ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ, ಕುಂಭಾಸಿ

ಸಿದ್ದಿ ಕ್ಷೇತ್ರ ಎಂದೇ ಪ್ರಖ್ಯಾತಿ ಪಡೆದಿರುವ ಕುಂಭಾಸಿ, ಕುಂದಾಪುರದಲ್ಲಿನ ಪ್ರಸಿದ್ಧ ದೇವಾಲಯಗಳಲ್ಲೊಂದು. ಪರಶುರಾಮ ಸೃಷ್ಠಿಯ ಸಪ್ತ ಕ್ಷೇತ್ರಗಳಲ್ಲಿ ಇದೂ ಒಂದಾಗಿದೆ. ಕುಂದಾಪುರದಿಂದ ದಕ್ಷಿಣಕ್ಕೆ ರಾ.ಹೆ. 66ರಲ್ಲಿ ಸುಮಾರು 9 ಕಿ.ಮೀ. ದೂರದಲ್ಲಿ ಸಾಗಿದರೆ ಆನೆಗುಡ್ಡೆ (ಕುಂಭಾಸಿ) ಶ್ರೀ ವಿನಾಯಕ ದೇವರ ದರ್ಶನ ಪಡೆಬಹುದಾಗಿದೆ. ಇದು ಪುರಾತನವಾದ ಮತ್ತು ನಾಡಿನಾದ್ಯಂತ ಭಕ್ರಸಾಗರವನ್ನು ಹೊಂದಿರುವ ದೇವಾಲಯವಾಗಿದೆ.

ಪೌರಾಣಿಕ ಹಿನ್ನಲೆ:
     ಕುಂಭಾಸಿಗೆ ಹರಿಹರಕ್ಷೇತ್ರ, ಮಧುಕಾನನ, ಗೌತಮಕ್ಷೇತ್ರ, ನಾಗಾಚಲ, ಆನೆಗುಡ್ಡೆ, ಕುಂಭಕಾಶಿ ಮುಂತಾದ ಹೆಸರುಗಳಿವೆ. ಪ್ರತಿ ಹೆಸರಿನ ಹಿಂದೆಯೂ ಪೌರಾಣಿಕ ಕಥೆಗಳಿವೆ.
        ಹಿಂದೆ ಮಹಾತೇಜಸ್ವಿಯಾದ ಕುಂಭಾಸುರನೆಂಬ ರಾಕ್ಷಸನು ರಾಮಚಂದ್ರನಿಗೆ ಭಯಪಟ್ಟು ಮಹೇಂದ್ರಗಿರಿಯಲ್ಲಿ ಅವಿತುಕೊಂಡಿದ್ದನು. ಕಾಲಾಂತರದಲ್ಲಿ ಅಲ್ಲಿಂದ ಹೊರಟು ನಾರದನ ಮಾತಿನಂತೆ ಈಶ್ವರನನ್ನು ಮೆಚ್ಚಿಸಿ ವರಪಡೆದು ಮದೋನ್ಮತ್ತನಾಗಿ ಶ್ರೀ ಕ್ಷೇತ್ರಕ್ಕೆ ಬಂದು ಸಿಕ್ಕಿದ ಜನರನ್ನೆಲ್ಲ ದಂಡಿಸಿ ಸೇನಾಸಮೇತನಾಗಿ ರಾಜ್ಯ ಸ್ಥಾಪನೆ ಮಾಡಿ ರಾಜ್ಯಭಾರ ನಡೆಸತೊಡಗಿದನು. ಈತನಿಗೆ ಭಯಪಟ್ಟು ಅಲ್ಲಿನ ಜನರು ಓಡಿಗೋಗಬೇಕಾಗಿ ಬಂತು.. ಆ ಸಮಯ ಪಾಂಡವರು ದ್ರೌಪದಿ ಸಹಿತ ವನವಾಸಿಗಳಾಗಿ ತೀರ್ಥಯಾತ್ರೆ ಮಾಡುತ್ತಾ ತುಂಗಭದ್ರಾ ತೀರದಲ್ಲಿರುವುದನ್ನು ತಿಳಿದ ಗೌತಮಾದಿ ಮುನಿಗಳು ಅಲ್ಲಿಗೆ ಹೋಗಿ ತಮ್ಮ ಸಂಕಷ್ಟವನ್ನು ಪಾಂಡವರಲ್ಲಿ ತೊಡಿಕೊಂದರು. ಪರಿಸ್ಥಿತಿಯನ್ನರಿತ ಧರ್ಮರಾಯನು ಸೋದರರೊಡನೆ  ಕೂಡಿಕೊಂಡು ಭಾರ್ಗವ ಕ್ಷೇತ್ರವನ್ನು ಸೇರಿ ಮಧುವನಕ್ಕೆ ಬಂದು ಕ್ಷೇತ್ರದ ದರ್ಶನ ಮಾಡಿದನು. ಸ್ವಲ್ಪ ದಿನಗಳಲ್ಲಿ ನಾಗಾಚಲಕ್ಕೆ ಬಂದು ಗಣೇಶನನ್ನು ಅರ್ಚಿಸಿ ಭೀಮಾದಿಗಳನ್ನು ರಾಕ್ಷಸರ ಸಂಹಾರಕ್ಕೆ ಕಳುಹಿಸಿಕೊಟ್ಟನು. ಭೀಮಾದಿಗಳು ಶಂಖನಾದ ಮಾಡುತ್ತಾ ಮುಂದುವರೆಯಲು ಕುಂಭಾಸುರನು ಯುದ್ಧಕ್ಕೆ ಬಂದನು. ಭೀಮನಿಗೂ ಕುಂಭಾಸುರನಿಗೂ ಭಯಂಕರ ಗದಾಯುದ್ಧ ನಡೆಯಿತು. ಅದರಲ್ಲಿ ರಾಕ್ಷಸನೇ ಜಯಶಾಲಿಯಾಗುವಂತಿದ್ದಾಗ ಅಶರೀರವಾಣಿಯೊಂದುಂಟಾಯಿತು. ಕೂಡಲೇ ಭೀಮನು ಗಣೇಶನನ್ನು ಮನದಲ್ಲೇ ಸ್ಮರಿಸಿ, ಪ್ರಸಾದ ರೂಪವಾದ ಖಡ್ಗವನ್ನು ಧರಿಸಿ ಕುಂಭಾಸುರನನ್ನು ಸಂಹಾರ ಮಾಡಿ ಮತ್ತುಳಿದ ರಾಕ್ಷಸರನ್ನು ನಿರ್ನಾಮಗೊಳಿಸಿದನು. ಶರೀರವಾಣಿಯಂತೆ ಖಡ್ಗದ ಶಕ್ತಿಯಿಂದ ಅಸುರನ್ನು ಸಂಹಾರ ಮಾಡಿದ್ದರಿಂದ ಈ ಕ್ಷೇತ್ರ ಕುಂಭ+ಅಸಿ(ಖಡ್ಗ)= ಕುಂಭಾಸಿ ಎಂದು ಸುಪ್ರಸಿದ್ಧವಾಯಿತು.

          ಈ ದೇವಾಲಯವು ಅತೀ ಪುರಾತನವಾಗಿದ್ದು, ಅಲ್ಲಿಯೇ ಹತ್ತಿರದಲ್ಲಿ ನಾಗಾಚಲ ಅಯ್ಯಪ್ಪ ಸ್ವಾಮಿ ದೇವಾಲಯ ಹಾಗೂ ಇತರ ದೇವಾಲಯಗಳಿವೆ. ವಿನಾಯಕನ ಸನ್ನಿದಾನದಲ್ಲಿ ಪ್ರತಿನಿತ್ಯ ಅನ್ನದಾನ ಸೇವೆ ನಡೆಯುತ್ತದೆ,

ಪೂಜಾ ವಿನಿಯೋಗಾದಿಗಳು:
         ದೇವಾಲಯದಲ್ಲಿ ಬೆಳಿಗ್ಗೆ 5 ಘಂಟೆಗೆ, ಮಧ್ಯಾಹ್ನ 1.00 ಘಂಟೆಗೆ, ರಾತ್ರಿ 8.30 ಕ್ಕೆ ತ್ರಿಕಾಲದಲ್ಲಿ ಪೂಜೆ ನಡೆಯುತ್ತದೆ. ಬೆಳಿಗ್ಗೆ 6 ರಿಂದ ರಾತ್ರಿ 9 ರ ತನಕ ಅವಿರತವಾಗಿ ಭಕ್ತಾದಿಗಳಿಗೆ ದೇವರ ದರ್ಶನಕ್ಕಾಗಿ ದೇವಾಲಯ ಮುಕ್ತವಾಗಿರಯತ್ತದೆ. ವಾರದಲ್ಲಿ ಆದಿತ್ಯವಾರ, ಮಂಗಳವಾರ, ಶುಕ್ರವಾರ ಹಾಗೂ ಸಂಕ್ರಮಣ, ಸಂಕಷ್ಟಹರ ಚತುರ್ಥಿ ಹಾಗೂ ಗಣೇಶ ಚೌತಿ ದಿನಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಸೇರುತ್ತಾರೆ. ಮಾರ್ಗಶಿರ ಶುದ್ದ ಚತುರ್ಥಿ ವಾರ್ಷಿಕ ರಥೋತ್ಸವ ನಡೆಯುತ್ತದೆ. ವರ್ಷದಲ್ಲಿ 8-10 ಸಹಸ್ರ ನಾಳಿಕೇರ ಗಣಯಾಗ ನಡೆಯುತ್ತದೆ. ಇಲ್ಲಿಯ ಸೇವೆಗಳಲ್ಲಿ ಸತ್ಯಗಣಪತಿ ವೃತ, ಗಣಹೋಮ, ರಂಗಪೂಜೆ ವಿಶೇಷವಾಗಿ ನಡೆಯುತ್ತದೆ. ಸತ್ಯಗಣಪತಿ ವೃತವನ್ನು ಇಷ್ಟಾರ್ಥ ಸಿದ್ದಿಗಾಗಿ ಈ ಪೂಜೆಯನ್ನು ಮಾಡಿಸುತ್ತಾರೆ.
ಕೆ. ಲಕ್ಷ್ಮೀನಾರಾಯಣ ಉಪಾದ್ಯಾಯರು ದೇವಸ್ಥಾನದ ಅನುವಂಶಿಂಕ ಆಡಳಿತ ಮೊಕ್ತೇಸರಾಗಿದ್ದಾರೆ.

ದೇವಸ್ಥಾನದ ವಿಳಾಸ:
ಶ್ರೀ ಆನೆಗುಡ್ಡೆ ವಿನಾಯಕ ದೇವಸ್ಥಾನ,
ಕುಂಭಾಸಿ, ಕುಂದಾಪುರ - ತಾಲೂಕು.
ಉಡುಪಿ- ಜಿಲ್ಲೆ, ಕರ್ನಾಟಕ.
ದೂರವಾಣಿ: 08254-261079
08254-27222

ಮಾರ್ಗ:
     ಉಡುಪಿ ಕುಂದಾಪುರ ಮಧ್ಯೆ ಸಂಚರಿಸುವ ಬಸ್ಸುಗಳ ಮೂಲಕ ಕುಂಭಾಶಿ ತಲುಪಬಹುದಾಗಿದೆ. ಕುಂದಾಪುರ ರೈಲ್ವೆ ನಿಲ್ದಾಣಕ್ಕೂ ಸನಿಹವಿದೆ.

ಮಾಹಿತಿ: ಶ್ರೀ ಕ್ಷೇತ್ರ ಕುಂಭಾಸಿ-ಹೊತ್ತಿಗೆ.
ಕುಂದನಾಡು-ಹೊತ್ತಿಗೆ
ದೇವಳದ ಪ್ರಕಟಣೆಗಳು & ಸಂದರ್ಶನ.