿಧ ಸಮಿತಿಗಳು ರಚನೆಗೊಂಡಿದ್ದು, ತಯಾರಿಗಳು ಭರದಿಂದ ಸಾಗಿವೆ.
        ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಅಧ್ಯಕ್ಷ ಯು. ಚಂದ್ರಶೇಖರ್ ಹೊಳ್ಳ  ಸಮ್ಮೇಳನಾಧ್ಯಕ್ಷತೆ ವಹಿಸುವರು, ಬಿ. ವೈ. ರಾಘವೇಂದ್ರ ಉದ್ಘಾಟಿಸಲಿದ್ದು, 3ನೇ ಹಣಕಾಸು ಸುಧಾರಣಾ ಆಯೋಗದ ಅಧ್ಯಕ್ಷ ಎ. ಜಿ. ಕೊಡ್ಗಿ ಶುಭಸಂಶನೆಗೈಯಲಿದ್ದಾರೆ. ಕುಂದಾಪುರ ಸಹಾಯಕ ಕಮೀಷನರ್ ಸದಾಶಿವ ಪ್ರಭು, ಖ್ಯಾತ ಸಾಹಿತಿ ದುಂಡಿರಾಜ್, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಬೈಂದೂರು ಶಾಸಕ ಕೆ. ಲಕ್ಷ್ಮೀನಾರಾಯಣ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾಧ್ಯಕ್ಷ ಎ.ಎಸ್.ಎನ್. ಹೆಬ್ಬಾರ್ , ಉಡುಪಿ ಜಿಲ್ಲಾ ಸ್ಥಾಯಿ ಸಮಿತಿ ಅಧ್ಯಕ್ಷ ಭಾಬು ಶೆಟ್ಟಿ, ತಾಲೂಕಿನ ವಿಶೇಷ ತಾಹಶೀಲ್ದಾರ ರಾಜು ಮೊಗವೀರ ಮುಂತಾದವರು ಅತಿಥಿಗಳಾಗಿ ಭಾಗವಹಿಸುವರು.
      ಸಮ್ಮೇಳನದ ಮೋಗೆರಿ ಗೋಪಾಲಕೃಷ್ಣ ವೇದಿಕೆಯಲ್ಲಿ  ವಿಚಾರಗೋಷ್ಠಿಗಳು, ಕವಿಗೋಷ್ಠಿ, ಯುವ ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ, ವಿದ್ಯಾರ್ಥಿ ಸಾಹಿತ್ಯ ಸಮಾವೇಶ, ಪುಸ್ತಕ ಪ್ರದರ್ಶನ, ಛಾಯಾಚಿತ್ರ ಪ್ರದರ್ಶನ ಮತ್ತು ಚಿತ್ರಕಲಾ ಪ್ರದರ್ಶನ, ವಸ್ತುಪ್ರದರ್ಶನ, ತಾಲೂಕಿನ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ನಡೆಯಲಿದೆ.
      ಡಿ. 15 ರ ಬೆಳಗ್ಗೆ 8 ಗಂಟೆಗೆ ಸೀತಾರಾಮಚಂದ್ರ ದೇವಸ್ಥಾನದಿಂದ  ಸಮ್ಮೇಳನಾಧ್ಯಕ್ಷರನ್ನು ಮೆರವಣಿಗೆಯ ಮೂಲಕ ದಿ. ಯಡ್ತರೆ ಮಂಜಯ್ಯ ಶೆಟ್ಟಿ ಮಹಾದ್ವಾರದ ಮೂಲಕ ಕಲಾಭವನಕ್ಕೆ ಕರೆತರಲಾಗುವುದು. ಜಿಲ್ಲೆಯ ವಿವಿಧ  ಕಲಾ ತಂಡಗಳಿಂದ ಯಕ್ಷಗಾನ, ಡೊಳ್ಳುಕುಣಿತ, ತಟ್ಟಿರಾಯ, ಜಾಗಟೆಯ ನಾದ ಹಾಗೂ ಎನ್‌ಎಸ್‌ಎಸ್ ವಿದ್ಯಾರ್ಥಿಗಳ ಆಕರ್ಷಕ ಪಥ ಸಂಚಲನ ನಡೆಯಲಿದೆ.  ಸಮ್ಮೇಳನದ ನಡುವೆ ಯಡ್ತರೆಯ ಕೊಲ್ಲೂರು ರಸ್ತೆಯಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡಲಾಗುತ್ತದೆ. 
     ಸಮಾರೋಪ ಸಮಾರಂಭದಲ್ಲಿ  ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಪುಂಡಲೀಕ ಹಾಲಂಬಿ ಮತ್ತು ರಾಜ್ಯದ ವಿವಿಧ ಸಾಹಿತಿಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.