ಪರಶುರಾಮನ ಸೃಷ್ಟಿಯ ಸಪ್ತ ಮೊಕ್ಷ ಕ್ಷೇತ್ರಗಳಲ್ಲಿ ನಾಲ್ಕು ಕ್ಷೇತ್ರಗಳಾದ ಕುಂಭಾಶಿ, ಕೊಲ್ಲೂರು, ಕೊಟೇಶ್ವರ ಹಾಗೂ ಶಂಕರನಾರಾಯಣ ಕ್ಷೇತ್ರಗಳಿರುವುದು ಕುಂದಾಪುರ ತಾಲೂಕಿನಲ್ಲಿಯೇ ಎಂಬುದು ಕುಂದಾಪುರದ ಹಿರಿಮೆ. ಆ ಪೈಕಿ ಕ್ರೋಢಶಂಕರನಾರಾಯಣ ಕ್ಷೇತ್ರವು ಪೌರಾಣಿಕ, ಐತಿಹಾಸಿಕ ಹಿನ್ನಲೆಯುಳ್ಳ ಪ್ರಸಿದ್ಧ ಕ್ಷೇತ್ರವಾಗಿದೆ. ಕುಂದಾಪುರದಿಂದ ಸುಮಾರು 24 ಕಿ.ಮೀ ದೂರದಲ್ಲಿರುವ ಕ್ಷೇತ್ರವು ಉದ್ಬವ ಲಿಂಗವಾದ ಶಿವ ಹಾಗೂ ವಿಷ್ಣುವನ್ನು ಒಟ್ಟಿಗೆ ಆರಾದಿಸುವ ಪುಣ್ಯ ಸ್ಥಳ.
ಇತಿಹಾಸ:

ಉದ್ಭವಲಿಂಗದ ಸುತ್ತಲೂ ಸಿದ್ಧಾಮೃತ ತೀರ್ಥವಿದೆ. ಬಲದಲ್ಲಿ ಭಾರ್ಗವ ತೀರ್ಥವಿದೆ. ದೇವಾಲಯದ ಮುಂಭಾಗದಲ್ಲಿ ಕೋಟಿತೀರ್ಥವಿದೆ.

ಶಂಕರನಾರಾಯಣ ದೇವಸ್ಥಾನದಲ್ಲಿ ಮಹಾಗಣಪತಿ, ಗೋಪಾಲಕೃಷ್ಣ, ಪಂಚಮುಖಿ ವೀರಾಂಜನೇಯ, ಪಾರ್ಥೇಶ್ವರ, ಗೌರಿ-ಲಕ್ಷ್ಮೀ, ಬೆಳ್ಳಿ ಶಂಕರನಾರಾಯಣ ದೇವರುಗಳ ಪೂಜಾ ಸ್ಥಾನಗಳಿವೆ.
ದೇವಸ್ಥಾನದಲ್ಲಿರುವ ಚಿನ್ನದ ಪಾದುಕೆಗಳಲ್ಲಿರುವ ಉಂಗುಷ್ಠದಲ್ಲಿ ಬೆಲೆಬಾಳುವ ಕೆಂಪು ಹರಳುಗಳಿವೆ. ಇವು ಸುಮಾರು ಐನೂರು ವರ್ಷಗಳ ಹಿಂದೆ ರಾಜಮಾಹಾರಾಜರುಗಳು ಭಕ್ತಿಪೂರ್ವಕವಾಗಿ ನೀಡಿದ ಕಾಣಿಕೆಗಳು ಎನ್ನಲಾಗಿದೆ.
ದೇವಸ್ಥಾನದ ದರ್ಬಾರ್ ಚಾವಡಿಯ ಉಪ್ಪರಿಗೆಯಲ್ಲಿಟ್ಟಿರುವ ಪಟ್ಟಿಕೆಗಳಲ್ಲಿ ರೂಪಿಸಲ್ಪಟ್ಟ ಆಕರ್ಷಕ ಕಲಾಕೃತಿಗಳ ಕೆತ್ತನೆ ಅದ್ಬುತ ರಚನೆಗಳಾಗಿವೆ. ದೇವಸ್ಥಾನದಲ್ಲಿರುವ ವಿದೇಶಿ ನಿರ್ಮಿತ ಕಂಚಿನ ಭಾರಿ ಘಂಟೆ ಅತ್ಯಂತ ಆಕರ್ಷಣೆಯದಾಗಿದೆ.

ಆರು ಕುಣಿಕೆಗಳ ಕಂಚಿನ ಈ ಘಂಟೆಯ ತೂಕವೇ ಸುಮಾರು 600 ಕೆಜಿ. ಭಾರತೀಯ ಸಂಪ್ರದಾಯಿಕ ರಚನೆಗಿಂತ ಭಿನ್ನವಾಗಿ, ಮೇಲ್ತುದಿ ಕೆಳತುದಿಗಳಲ್ಲಿ ಪಟ್ಟಿಯ ಕೆತ್ತನೆಯ ಪೋರ್ಚುಗೀಸ್ ಶೈಲಿಯ ಇಂಥದ್ದೊಂದು ಘಂಟೆ ಹಿಂದೂ ದೇಗುಲವೊಂದರಲ್ಲಿದೆ ಅನ್ನವುದೇ ಅಪೂರ್ವ ಸಂಗತಿ. ಲ್ಯಾಟೀನ್ ಬರಹ ಈ ಘಂಟೆಯಲ್ಲಿತ್ತೆಂದು ಉಲ್ಲೇಖವಿದ್ದರೂ (ಕರ್ನಾಟಕ ಸ್ಟೇಟ್ ಗಝಟಿಯರ್ : ಡಾ|| ಸೂರ್ಯನಾಥ ಕಾಮತ್) ಆ ಬರಹವೀಗ ಮಾಸಿದೆ. ಘಂಟೆ ಈ ದೇಗುಲಕ್ಕೆ ಬಂದಿರುವುದಕ್ಕೆ ಐತಿಹಾಸಿಕ ಹಿನ್ನಲೆ ಇದೆ. ದಿಗ್ವಿಜಯಕ್ಕೆ ಹೊರಟಿದ್ದ ಮೈಸೂರಿನ ದೊರೆ ಟಿಪ್ಪು ಸುಲ್ತಾನ್. ಎಲ್ಲೋ ಕೊಳ್ಳೆ ಹೊಡೆದ ಘಂಟೆಯನ್ನು ಶ್ರೀರಂಗ ಪಟ್ಟಣಕ್ಕೆ ತೆರಳುವ ದಾರಿಯನ್ನು ಎದುರಾದ ಶಂಕರನಾರಾಯಣಕ್ಕೆ ಈ ಕ್ಷೇತ್ರದ ಪವಾಡಗಳಿಗೆ ಮನಸೋತು ಭಕ್ತಿಯ ಕುರುಹಾಗಿ ಶಂಕರನಾರಾಯಣನಿಗೆ ಇದನ್ನು ಸಮರ್ಪಿಸಿರಬೇಕು ಅಥವಾ ಶಂಕರನಾರಾಯಣದ ಘಾಟಿ ಏರಿಯೇ ಅವನ್ನು ಮೈಸೂರಿಗೆ ತೆರಳಬೇಕಿತ್ತು. ಕರಾವಳಿಯಲ್ಲಿ ಟಿಪ್ಪುವಿಗೆ ಭಾರೀ ತೂಕದ ಈ ಘಂಟೆಯನ್ನು ಕಡಿದಾದ ಏರುಹಾದಿಯಲ್ಲಿ ಸಾಗಿಸಲು ತಲೆನೋವಾಗಿರಬೇಕು. ಘಟ್ಟದ ತಡಿಯ ಈ ದೇವರಿಗೆ ಗೌರವ ನೆನಪಿನ ದ್ಯೋತಕವಾಗಿಯೂ ಈ ಘಂಟೆ ಸಲ್ಲಿಸಿರಬಹುದು. ಎರಡು ಶತಕಗಳ ಐತಿಹ್ಯ ಹೊತ್ತಿರುವ ಟೀಪೂ ನೀಡಿದ ಈ ಭವ್ಯ ಘಂಟೆ ಹಿಂದೂ - ಮುಸ್ಲಿಮ್ ಸಾಮರಸ್ಯಕ್ಕೊಂದು ಸಂಕೇತವಾಗಿದೆ.
ಅನೇಕ ಶಿಲಾ ಶಾಸನಗಳು ದೇವಾಲಯದ ಆವರಣದಲ್ಲಿ ಹಾಗೂ ಸುತ್ತಮುತ್ತಲೂ ಇವೆ. ದೇವಸ್ಥಾನದಲ್ಲಿ ಪೂಜೆ ಮಂಗಳಾರತಿ ಆಗುವಾಗ ದೀವಟಿಗೆ ಹಿಡಿದವರು ನೆಲಮುಟ್ಟಿ ಸಲಾಂ ಮಾಡಿ, ಸಲಾಂ ಮಂಗಳಾರತಿಯ ಆರಾಧನೆ ನಡಿಸಿಕೊಡುವ ಪದ್ದತಿ ಇಲ್ಲಿದೆ. ಮಕರ ಸಂಕ್ರಾತಿಯಂದು ಹರಕೆ ಹೊತ್ತವರು ಹಿಮ್ಮುಖವಾಗಿ ಪ್ರದಕ್ಷಿಣೆ ಬರುವ ಕಂಚುಳ್ಳಿ ಸೇವೆ ಇಲ್ಲಿಯ ವಿಶೇಷ. ಶಂಕರನಾರಾಯಣ ನಿಸರ್ಗ ರಮಣೀಯ ಪರಿಸರ - ದೇವಸ್ಥಾನದ ಸುತ್ತಲೂ ಪರ್ವತ ಶ್ರೇಣಿಯಿಂದ ಆವರಿಸಲ್ಪಟ್ಟಿದೆ.
ರಥೋತ್ಸವ:
ಕಾಷ್ಠಶಿಲ್ಪ ಕೆತ್ತನೆಯ ವೈಭವದ ಬೃಹತ್ತಾದ ಆರು ಚಕ್ರಗಳ ಸ್ಕಂದನ ರಥವನ್ನು ಇಲ್ಲಿ ನೋಡಬಹುದು. ಪ್ರತಿವರ್ಷ ಸಂಕಾಂತ್ರಿಯ ಮೊದಲ ನಾಲ್ಕು ದಿನದಿಂದಲೇ ಶಂಕರನಾರಾಯಣ ಜಾತ್ರೆ ಆರಂಭಗೊಳ್ಳುತ್ತದೆ. ಏಳನೆಯ ದಿನ ರಥೋತ್ಸವ ಜರುಗುತ್ತದೆ. ಸಾವಿರಾರು ಜನರು ರಥೋತ್ಸವದಲ್ಲಿ ಪಾಲ್ಗೋಂಡು ಧನ್ಯರಾಗುವರು.
ಮಾರ್ಗ:
ಕುಂದಾಪುರ ಹಾಗೂ ಉಡುಪಿಯಿಂದ ಶಂಕರನಾರಾಯಣಕ್ಕೆ ಬಸ್ಸುಗಳ ವ್ಯವಸ್ಥೆ ಇದೆ.
ವಿಳಾಸ:
ಶ್ರೀ ಶಂಕರನಾರಾಯಣ ದೇವಸ್ಥಾನ,
ಶಂಕರನಾರಾಯಣ, ಕುಂದಾಪುರ – ತಾ
ಉಡುಪಿ – ಕರ್ನಾಟಕ.
ಪೋನ್: 08259 280551
ಮಾಹಿತಿ:
ರಾಘವೇಂದ್ರ ಕೋಟೇಶ್ವರ,
ಪರಶುರಾಮನ ಸೃಷ್ಟಿಯ ಸಪ್ತ ಕ್ಷೇತ್ರಗಳು- ಹೊತ್ತಿಗೆ.
ದೇವಳದ ಅಂತರ್ಜಾಲ ತಾಣ.
ಕುಂದಾಪ್ರ.ಕಾಂ- editor@kundapra.com