ಸಿರಿ ಆರದ ಮೋಡಿಗಾರ ಶಿರಿಯಾರ ಮಂಜು ನಾಯ್ಕರು

       ಬಡಗು ತಿಟ್ಟಿನ ಅಭಿಜಾತ ಕಲಾವಿದನಾಗಿ, ಪ್ರಸಿದ್ದ ಪುರುಷವೇಷಧಾರಿಯಾಗಿ ಸುಮಾರು ಅರ್ದ ದಶಕಗಳಕಾಲ ನಡುತಿಟ್ಟಿನ ಪ್ರಾತಿನಿಧಿಕ ಕಲಾವಿದನಾಗಿ ಮೆರೆದವರು ಶಿರಿಯಾರ ಮಂಜುನಾಯ್ಕರು. 

         ಬಡಗುತಿಟ್ಟಿನ ಸುಪ್ರಸಿದ್ದ ಕಲಾವಿದರಲ್ಲಿ ಶಿರಿಯಾರ ಮಂಜುನಾಯ್ಕರದ್ದು ಮೇಲ್ಪಂಕ್ತಿಯ ಹೆಸರು. ಬದುಕಿದ್ದರೆ ಅವರಿಗೆ ಈಗ ಸುಮಾರು ಎಂಬತ್ನಾಲ್ಕರ ಸಂಬ್ರಮ. ಸುಮಾರು 25 ವರ್ಷದ ಹಿಂದೆ ಮಣಿಪಾಲದ ಗೋಲ್ಡನ್ ಜುಬಿಲಿ ಹಾಲ್ ನಲ್ಲಿ ನೆಡೆದ ಪ್ರದರ್ಶನವೊಂದರಲ್ಲಿ ಬೀಷ್ಮ ವಿಜಯದ ಅವರ ನೆಚ್ಚಿನ ಪುರುಷವೇಷವಾದ ಪರಶುರಾಮನಾಗಿ ರಂಗಸ್ಥಳ ಪ್ರೇವೇಶಿಸಿದ ನಾಯ್ಕರು ಸಹಸ್ರಾರು ಪ್ರೇಕ್ಷಕರ ಎದುರಿಗೆ ಕುಸಿದು ಬಿದ್ದು ರಂಗಸ್ಥಳದಲ್ಲೇ ಇಹಲೋಕದ ಯಾತ್ರೆ ಮುಗಿಸಿದರು. ಮಾಧ್ಯಮಗಳು ಮುಖಪುಟದಲ್ಲಿ ರಂಗಸ್ಥಳದಲ್ಲೆ ಕುಸಿದು ಶಿರಿಯಾರ ನಿಧನ ಎಂಬ ವಾರ್ತೆಯನ್ನು ದೊಡ್ಡದಾಗಿ ಬಿಂಬಿಸಿದವು. ಯಾರಿಗೆ ತಾನೆ ಇಂತಹ ಸಾವು ಬರಲು ಸಾದ್ಯ ಇಂತಹ ಕಲಾತಪಸ್ವಿಗಲ್ಲದೆ?. ಈಗ ಕೇವಲ ಅವರ ನೆನಪು. ಆದರೆ ಆ ನೆನಪು ಸುಮದುರ ಮತ್ತು ಅಭಿಮಾನಿಗಳ ಪಾಲಿಗೆ ಹೊಚ್ಚ ಹಸಿರು. 

ವೃತ್ತಿ ಹಾಗೂ ಕಲಾಸೇವೆ
      ಕುಂದಾಪುರ ತಾಲೂಕಿನ ಶಿರಿಯಾರ ಗ್ರಾಮ ಯಕ್ಷಗಾನದ ನಕ್ಷೆಯಲ್ಲಿ ದೊಡ್ಡ ಸ್ಥಾನ ಪಡೆಯಲು ಕಾರಣ ಶಿರಿಯಾರ ಮಂಜುನಾಯ್ಕರು. ಬಡಗುತಿಟ್ಟಿನ ತವರೂರು ಎಂದು ಕರೆಯಲ್ಪಡುವ ಶಿರಿಯಾರ-ಹಳ್ಳಾಡಿ ಪರಿಸರದಿಂದ ಮಹಾನ್ ಕಲಾವಿದರು ಆಗಿ ಹೋಗಿದ್ದಾರೆ. ಅದರಲ್ಲಿ ಅಗ್ರಪಂಕ್ತಿಯ ಹೆಸರು ಮಂಜು ನಾಯ್ಕರದ್ದು. ಅಪೂರ್ವವಾದ ಶ್ರುತಿ ಬದ್ದತೆ, ಕೋಮಲವಾದ ಕಂಠ, ವ್ಯಾಕರಣಬದ್ದ ಮಾತುಗಾರಿಕೆ ಅವರ ಆಸ್ತಿ. ಬಡಗುತಿಟ್ಟಿನ ಹಿರಿಯ ಮದ್ದಳೆಗಾರ ದಿ. ಸುರಗಿಕಟ್ಟೆ ಬಸವಗಾಣಿಗರು ನಾಯ್ಕರಬಗ್ಗೆ ಮಾತನಾಡುತ್ತಾ, ಮಂಜು ನಾಯ್ಕರು ಅರ್ಥ ಹೇಳುವಾಗ ಮದ್ದಳೆ ಶ್ರುತಿ ಮಾಡಬಹುದು. ಶ್ರುತಿ ಪೆಟ್ಟಿಗೆಯ ಅಗತ್ಯವಿಲ್ಲ ಎಂಬುದು ನಾಯ್ಕರ ಶ್ರುತಿಬದ್ದತೆಗೆ ಹಿಡಿದ ಕನ್ನಡಿ. ಮಂಜು ನಾಯ್ಕರಲ್ಲಿ ವಿಶೇಷವಾಗಿ ಗಮನಿಸ ಬೇಕಾಗಿದ್ದು ವೇಷಗಾರಿಕೆಯ ಸೊಗಸು ಮತ್ತು ಮಾತುಗಾರಿಕೆಯ ಮೋಡಿ. ಪಾರಿಜಾತ ಪ್ರಕರಣಾದ ಕೃಷ್ಣ ಅದು ಎಷ್ಟು ಸಂಪ್ರದಾಯಬದ್ದವೆಂದರೆ ಅದನ್ನು ಮೀರಿಸುವ ಕೃಷ್ಣ ಬಡಗಿನ ರಂಗಸ್ಥಳದಲ್ಲಿ ಈ ವರೆಗೆ ಕಾಣಸಿಗಲಿಲ್ಲ. ಸಾಂಪ್ರದಾಯದ ವಿನ್ಯಾಸದಿಂದ ಕಂಗೊಳಿಸುವ ಚಲುವಿನ ಅವರ ಜಾಂಬವತಿ ಕಲ್ಯಾಣ ಸುಭದ್ರಾಕಲ್ಯಾಣ, ಕನಕಾಂಗಿ ಕಲ್ಯಾಣ, ರತಿ ಕಲ್ಯಾಣ, ಕೃಷ್ಣಾರ್ಜುನ, ಕರ್ಣಾರ್ಜುನ ಮುಂತಾದ ಪ್ರಸಂಗಗಳ ಅವರ ನೆರಿಯುಟ್ಟು ಕಂಗೊಳಿಸುವ ಕೃಷ್ಣ ನೋಡುಗರ ಕಣ್ಣಿಗೆ ಹಬ್ಬ. ಅವರ ಅಂಗ ಸೌಷ್ಟವ ಮುಖ ಬಿಂಬ ಆ ಪಾತ್ರಕ್ಕೆ ಹೇಳಿ ಮಾಡಿಸಿದಂತಿತ್ತು. ಅವರಿಗೆ ಹೆಸರು ತಂದಿತ್ತ ಪಾತ್ರಗಳು ಸಮಗ್ರ ಭೀಷ್ಮದ ದೇವವ್ರತ, ಚಂದ್ರಹಾಸ ಚರಿತ್ರೆಯ ಚಂದ್ರಹಾಸ, ಮತ್ತು ನಳ ದಮಯಂತಿಯ ಋತುಪರ್ಣ. 

ದಿಗ್ಗಜರ ಒಡನಾಟ
      ಮ೦ದಾರ್ತಿ ಮೇಳದಲ್ಲಿ ದಿ. ಜಾನುವಾರುಕಟ್ಟೆಯವರ ಬಾಗವತಿಕೆಯಲ್ಲಿ ಕೊರ್ಗು ಹಾಸ್ಯಗಾರರ ಬಾಹುಕ ಅರಾಟೆ ಮಂಜುನಾಥರ ದಮಯಂತಿಗೆ ನಾಯ್ಕರ ಋತುಪರ್ಣ ನೋಡುಗರ ಕಣ್ಣನ್ನು ಒದ್ದೆಯಾಗಿಸುತಿತ್ತು. 1972ರ ಸುಮಾರಿಗೆ ಸಾಲಿಗ್ರಾಮ ಮೇಳದಲ್ಲಿ ವರ್ಷವಿಡಿ ಜಯ ಬೇರಿ ಬಾರಿಸಿದ ಸಮಗ್ರ ಬೀಷ್ಮ ಪ್ರಸಂಗದಲ್ಲಿ ಗುರು ವೀರಭದ್ರ ನಾಯ್ಕರ ಶಂತನು ದಿ. ಹೇರಾಂಜಾಲು ವೆಂಕಟರಮಣರ ಸತ್ಯವತಿ, ಮಹಾಬಲ ಹೆಗಡೆಯವರ ಬೀಷ್ಮ, ಗಜಾನನ ಹೆಗಡೆಯವರ್ ಅಂಭೆ, ಶಂಭು ಹೆಗಡೆಯವರ ಸಾಲ್ವ, ಹರಾಡಿ ಮಹಾಬಲ ಗಾಣಿಗರ ಕಿರಾತ, ಮಲ್ಪೆ ಶಂಕರನಾರಾಯಣ ಸಾಮಗರ ಪರಶುರಾಮ. ಕುಂಜಾಲು ರಾಮಕೃಷ್ಣರ ಕಂದರನ ಪಾತ್ರಕ್ಕೆ ನಾಯ್ಕರ ದೇವವ್ರತ, ಮತ್ತು ಪರ್ವದ ಕೃಷ್ಣನ ಪಾತ್ರದ ಅಭಿನಯವನ್ನು ಇಂದಿಗೂ ಪೇಕ್ಷಕರು ನೆನಪಿಸುತ್ತಾರೆ. 

ಮಹಾಬಲ ಹೆಗಡೆಯವರ ದುಷ್ಟಬುದ್ದಿ ಗಜಾನನ ಹೆಗಡೆಯವರ ವಿಷಯೇ ಶಂಭು ಹೆಗಡೆಯವರ ಮದನನಿಗೆ ಚಂದ್ರಹಾಸನಾಗಿ ನಾಯ್ಕರ ಅಭಿನಯ ಅಸಧಾರಣ. ಯಕ್ಷಗಾನದ ವೇಷಭೂಷಣವೂ ಇಲ್ಲದೆ, ಕುಣಿತವೂ ಇಲ್ಲದ ಬಾವಪೂರ್ಣ ಪಾತ್ರವಾದ ವಸಂತ ಸೇನೆಯ ಚಾರುದತ್ತ ಇವರಿಗೆ ವಿಶೇಷ ಕೀರ್ತಿಯನ್ನು ತಂದಿತ್ತ ಪಾತ್ರ. ಸಾಲಿಗ್ರಾಮ ಮೇಳದಲ್ಲಿ ದಿ. ಮರವಂತೆ ನರಸಿಂಹ ದಾಸರ ಸುಶ್ರಾವ್ಯ ಕಂಠಸಿರಿಯಲ್ಲಿ ಅರಾಟೆಯವರ ವಸಂತಸೇನೆ, ಕುಮಟಾ ಗೋವಿಂದ ನಾಯ್ಕರ ಶಕಾರ, ನಾಯ್ಕರ ಚಾರುದತ್ತ ಒಂದು ಅಮೋಘ ಜೋಡಿಯಾಗಿ ಮೆರೆದಿತ್ತು. 
       ಮಂಜು ನಾಯ್ಕರು ಮ೦ದಾರ್ತಿ ಮೇಳದಲ್ಲಿ ಮೈಕು ಲೈಟಿಂಗ್ ಇಲ್ಲದ ಬಯಲು ರಂಗಸ್ಥಳದಲ್ಲಿ ಮೇರು ಕಲಾವಿದರಾದ ಹಾರಾಡಿ ರಾಮ ಗಾಣಿಗರೊಂದಿಗೆ ದೀರ್ಘಕಾಲ ತಿರುಗಾಟ ನೆಡೆಸಿ ಮೇಳಕ್ಕೆ ಘನತೆತಂದಿತ್ತವರು. ಹಾರಾಡಿ ರಾಮಗಾಣಿಗರ ಎರಡನೇ ವೇಷಕ್ಕೆ ಇವರ ಪುರುಷವೇಷ ಸರಿಸಾಟಿಯಾಗಿತ್ತು. ಅರ್ಜುನ-ಕೃಷ್ಣ, ಜಾಂಬವ-ಕೃಷ್ಣ, ಕರ್ಣ-ಅರ್ಜುನ, ಅರ್ಜುನ-ಸುದನ್ವ ಜೋಡಿಗಳು ಅಪಾರ ಪ್ರೇಕ್ಷಕರನ್ನು ರಂಜಿಸಿತ್ತು. ಹೊಸ ಪ್ರಸಂಗದಲ್ಲೂ ಹಿಂದೆ ಬೀಳದ ಇವರು ಕಾಳಿಂಗ ನಾವಡರ ನಾಗಶ್ರೀ ಪ್ರಸಂಗದಲ್ಲಿ ಸೌಮ್ಯ ಪಾತ್ರವಾದ ಶುಬ್ರಾಂಗನ ಪಾತ್ರಕ್ಕೆ ಗರಿಷ್ಟ ಮಟ್ಟದ ನ್ಯಾಯ ಒದಗಿಸಿದ್ದರು. ಬಳಿಕ ಆ ಪಾತ್ರವನ್ನು ಮಾಡಿದ ವಾಸುದೇವ ಸಾಮಗರು, ನಗರ ಜಗನ್ನಾಥ ಶೆಟ್ಟರು, ಕುಮಟಾ ಗೋವಿಂದ ನಾಯ್ಕರು. , ಆರ್ಗೋಡು ಮೋಹನದಾಸ ಶೆಣೈ, ಕೋಟ ಸುರೇಶ, ಸಿದ್ದಕಟ್ಟೆ ಚನ್ನಪ್ಪ ಶೆಟ್ಟಿ, ವಿಶ್ವನಾಥ ಶೆಟ್ಟಿ, ಉಪ್ಪುಂದ ನಾಗೇಂದ್ರ ಮುಂತಾದವರು ಅವರು ಹಾಕಿಕೊಟ್ಟ ದಾರಿಯಲ್ಲೇ ಸಾಗಿ ಆ ಅಪೂರ್ವ ಪಾತ್ರಕ್ಕೆ ನ್ಯಾಯ ನೀಡಿದ್ದಾರೆ. 
      ಶಿರಿಯಾರ ಮಂಜು ನಾಯ್ಕರು ಮಾತುಗಾರಿಕೆಯಲ್ಲಿ ಉದ್ದಾಮ ಪಂಡಿತರನ್ನು ಮೀರಿಸುತಿದ್ದರು. ಅವರದ್ದು ಮೈಕಿಲ್ಲದ ಆ ದಿನಗಳಲ್ಲೂ ಬಹುದೂರ ಕೇಳಿಸುವ ಮದುರ ಕಂಠ. ಸಾಮಾನ್ಯ ವೇಷದಾರಿಯ ಮಿತಿಗೆ ಮೀರಿದ ವ್ಯಾಕರಣಬದ್ದ ಪ್ರೌಡ ಶೈಲಿ, ಸ್ಪಷ್ಟ ಉಚ್ಚಾರದ ಶಬ್ದ ಸಂಪತ್ತು. ನಿರರ್ಗಳವಾಗಿ ನಿರಾತಂಕವಾಗಿ ನಿರಾಯಾಸವಾಗಿ ಹರಿದು ಬರುವ ವಾಕ್ಯ, ಪುಂಖಾನುಪುಂಕವಾಗಿ ಹೊರಹೊಮ್ಮುವ ಪದಪುಂಜಗಳು, ಶ್ರೇಷ್ಟ ನಿರೂಪಣ ಸಾಮಥ್ರ್ಯ, ಇಂತಹ ವಿಶಿಷ್ಟ ಗುಣಗಳಿಂದ ಯಕ್ಷಗಾನಾಭಿಮಾನಿಗಳನ್ನು ಸೂಜಿಗಲ್ಲಿನಂತೆ ಸೆಳೆಯುವ ಕೇಂದ್ರ ಬಿಂದುವಾಗಿ ಅವರು ರಂಗಸ್ಥಳದಲ್ಲಿ ವಿಜ್ರಂಭಿಸಿದರು. ತಮ್ಮ ಮಾತಿನ ಮೋಡಿಯಿಂದ ಅವರೆಂದೂ ರಂಗಸ್ಥಳದ ಆವರಣ ಭಂಗ ಮಾಡುತ್ತಿರಲಿಲ್ಲ. ನೂರಕ್ಕೆ ನೂರು ಯಕ್ಷಗಾನ ಶೈಲಿಯಲ್ಲಿ ಪ್ರಸಂಗ ಪದ್ಯದ ಸದಾಶಯವನ್ನು ಬಿಡದೆ ಕಡೆದು ನಿಲ್ಲಿಸಿದ ಬಿಂಬದ ಸ್ವರೂಪವನ್ನು ಸುಲಲಿತವಾಗಿ ಪ್ರೇಕ್ಷಕರಿಗೆ ಮುಟ್ಟಿಸುತಿದ್ದರು. ಸುಂದರವಾದ ವಾಕ್ಯ, ಚಂದವಾದ ಶೈಲಿ, ಆಕರ್ಷಕವಾದ ನಿರೂಪಣೆ , ಶ್ರೀಮಂತವಾದ ವಿಷಯ ಸಂಪತ್ತು , ಇವೆಲ್ಲವನ್ನು ಪಾತ್ರೋಚಿತವಾಗಿ ಹಿತಮಿತಗೊಳಿಸಿ ಪ್ರಸ್ತುತಪಡಿಸುತಿದ್ದ ರೀತಿ ಪಂಡಿತ ಪಾಮರರೆಂಬ ಬೇದವಿಲ್ಲದೆ ಎಲ್ಲರನ್ನು ಮೋಡಿ ಮಾಡಿಸುತಿತ್ತು. ನಂದನವನ ಪ್ರವೇಶಿಸಿದ ಕೃಷ್ಣನು ಸತ್ಯಬಾಮೆಯನ್ನು ಕೈಹಿಡಿದು ರಂಗಸ್ಥಳದಲ್ಲಿ ಸುತ್ತಾಡುತ್ತಾ ವನವರ್ಣನೆ ಮಾಡುವ ವಿಧಾನವೊಂದೆ ಸಾಕು ಅವರ ಸುಂದರ ಮಾತುಗಾರಿಕೆಯ ಮಾದರಿಗೆ. ಮಲಗಿರುವ ಪಿತನನ್ನು ಎಬ್ಬಿಸುತ ಗಾಂಗೇಯ ಎನ್ನುವಲ್ಲಿ ಶಂತನು ಚಕ್ರವರ್ತಿಯನ್ನು ಮಾತನಾಡಿಸುವಲ್ಲಿನ ಅಭಿನಯವೊಂದೆ ಸಾಕು ಅವರ ಅಭಿನಯದ ಮಾದರಿಗೆ. 
      ರಸಭಾವಗಳ ಪರಿಪುಷ್ಪ ಪೋಷಣೆಯಲ್ಲಿ ಅವರು ತೋರಿಸುತಿದ್ದ ಅಸಾಧಾರಣ ಪ್ರತಿಭೆ ನಿಜಕ್ಕೂ ಪ್ರಶಂಸಾರ್ಹ. ಅರ್ಜುನನು ''ಆವರಾಯನಾತ್ಮಭವನೋ ವೀರನೀತ'' ಎಂದು ತನ್ನನ್ನು ಹಿಯಾಳಿಸಿದಾಗ ನಖಶಿಖಾಂತ ಕೋಪಾವೇಷ ಭರಿತನಾದ ಬಬ್ರುವಾಹನನಾಗಿ ನಾಯ್ಕರು ತೋರಿಸುತಿದ್ದ ಪ್ರಬುದ್ದವಾದ ಅಭಿನಯ ಚಾತುರ್ಯ ಅನುಪಮ. ಅದೆ ರೀತಿ ತಿಳಿದೆನು ನಿನ್ನಯ ಚಿತ್ತದುಮ್ಮಳಿಕೆಯ ನಿಜದೊಲವ ಎನ್ನುತಾ ಸುದನ್ವನು ಕೃಷ್ಣನಿಗೆ ಹೇಳುವ ಪದ್ಯಬಾಗದಲ್ಲಿ ಅವರು ತೋರಿಸುತಿದ್ದ ಭಕ್ತಿಬಾವ, ರಥದ ವೇಗವನ್ನು ಗಮನಿಸಿ ಬಾಹುಕನಲ್ಲಿ ''ನೀನಾರೆಂದು ಅರುಹು'' ಅನ್ನುವಲ್ಲಿನ ದೈನ್ಯತಾಬಾವ, ''ಬಣ್ಣಿಸಲೇನೀ ಮಂದಿರವ'' ಎನ್ನುವಲ್ಲಿ ರಾಜಾ ವತ್ಸಾಖ್ಯನಾಗಿ ಅವರ ಶ್ರಂಗಾರ ಭಾ. ''ಬಲಾ ಬಲಾ ಬಲ್ ಸಂತೋಷವಾಯಿತು ಏನ ಹೇಳಲಿ ನನ್ನಣ್ಣ'' ಎನ್ನುವಲ್ಲಿ ಕೃಷ್ಣನು ಬಲರಾಮನನ್ನಿ ಛೇಡಿಸುವ ಹಾಸ್ಯಬಾವ, ದಾಸರಾಜನೆದುರು ದೇವವ್ರತನಾಗಿ ಎರಡೆರಡು ಬೀಷ್ಮ ಪ್ರತಿಜ್ಝೆ ಕೈಗೊಂಡಾಗ ಚಂಡೆ ಮದ್ದಳೆಯ ಅಬ್ಬರದ ನುಡಿತದ ಹಿನ್ನೆಲೆಯಲ್ಲಿ ಅವರ ನರ್ತನಾಭಿನಯ ಸಾಮಥ್ರ್ಯ ಪರಾಕಾಷ್ಟೆಗೇರುವ ದೃಶ್ಯ ಮನಮೋಹಕವಾಗುತಿತ್ತು. 

ವೃತ್ತಿ ಹಾಗೂ ಕಲಾಸೇವೆ
        ಮಂಜುನಾಯ್ಕರು ಒಂದೇ ಮೇಳದಲ್ಲಿ ಹೆಚ್ಚು ವರ್ಷ ತಿರುಗಾಟ ನೆಡೆಸಿ ಧಾಖಲೆ ನಿರ್ಮಿಸಿದವರು. ಬಡಗುತಿಟ್ಟಿನ ಬಹುತೇಕ ಕಲಾವಿದರಂತೆ ಶ್ರೀ ಮ೦ದಾರ್ತಿ ಮೇಳದಲ್ಲಿ ಗೆಜ್ಜೆಕಟ್ಟಿ ಪರಿಪೂರ್ಣ ಕಲಾವಿದರಾಗಿ ರೂಪುಗೊಂಡು ಬಳಿಕ ಸಾಲಿಗ್ರಾಮ ಮೇಳದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದರು. ಪೆರ್ಡೂರು ಮೇಳದ ಯಜಮಾನರಾಗಿ ಮೇಳವನ್ನು ಮುನ್ನೆಡಿಸಿ ಯಜಮಾನಿಕೆಯ ಸಿಹಿಕಹಿಯನ್ನೂ ಉಂಡವರು. ಜೀವಿತದ ಕೊನೆಯವರೆಗೂ ಸಾಲಿಗ್ರಾಮ ಮೇಳದಲ್ಲಿ ಸೇವೆಸಲ್ಲಿಸಿದ ಅವರು ದಿ. ಪಳ್ಳಿ ಸೋಮನಾಥ ಹೆಗ್ಡೆಯವರ ನೆಚ್ಚಿನ ಕಲಾವಿದರಾಗಿದ್ದರು. ಸಾಲಿಗ್ರಾಮ ಮೇಳದ ತಿರುಗಾಟದ ಪ್ರಥಮ ಆಟ ನಿರಂತರವಾಗಿ ಶಿರಿಯಾರದಲ್ಲೆ ನೆಡೆಯುತ್ತಿರುವುದು ಮೇಳಕ್ಕೂ ಮಂಜುನಾಯ್ಕರಿಗು ಇರುವ ನಂಟನ್ನು ಸೂಚಿಸುತ್ತದೆ. 

ಚಿತ್ರ ಲೇಖನ-ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ 

ನಿಮ್ಮ ಅಭಿಪ್ರಾಯ ಬರೆಯಿರಿ 
ಕುಂದಾಪ್ರ ಡಾಟ್ ಕಾಂ- editor@kundapra.com