ಭಂಡಾರ್ಕಾರ್ಸ್‌ ಕಾಲೇಜು: ಬಡಗುತಿಟ್ಟಿನ ಯಕ್ಷಗಾನ ಸ್ಪರ್ಧೆ-ಯಕ್ಷೋತ್ಸವ ಉದ್ಘಾಟನೆ

ಕುಂದಾಪುರ: ಭಂಡಾರ್ಕಾರ್ಸ್‌ ಕಾಲೇಜು ಬಡಗುತಿಟ್ಟಿನ ಯಕ್ಷಗಾನ ಸ್ಪರ್ಧೆಯನ್ನು ಆಯೋಜಿಸುವ ಮೂಲಕ ಯಕ್ಷಗಾನ ಹೊಸ ಪರಂಪರೆಯನ್ನು ಸೃಷ್ಟಿಸಿದೆ ಎಂದು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ಪ್ರೊ| ಎಂ.ಎಲ್‌. ಸಾಮಗ ಹೇಳಿದರು.
      ಅವರು ಸುವರ್ಣ ಮಹೋತ್ಸವ ಸಂಭ್ರಮವನ್ನು ಆಚರಿಸುತ್ತಿರುವ
ಭಂಡಾರ್ಕಾರ್ಸ್‌ ಕಾಲೇಜಿನಲ್ಲಿ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಸಹಯೋಗದಿಂದ ಅಂತರ್‌ ಕಾಲೇಜು ಬಡಗುತಿಟ್ಟು ಯಕ್ಷಗಾನ ಸ್ಪರ್ಧೆ ಯಕ್ಷೋತ್ಸವ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
          ಕಾಲೇಜು ಮಟ್ಟದಲ್ಲಿ ಯಕ್ಷಗಾನ ಸ್ಪರ್ಧೆ ಆಯೋಜಿಸುವ ಮೂಲಕ ಯುವ ಜನಾಂಗದಲ್ಲಿ ಯಕ್ಷಗಾನದ ಬಗ್ಗೆ ಆಸಕ್ತಿ ಹಾಗೂ ಅದನ್ನು ಆಸ್ವಾದಿಸುವ ಆಸಕ್ತಿ ಬೆಳೆಯಲು ಸಾಧ್ಯ. ತೆಂಕುತಿಟ್ಟಿನಲ್ಲಿ ಯಕ್ಷಗಾನ ಸ್ಪರ್ಧೆಯನ್ನು ಕಾಲೇಜು ಮಟ್ಟದಲ್ಲಿ ಈ ಹಿಂದೆ ಆಯೋಜಿಸಲಾಗಿತ್ತು. ಆದರೆ ಬಡಗು ತಿಟ್ಟಿನ ಯಕ್ಷಗಾನ ಸ್ಪರ್ಧೆ ನಡೆಸುತ್ತಿರುವುದು ಯಕ್ಷಗಾನ ಕಲೆ ಬೆಳೆಯುವಲ್ಲಿ ವಿಶಿಷ್ಟ ಹೆಜ್ಜೆಯಾಗಿದೆ. ಎಂದು ಅವರು ಅಭಿಪ್ರಾಯಪಟ್ಟರು.
        ಯಕ್ಷೋತ್ಸವ ಕಾರ್ಯಕ್ರಮವನ್ನು ಉದ್ಯಮಿ ಕೃಷ್ಣಮೂರ್ತಿ ಮಂಜ ಅವರು ಉದ್ಘಾಟಿಸಿ ಮಾತನಾಡಿ, ಯಕ್ಷಗಾನ ಗಂಡುಮೆಟ್ಟಿನ ಕಲೆ. ಹಲವಾರು ವರ್ಷಗಳ ಇತಿಹಾಸ ಉಳ್ಳ ಕೂಚುಪಡಿ ಯಕ್ಷಗಾನಕ್ಕೆ ಮೂಲವಾಗಿದೆ. ಆದರೆ ಕರ್ನಾಟಕದ ಕರಾವಳಿಯನ್ನು ಹೊರತುಪಡಿಸಿದರೆ ಯಕ್ಷಗಾನಕ್ಕೆ ಬೇರೆ ಎಲ್ಲಿಯೂ ಸಾಕಷ್ಟು ಪ್ರೋತ್ಸಾಹ ದೊರಕುತ್ತಿಲ್ಲ. ಈ ಕಲೆಗೆ ಹೆಚ್ಚಿನ ಪ್ರೋತ್ಸಾಹ ನೀಡಿ ಉಳಿಸಿ ಬೆಳೆಸಬೇಕಾದ ಕರ್ತವ್ಯ ಇಂದಿನ ಯುವ ಪೀಳಿಗೆಯ ಮೇಲಿದೆ ಎಂದರು.
       ಮುಖ್ಯ ಅತಿಥಿಯಾಗಿದ್ದ ಮಣಿಪಾಲ ಅಕಾಡೆಮಿ ಆಫ್‌ ಜನರಲ್‌ ಎಜುಕೇಶನ್‌ನ ಆಡಳಿತಾಧಿಕಾರಿ ಡಾ| ಎಚ್‌. ಶಾಂತಾರಾಮ್‌ ಮಾತನಾಡಿ, ಯಕ್ಷಗಾನ ಸ್ಪರ್ಧೆ ಈ ವರ್ಷಕ್ಕೆ ಸೀಮಿತವಾಗದೇ ಮುಂದಿನ ವರ್ಷಗಳಲ್ಲೂ ನಡೆಸಿಕೊಂಡು ಬರಬೇಕು ಎಂದರು.
     ಕಾಲೇಜಿನ ವಿದ್ಯಾರ್ಥಿ ನವೀನ್‌ ಆರ್‌.ಜಿ. ಅವರು ರಚಿಸಿದ "ಚಿಲುಮೆ" ಪುಸ್ತಕವನ್ನು ಪ್ರೊ| ಎಂ.ಎಲ್‌. ಸಾಮಗ ಬಿಡುಗಡೆಗೊಳಿಸಿದರು.
     ಪ್ರಾಂಶುಪಾಲ ಪ್ರೊ| ಚಂದ್ರಶೇಖರ ದೋಮ ಸ್ವಾಗತಿಸಿದರು. ಯಕ್ಷಗಾನ ಸ್ಪರ್ಧೆ ಕಾರ್ಯಕ್ರಮದ ಸಂಚಾಲಕ ಡಾ| ರಮೇಶ್‌ ಚಿಂಬಾಳ್ಕಕರ್‌ ಪ್ರಸ್ತಾವನೆಗೈದರು. ಉಪನ್ಯಾಸಕ ಪ್ರಸನ್ನ ಕುಮಾರ್‌ ಐತಾಳ್‌ ಕಾರ್ಯಕ್ರಮ ನಿರ್ವಹಿಸಿದರು. ಪ.ಪೂ. ಕಾಲೇಜಿನ ಪ್ರಾಂಶುಪಾಲ ಜಿ.ಎಂ. ಗೊಂಡ ವಂದಿಸಿದರು.
                                                                                              -ಅಶ್ವಿನಿ ಭಟ್