ಎಲ್ಲವರಂತಲ್ಲವಯ್ಯ್ಲಾ... ನಮ್ಮ ಕಂಡೆಕ್ಟರ್ ಶೀನೂ...!


   ಇದು ಆಕರ್ಷಣೆಯ ಹುಚ್ಚು ಪ್ರೀತಿಯೋ ಗೊತ್ತಿಲ್ಲ! ಆದರೆ ಇಲ್ಲೊಬ್ಬರು ವಿದೇಶದಲ್ಲಿ ಕೈತುಂಬಾ ಸಂಬಳದ ಕೆಲಸವಿದ್ದರೂ ಬಿಟ್ಟು ಬಂದು ಕಂಡೆಕ್ಟರ್ ವೃತ್ತಿ ಅಪ್ಪಿಕೊಂಡಿದ್ದಾರೆ.ಪ್ರಾಣಕಿಂತ ಮಿಗಿಲಾಗಿ ವೃತ್ತಿಯನ್ನು ಪ್ರೀತಿಸುತ್ತಾರೆ. ಹೊಟ್ಟೆಪಾಡಿಗಾಗಿ ಕಂಡೆಕ್ಷರ್ ವೃತ್ತಿಯಾದರೂ, ಕಂಡೆಕ್ಟರ್ ವೃತ್ತಿಯೇ ಬದುಕಲ್ಲಾ ಎಂದು ನಂಬಿದವರು. ಅವರೇ ಕಂಡೆಕ್ಟರ್ ಶೀನೂ. ಆಲಿಯಾಸ್ ಶ್ರೀನಿವಾಸ ಆಲೂರು.
     ಕಂಡೆಕ್ಟರ್ ವೃತ್ತಿ ಬಗ್ಗೆ ಇದ್ದ ಆಕರ್ಷಣೆ, ಕಂಡೆಕ್ಟರ್ ಆಗಬೇಕು ಎನ್ನುವ ಹುಚ್ಚು ತುಡಿತ ಬಸ್ ಬಾಗಿಲಿಗೆ ಶೀನೂ ಅವರನ್ನು ತಂದು ನಿಲ್ಲಿಸಿದೆ. ಇವರು ಬರೇ ಕಂಡೆಕ್ಟರ್ ಆಗಿದ್ದರೆ ಹತ್ತರಲ್ಲಿ ಹನ್ನೊಂದಾಗುತ್ತಿದ್ದರು. ಪೆನ್ನು ಹಿಡಿದರೆ ಕವಿ, ಕತೆಗಾರ. ಸ್ಕ್ರಿಪ್ಟ್ ಹಿಡಿದರೆ ನಾಟಕ ನಿರ್ದೇಶಕ. ಬಣ್ಣ ಹಚ್ಚಿ ಥಕಥೈ ಅಂದರೆ ಕಲಾವಿದ ಹೀಗೆ ಸಾಗುತ್ತದೆ ಶೀನೂ ಬಯೋಡಾಟ. ಹಾಗಾಗಿ ಕಂಡೆಕ್ಟ್ರು ಶೀನೂ ಎಲ್ಲವರಂತಲ್ಲದೆ ಬೇರೆಯಾಗಿ ಕಾಣುತ್ತಾರೆ. ಇತರೆ ನಿರ್ವಾಹಕರಿಗೆ ಮಾದರಿಯಾಗುತ್ತಾರೆ. 
    ಆಲೂರು ಶ್ರೀ ಜಯದುರ್ಗಾ ಮೋಟಾರ್ ಸರ್ವಿಸ್ ನಲ್ಲಿ ಕಳೆದ ಇಪ್ಪತ್ತೊಂದು ವರ್ಷದಿಂದ ಸೇವೆ ಸಲ್ಲಿಸುತ್ತಿದ್ದಾರೆ. ವೃತ್ತಿಯಲ್ಲಿ ಇದೂವರೆಗೆ ಒಂದೇ ಒಂದು 'ರೆಡ್ ಮಾರ್ಕ್' ಇಲ್ಲದಿರೋದು ಶೀನೂ ವೃತ್ತಿಯ ಪ್ಲಸ್ ಪಾಯಿಂಟು.

ಶೀನೂ ಕತೆ ಹೀಗಿದೆ : ಶ್ರೀನಿವಾಸ ಕುಂದಾಪುರ ತಾಲೂಕಿನ ಆಲೂರಿನವರು. ಓದಿದ್ದು ಬರೇ ಆರನೇ ಕ್ಲಾಸ್! ತಂದೆ ಗೋವಿಂದ ಪೂಜಾರಿ ಮತ್ತು ತಾಯಿ ಸುಬ್ಬು ಪೂಜಾರಿ ಅವರ ಐವರು ಸಂತಾನದಲ್ಲಿ ಶೀನು 'ಲಾಸ್ಟ್' ಇಬ್ಬರು ಅಣ್ಣಂದಿರು ಹಾಗೂ ಅಷ್ಟೇ ಜನ ಸಹೋದರಿಯರ ಕೂಡು ಕುಟುಂಬ. ವಿಕಲಚೇತನ ಪತ್ನಿ ಮತ್ತು ಇಬ್ಬರು ಪುತ್ರರ ತಂದೆ ಶೀನೂ ಅವರ ಬ್ಯಾಕ್ ಗ್ರೌಂಡ್ ಸ್ಟೋರಿ. 
      ಶೀನೂ ಕುಟುಂಬಕ್ಕೆ ಅಲ್ಪಸ್ವಲ್ಪ ಜಮೀನಿದೆ. ಅದು ಕಾಲಿಗಿದ್ದರೆ ತಲೆಗಿಲ್ಲ, ತಲೆಗಿದ್ದರೆ ಕಾಲಿಗಿಲ್ಲದ ಸಂಬಂಧ. ಹಾಗಾಗಿ ವೃತ್ತಿ ಶೀನೂ ಅವರಿಗೆ ಅನಿವಾರ್ಯವೂ ಹೌದು. ಅರನೇ ತರಗತಿ ಓದಿಗೆ ಆಖರಿ ಸಲಾಂ ಹೊಡೆದ ಶೀನೂ ಬಸ್ ಏರಿಬಿಟ್ಟರು. ಬಸ್ ಪಯಣದಲ್ಲಿ ಶೀನೂ ಕ್ರಮಿಸಿದ ದೂರ ಬಹು ದೂರ. 
     ಶೀನೂ ಅಪ್ಪ ಅಮ್ಮಂಗೆ ವಯಸ್ಸಾಗಿದೆ. ಸಹೋದರ, ಸಹೋದರಿಯರಿಗೆ ಮದುವೆಯಾಗಿದೆ. ಶೀನೂ ವಿಕಲಚೇತನ ಮಹಿಳೆಗೆ ಹೊಸ ಬದುಕು ಕೊಡುವ ಮೂಲಕ ಗೃಹಸ್ಥರಾಗಿದ್ದಾರೆ. ಇಷ್ಟೆಲ್ಲಾ ಬದಲಾವಣೆ ಕಂಡರೂ ಶೀನೂ ವೃತ್ತಿಯಲ್ಲಿ ಬದಲಾಗಿಲ್ಲ. ಅದು ಬದಲಾಗೋದು ಇಲ್ಲ. ಶೀನೂ ಕಂಡೆಕ್ಟರ್ ವೃತ್ತಿಯಲ್ಲಿ ತೃಪ್ತಿಕಂಡಿದ್ದಾರೆ. 
       ತೀರಾ ಬಿನ್ನಾ ಹ್ಯಾಗೆ: ಸರಕಾರ ವಿಕಲಚೇತನರಿಗೆ ಬಸ್ ಪ್ರಯಾಣದಲ್ಲಿ ಮೀಸಲು, ರಿಯಾಯ್ತಿ ತರೋ ಮೊದಲೇ ಶೀನೂ ತಮ್ಮ ಬಸ್ನಲ್ಲಿ ಪ್ರಯಾಣಿಸುವ ವಿಕಲಚೇತನ ಪ್ರಯಾಣಿಕರಿಗೆ ರಿಯಾಯ್ತಿ ದರದಲ್ಲಿ ಪ್ರಯಾಣಿಸುವ ಅವಕಾಶ ನೀಡಿದ್ದರು. 
ಬಸ್ನಲ್ಲಿ ಪ್ರಯಾಣಿಸುವ ವಿಕಲಚೇತನ ಪ್ರಯಾಣಿಕರಿಗಾಗಿ ಶೀನೂ ಸಂಬಳದಲ್ಲಿ ಕೆಲ ಕಾಸು ಎತ್ತಿಡುತ್ತಿದ್ದರು. ಇವರಿಗೆ ವಿಕಲಚೇತರ ಬಗ್ಗೆ ಇದ್ದ ಕಾಳಜಿಯೇ ಪೋಲಿಯೋ ಪೀಡಿತೆ ಮಹಿಳೆ ಕೈ ಹಿಡಿಯಲು ಕಾರಣ. ಬಸ್ಸಿಗೆ ಬರುತ್ತಿದ್ದ ವಿಕಲಚೇತನ ರತ್ನ ಶೀನೂ ಕೈಹಿಡಿದಾಕೆ. ತನಗೆ ಬದುಕು ನೀಡಿದ ಗಂಡನನ್ನು ರತ್ನ ಕಣ್ಣಿನ ರಪ್ಪೆ ಹಾಗೆ ಜೋಪಾನ ಮಾಡುತ್ತಿದ್ದಾಳೆ. 
        ಬಸ್ಸಿಗೆ ಬರುವ ಪ್ರಯಾಣಿಕರನ್ನು ಶೀನೂ ಏಕ ವಚನದಲ್ಲಿ ಸಂಭೋದಿಸಲ್ಲ. ಅವರವರ ವಯಸ್ಸಿಗೆ ತಕ್ಕ ಹಾಗೆ ಗೌರವ ಸಂದಾಯ. ವಯೋವೃದ್ಧರನ್ನು ಇವರು ಎಂದೂ ಅಜ್ಜ, ಅಜ್ಜಿ ಅಂತ ಕರೆಯೋದಿಲ್ಲ. ಅವರಿಗೆ 'ಯಜಮಾನ' ಗೌರವ. ಚಿನ್ನು, ಪುಟ್ಟು, ಅಣ್ಣ, ಅತ್ತಿಗೆ, ಅಕ್ಕ, ತಂಗಾ, ಚಿಕ್ಕಮ್ಮ, ಚಿಕ್ಕಪ್ಪ, ಹೀಗೆ ಪ್ರಯಾಣಿಕರನ್ನು ಕರೆಯೋದು ಶೀನೂ ಸ್ಪೆಷಾಲಟಿ. ಬಸ್ ಏರುವಲ್ಲಿಂದ ಹಿಡಿದು ಇಳಿಯೋವರೆಗಿನ ಕಾಯಕದಲ್ಲಿ ಶೀನೂ ಸದಾ ಜಾಗೃತಿ. ಇಳಿಯೋರಿಗೆ ಇಳಿಯುವ ಜಾಗ ಅವರ ಸಾಮಾನು ಸರಂಜಾಮುಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದ ನಂತರ ಪ್ರಯಾಣಿಕರನ್ನು ಇಳಿಸುತ್ತಾರೆ. ಮಧ್ಯೆ ಮಧ್ಯೆ ಕವನ ಹೇಳುತ್ತಲೋ ಮತ್ತೆ ಸಡನ್ನಾಗಿ ಜೋಕ್ ಕಟ್ ಮಾಡುತ್ತಾ ಪ್ರಯಾಣಿಕರಿಗೆ ಕಿರಿಕಿರಿ ಆಗದಂತೆ ನೋಡಿಕೊಳ್ಳೋದು ಶೀನೂ ಕರಗತ.
       ಶೀನೂ ಕಣ್ಣಲ್ಲಿ ಕನಸಿದೆ ಕಾಣ್ರಿ : ಶೀನೂ ಕಣ್ಣಲ್ಲಿ ಕನಸಿನ ಗಂಟಿದೆ. ಎಲ್ಲಾ ತಂದೆ ತಾಯಿಗಳು ತಮ್ಮ ಮಕ್ಕಳು ಡಾಕ್ಟರ್, ಎಂಜಿನಿಯರ್ ಆಗಬೇಕು ಅಂತ ಬಯಸಿದರೆ ಶೀನೂ ತನ್ನ ಮಕ್ಕಳಲ್ಲಿ ಒಬ್ಬ ಜವಾಬ್ದಾರಿಯುತ ಪರ್ತಕರ್ತನಾಗಬೇಕು. ಮತ್ತೊಬ್ಬ ಉತ್ತಮ ಛಾಯಾಚಿತ್ರಗಾರನಾಬೇಕು ಎನ್ನುತ್ತಾರೆ. ಇದೆಲ್ಲಕ್ಕಿಂತ ಮೇಲಾಗಿ ಅವರಲ್ಲಿ ಹುಟ್ಟಿಕೊಂಡ ಸಮಾಜ ಸೇವೆಯ ಹಪಹಪಿ ಮತ್ತಷ್ಟು ಇಂಟರೆಸ್ಟ್.
       ಶೀನೂ ಬಸ್ನಲ್ಲಿ ಪ್ರಯಾಣಿಕರು ಬೆಲೆ ಬಾಳುವ ವಸ್ತು ಬಿಟ್ಟು ಹೋದರೆ ಅದು ಹಿಂದಕ್ಕೆ ಸಿಕ್ಕೇ ಸಿಗುತ್ತದೆ ಎಂಬ ಖಾತ್ರಿ ಪ್ರಯಾಣಿಕರಿಗೆ ಇದೆ. ಹೀಗೆ ಬಿಟ್ಟು ಹೋದ ವಸ್ತುಗಳ ಮೌಲ್ಯದ ಆಧಾರದಲ್ಲಿ ಶೀನು ಪ್ರಯಾಣಿಕರಿಂದ ಇಂತಿಷ್ಟು ಅಂತ ರೊಕ್ಕ ಎತ್ತಿಟ್ಟಿಕೊಳ್ಳುತ್ತಾರೆ. ಹೀಗೆ ಒಟ್ಟಾದ ಹಣವನ್ನು ಪರಿಸರದ ಶಾಲೆಯಲ್ಲಿ ಕಲಿಯುತ್ತಿರುವ ಅತೀ ಬಡ ಮಕ್ಕಳಿಗೆ ಕೊಡುವ ಕೆಲಸ ಮಾಡುತ್ತಾರೆ. ಕಳೆದ ವರ್ಷ ಇವರಿಗೆ ಆರು ಮೊಬೈಲ್ ಮತ್ತು ಅರವತ್ತಾರು ಕೊಡೆ ಸಿಕ್ಕಿತ್ತು. ಈ ವರ್ಷ ಇದೂವರಗೆ 60 ಕೊಡೆ ಮತ್ತು ಮೂರು ಮೊಬೈಲ್ ಸಿಕ್ಕಿದೆ. ವಸ್ತು ಕಳೆದುಕೊಂಡವರಿಗೆ ಅವರ ವಸ್ತು ಹಿಂದಿರುಗಿಸುವ ಜೊತೆಗೆ ಅವರಿಂದ ಕಿಂಚಿತ್ತು ಹಣ ಪಡೆದು ಅದನ್ನು ಗುಡ್ಡೆ ಹಾಕಿ ಮಕ್ಕಳ ಭವಿಷ್ಯಕ್ಕಾಗಿ ಬಳಸುತ್ತಾರೆ. ಇದು ಶೀನೂ ಅವರು ಸಮಾಜದ ಮೇಲೆ ಇಟ್ಟ ಕಾಳಜಿಗೆ ಚಿಕ್ಕ ನಿದರ್ಶನ. ಇಂತಾ ಸಣ್ಣ ಪುಟ್ಟ ನಿದರ್ಶನಗಳ ಪಟ್ಟಿ ದೊಡ್ಡದೂ ಇದೆ.
ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗುವ ಆಕಾಂಕ್ಷಿಗಳು ಶೀನೂ ಅವರ 'ನಾಟ್ ಫಿನಿಷ್' ಕವನ ಓದಬೇಕು. ವಿದೇಶಿ ಹುಚ್ಚು ಬಿಟ್ಟಿಹೋಗುತ್ತದೆ. ಒಟ್ಟಾರೆ ಕಂಡೆಕ್ಟರ್ ಅಂದ್ರೆ ಮೂಗು ಮುರಿಯುವ ಕಾಲದಲ್ಲಿ ಶೀನೂ ಬೇರೆಯಾಗಿ ಕಾಣುತ್ತಾರೆ. 

ಲೇಖನ ಕೃಪೆ: ಶ್ರೀಪತಿ ಹೆಗಡೆ ಹಕ್ಲಾಡಿ