ಉಪ್ಪಿನಕುದ್ರುವಿನಲ್ಲಿ ಯಕ್ಷಗಾನ ಗೊಂಬೆಯಾಟ ಅಕಾಡೆಮಿ ಕಟ್ಟಡಕ್ಕೆ ಶಿಲಾನ್ಯಾಸ

ಕುಂದಾಪುರ: ರಾಜರುಗಳ ಕಾಲದಿಂದ ಪ್ರೋತ್ಸಾಹಿಸಿಕೊಂಡು ಬಂದಿರುವ ಯಕ್ಷಗಾನ ಗೊಂಬೆಯಾಟ ಇಂದು ಸೂಕ್ತ ಪ್ರೋತ್ಸಾಹವಿಲ್ಲದೆ ಸೊರಗುತ್ತಿದೆ ಎಂದು ಬೆಂಗಳೂರು ಸೆಂಚುರಿ ಬಿಲ್ಡರ್ಸ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಡಾ.ಪಿ.ದಯಾನಂದ ಪೈ ಹೇಳಿದರು.
     ಅವರು ಉಪ್ಪಿನಕುದ್ರುವಿನಲ್ಲಿ ಸ್ಥಳೀಯ ದೇವಣ್ಣ ಪದ್ಮನಾಭ ಕಾಮತ್ ಮೆಮೋರಿಯಲ್ ಗೊಂಬೆಯಾಟ ಟ್ರಸ್ಟ್ ಮತ್ತು ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿ ಆಶ್ರಯದಲ್ಲಿ ನಿರ್ಮಾಣ ಆಗಲಿರುವ ಯಕ್ಷಗಾನ ಗೊಂಬೆಯಾಟ ಅಕಾಡೆಮಿ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. 
    ಯಕ್ಷಗಾನ ಕಲೆ ಆತಂಕ ಎದುರಿಸುತ್ತಿರುವ ಈ ದಿನದಲ್ಲಿ ಯಕ್ಷಗಾನ ಗೊಂಬೆಯಾಟ ಅಕಾಡೆಮಿ ಸ್ಥಾಪನೆಯಾಗುತ್ತಿರುವುದು ಇಡೀ ನಾಡಿನ ಹೆಮ್ಮೆ ವಿಷಯ ಎಂದರು. ಇದೇ ಸಂದರ್ಭದಲ್ಲಿ ಅಕಾಡೆಮಿಗೆ 25ಲಕ್ಷ ರೂ.ದೇಣಿಗೆ ನೀಡುವುದಾಗಿ ಭರವಸೆ ನೀಡಿದರು. 
     ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಹಿರಿಯ ನ್ಯಾಯವಾದಿ ಎ.ಎಸ್.ಎನ್.ಹೆಬ್ಬಾರ್, ಹೋಟೆಲ್ ಉದ್ಯಮಿ ವಿ.ಕೆ.ಕಾಮತ್, ಮೋಹಿನಿ ದಯಾನಂದ ಪೆ, ಸಮಾಜಸೇವಕ ಮಟ್ಟಿ ಲಕ್ಷ್ಮೀನಾರಾಯಣ ರಾವ್, ಕಿನ್ನಿಗೋಳಿ ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪ ಉಪಸ್ಥಿತರಿದ್ದರು. 
         ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ವಾಮನ ಪೆ ಹಾಗೂ ದಯಾನಂದ ಪೆ ದಂಪತಿಯನ್ನು ಸನ್ಮಾನಿಸಲಾಯಿತು. ವಿಠಲ ಕಾಮತ್ ಪ್ರಾರ್ಥಿಸಿದರು. ಭಾಸ್ಕರ ಕಾಮತ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಾಗೇಶ್ ಶ್ಯಾನುಭಾಗ್ ಕಾರ್ಯಕ್ರಮ ನಿರ್ವಹಿಸಿದರು.