ಮಾಧ್ಯಮ ಮತ್ತು ಯುವಜನಾಂಗ


     'ಮಾಧ್ಯಮ' ಸರ್ವರಿಗೂ ಸುಪರಿಚಿತವಾದ ಪದ. ಆದರೆ ಈ ಮೂರಕ್ಷರದ ಪದಕ್ಕೆ ನಿಗದಿತ ಚೌಕಟ್ಟಿನೊಳಗೆ ಅರ್ಥ ಕೊಡುವುದು ಕಷ್ಟಸಾಧ್ಯ. ಆದರೂ ಸರಳವಾಗಿ ಸುದ್ದಿ, ಸ್ವಾರಸ್ಯ, ಮನೋರಂಜನೆಗಳನ್ನು ನೀಡುವ ಅತೀ ಪ್ರಭಾವಶಾಲಿ ಅಂಗಕ್ಕೆ 'ಮಾಧ್ಯಮ' ಎನ್ನಬಹುದು. ಅದಕ್ಕೆ ಈ ಮಾಧ್ಯಮವನ್ನು ಸಂವಿಧಾನದ ನಾಲ್ಕನೇ ಅಂಗ, ಸಮಾಜದ ಕನ್ನಡಿಯೆನ್ನುತ್ತಾರೆ.
  'ಯುವಜನಾಂಗ' ದೇಶದ ಸಂಪತ್ತು. ಉತ್ಸಾಹ ತುಂಬಿತುಳುಕುವ, ಯಾವುದನ್ನು ಸಾಧಿಸಬಲ್ಲೆವೆಂಬ ಛಲವುಳ್ಳ ಜೊತೆಗೆ ಅತ್ಯಂತ ಸುಲಭವಾಗಿ ಹೊಸದರತ್ತ ಪ್ರಭಾವಿತರಾಗುವವರಿವರು. ಅತೀ ಚುಂಬಕ ಶಕ್ತಿಯುಳ್ಳ ಈ ಮಾಧ್ಯಮವು ಆಯಾಸ್ಕಾಂತದಂತೆ ಯುವ ಜನಾಂಗವನ್ನು ಆಕರ್ಷಿಸುತ್ತಿದೆ. ಪ್ರಸುತ್ತ ದಿನಾಮಾನಗಳಲ್ಲಿ ಯುವಜನರ ಪ್ರತಿ ನಡವಳಿಕೆಗಳಲ್ಲಿ ಮಾಧ್ಯಮಗಳ ಛಾಯೆ ದಟ್ಟವಾಗಿರುವುದನ್ನು ಕಾಣಬಹುದು.

    ಕೇವಲ ಉಡುಗೆ -ತೊಡುಗೆಗಳ ಮೇಲೆ ಮಾಧ್ಯಮಗಳ ಪ್ರಭಾವವಾಗಿದ್ದರೆ ದೊಡ್ಡ ವಿಷಯವೆನಲ್ಲ. ಆದರಿಂದು ಯುವಜನರ ಚಿಂತನೆಯ ಮೇಲೆ ಮಾಧ್ಯಮಗಳು ಪ್ರಭಾವ ಬೀರುತ್ತಿದೆ. ಇದು ನಿಜಕ್ಕೂ ಗಂಭೀರ ವಿಚಾರ. ಇಂದು ಮಾಧ್ಯಮಗಳು ಪಾಶ್ಚಾತ್ಯ ವಿಚಾರಗಳ ಆಧಾರಿತ, ಪಶ್ಚಿಮ ದೇಶಗಳಲ್ಲಿ ಹಿಟ್ ಆದ ರಿಯಾಲಿಟಿ ಶೋಗಳನ್ನು ನಕಲು ಮಾಡಿ, ಮೌಲ್ಯಗಳನ್ನು ಮರೆಸಿ ಹಣದ ಆಮಿಷ ತೋರಿಸಿ ಪ್ರೇಕ್ಷಕರಿಗೆ ಉಣಬಡಿಸುತ್ತಿವೆ. ಇಂತಹ ಶೋಗಳಲ್ಲಿ ಭಾಗವಹಿಸುವವರಲ್ಲಿಹೆಚ್ಚಿನವರು ಯವಜನತೆಯೇ ಎಂಬುದನಿಲ್ಲಿ ಗಮನಿಸಬೇಕು. ಯಾವುದೇ ಮೌಲ್ಯಗಳನ್ನು ಹೇಳಿಕೊಡದ, ಅಲ್ಲಲ್ಲಿ ಒಂಚೂರು ಇರುವ ಸಭ್ಯತೆ, ಸಂಸ್ಕಾರಗಳನ್ನು ಮರೆಸುವ ಇಂತಹ 'ರಿಯಾಲಿಟಿ ಶೋಗಳೇ ಸಾಕು ಯವಜನತೆಯ ಮೇಲೆ ಅವರ ಚಿಂತನೆಗಳ ಮೇಲೆ ಮಾಧ್ಯಮಗಳ ಪ್ರಭಾವವೆಷ್ಟುವೆಂಬುದನ್ನು ಅರಿಯಲು.
  ಹಾಗೆಂದು ಮಾಧ್ಯಮವನ್ನು ಸಂಪೂರ್ಣವಾಗಿ ತಿರಸ್ಕರಿಸುವಂತಿಲ್ಲ. ಇಡೀ ಮಾಧ್ಯಮಗಳ ಇನ್ನೊಂದು ಮುಖ ಜ್ನಾನದ ಒಡಲು ಎಂಬುದಿಲ್ಲಿ ಗಮನಾರ್ಹ. ಜನಸಾಮಾನ್ಯರ ಒಡಲ ದನಿಯನ್ನು ಗಟ್ಟಿಯಾಗಿ ಜಗಕ್ಕೆ ಹೇಳಬಲ್ಲ ಸಾಧನವೂ ಮಾಧ್ಯಮ. ಜಗದ ಮೂಲೆಯಲ್ಲೆಲ್ಲೋ ಮರೆಯಲ್ಲಿರುವ ಪ್ರತಿಭೆಗೆ ಜಗಮಾನ್ಯತೆ ನೀಡುವಷ್ಟು ಬೆಳಕು ಚೆಲ್ಲುವುದೂ ಮಾಧ್ಯಮ. ಹೀಗೆ ಮಾಧ್ಯಮವೆಂಬುವುದು ಸಕಾರಾತ್ಮಕ ಮತ್ತು ನಕಾರಾತ್ಮಕ ಎರಡೂ ಮುಖಗಳ ಕಾಂಚಾಣ. ಯಾವುದನ್ನು ಆರಿಸಬೇಕು ಎಂಬುವುದು ನಮಗೆ ಬಿಟ್ಟಿದ್ದು. ಆದರೆ ಪ್ರಸ್ತುತ ಸಮಾಜದಲ್ಲಿ ಮಾಧ್ಯಮಗಳ ದುಷ್ಪರಿಣಾಮಗಳೇ ಹೆಚ್ಚುತ್ತಿವೆ ಎಂಬುದು ಜೀವಂತ ಸತ್ಯ. ಆದ್ದರಿಂದ ಇದರ ಪರಿಣಾಮಗಳನ್ನು ಅವಲೋಕಿಸುವ, ನಮ್ಮೊಳಗೆ ಸಕಾರಾತಕ ಬದಲಾವಣೆಗಳನ್ನು ತಂದುಕೊಳ್ಳುವ ಅಗತ್ಯತೆ ಇಂದಿದೆ. ಈ ಬಗ್ಗೆ ನಮ್ಮಲ್ಲೊಂದು ಜಾಗೃತೆ ಮೂಡಬೇಕು.
ಲೇಖಕರು ಬೆಂಗಳೂರು ವಿವಿ  ಪ್ರಥಮ  ಎಂ.ಎ ವಿದ್ಯಾರ್ಥಿನಿ